ಗುರುವಾರ , ಆಗಸ್ಟ್ 22, 2019
26 °C

ಪ್ರವಾಹ ಬಂದರೂ ಗಂಜಿಕೇಂದ್ರಕ್ಕೆ ಜನವಿಲ್ಲ

Published:
Updated:

ಸಿದ್ದಾಪುರ: ಪ್ರವಾಹ ಕಾಲದಲ್ಲಿ ನಿರಾಶ್ರಿತರಿಗಾಗಿ ಸ್ಥಾಪಿಸಲಾಗುವ ಗಂಜಿ ಕೇಂದ್ರಗಳು ಕೇವಲ ನಾಮಕಾವಾಸ್ತೆಗೆ ಎಂಬಂತಾಗಿದೆ.ಮಳೆಗಾಲದಲ್ಲಿ ನೆಲ್ಯಹುದಿಕೇರಿಯ ಬೆಟ್ಟದಕಾಡು ಪ್ರದೇಶ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಕೆಲ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ದುಬಾರೆ ಆನೆ ಸಾಕಾಣಿಕೆ ಕೇಂದ್ರ, ಬೆಟ್ಟದಕಾಡು, ಕರಡಿಗೋಡು, ಚಿಕ್ಕನಹಳ್ಳಿ ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಳ್ಳುತದೆ. ಕರಡಿಗೋಡು ಹೊಳೆಕರೆ ಪೈಸಾರಿಯ ಸುಮಾರು 9 ಮನೆಗಳು ಕೂಡುಗದ್ದೆ, ಬೆಟ್ಟದಕಾಡು ಗ್ರಾಮದ 10 ಮನೆಗಳು, ಗುಹ್ಯ ಗ್ರಾಮದ 6 ಮನೆಗಳು ಜಲಾವೃತಗೊಳ್ಳುತ್ತವೆ. ನದಿ ದಡದ ನೂರಾರು ಕುಟುಂಬಗಳಿಗೆ ಪ್ರತಿ ವರ್ಷವೂ ಈ ಆತಂಕ ಇರುತ್ತದೆ.ಜಿಲ್ಲಾಧಿಕಾರಿಗಳು ಸೇರಿದಂತೆ ತಹಶೀಲ್ದಾರ್, ಕಂದಾಯ ಅಧಿಕಾರಿಗಳು ದೌಡಾಯಿಸಿ ಗಂಜಿ ಕೇಂದ್ರ ಸ್ಥಾಪಿಸಿದರೂ, ನದಿ ತೀರದ ಜನ ಗಂಜಿಕೇಂದ್ರಕ್ಕೆ ಹೋಗಿ ಆಶ್ರಯ ಪಡೆಯಲು ನಿರಾಕರಿಸುತ್ತಿರುವುದು ಅಚ್ಚರಿಯ ಸಂಗತಿ. ಗುರುವಾರದಿಂದ ಕಾವೇರಿ ನದಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೆಲ ಮನೆಗಳು ಜಲಾವೃತವಾಗಿದ್ದರೂ, ನದಿ ತೀರದ ವಾಸಿಗಳಿಗೆ ಅಧಿಕಾರಿಗಳು ಅಪಾಯದ ಬಗ್ಗೆ ತಿಳಿವಳಿಕೆ ಹೇಳಿದರೂ ಜನ ಗಂಜಿ ಕೇಂದ್ರಕ್ಕೆ ತೆರಳಲು ಹಿಂಜರಿಯುತ್ತಿದಾರೆ.ಮೊದಲು ನದಿ ದಡದಲ್ಲಿ ಹೇರಳವಾಗಿ ಬೆಳೆದಿದ್ದ ಬಿದಿರಿನ ಮೆಳೆಗಳು ನದಿ ದಡದ ಮಣ್ಣು ಕುಸಿತವನ್ನು ತಡೆಯುತ್ತಿದ್ದವು ಆದರೆ ಈ ಬಾರಿ ಒಣಗಿದ ಬಹುತೇಕ ಬಿದಿರಿನ ಮೆಳೆಗಳು ನದಿ ನೀರಿನಲ್ಲಿ ಕೊಚ್ಚಿ ಹೋಗಿರುವುದು ಆತಂಕ ತಂದಿದೆ. ನದಿಯ ವಿಸ್ತಾರ ಹೆಚ್ಚಾಗಲು ಕಾರಣವಾಗಿದೆ. ಕರಡಿಗೋಡಿನಲ್ಲಿ ಕೆಲ ಮನೆಗಳ ಅಡಿಪಾಯದ ಕೆಳಗಿನಿಂದಲೇ ಮಣ್ಣು ಕುಸಿದಿರುವುದು ಕಂಡು ಬಂದಿದೆ.ನದಿ ದಡದಲ್ಲಿ ಮನೆ ನಿರ್ಮಾಣ ಕಾನೂನಿನ ಉಲ್ಲಂಘನೆ ಎಂಬ ಬಗೆ ಸ್ಪಷ್ಟ ಅರಿವಿದ್ದರೂ ನದಿ ದಡದಲ್ಲಿ ಮನೆ  ನಿರ್ಮಾಣವಾಗಲು ಪರೋಕ್ಷವಾಗಿ ಸರ್ಕಾರವೇ ಹೊಣೆ ಎಂಬುದು ಇಲ್ಲಿಯ ನಿವಾಸಿಗಳ ವಾದ. ಕೈ ಚಾಚಿದರೆ ನದಿ ನೀರನ್ನು ಸ್ಪರ್ಶಿಸಲು ಸಾಧ್ಯವಿರುವ ಹಲವು ಮನೆಗಳಿಗೆ ಗ್ರಾಮ ಪಂಚಾಯತಿ ಸಕಲ ಸವಲತ್ತುಗಳನ್ನು ನೀಡಿದೆ.  ಇಲ್ಲಿಯ ಗ್ರಾಮಸ್ಥರ ಸುಗಮ ಸಂಚಾರಕ್ಕಾಗಿ ಡಾಂಬರೀಕರಣವಾದ ರಸ್ತೆ, ಕುಡಿಯಲು ನಲ್ಲಿ ನೀರಿನ ಸಂಪರ್ಕ, ನದಿ ದಡದಲ್ಲಿಯೇ ಅಂಗನವಾಡಿ ಕೇಂದ್ರ, ಸಾರ್ವಜನಿಕ ಶ್ಮಶಾನ ಮತ್ತು ಚಿತಾಗಾರ, ವಿದ್ಯುತ್ ಸಂಪರ್ಕ, ಪಡಿತರ ವ್ಯವಸ್ಥೆ, ಬೀದಿದೀಪಗಳು, ಮನೆ ನಿರ್ಮಾಣಕ್ಕೆ ಮೌಖಿಕ ಒಪ್ಪಿಗೆ, ವಸತಿ ನಿರ್ಮಾಣ ಯೋಜನೆಯಡಿ ಹೊಸ ಮನೆಗಳ ನಿರ್ಮಾಣಕ್ಕೆ ಸಹಾಯಧನವನ್ನೂ ಇಲ್ಲಿ ನೀಡಲಾಗಿದೆ.ಇಷ್ಟೆಲ್ಲ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಯಿಂದ ಸುಗಮವಾಗಿ ಪಡೆಯಲು ತಮ್ಮ ಬಳಿ ಇರುವ  ಮತದಾನದ ಹಕ್ಕು ಮಾತ್ರ ಬಂಡವಾಳವಾಗಿತ್ತು. ಅದನ್ನೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಸರ್ಕಾರವೇ ನಮಗೆ ನೀಡಿರುವ ಸೌಲಭ್ಯಗಳು ಅಕ್ರಮ ಎಂದು ಪ್ರವಾಹದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ  ಅಧಿಕಾರಿಗಳು ಸೂಚಿಸುತ್ತಾರೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಎ್ಲ್ಲಲ ಅಕ್ರಮ ನಿರ್ಮಾಣಗಳನ್ನು ಸಮರ್ಥಿಸಿಕೊಳ್ಳುವ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳ ಅಭಯವೇ ಮೂಲ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಸರ್ಕಾರ ತಮಗೆ ಇದೀಗ ಲಭ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ಪಟ್ಟಣದ ಆಸುಪಾಸಿನಲ್ಲಿ ನಿವೇಶನ ಕಲ್ಪಿಸಿದರೆ ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ಹಲವರು ಹೇಳುತ್ತಾರೆ.ಪ್ರವಾಹದ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಆರಂಭಿಸಲಾಗುವ ಗಂಜಿ ಕೇಂದ್ರಗಳ ಚಟುವಟಿಕೆಗಳ ಕುರಿತು ತನಿಖೆ ಅಗತ್ಯ ಎಂದು ಎಚ್.ಬಿ. ರಮೇಶ್ ಆರೋಪಿಸಿದ್ದಾರೆ.

                

Post Comments (+)