ಬುಧವಾರ, ನವೆಂಬರ್ 20, 2019
27 °C

ಪ್ರವೇಶ ನಿಷೇಧ: ಅಸಮಾಧಾನ

Published:
Updated:

ಹುಮನಾಬಾದ್: ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ನಿಮಿತ್ತ ಮಿನಿವಿಧಾನ ಸೌಧ ಕಚೇರಿ ಪ್ರವೇಶ ನಿಷೇಧ ಹೇರಿದ್ದರ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಕೊನೆಯ ದಿನ ಬುಧವಾರ ಮುಂಜಾನೆ ಅನೇಕ ಮಂದಿ ಸಾರ್ವಜನಿಕರು ಸುದ್ದಿಗಾರರ ಎದುರಿಗೆ ಅಸಮಾಧಾನ ವ್ಯಕ್ತಪಡಿಸಿದರು.ಸಾರ್ವಜನಿಕರು ತಮ್ಮ ವಿವಿಧ ಕೆಲಸಗಳಿಗಾಗಿ ಬುಧವಾರ ಮುಂಜಾನೆ ಪಟ್ಟಣದ ಮಿನಿವಿಧಾನ ಸೌಧ ಕಚೇರಿಗೆ ಹತ್ತಿರ ಆಗಮಿಸುತ್ತಿದ್ದಂತೆ ಕಚೇರಿಯಿಂದ ಚುನಾವಣಾ ನಿಯಮ ಅನುಸಾರ ಪ್ರಾಂಗಣದಲ್ಲಿ ಪ್ರವೇಶ ನಿಷೇಧ ಸಂಬಂಧ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿತ್ತು.ಮಾಹಿತಿ ಕೊರತೆ ಕಾರಣ ಸಾರ್ವಜನಿಕರು ನೇರವಾಗಿಒಳಗೆ ಹೋಗಲು ಯತ್ನಿಸಿದಾಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಂತರವಷ್ಟೇ ಒಳಗೆ ಬಿಡುವಂತೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮಧ್ಯಾಹ್ನ 3ಗಂಟೆ ನಂತರ ಹೋಗಬಹುದು ಎಂದು ಪೊಲೀಸರು ತಿಳಿಸುತ್ತಿದ್ದಂತೆ ಹಳ್ಳಿಖೇಡ(ಬಿ) ಗ್ರಾಮದಿಂದ ತಮ್ಮ ಕೆಲಸಕ್ಕೆ ಆಗಮಿಸಿದ್ದ ಅಜೀಜ್ ಪಟೇಲ, ಸಿದ್ದಪ್ಪ ಜೈನಾಪೂರೆ ಸಿಡಿಮಿಡಿಗೊಂಡರು.ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಮಧ್ಯಾಹ್ನ 3ಗಂಟೆ ಒಳಗಾಗಿ ಯಾರನ್ನೂ ಒಳಗೆ ಬಿಡುವುದಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಾಮಫಲಕ ಅಳವಡಿಸಬೇಕಿತ್ತು. ಅಂಥವಾ ಚುನಾವಣಾ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದರೇ ಬಸ್‌ಗೆ ಹಣಹಾಕಿ ಇಲ್ಲಿಗೆ ಬರುವ ಪ್ರಸಂಗವೇ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಚುನಾವಣಾ ಪ್ರಕ್ರಿಯೆ ಮೇ 8ಕ್ಕೆ ಪೂರ್ಣಗೊಳ್ಳಲಿದೆ. ಅಲ್ಲಿವರೆಗೆ ಪ್ರವೇಶ ನಿಷೇಧ ಇದ್ದಲ್ಲಿ ಆ ಬಗ್ಗೆ ಅಧಿಕಾರಿಗಳು ಸಾರ್ವಜನಿಕರು ಅನುಭವಿಸುವ ತೊಂದರೆ ತಪ್ಪಿಸಲು ಇನ್ನೂ ಮುಂದಾದರೂ ಮುಂಚಿತವಾಗಿ ಅಧಿಕೃತವಾಗಿ ಸೂಚನೆ ನೀಡಬೇಕು ಎಂದು ಶಕ್ಕರಗಂಜವಾಡಿ ಗ್ರಾಮದ ಪುಂಡ್ಲಿಕಪ್ಪ, ಚಂದ್ರಕಾಂತ, ಪ್ರಹ್ಲಾದಗಿರಿ, ನಿತೀಶ ಮಹೀಂದ್ರಕರ್ ಇನ್ನೂ ಮೊದಲಾದವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)