ಸೋಮವಾರ, ಮೇ 17, 2021
22 °C

ಪ್ರವಾಹ ಇಳಿಮುಖ: ನರಕಯಾತನೆಯಲ್ಲಿ ಗ್ರಾಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ: ಸುಮಾರು 36 ಗಂಟೆಗಳ ಕಾಲ ರುದ್ರನರ್ತನ ನಡೆಸಿದ ಮಲಪ್ರಭೆಯು ತನ್ನ ಪ್ರವಾಹದಿಂದ ಅನೇಕರ ಜೀವನವನ್ನು ನರಕಯಾತನೆಗೆ ದೂಡಿದ್ದಾಳೆ. ಕೇವಲ 10 ಸಾವಿರ ಕ್ಯೂಸೆಕ್ ನೀರಿನಿಂದ ಪ್ರವಾಹ ನಿರ್ಮಿಸಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಪ್ರವಾಹವೇನೋ ಬಂದು ಹೋಯಿತು. ಮಲಪ್ರಭೆಯ ಒಡಲಿಗೆ ಸಿಕ್ಕಿರುವ ಬೆಳೆಗಳು ಕಮರುವ ಸ್ಥಿತಿಯಲ್ಲಿವೆ. ಅಲ್ಲಲ್ಲಿ ನಿಂತಿರುವ ನೀರು ಅನೇಕ ತೊಂದರೆಗಳನ್ನು ಬರಮಾಡಿಕೊಳ್ಳುತ್ತಿದೆ. ಪ್ಲಾಸ್ಟಿಕ್ ಲೋಕದ ತ್ಯಾಜ್ಯಗಳು ಮೋರಿಗಳಲ್ಲಿ, ತಗ್ಗು ಪ್ರದೇಶದಲ್ಲಿ, ಜನನಿಬೀಡ ಪ್ರದೇಶದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಳಿಸಿದೆ.ಗುರುವಾರ ಸೆ. 8ರ ಬೆಳಿಗ್ಗೆಯಿಂದಲೇ ನವೀಲು ತೀರ್ಥ ಅಣೆಕಟ್ಟೆಯಿಂದ ಬಿಡಲಾದ ಸುಮಾರು 10 ಸಾವಿರ ಕ್ಯೂಸೆಕ್ ನೀರು ರಾಮದುರ್ಗ ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳ ಮನೆಗಳಿಗೆ ನುಗ್ಗಿತು. ನೂರಾರು ಎಕರೆ ಜಮೀನುಗಳ ಬೆಳೆಗಳ ಮಧ್ಯೆ ಹಾಯ್ದು ಹೋಯಿತು. ತಗ್ಗು ಪ್ರದೇಶದಲ್ಲಿ ನಿಂತಿರುವ ನೀರು ಮಾತ್ರ ಮರಳದೇ ಮಲಿತು ನಿಂತು ಗಬ್ಬು ವಾಸನೆ ಹೊರಸೂಸುತ್ತಿದೆ.ಕಡಿಮೆ ಪ್ರಮಾಣದ ಪ್ರವಾಹದಿಂದ ಉಂಟಾದ ಹಾನಿ ಮನೆಗಳಿಗೆ ಮಾತ್ರ ಅಷ್ಟಕಷ್ಟೆ. ಆದರೆ ಜಮೀನುಗಳಿಗೆ ಹೊಕ್ಕ ನೀರು ಬೆಳೆಗಳ ಜೀವಕಳೆಯನ್ನು ಕಂದುವಂತೆ ಮಾಡಿದೆ. ಕಬ್ಬು ಬೆಳೆಗೆ ಯಾವುದೇ ಹಾನಿಯಾಗದಿದ್ದರೂ ತಾಲ್ಲೂಕಿನ 1306 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ, ಜೋಳ, ಹತ್ತಿ, ಸಜ್ಜೆ ಬೆಳೆಗಳು ಕಮರಿಹೋಗುವ ಭೀತಿ ಇದೆ ಎನ್ನುತ್ತಾರೆ ರೈತರು.`ಮಳಿ ಸರಿಯಾಗಿ ಬಂದಿಲ್ಲ. ಬೆಳೆ ಬೆಳಿಯಾಕ್ ಜೀವಾನ್ ತೇದೀವಿ. ಒಮ್ಮಾಕ್ ನೀರ್ ಬಂದ್ರ್ ಎಲ್ಲಿಗೆ ಹೋಗ್‌ಬೇಕು. ದೇವ್ರೇ ನಮ್ಮನ್ ರಕ್ಷಿಸಬೇಕು~ ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಗೋಳು ತೋಡಿಕೊಂಡರು.ಪಟ್ಟಣದ ಪ್ರಮುಖ ಕಡೆಗಳಲ್ಲಿ ಮಲಿತು ನಿಂತಿರುವ ನೀರು ಸಾರ್ವಜನಿಕ ಜೀವನಕ್ಕೆ ಅಡಚಣೆಯಾಗಿದೆ. ಅಲ್ಲಲ್ಲಿ ನೀರನ್ನು ದಾಟಲು ಜನ ಸರ್ಕಸ್ ಮಾಡುತ್ತಲೇ ಸಾಗಬೇಕಿದೆ. ನೀರಲ್ಲಿ ಸಂಗ್ರಹಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ರೋಗಗಳ ತಾಣವಾಗಿವೆ.ಒಂದು ವಾರದಿಂದಲೇ ಮಲಪ್ರಭೆಯ ಪ್ರವಾಹಕ್ಕೆ ಜೀವ ಸಂಕುಲವೇ ಸಂಕಷ್ಟಕ್ಕೆ ಸಿಲುಕಿದ್ದರೂ ಚುನಾಯಿತ ಪ್ರತಿನಿಧಿಗಳು, ವಿರೋಧಿ ಗುಂಪಿನ ನಾಯಕರು ಪ್ರವಾಹ ಪೀಡಿತರನ್ನು ಭೇಟಿ ಮಾಡದೇ ಇರುವುದು ಸೋಜಿಗದ ಸಂಗತಿ ಎನ್ನಬಹುದು. ಮೊನ್ನೆ ಸಂಗಳ ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಕೂಡಿಹಾಕಿ ಪ್ರತಿಭಟಿಸಿರುವುದು ಪ್ರಗತಿಪರ ಸಂಚಲನ ಎನ್ನಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.