ಪ್ರವೇಶ ದ್ವಾರ ನಾಮಕರಣ: ಇತಿಹಾಸಕ್ಕೆ ದ್ರೋಹ ಸಲ್ಲ

7

ಪ್ರವೇಶ ದ್ವಾರ ನಾಮಕರಣ: ಇತಿಹಾಸಕ್ಕೆ ದ್ರೋಹ ಸಲ್ಲ

Published:
Updated:

ಮೈಸೂರು:‘ಸಾಂಸ್ಕೃತಿಕ ನಗರಿಯನ್ನು ಪ್ರವೇಶಿಸುವ ಮಹಾದ್ವಾರಗಳಿಗೆ ಗಣ್ಯರ ಹೆಸರಿಡುವಲ್ಲಿ  ಮಹಾನಗರ ಪಾಲಿಕೆಯು ನಗರದ ಇತಿಹಾಸ ಮತ್ತು ಸಂಸ್ಕೃತಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು’  ಪ್ರೊ.ಬಿ.ವಿ.ನಂಜರಾಜೇ ಅರಸ್ ಮಂಗಳವಾರ ಒತ್ತಾಯಿಸಿದರು. ನಗರದ ಆರು ಪ್ರವೇಶ ದ್ವಾರಗಳಿಗೆ ಗಣ್ಯರ ಹೆಸರನ್ನು ನಾಮಕರಣ ಮಾಡುವ ಸಂಬಂಧ ನಗರದ  ನಟರಾಜ ಕಲ್ಯಾಣ ಮಂಟಪದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಪ್ರವೇಶ ದ್ವಾರಗಳಿಗೆ ಮಾಗಡಿ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಅಟಲ್ ಬಿಹಾರಿ ವಾಜಪೇಯಿ, ಮದರ್ ಥೆರೆಸ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ  ಅವರ ಹೆಸರನ್ನು ಇಡಲು ಪಾಲಿಕೆ ಸದಸ್ಯರು ನಿರ್ಣಯ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಗಣ್ಯರು  ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.ಆದರೆ ಮೈಸೂರು ನಗರ ಬೆಳವಣಿಗೆಗೆ ಇವರ ಕೊಡುಗೆ ಶೂನ್ಯ’ ಎಂದು ಹೇಳಿದರು.‘ಮೈಸೂರು ನಗರ ಪ್ರವೇಶಿಸುವ ಸ್ವಾಗತ ಕಮಾನುಗಳಿಗೆ ತಾಂತ್ರಿಕವಾಗಿ ನಾಮಕರಣ ಮಾಡುವುದು  ಸರಿಯಲ್ಲ. ನಗರಕ್ಕೆ ಏನು ಕೊಡುಗೆ ನೀಡದ ಗಣ್ಯರ ಹೆಸರನ್ನು ಮಹಾನಗರ ಪಾಲಿಕೆಯು ಇಟ್ಟು ಅವಮಾನ  ಮಾಡುವುದು ಬೇಡ. ಮೈಸೂರು ನಗರ ರೂಪಿಸುವಲ್ಲಿ, ಬೆಳವಣಿಗೆ ಮಾಡಿದವರಲ್ಲಿ ಯಾರ್ಯಾರ ಶಕ್ತಿ ಅಡಗಿದೆ  ಎಂಬುದನ್ನು ಮೊದಲು ತಿಳಿದು ನಂತರ ನಾಮಕರಣ ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.‘ಪಾಲಿಕೆ ಸದಸ್ಯರು ರಾಜರ ಇತಿಹಾಸ ತಿಳಿದುಕೊಳ್ಳುವ ಗೋಜಿಗೂ ಹೋಗಿಲ್ಲ. ನಗರ ನೀರು ಸರಬರಾಜು  ಹೊಣೆಯನ್ನು ಜಸ್ಕೊಗೆ ವಹಿಸಿ ಖಾಸಗೀರಣ ಮಾಡಿ ಜಸ್ಕೊ ಜಿಂದಾಬಾದ್ ಎಂದು ಘೋಷಣೆ ಕೂಗಿದ  ಸದಸ್ಯರು, ನಂತರ ಅದರ ನಿಜರೂಪ ತಿಳಿದಾಗ ವಿರೋಧ ವ್ಯಕ್ತಪಡಿಸಿದರು. ಪಾಲಿಕೆಯಲ್ಲಿ  ವ್ಯವಹಾರ-ಅವ್ಯವಹಾರ ನಡೆಯುತ್ತಿದೆ. ಅವ್ಯವಹಾರದಲ್ಲಿ ಬರುವ ಹಣ ಗಳಿಕೆಯಲ್ಲಿ ಇತಿಹಾಸ,  ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ’ ಎಂದು ಟೀಕಿಸಿದರು.‘ಪಾಲಿಕೆ ಸದಸ್ಯರು ಪ್ರವೇಶ ದ್ವಾರಗಳಿಗೆ ಹೆಸರಿಡಲು ಚಿಂತನೆ ನಡೆಸಿರುವ ಗಣ್ಯರ ಹೆಸರನ್ನು ಒಂದು ರಸ್ತೆ  ಇಲ್ಲವೆ ವೃತ್ತಕ್ಕೆ ಇಟ್ಟರೆ ಒಳಿತು. ಅದು ಬಿಟ್ಟು ನಗರಕ್ಕೆ ಏನು ಕೊಡುಗೆ ನೀಡದ ಗಣ್ಯರ ಹೆಸರಿಟ್ಟು ದ್ರೋಹ  ಎಸಗುವ ಕೆಲಸ ಆಗಬಾರದು. ಈ ಸಂಬಂಧ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮೈಸೂರು ವಿ.ವಿ. ಡಾಕ್ಟರೇಟ್ ನೀಡುತ್ತಿರುವುದು ಮೂರ್ಖತನ’ ಎಂದರು. ಕಾರ್ಯಕ್ರಮದಲ್ಲಿ ಡಾ.ಜೆ.ಜಿ.ವಿಶ್ವನಾಥಯ್ಯ, ಪತ್ರಕರ್ತ ಈಚನೂರು ಕುಮಾರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾ ಬೀದಿ ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry