ಪ್ರವೀಣ್ ಚಂದ್ರ ಗಣಿ ಕಂಪೆನಿಯಿಂದ ಅಕ್ರಮ: ಸಿಬಿಐ ತನಿಖೆಗೆ ಹಿರೇಮಠ್ ಆಗ್ರಹ

7

ಪ್ರವೀಣ್ ಚಂದ್ರ ಗಣಿ ಕಂಪೆನಿಯಿಂದ ಅಕ್ರಮ: ಸಿಬಿಐ ತನಿಖೆಗೆ ಹಿರೇಮಠ್ ಆಗ್ರಹ

Published:
Updated:

ಹುಬ್ಬಳ್ಳಿ: `ಚಿತ್ರದುರ್ಗದಲ್ಲಿ ಆರ್. ಪ್ರವೀಣ್ ಚಂದ್ರ ಮಾಲೀಕತ್ವದ ಗಣಿ ಕಂಪೆನಿಯು 2000-2006 ಅವಧಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ 13 ಲಕ್ಷ  ಮೆಟ್ರಿಕ್ ಟನ್ ಅದಿರನ್ನು ತೆಗೆದಿರುವ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಾಖಲೆಗಳ ಸಹಿತ ಮಾಹಿತಿ ನೀಡಿದರೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಯಾವುದೇ ಕ್ರಮ ತೆಗೆದುಕೊಂಡಿಲ್ಲ' ಎಂದು ಧಾರವಾಡ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಶುಕ್ರವಾರ ನಗರದಲ್ಲಿ ಬೇಸರ ವ್ಯಕ್ತಪಡಿಸಿದರು.`ಎಸ್.ಎಂ. ಕೃಷ್ಣ ಮತ್ತು ಧರ್ಮ ಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಕಂಪೆನಿಯು ಆರು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ. ಈ ಕಾರಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎರಡು ಬಾರಿ ಷೋಕಾಸ್ ನೋಟಿಸ್ ನೀಡಿದೆ. ತಕ್ಷಣ ಎಚ್ಚೆತ್ತುಕೊಂಡ ಕಂಪೆನಿ, 2006ರಲ್ಲಿ ಮಿಂಚಿನ ವೇಗದಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಿತು. ಈ ದಾಖಲೆಗಳನ್ನೂ ಸಿಇಸಿಗೆ ಸಲ್ಲಿಸಲಾಗಿದ್ದು, ಕಂಪೆನಿಯ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.`ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗಣಿ ಪರವಾನಗಿ ಗಿಟ್ಟಿಸಲು, ಅವರ ಮಕ್ಕಳು ಮತ್ತು ಅಳಿಯನಿಗೆ ಎರಡು ಕಂತುಗಳಲ್ಲಿ ಆರು ಕೋಟಿ ರೂಪಾಯಿ ಲಂಚ ಕೊಟ್ಟಿದೆ. ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ಈ ಕುರಿತು ಸಿಇಸಿ ಉಲ್ಲೇಖಿಸಿದೆ' ಎಂದರು.

`ಗಣಿಗಾರಿಕೆ ಪುನರಾಂಭಿಸಲು ಮತ್ತು ಹೊಸ ಕಂಪೆನಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಲು ಉತ್ಸುಕತೆ ತೋರುತ್ತಿರುವ ಸಿಇಸಿ, ಗಣಿ ಕಂಪೆನಿಗಳ ಅಕ್ರಮ ವ್ಯವಹಾರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡುವ ನಿಟ್ಟಿನಲ್ಲೂ ಆಸಕ್ತಿ ತೋರಿಸಬೇಕಿದೆ' ಎಂದ ಅವರು, ಪ್ರವೀಣ್ ಚಂದ್ರ ಅವರ ಕಂಪೆನಿ ಸಹಿತ ಆರೋಪದಲ್ಲಿ ಸಿಲುಕಿರುವ `ಎ' ಶ್ರೇಣಿಯ ಎಲ್ಲ ಗಣಿ ಕಂಪೆನಿಗಳನ್ನು `ಸಿ' ಶ್ರೇಣಿಗೆ ಪರಿವರ್ತಿಸಬೇಕು ಎಂದೂ ಆಗ್ರಹಿಸಿದರು.`ಅಕ್ರಮ ಗಣಿಗಾರಿಕೆಯಿಂದ ಸ್ಥಳೀಯರ ಆರೋಗ್ಯ, ಕೃಷಿ, ಪಶು ಸಂಗೋಪನೆ, ಜಲ ಮೂಲದ ಮೇಲೆ ಗಂಭೀರ ಪರಿಣಾಮ ಉಂಟಾಗಿರುವ ಬಗ್ಗೆ ಮಹಾಲೇಖಪಾಲಕರ (ಸಿಎಜಿ) ವರದಿಯಲ್ಲಿ ಉಲ್ಲೇಖಗೊಂಡಿರುವುದು ಸ್ವಾಗತಾರ್ಹ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry