ಪ್ರವೀಣ್ ಕಣ್ಣಲ್ಲಿ ಕಾಡಿನ ಸಭ್ಯ

7

ಪ್ರವೀಣ್ ಕಣ್ಣಲ್ಲಿ ಕಾಡಿನ ಸಭ್ಯ

Published:
Updated:

ಬೆಂಗಳೂರು: ವನ್ಯಜೀವಿ ಛಾಯಾಚಿತ್ರದ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ದಿ ರಾಯಲ್ ಫೋಟೊಗ್ರಾಫಿಕ್ ಸೊಸೈಟಿ ನೀಡುವ ಶಿಷ್ಯವೇತನಕ್ಕೆ ಭಾಜನರಾಗಿರುವ ಎಚ್.ವಿ. ಪ್ರವೀಣ್ ಕುಮಾರ್ ಅವರ ‘ಐ ಆಫ್ ದಿ ಟೈಗರ್’ ಛಾಯಾಚಿತ್ರ ಪ್ರದರ್ಶನಕ್ಕೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್.ಎ. ಪೆರುಮಾಳ್  ಶನಿವಾರ ಚಾಲನೆ ನೀಡಿದರು.ಪ್ರದರ್ಶನವು ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೆ.7ರವರೆಗೆ ನಡೆಯಲಿದೆ. ಹುಲಿಯ ಜೀವನಶೈಲಿಯ ಮೇಲೆ ಛಾಯಾಚಿತ್ರಣ ಮಾಡಿದ್ದಕ್ಕಾಗಿ ಶಿಷ್ಯವೇತನ ಪಡೆದ ಮೊದಲ ಭಾರತೀಯ ವನ್ಯಜೀವಿ ಛಾಯಾಗ್ರಾಹಕ ಎನ್ನುವ ಹೆಗ್ಗಳಿಕೆ ಪ್ರವೀಣ್ ಅವರದ್ದು. ವನ್ಯಜೀವಿಗಳಲ್ಲಿ ‘ಜಂಟಲ್‌ಮನ್ ಆಫ್ ದಿ ಫಾರೆಸ್ಟ್’ ಎಂದು ಕರೆಸಿಕೊಳ್ಳುವ ಹುಲಿಯ ಪ್ರತಿ ಹಂತವನ್ನು ಅವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ.ಗಾಂಭೀರ್ಯದ ನಡಿಗೆ, ಮರಗಳ ನೆರಳಲ್ಲಿ ಹಾಯಾಗಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು, ಸಂಗಾತಿಯ ಹುಡುಕಾಟದ ಸನ್ನಿವೇಶ, ಮಕ್ಕಳನ್ನು ಸಲಹುತ್ತಿರುವುದು, ಬೇಟೆಯಾಡುತ್ತಿರುವ ಸರಣಿ ಚಿತ್ರಗಳು ನೋಡುಗರನ್ನು ಆಕರ್ಷಿಸಿದವು.  ಕೇವಲ ಮೂರು ಅಡಿ ಅಂತರದಲ್ಲಿ ಹುಲಿಯ ಚಲನಗಳನ್ನು ಸೆರೆಹಿಡಿದ ಚಿತ್ರಗಳೂ ಇಲ್ಲಿವೆ.‘ಬಹುತೇಕ ಚಿತ್ರಗಳನ್ನು ರಾಜಸ್ತಾನದ ರಣತಂಬೂರ್ ಹಾಗೂ ಮಧ್ಯ ಪ್ರದೇಶದ ಬಾಂಧವಗಢ್ ಅರಣ್ಯಪ್ರದೇಶಗಳಲ್ಲಿ ಸೆರೆಹಿಡಿದಿದ್ದೇನೆ. ಇವು ಸ್ವಲ್ಪ ವಿಸ್ತಾರವಾಗಿರುವುದರಿಂದ ಛಾಯಾಚಿತ್ರಕ್ಕೆ ಹೆಚ್ಚು ಅನುಕೂಲವಾಗಿರುತ್ತವೆ. ಬಂಡೀಪುರ ಅರಣ್ಯ ಪ್ರದೇಶ ಈ ರೀತಿಯಲ್ಲಿಲ್ಲ. ತುಂಬಾ ದಟ್ಟವಾದ ಅರಣ್ಯ ಪ್ರದೇಶವಾಗಿರುವುದರಿಂದ ಹುಲಿ ಎಷ್ಟೇ ಹತ್ತಿರವಿದ್ದಾಗಲೂ ಮರಗಳು ಅಡ್ಡಿಯಾಗಿ ಹುಲಿಗಳು ಕ್ಯಾಮೆರಾ ಕಣ್ಣಿನಲ್ಲಿ ‘ಫೋಕಸ್’ ಆಗುವುದಿಲ್ಲ. ಅದಕ್ಕಾಗಿ ಆ ಕಡೆ ಹೋಗುತ್ತೇನೆ’ ಎಂದು ಪ್ರವೀಣ್ ಕುಮಾರ್ ಪ್ರತಿಕ್ರಿಯೆ ನೀಡಿದರು.‘ಮೂಲತಃ ಹುಲಿ ಕ್ರೂರ ಪ್ರಾಣಿ ಅಲ್ಲ, ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ಅವು ಉಗ್ರರೂಪ ತಾಳುತ್ತವೆ. ಇಲ್ಲದಿದ್ದರೆ, ತಾವುಂಟು ತಮ್ಮ ಪ್ರಪಂಚ ಉಂಟು ಎನ್ನುವಂತೆ ಇರುತ್ತವೆ. ಬಹಳಷ್ಟು ಜನರಿಗೆ ವ್ಯಾಘ್ರನ ಈ ಮೃದುಸ್ವರೂಪ ತಿಳಿದಿಲ್ಲ. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಈ ಪ್ರದರ್ಶನವನ್ನು ಏರ್ಪಡಿಸಿದ್ದೇನೆ’ ಎಂದು ತಿಳಿಸಿದರು.ಕಳೆದ 15 ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿ ಅವರು ದುಡಿಯುತ್ತಿದ್ದಾರೆ. ಇದಲ್ಲದೇ, ಅವರು ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯಲ್ಲಿ ಸೂಪರಿಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry