ಪ್ರವೇಶ ನಿರ್ಬಂಧ: ವಿದ್ಯಾರ್ಥಿಗಳಿಗೆ ಆತಂಕ

7

ಪ್ರವೇಶ ನಿರ್ಬಂಧ: ವಿದ್ಯಾರ್ಥಿಗಳಿಗೆ ಆತಂಕ

Published:
Updated:
ಪ್ರವೇಶ ನಿರ್ಬಂಧ: ವಿದ್ಯಾರ್ಥಿಗಳಿಗೆ ಆತಂಕ

ಹಾಸನ: ಹಾಸನ ಪಶುವೈದ್ಯಕೀಯ ಕಾಲೇಜಿಗೆ ಈ ವರ್ಷ ಹೊಸದಾಗಿ ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳಬಾರದು ಎಂದು ವೆಟರಿನರಿ ಕೌನ್ಸಿಲ್ ಆಫ್ ಇಂಡಿಯಾ ಶುಕ್ರವಾರ ಸಾರ್ವಜನಿಕ ನೋಟಿಸ್ ನೀಡಿದೆ. ಆದರೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಐವತ್ತು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.ನಗರದಲ್ಲಿ 2007ರಲ್ಲಿ ಕಾರ್ಯಾರಂಭ ಮಾಡಿದ ಪಶುವೈದ್ಯಕೀಯ ಕಾಲೇಜಿನಲ್ಲಿ ಭೌತಿಕ ಹಾಗೂ ಮಾನವ ಸಂಪನ್ಮೂಲದ ಕೊರತೆ ಇದೆ ಎಂದು ಕೌನ್ಸಿಲ್ ಹೇಳಿದೆ. ಈ ಕಾರಣಕ್ಕಾಗಿಯೇ ಕಾಲೇಜಿನಲ್ಲಿ ಈ ವರ್ಷ ಪ್ರವೇಶಾವಕಾಶವನ್ನು ನಿರಾಕರಿಸಿದೆ.ಆದರೆ ನೋಟಿಸ್‌ನಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದು ಎಂದು ಕಾಲೇಜಿನ ಡೀನ್ ವಸಂತ ಶೆಟ್ಟಿ ಭರವಸೆ ನೀಡಿದ್ದಾರೆ. ಶುಕ್ರವಾರ `ಪ್ರಜಾವಾಣಿ~ ಜತೆ ಮಾತನಾಡಿದ ಅವರು, `ನೋಟಿಸ್‌ನಿಂದ ಸ್ವಲ್ಪ ಇರಿಸುಮುರುಸಾಗಿರುವುದು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿರುವುದು ನಿಜ. ಆದರೆ ಈ ವರ್ಷ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.ಕಾಲೇಜಿನಲ್ಲಿ ಪ್ರವೇಶಾವಕಾಶಕ್ಕೆ ತಡೆ ಮಾಡಲಾಗಿದೆಯೇ ವಿನಾ ಮಾನ್ಯತೆ ರದ್ದಾಗಿಲ್ಲ. 2012ರೊಳಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದರೆ ಕಾಲೇಜಿಗೆ ಮಾನ್ಯತೆ ಬಂದೇ ಬರುತ್ತದೆ. ಈ ವಿದ್ಯಾರ್ಥಿಗಳು ಅಂತಿಮ ವರ್ಷ ಪ್ರವೇಶಿಸುವುದರೊಳಗೆ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳು ಬರಲಿವೆ~ ಎಂದರು.`ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಈ ವರ್ಷ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ಕಾಲೇಜಿನಲ್ಲಿ 91 ಉಪನ್ಯಾಸಕರು ಇರಬೇಕಾಗಿತ್ತು. ಆದರೆ 23 ಮಂದಿ ಇದ್ದಾರೆ. ಕೌನ್ಸಿಲ್‌ನ ಆಕ್ಷೇಪಕ್ಕೆ ಇದೇ ಮುಖ್ಯ ಕಾರಣ ಇರಬಹುದು.ಸಿಬ್ಬಂದಿ ನೇಮಕ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಾಸನ ಮತ್ತು ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿಗಾಗಿ 200 ಸಿಬ್ಬಂದಿ ನೇಮಕಕ್ಕೆ ಕಳೆದ ತಿಂಗಳಲ್ಲಿ ನೋಟಿಫಿಕೇಶನ್ ಆಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲ ಹುದ್ದೆಗಳೂ ಭರ್ತಿಯಾಗಲಿವೆ.ಕಟ್ಟಡ ಹಾಗೂ ಇನ್ನಿತರ ಸೌಲಭ್ಯಗಳಿಗೆ ಸರ್ಕಾರ ಕಳೆದ ವರ್ಷ 10 ಕೋಟಿ ರೂಪಾಯಿ ಅನುದಾನ ನೀಡಿತ್ತು. ಅದನ್ನು ಸಂಪೂರ್ಣವಾಗಿ ಬಳಕೆ ಮಾಡಿದ್ದೇವೆ. ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ವರ್ಷ 30 ಕೋಟಿ ರೂಪಾಯಿ ಬರಬೇಕು. ಹಣ ಬಂದರೆ ವರ್ಷದೊಳಗೆ ಕಟ್ಟಡ ಪೂರ್ಣಗೊಂಡು ಹಾಸನದಲ್ಲೇ ಅತಿ ದೊಡ್ಡ ಕಟ್ಟಡ ನಿರ್ಮಾಣವಾಗಲಿದೆ. 2012ರೊಳಗೆ  ಎಲ್ಲ ಸೌಲಭ್ಯಗಳನ್ನು ಪೂರ್ಣಗೊಳಿಸುತ್ತೇವೆ ಎಂಬ ಭರವಸೆ ನಮಗಿದೆ~ ಎಂದು ವಸಂತ ಶೆಟ್ಟಿ ತಿಳಿಸಿದರು.`ಇದೇ ಮೊದಲಲ್ಲ, 2008-09ನೇ ಸಾಲಿನ್ಲ್ಲಲೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ಕೌನ್ಸಿಲ್ ನಮಗೆ ಸೂಚನೆ ನೀಡಿತ್ತು. ಆದರೆ ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದು ಅವರಿಗೆ ಭರವಸೆ ನೀಡಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೆವು. ಅದರಂತೆ ಅವರು ಬಂದು ಪ್ರಗತಿ ನೋಡಿ ಪ್ರವೇಶ ಮುಂದುವರಿಸಬಹುದು ಎಂದಿದ್ದರು.

 

ಈ ಬಾರಿಯೂ ಕೌನ್ಸಿಲ್‌ಗೆ ಎಲ್ಲ ವಿವರಗಳನ್ನು ನೀಡಿದ್ದೆವು. ಆದರೆ ಈ ನೋಟಿಸ್ ಸ್ವಲ್ಪ ಅಚ್ಚರಿ ಮೂಡಿಸಿದೆ. ಏನೇ ಇದ್ದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry