ಭಾನುವಾರ, ಆಗಸ್ಟ್ 18, 2019
24 °C

ಪ್ರವೇಶ ನಿರಾಕರಣೆ; ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:

ಶಿವಮೊಗ್ಗ: ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗಕ್ಕೆ ಪ್ರವೇಶ ನಿರಾಕರಿಸಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಯಾವುದೇ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ನೀಡುತ್ತಿಲ್ಲ. ಇದರಿಂದ ಈ ವಿಷಯದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಪ್ರಸಕ್ತ ವರ್ಷ ಬಿ.ಕಾಂ. ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಹುತೇಕ ಎಲ್ಲ ಖಾಸಗಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಿ.ಕಾಂ. ವಿಭಾಗ ಭರ್ತಿಯಾಗಿದೆ. ಆದರೆ, ಕೆಲ ಖಾಸಗಿ ಕಾಲೇಜುಗಳಲ್ಲಿ ಬಿ.ಕಾಂ. ವಿಭಾಗಕ್ಕೆ ಪ್ರವೇಶ ನೀಡಲು ಅವಕಾಶವಿದ್ದರೂ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.ಹಾಗೆಯೇ, ಇನ್ನಿತರ ಪದವಿ ತರಗತಿಗಳಿಗೆ ಪ್ರವೇಶ ಪಡೆಯುವ ದಿನಾಂಕವನ್ನೂ ವಿಸ್ತರಿಸಬೇಕು. 2012-13ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶ ಕಳೆದ ಜು. 30ರಂದು ಹೊರಬಿದ್ದಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಆ.3 ಕಡೆಯ ದಿನವಾಗಿದೆ. ಆದರೆ, ಈ ಕಾಲಾವಕಾಶ ಕಡಿಮೆ ಇದೆ. ಈ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಅಭಾವವಿರುವುದರಿಂದ ಪದವಿ ತರಗತಿಗಳಿಗೆ ಪ್ರವೇಶ ನೀಡುತ್ತಿಲ್ಲ. ಸಹ್ಯಾದ್ರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯವಿದ್ದರೂ ಪ್ರವೇಶಾವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಜಿಲ್ಲಾಡಳಿತ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಜತೆ ಈ ಕುರಿತು ಶೀಘ್ರ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಿ.ಮಧುಸೂಧನ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚೇತನ್, ಕಾಂಗ್ರೆಸ್ ಮುಖಂಡ ಬಿ.ಎ.ರಮೇಶ್ ಹೆಗ್ಡೆ, ಎನ್‌ಎಸ್‌ಯುಐ ಪದಾಧಿಕಾರಿಗಳಾದ ವಿಕಾಸ್, ಶ್ರೀಜಿತ್, ಸಂತೋಷ್, ಶಿವು ಹಾಜರಿದ್ದರು.

Post Comments (+)