ಪ್ರವಾಹ: ಕೃಷ್ಣಾ- ಘಟಪ್ರಭಾ ಇಳಿಮುಖ, ಮಲಪ್ರಭಾ ಹೆಚ್ಚಳ....

ಸೋಮವಾರ, ಮೇ 27, 2019
24 °C

ಪ್ರವಾಹ: ಕೃಷ್ಣಾ- ಘಟಪ್ರಭಾ ಇಳಿಮುಖ, ಮಲಪ್ರಭಾ ಹೆಚ್ಚಳ....

Published:
Updated:

ಬಾಗಲಕೋಟೆ: ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹದ ಇಳಿಮುಖವಾಗಿದೆ. ಆದರೆ ಮಲಪ್ರಭಾ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿದೆ.ಮಲಪ್ರಭಾ ನದಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ ಜಿಲ್ಲೆಯ  ಗೋವಿನಕೊಪ್ಪ ಬಳಿ ಸೇತುವೆ ಮೇಲೆ ಸುಮಾರು 4ರಿಂದ 5 ಅಡಿ ನೀರು ಹರಿಯುತ್ತಿದ್ದು ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಗದಗ ಮತ್ತು ರಾಮದುರ್ಗ ಮಾರ್ಗವಾಗಿ ಹೋಗುತ್ತಿವೆ.ಆಲಮಟ್ಟಿ ಜಲಾಶಯದ ಕೆಳಭಾಗದ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಮತ್ತು ಹುನಗುಂದ ತಾಲ್ಲೂಕಿನ ಸುಮಾರು 22ಕ್ಕೂ ಹೆಚ್ಚು  ಹಳ್ಳಿಗಳ ಸುತ್ತಲಿನ ಗದ್ದೆಗಳಲ್ಲಿ ನೀರು ಆವರಿಸಿಕೊಂಡಿದ್ದು, ಇದರಿಂದ ಸಾವಿರಾರು ಎಕರೆ ಕಬ್ಬು, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಮುಂತಾದ ಬೆಳೆಗಳು ಹಾನಿಯಾಗಿವೆ.

 

ಮುಧೋಳ ತಾಲ್ಲೂಕಿನಲ್ಲಿ ಹರಿಯುವ ಘಟಪ್ರಭಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ.  ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಂದ ಹೆಚ್ಚು ನೀರನ್ನು ಹೊರಬಿಡುತ್ತಿರುವುದರಿಂದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ದಡದ ಹಳ್ಳಿಗಳಲ್ಲಿ ಯಾವುದೇ ಸಂದರ್ಭದಲ್ಲಿ ಪ್ರವಾಹ ಬರುವ ಸಾಧ್ಯತೆ ಇದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.ಬೆಳಗಾವಿ ವರದಿ: ಕೃಷ್ಣಾ ನದಿ ನೀರಿನ ಹರಿವಿನಲ್ಲಿ 64 ಕ್ಯೂಸೆಕ್‌ನಷ್ಟು ಇಳಿಕೆಯಾಗಿದೆ. ಉಪನದಿಗಳ ನೀರಿನ ಮಟ್ಟದಲ್ಲಿಯೂ ಇಳಿಕೆ ಕಂಡು ಬಂದಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 1.63 ಲಕ್ಷ ಕ್ಯೂಸೆಕ್ ಹರಿದು ಬರುತ್ತಿದೆ. ಜಿಲ್ಲೆಯಲ್ಲಿ ಬುಧವಾರ ಸುರಿದಿದ್ದ ಮಳೆಯಿಂದಾಗಿ ಹಿರಣ್ಯಕೇಶಿ ಹಾಗೂ ಮಲಪ್ರಭಾ ನದಿ ನೀರಿನ ಹರಿವಿನಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ.ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ 26, ಖಾನಾಪುರ ತಾಲ್ಲೂಕಿನ 28, ಹುಕ್ಕೇರಿ ತಾಲ್ಲೂಕಿನಲ್ಲಿ ಎಂಟು ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಒಂಬತ್ತು, ಅಥಣಿ ತಾಲ್ಲೂಕಿನಲ್ಲಿ ಐದು, ಖಾನಾಪುರ ಹಾಗೂ ರಾಯಬಾಗ ತಾಲ್ಲೂಕಿನ ಎರಡು, ಗೋಕಾಕ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ತಲಾ ಒಂದು ಸೇತುವೆ ಮುಳುಗಡೆಯಾಗಿವೆ.ವಿಜಾಪುರ ವರದಿ: ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ. ಉಜನಿ ಜಲಾಶಯದಿಂದ ಗುರುವಾರ 90 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.ಆಲಮಟ್ಟಿ ಜಲಾಶಯದ ಒಳ ಹರಿವಿನಲ್ಲಿ ಕಡಿಮೆಯಾದ್ದರಿಂದ ಹೊರ ಹರಿವಿನಲ್ಲಿಯೂ ಕಡಿತ ಮಾಡಲಾಗಿದೆ. ಜಲಾಶಯಕ್ಕೆ 2.2 ಲಕ್ಷ ಕ್ಯೂಸೆಕ್ ನೀರು ಬರುತ್ತಿದ್ದು, ಎಲ್ಲ 26 ಕ್ರೆಸ್ಟ್‌ಗೇಟ್‌ಗಳ ಮೂಲಕ 2.5 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 519.6 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ 518.4 ಮೀಟರ್ ನೀರು ಸಂಗ್ರಹವಾಗಿದೆ.ವ್ಯಕ್ತಿ ಸಾವು: ಬಸವನ ಬಾಗೇವಾಡಿ ತಾಲ್ಲೂಕು ಕೊಲ್ಹಾರ ಹತ್ತಿರ ಸ್ನಾನ ಮಾಡಲು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಲ್ಹಾರ ಗ್ರಾಮದ ಸಂಗಪ್ಪ ಮಲ್ಲಿಕಾರ್ಜುನ ಗಣಿ (35) ಮೃತಪಟ್ಟಿದ್ದು ಈತನ ಶವ ಮಂಗಳವಾರ ಜಗದೇವಪ್ಪ ಕಟಬರ ಅವರ ಮೀನಿನ ಬಲೆಯಲ್ಲಿ ಸಿಕ್ಕಿದೆ. ಸ್ನಾನ ಮಾಡಲು ನದಿಗೆ ಇಳಿದ ಈತ ನೀರಿನ ಸೆಳವಿಗೆ ಸಿಕ್ಕು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.2ನೇ ದಿನವೂ ಸಂಚಾರ ಸ್ಥಗಿತ

ಯಾದಗಿರಿ ವರದಿ:
ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಗುರುವಾರ ಬೆಳಿಗ್ಗೆಯೂ ಸುಮಾರು 3.30 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ  ಶಹಾಪುರ- ದೇವದುರ್ಗ ರಾಜ್ಯ ಹೆದ್ದಾರಿಯ ಕೊಳ್ಳೂರು ಎಂ. ಬಳಿ ಇರುವ ಸೇತುವೆ ನೀರಿನಲ್ಲಿ ಮುಳುಗಿದ್ದು, ಸತತ ಎರಡನೇ ದಿನ ಗುರುವಾರವೂ ಸಂಚಾರ ಸ್ಥಗಿತಗೊಂಡಿದೆ.ಮಧ್ಯಾಹ್ನದಿಂದ ಆಲಮಟ್ಟಿ ಜಲಾಶಯದಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಗುರುವಾರ ಸಂಜೆಯ ವೇಳೆಗೆ ನಾರಾಯಣಪುರ ಜಲಾಶಯದ ಹೊರಹರಿವನ್ನು 2.50 ಲಕ್ಷ ಕ್ಯೂಸೆಕ್‌ಗೆ ಇಳಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ತಿಂಥಣಿ ಬಳಿ ನದಿ ತೀರದ ಕೆಲ ಗದ್ದೆಗಳಿಗೆ ನೀರು ನುಗ್ಗಿದ್ದು, ಯಾವುದೇ ರೀತಿಯ ಹೆಚ್ಚಿನ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry