ಪ್ರವಾಹ ಇಳಿಮುಖ: ಸ್ವಗ್ರಾಮಕ್ಕೆ ಮರಳಿದ ಸಂತ್ರಸ್ತರು

ಗುರುವಾರ , ಜೂಲೈ 18, 2019
27 °C
ಕುಗ್ಗಿದ ಮಳೆಯ ಆರ್ಭಟ * ಸಹಜ ಸ್ಥಿತಿಗೆ ಜನಜೀವನ* ಆಸ್ತಿಪಾಸ್ತಿ ಹಾನಿ ಲೆಕ್ಕಾಚಾರ

ಪ್ರವಾಹ ಇಳಿಮುಖ: ಸ್ವಗ್ರಾಮಕ್ಕೆ ಮರಳಿದ ಸಂತ್ರಸ್ತರು

Published:
Updated:

ಕಾರವಾರ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಹಾವಳಿಯಿಂದ ಮನೆಗಳನ್ನು ತೊರೆದಿದ್ದ ಸಂತ್ರಸ್ತ ಜನರು ಗುರುವಾರ ತಮ್ಮ ಗ್ರಾಮಗಳಿಗೆ ವಾಪಸ್ ತೆರಳಿದ್ದಾರೆ.ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಕಾಳಿನದಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಪಾತ್ರದಲ್ಲಿನ ಗ್ರಾಮಗಳು ಜಲಾವೃತ್ತಗೊಂಡಿದ್ದವು. ಈ ಗ್ರಾಮದ ಜನರು ಬುಧವಾರ ಸುರಕ್ಷಿತ ಜಾಗವನ್ನು ಸೇರಿದ್ದರು. ಗಂಗಾವಳಿ ನದಿಪಾತ್ರದಲ್ಲಿರುವ ದಂಡೆಬಾಗ ಹಾಗೂ ಕೂರ್ವೆ ಗ್ರಾಮಸ್ಥರು ಹಿಚ್ಕಡ ಗ್ರಾಮಕ್ಕೆ ಬಂದಿದ್ದರು. ನದಿಯ ನೀರಿನಮಟ್ಟ ಕಡಿಮೆಯಾಗಿದ್ದರಿಂದ ಗ್ರಾಮಸ್ಥರು ಜಾನುವಾರುಗಳೊಂದಿಗೆ ಮನೆಗಳಿಗೆ ವಾಪಸಾಗಿದ್ದಾರೆ. ಹೊಸಕಂಬಿ ಬಳಿ ಮುಳುಗಡೆಯಾಗಿದ್ದ ದೇವನಹಳ್ಳಿ-ವಡ್ಡಿಘಾಟ್ ರಾಜ್ಯ ಹೆದ್ದಾರಿಯಲ್ಲಿ ಈಗ ಸಂಚಾರ ಸುಗಮವಾಗಿದೆ. ಬೆಳಿಗ್ಗೆ ಮಳೆ ಇಲ್ಲದಿದ್ದರಿಂದ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ್ದು ಕಂಡುಬಂತು.

`ಸಂತ್ರಸ್ತರಿಗಾಗಿ ಕೆಲವೆಡೆ ಗಂಜಿಕೇಂದ್ರವನ್ನು ಸಹ ತೆರೆಯಲಾಗಿತ್ತು. ಆದರೆ, ಯಾರೊಬ್ಬರು ಗಂಜಿಕೇಂದ್ರಕ್ಕೆ ಬಂದಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಕಡಿಮೆಯಾದ ನದಿಗಳ ಅಬ್ಬರ:  ಗುರುವಾರ ಮಳೆರಾಯ ಬಿಡುವು ನೀಡಿದ್ದರಿಂದ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗಂಗಾವಳಿ, ಕುಮಟಾದ ಅಘನಾಶಿನಿ, ಹೊನ್ನಾವರದ ಶರಾವತಿ, ಕಾರವಾರ ತಾಲ್ಲೂಕಿನ ಕಾಳಿನದಿಯಲ್ಲಿ ನೀರಿನ ಅಬ್ಬರ ಕಡಿಮೆಯಾಗಿತ್ತು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮವಾಗಿತ್ತು.ಕಾರವಾರದ ಗ್ರೀನ್‌ಸ್ಟ್ರೀಟ್ ರಸ್ತೆ, ಕೋರ್ಟ್ ರಸ್ತೆ, ಕಾರವಾರ- ಕೋಡಿಬಾಗ ರಸ್ತೆ ಮುಂತಾದ ರಸ್ತೆಗಳಲ್ಲಿ ವ್ಯಾಪಾರ, ವಹಿವಾಟು ಎಂದಿನಂತೆ ಸಾಗಿತ್ತು. ಬಜಾರ್‌ಗಳಲ್ಲಿ ಜನರು ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದುದು ಕಂಡುಬಂತು. 

ಮಳೆ ಬಿಡುವು ನೀಡಿತ್ತಾದರೂ ಮೋಡಕವಿದ ವಾತಾವರಣ ಮುಂದುವರೆದಿತ್ತು. ಮಳೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದ ಕೆಎಚ್‌ಬಿ ಕಾಲೊನಿ, ಪದ್ಮನಾಭನಗರ ಈಗ ಸಹಜಸ್ಥಿತಿಗೆ ಬಂದಿದೆ. ಆದರೆ, ಕೆನೆರಾ ಕಾಲೊನಿಯ ರಸ್ತೆಗಳಲ್ಲಿ ಮಾತ್ರ ನೀರು ಆವರಿಸಿತ್ತು.ಸಂಜೆ ಮಳೆ: ಬೆಳಿಗ್ಗೆ ಬಿಡುವು ನೀಡಿದ್ದ ಮಳೆ ಸಂಜೆ ವೇಳೆ ನಗರದ ಕೆಲ ಭಾಗಗಳಲ್ಲಿ ಬಿರುಸಾಗಿ ಸುರಿಯಿತು.

ಜಿಲ್ಲೆಯಲ್ಲಿ 34.3 ಮಿ.ಮೀ. ಮಳೆ: ಗುರುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಜಿಲ್ಲೆಯಾದ್ಯಂತ ಸರಾಸರಿ 34.3 ಮಿ.ಮೀ ಮಳೆಯಾಗಿದೆ. ಅಂಕೋಲಾ 26.0 ಮಿ.ಮೀ, ಭಟ್ಕಳ 36.4, ಹಳಿಯಾಳ 1.4, ಹೊನ್ನಾವರ 26.3, ಕಾರವಾರ 13.3, ಕುಮಟಾ 22.4, ಮುಂಡಗೋಡ 20.4, ಸಿದ್ದಾಪುರ 112.2, ಶಿರಸಿ 61.0, ಜೊಯಿಡಾ 15.0, ಯಲ್ಲಾಪುರ 43.0 ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇದುವರೆಗೆ ಸರಾಸರಿ 253.8 ಮಿ.ಮೀ. ಮಳೆಯಾಗಿದೆ.ಶಾಂತಳಾದ ಗಂಗಾವಳಿ 

ಅಂಕೋಲಾ:
ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಆರಿದ್ರ ಮಳೆಗೆ ತುಂಬಿ ಹರಿದ ಜೀವನದಿ ಗಂಗಾವಳಿ ಪಾತ್ರವನ್ನು ಮೀರಿ ಪ್ರವಹಿಸಿದ್ದರಿಂದ ಹಲವು ಗ್ರಾಮಗಳಲ್ಲಿ ಬುಧವಾರ ಉಂಟಾಗಿದ್ದ ನೆರೆ ಹಾವಳಿಯ ಭೀತಿ ಗುರುವಾರ ತಣ್ಣಗಾಗಿದೆ.ಮೋಡಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಸೂರ್ಯ ಕಿರಣಗಳು ಪಲ್ಲವಿಸಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿದೆ. ಸುಂಕಸಾಳ ಸೀಮೆಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ಜಲಾವೃತಗೊಂಡಿದ್ದರಿಂದ ಉಂಟಾಗಿದ್ದ ಸಂಚಾರ ಅಡಚಣೆ ನಿವಾರಣೆಯಾಗಿದ್ದು, ನದಿ ನೀರಿನ ಹರಿವು ಇಳಿಮುಖವಾಗಿದ್ದರಿಂದ ವಾಹನ ಸಂಚಾರ ಎಂದಿನಂತೆ ಕಂಡುಬಂದಿತು.ಹಿಚ್ಕಡ ಕೂರ್ವೆ, ಮಂಜಗುಣಿ, ಶಿರೂರು, ಬಿಳಿಹೊಂಯ್ಗಿ, ಹೊಸಕಂಬಿ, ಆಂದ್ಲೆ, ಮೊರಳ್ಳಿ ಮುಂತಾದ ನದಿ ದಂಡೆ ಮತ್ತು ಮುಖಜ ಪ್ರದೇಶದ ಗ್ರಾಮಗಳ ಜನವಸತಿ ಪ್ರದೇಶದಲ್ಲಿ ನುಗ್ಗಿದ್ದ ನೀರು ಇಳಿದಿದ್ದು, ನಾಗರಿಕರು ಸುಧಾರಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳ ಕಡೆಗೆ ಮುಖ ಮಾಡಿರುವುದು ಕಂಡುಬಂದಿತು.ನೆರೆ ಇಳಿದ ಮೇಲೆ...

ಸಿದ್ದಾಪುರ:
ತಾಲ್ಲೂಕಿನಲ್ಲಿ ಗುರುವಾರ ಮಳೆ ಬಿಡುವು ನೀಡಿದ್ದು, ಕೇವಲ ಒಂದೆರಡು ಬಾರಿ ಮಾತ್ರ ದರ್ಶನ ನೀಡಿತು. ಆದರೆ ಮಂಗಳವಾರ ಮತ್ತು ಬುಧವಾರ ಸುರಿದ ಭಾರಿ ಮಳೆ ತಾಲ್ಲೂಕಿನಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ.

 

ತಾಲ್ಲೂಕಿನ ನೆಜ್ಜೂರಿನ ತಿಮ್ಮ ತಿರುಪತಿ ಬೋವಿ ಎಂಬವರ ಎಮ್ಮೆ ಹೊಳೆಯಲ್ಲಿ ತೇಲಿ ಹೋಗಿ ಮೃತಪಟ್ಟಿದ್ದರಿಂದ ರೂ 14,500 ನಷ್ಟ ಉಂಟಾಗಿದೆ. ಅವರಗುಪ್ಪದ ರಾಮಾ ಬೆಳ್ಳಾ ನಾಯ್ಕ ಎಂಬವರ ಮನೆಯ ಗೋಡೆ ಕುಸಿದು, ರೂ 15 ಸಾವಿರ ನಷ್ಟ ಉಂಟಾಗಿದೆ. ಕವಲಕೊಪ್ಪದ ಗಂಗಾಧರ ಕೃಷ್ಣ ಹೆಗಡೆ ಅವರ ಮನೆಯ ಪಡಿಮಾಡಿನ ಮೇಲೆ ಧರೆ ಕುಸಿದು ರೂ 25 ಸಾವಿರ ಹಾನಿಯಾಗಿದೆ. ಕಲಗಾರಿನ ಮಾಧವ ಸುಬ್ರಾಯ ಶರ್ಮ ಅವರ ದನದ ಕೊಟ್ಟಿಗೆಯ ಮೇಲೆ ಧರೆ ಕುಸಿದು, ರೂ 23 ಸಾವಿರ ಹಾನಿ ಸಂಭವಿಸಿದೆ. ಕೋಲಸಿರ್ಸಿಯಲ್ಲಿ ಹಾನಂಬಿ ತಡೆಗೋಡೆಗೆ ಧಕ್ಕೆಯಾಗಿದ್ದು ರೂ 60 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.ಗುರುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆಮಾಪನ ಕೇಂದ್ರದಲ್ಲಿ 112.0 ಮಿ.ಮೀ ಮಳೆ ದಾಖಲಾಗಿದ್ದು, ಒಟ್ಟು 1185.4 ಮಿ.ಮೀ. ಮಳೆ ಸುರಿದಂತಾಗಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 572.0 ಮಿ.ಮೀ. ಸುರಿದಿತ್ತು.21 ಮನೆಗಳಿಗೆ ಹಾನಿ

ಭಟ್ಕಳ:
ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚು ಮಳೆ ಸುರಿದಿದ್ದು, ಮಳೆ ಗಾಳಿಗೆ ಈವೆರೆಗೆ ಒಟ್ಟು 21 ಮನೆಗಳಿಗೆ ಹಾನಿಯಾಗಿದೆ.ಮಳೆಯಿಂದ ಆಗಿರುವ ಹಾನಿ ಕುರಿತು ತಾಲ್ಲೂಕು ಆಡಳಿತ ನೀಡಿರುವ ಮಾಹಿತಿಯಂತೆ, ಮಳೆ ಗಾಳಿಯ ಆರ್ಭಟಕ್ಕೆ 21 ಮನೆಗಳು ಭಾಗಶಃ ಹಾಗೂ ಸಂಪೂರ್ಣ ಹಾನಿಗೊಳಗಾಗಿವೆ. ಸುಮಾರು ರೂ 4.80 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಕೆಲವರಿಗೆ ಪರಿಹಾರವನ್ನೂ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ತಾಲ್ಲೂಕಿನಲ್ಲಿ 1686 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 1028 ಮಿ.ಮೀ. ಮಳೆಯಾಗಿತ್ತು. ಹೆಚ್ಚುವರಿಯಾಗಿ ಈ ವರ್ಷ 658 ಮಿ.ಮೀ ಮಳೆಯಾಗಿದೆ.ಜಲಾಶಯಗಳ ಇಂದಿನ ನೀರಿನ ಮಟ್ಟ

ಜಲಾಶಯ ಗರಿಷ್ಠಮಟ್ಟ   ಇಂದಿನ ಮಟ್ಟ


ಕದ್ರಾ       34.50 ಅಡಿ   31.65 ಅಡಿ

ಕೊಡಸಳ್ಳಿ   75.50  ಅಡಿ  71.40 ಅಡಿ

ಸೂಪಾ      564  ಅಡಿ  530.85 ಅಡಿ

ಗೇರುಸೊಪ್ಪ  55.00 ಅಡಿ   52.37 ಅಡಿಕಂಟ್ರೋಲ್ ರೂಂ ಆರಂಭ

ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಹಶೀಲ್ದಾರ್, ಸಹಾಯಕ ಆಯುಕ್ತರ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸೇವೆ ಆರಂಭಿಸಲಾಗಿದೆ.ಕಾರವಾರ ಜಿಲ್ಲಾಧಿಕಾರಿ ಕಚೇರಿ 08382-222072, 1077 (ಟೋಲ್ ಫ್ರೀ), ಕಾರವಾರ ಉಪವಿಭಾಗಾಧಿಕಾರಿ ಕಚೇರಿ 08382-226360, ಕುಮಟಾದ ಉಪವಿಭಾಗಾಧಿಕಾರಿ 08386-222052, ಭಟ್ಕಳ ಉಪವಿಭಾಗಾಧಿಕಾರಿ 08385-223722, ಶಿರಸಿ ಉಪವಿಭಾಗಾಧಿಕಾರಿ 08384-226382, ಕಾರವಾರ ತಹಶೀಲ್ದಾರ್ 08382-226331, ಅಂಕೋಲಾ ತಹಶೀಲ್ದಾರ್ 08388-230243,ಕುಮಟಾ ತಹಶೀಲ್ದಾರ್ 08386-222054, ಹೊನ್ನಾವರ ತಹಶೀಲ್ದಾರ್ 08387-220262, ಭಟ್ಕಳ ತಹಶೀಲ್ದಾರ್ 08385-226422, ಶಿರಸಿ ತಹಶೀಲ್ದಾರ್ 08384-226383, ಸಿದ್ದಾಪುರ ತಹಶೀಲ್ದಾರ್ 08389-230127, ಮುಂಡಗೋಡ ತಹಶೀಲ್ದಾರ್ 08301-222122, ಯಲ್ಲಾಪುರ ತಹಶೀಲ್ದಾರ್ 08419-261129, ಹಳಿಯಾಳ ತಹಶೀಲ್ದಾರ್ 08284-220234, ಜೋಯಿಡಾ ತಹಶೀಲ್ದಾರ್ 08383-282723.ಸಾರ್ವಜನಿಕರು ಪ್ರಕೃತಿ ವಿಕೋಪದಿಂದ ಆಗುವ ಹಾನಿಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಈ ಮೇಲಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಹವಾಲುಗಳನ್ನು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry