ಪ್ರವೀಣ್ ಕುಮಾರ್ ಅನುಪಸ್ಥಿತಿಯಿಂದ ಬೇಸರ: ದೋನಿ

7

ಪ್ರವೀಣ್ ಕುಮಾರ್ ಅನುಪಸ್ಥಿತಿಯಿಂದ ಬೇಸರ: ದೋನಿ

Published:
Updated:

ಬೆಂಗಳೂರು: ಬಲಾಢ್ಯ ತಂಡವೆಂದು ಬೀಗುವ ಬದಲು ಎಲ್ಲ ಎದುರಾಳಿ ಪಡೆಯೂ ಅಪಾಯಕಾರಿ ಎಂದು ಪರಿಗಣಿಸಿ ಹೋರಾಡುವುದೇ ಪ್ರಜ್ಞಾವಂತಿಕೆ.

-ಹೀಗೆ ಹೇಳಿದ್ದು ವಿಶ್ವಕಪ್ ಕ್ರಿಕೆಟ್‌ನಲ್ಲಿ ಹೋರಾಡಲು ಸಜ್ಜಾಗುತ್ತಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ. ವಿಶ್ವಕಪ್‌ಗೆ ಮುನ್ನ ಮೊಟ್ಟ ಮೊದಲ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ‘ಎಲ್ಲ ತಂಡಗಳೂ ಅಪಾಯಕಾರಿ’ ಎಂದು ಸ್ಪಷ್ಟವಾಗಿ ಹೇಳಿದರು.

ಸುದೀರ್ಘ ವಿರಾಮದ ನಂತರ ಭಾರತದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುತ್ತಿರುವುದು ವಿಶೇಷವಾದರೂ, ಅದಕ್ಕೆ ಮಹತ್ವ ವೇನಿಲ್ಲ. ನಮ್ಮೆದುರು ಇರುವುದು ಮತ್ತೊಂದು ಹೊಸ ಟೂರ್ನಿ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಆಡಬೇಕು. ಸ್ವಂತ ನೆಲದಲ್ಲಿ ಆಡುವುದರಿಂದ ಒತ್ತಡ ಅಧಿಕವಾಗಿರುವುದು ಸಹಜ. ಈ ಒತ್ತಡವನ್ನು ಹೆಚ್ಚುವರಿ ಹೊಣೆಯೆಂದ ಸ್ವೀಕರಿಸಿ ಹೋರಾಡುತ್ತೇವೆ ಎಂದು ‘ಮಹಿ’ ವಿವರಿಸಿದರು.

ಯುವ ವೇಗದ ಬೌಲರ್ ಪ್ರವೀಣ್ ಕುಮಾರ್ ಅವರು ತಂಡದ ನೆರವಿಗೆ ಲಭ್ಯವಾಗುತ್ತಿಲ್ಲ ಎನ್ನುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ‘ಸ್ಟ್ರೀಟ್ ಸ್ಮಾರ್ಟ್’ ಕ್ರಿಕೆಟರ್ ಎನಿಸಿದ ಪ್ರವೀಣ್ ಅನುಪಸ್ಥಿತಿಯು ಸ್ವಲ್ಪ ಆತಂಕಗೊಳ್ಳುವಂತೆ ಮಾಡಿದ್ದು ಸಹಜ. ಆದರೆ ಗಾಯದ ಸಮಸ್ಯೆಯಿಂದ ಒಬ್ಬ ಆಟಗಾರನ ನೆರವು ಸಿಗುವುದಿಲ್ಲ ಎಂದಾಗ ಆ ಅಂಶವನ್ನು ಸಹಜವಾಗಿ ಒಪ್ಪಿಕೊಂಡು, ಲಭ್ಯವಾದ ಆಟಗಾರರ ಬಲದೊಂದಿಗೆ ಆಡುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.

‘ವಿಶ್ವಕಪ್‌ನಂಥ ಮಹತ್ವದ ಟೂರ್ನಿಯಲ್ಲಿ ಆಡುವಾಗ ತಂಡದಲ್ಲಿ ಪ್ರವೀಣ್ ಇಲ್ಲ. ಇದು ದುರಾದೃಷ್ಟ. ಇತ್ತೀಚೆಗೆ ಆಡಿದ ಅನೇಕ ಏಕದಿನ ಪಂದ್ಯಗಳ ಸರಣಿಯಲ್ಲಿ ಅವರು ತಂಡಕ್ಕೆ ಬಲ ನೀಡಿದ್ದರು. ಅಂಥ ಕ್ರಿಕೆಟಿಗ ಬೌಲಿಂಗ್ ದಾಳಿಗೆ ಬಲ ನೀಡಲು ಲಭ್ಯವಾಗುತ್ತಿಲ್ಲ ಎನ್ನುವ ಕೊರತೆಯ ಅನುಭವ ಎಲ್ಲರಿಗೂ ಆಗಿದೆ’ ಎಂದರು.

‘ಆಟಗಾರರು ಗಾಯ ಆಗದೆಯೇ ಇರುವಂತೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಕಟು ಸತ್ಯವನ್ನು ಒಪ್ಪಿಕೊಳ್ಳಲೇಬೇಕು’ ಎಂದ ಅವರು ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಹಾಗೂ ಗೌತಮ್ ಗಂಭೀರ್ ಕೂಡ ಇತ್ತೀಚಗಷ್ಟೇ ಚೇತರಿಸಿಕೊಂಡಿದ್ದಾರೆ ಎನ್ನುವ ಕಡೆಗೆ ಬೆರಳು ತೋರಿಸಿದರು.

ಬಾಂಗ್ಲಾದೇಶ ವಿರುದ್ಧ ಫೆಬ್ರುವರಿ 19ರಂದು ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ಭಾರತ ತಂಡಕ್ಕೆ ಈಗ ಯಾವುದೇ ರೀತಿಯಲ್ಲಿ ಸಮಸ್ಯೆ ಇಲ್ಲವೆ ಎಂದು ಕೇಳಿದ್ದಕ್ಕೆ ‘ಕೆಲವರು ಸಣ್ಣಪುಟ್ಟ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಗಂಭೀರವಾದ ಯಾವುದೇ ಸಮಸ್ಯೆ ಎದುರಾಗಿಲ್ಲ. ವಿಶ್ವಕಪ್ ಮುಗಿಯುವವರೆಗೆ ನಮ್ಮ ತಂಡದ ಬೇರೆ ಯಾವುದೇ ಆಟಗಾರರು ಗಾಯಾಳುಗಳ ಪಟ್ಟಿಯನ್ನು ಸೇರುವುದಿಲ್ಲವೆಂದು ಆಶಿಸುತ್ತೇನೆ’ ಎಂದು ತಿಳಿಸಿದರು.

ಪಂದ್ಯಗಳ ನಡುವೆ ಸಾಕಷ್ಟು ದಿನಗಳ ಅಂತರ ಇರುವ ಬಗ್ಗೆ ಆಕ್ಷೇಪ ಕೇಳಿಬಂದಿರುವ ಕಡೆಗೆ ಗಮನ ಸೆಳೆದಾಗ ‘ಬಿಗುವಿನ ಕಾರ್ಯಕ್ರಮ ಇದ್ದರೆ ಆಟಗಾರರಿಗೆ ಕಷ್ಟವಾಗುತ್ತದೆ. ವಿಶ್ರಾಂತಿ ಪಡೆದು ಮತ್ತೊಂದು ಪಂದ್ಯಕ್ಕೆ ಸಜ್ಜಾಗಲು ಕಾಲಾವಕಾಶವೇ ಇಲ್ಲದಂತಾಗುತ್ತದೆ. ಈ ಬಾರಿಯ ವಿಶ್ವಕಪ್‌ಗೆ ರೂಪಿಸಿರುವ ಕಾರ್ಯಕ್ರಮ ಪಟ್ಟಿಯು ಅತ್ಯುತ್ತಮವಾದದ್ದು. ಕೆಲವರು ಎಲ್ಲದಕ್ಕೂ ಆಕ್ಷೇಪಿಸುತ್ತಾರೆ; ಆ ಕಡೆಗೆ ಗಮನ ಕೊಡುವ ಅಗತ್ಯವಿಲ್ಲ’ ಎಂದು ದಿಟ್ಟತನದಿಂದ ನುಡಿದರು.

ತಮ್ಮ ತಂಡದ ಸ್ಥಿತಿಯ ಕುರಿತು ಮಾತನಾಡಿದ ದೋನಿ ‘ಹೆಚ್ಚಿನ ಆಟಗಾರರು ಐದಾರು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದವರಾಗಿದ್ದಾರೆ. ಅವರಿಗೆ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಪ್ರತ್ಯೇಕವಾಗಿ ಹೇಳಿಕೊಡುವ ಅಗತ್ಯವೂ ಇಲ್ಲ. ಆದರೆ ಯುವ ಆಟಗಾರರಲ್ಲಿ ಹುಮ್ಮಸ್ಸು ಮೂಡುವಂತೆ ಮಾಡುವುದು ಹಿರಿಯ ಕ್ರಿಕೆಟಿಗರ ಕರ್ತವ್ಯ. ತಂಡದಲ್ಲಿರುವ ಕೆಲವು ಯುವ ತಾರೆಗಳು ಪಂದ್ಯದ ಸ್ವರೂಪವನ್ನೇ ಬದಲಿಸುವಂಥ ಸತ್ವವುಳ್ಳ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳಾಗಿದ್ದಾರೆ’ ಎಂದು ನುಡಿದರು.

‘ನಿರೀಕ್ಷೆಯ ಭಾರ ಹೆಚ್ಚಿದೆ. ಪ್ರತಿಯೊಂದು ಸರಣಿಯಲ್ಲಿ ಆಡುವಾಗಲೂ ಯಶಸ್ಸು ನಮ್ಮದಾಗಬೇಕು ಎಂದು ನಿರೀಕ್ಷೆ ಮಾಡುವುದು ಸಹಜ. ಆದರೆ ಅಭಿಮಾನಿಗಳ ಆಶಯವನ್ನು ನಿಭಾಯಿಸುವ ಹೆಚ್ಚುವರಿ ಜವಾಬ್ದಾರಿ ಹೊತ್ತುಕೊಳ್ಳುವ ಜೊತೆಗೆ ಟೂರ್ನಿಯಲ್ಲಿ ಅಗತ್ಯವಿರುವ ಆಟವನ್ನೂ ಆಡಬೇಕು’ ಎಂದ ದೋನಿ ‘ಎದುರಿಗಿರುವ ಪಂದ್ಯದ ಕಡೆಗೆ ಗಮನ ಕೇಂದ್ರೀಕರಿಸಬೇಕು. ಒಂದೊಂದು ಪಂದ್ಯವನ್ನು ಸವಾಲಾಗಿ ಸ್ವೀಕರಿಸಿ, ಯೋಜನೆ ರೂಪಿಸಿಕೊಂಡು ಹೋರಾಡಬೇಕು. ಎಲ್ಲ ಸಂದರ್ಭದಲ್ಲಿ ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಆಗ ತಕ್ಷಣ ಹೊಸ ತಂತ್ರದ ಬಲೆಯನ್ನು ಹೆಣೆಯುವುದಕ್ಕೂ ಸಜ್ಜಾಗಿರಬೇಕು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry