ಶುಕ್ರವಾರ, ಏಪ್ರಿಲ್ 16, 2021
31 °C

ಪ್ರಶಂಸಾರ್ಹ ಭರತನಾಟ್ಯ

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಭರತನಾಟ್ಯದಂತಹ ಅತ್ಯಂತ ಸಮಗ್ರ ಮತ್ತು ವೈಜ್ಞಾನಿಕ ಕಲೆಯ ಅಚ್ಚುಕಟ್ಟಾದ ಪ್ರದರ್ಶನ ಏಕಾಗ್ರತೆ, ಕಲಾ ನಿಷ್ಠೆ, ಪ್ರತಿಭೆ ಹಾಗೂ ಪರಿಶ್ರಮಗಳ ಸಂಯೋಗದಿಂದ ಮಾತ್ರ ಸಂಭವನೀಯ.ಒಬ್ಬ ಕಲಾವಿದೆ ಮದುವೆಯಾಗಿ ತಾಯಿಯಾದ ನಂತರವೂ ಅದೇ ಕಟ್ಟುನಿಟ್ಟು ಮತ್ತು ಖಚಿತತೆಗಳೊಂದಿಗೆ ಪ್ರದರ್ಶನ ನೀಡಬೇಕಾದರೆ ಅದೆಷ್ಟೋ ಸಾಧನೆಯನ್ನು ಮಾಡಬೇಕಾಗುತ್ತದೆ. ಅಂತಹ ಕಠಿಣ ಸಾಧನೆಯಿಂದ ಯಶಸ್ಸು ಸಾಧ್ಯ.ಇದಕ್ಕೆ ನಿದರ್ಶನವಾಗಿ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಎಲ್.ಎಸ್. ಪ್ರಕೃತಿ ಅವರ ಭರತನಾಟ್ಯ ಕಾರ್ಯಕ್ರಮ ಸಫಲವಾಗಿತ್ತು. ಪ್ರಸಿದ್ಧ ಮತ್ತು ಪರಿಣತ ನೃತ್ಯ ಗುರುಗಳ ಮಾರ್ಗದರ್ಶನದಲ್ಲಿ ತಮ್ಮ ಮಾಧ್ಯಮದ ಸೂಕ್ಷ್ಮತೆಗಳನ್ನು ಕಲಿತು ಅವುಗಳನ್ನು ಯಥಾವತ್ತಾಗಿ ನಿರಾತಂಕವಾಗಿ ನಿರೂಪಿಸಿ ರಸಿಕರ ಪ್ರಶಂಸೆಗೆ ಅವರು ಭಾಜನರಾದರು.ಒಂದೆರಡು ಕಡೆ ತಡವರಿಸಿದರೂ ಸಾರ್ಥಕವಾಗಿದ್ದ ಧ್ವನಿಮುದ್ರಿತ ಸಂಗೀತ ಸಹಕಾರದೊಂದಿಗೆ ನರ್ತನ ಮಾಡಿದ ಪ್ರಕೃತಿ ನೃತ್ತ, ನೃತ್ಯ, ಅಭಿನಯ ಮೂರೂ ಭಾಗಗಳಲ್ಲಿ ತಮ್ಮ ಪ್ರಬುದ್ಧತೆ ತೋರಿದರು.ಸಂಪ್ರದಾಯದಂತೆ ಪುಷ್ಪಾಂಜಲಿಯಿಂದ (ಮಲಯ ಮಾರುತ) ಆರಂಭಿಸಿ ಗಣೇಶ ವಂದನೆಯನ್ನು ಮಾಡಲಾಯಿತು. ಕೃಷ್ಣನ ವಿರಹದಿಂದ ಬಾಧಿತಳಾಗಿರುವ ನಾಯಕಿಯು ಅವನ ಉದಾಸೀನತೆಯ ಬಗೆಗೆ ಚಿಂತಿಸುತ್ತಾಳೆ. ಅವನ ವಿವಿಧ ಲೀಲೆಗಳನ್ನು ಸ್ಮರಿಸಿ ತನ್ನ ಮನದಾಳವನ್ನು ಅರಿತುಕೊಳ್ಳುವಂತೆ ಕೇಳಿಕೊಳ್ಳುತ್ತಾಳೆ.ಪೂತನಾ ಸಂಹಾರ, ನವನೀತ ಚೋರ ಕೃಷ್ಣ, ಕಾಳೀಯ ಮರ್ದನ ಮುಂತಾದ ಪ್ರಸಂಗಗಳನ್ನು ಅವಳು ನೆನೆಯುತ್ತಾಳೆ. ಈ ರೀತಿಯಲ್ಲಿ `ಚಾರುಕೇಶಿ ವರ್ಣ~ (ಇನ್ನುಂ ಎನ್ಮನಂ ಅರಿಯಾದ, ಲಾಲ್ಗುಡಿ ಜಯರಾಮನ್ ವಿರಚಿತ) ಸುಮಾರು 40 ನಿಮಿಷ ಹೊಮ್ಮಿ, ನರ್ತಕಿಯ ಕಲಾ ಸಿದ್ಧಿಯ ಎಲ್ಲಾ ಹೊಳಹುಗಳೂ ಮಿಂಚಿದವು.

 

ನಿತ್ಯ ನವೀನವಾದ `ಆಡಿಸಿದಳೆಶೋದಾ~ಳ ಪದಾಭಿನಯದಲ್ಲಿ ವಾತ್ಸಲ್ಯಭಾವದ ಪೋಷಣೆ ಮತ್ತು ಪ್ರಕಟಣೆ ಅಭಿನಂದನಾರ್ಹವಾಗಿತ್ತು. ಸುಬ್ರಹ್ಮಣ್ಯಸ್ವಾಮಿಯನ್ನು ಕುರಿತ ಸಾವೇರಿ ತಮಿಳು ಪದದ ಅಭಿನಯ ಅದ್ಭುತವಾಗಿತ್ತು.

 

ವೇಗ ಗತಿಯ ಸಂಯೋಜನೆ ಮತ್ತು ಆಕರ್ಷಕ ಲಯ ವಿನ್ಯಾಸದ ನಳಿನಕಾಂತಿ ತಿಲ್ಲಾನವನ್ನು ನಿರ್ವಹಿಸುವಾಗ ಪ್ರಕೃತಿ ವೇದಿಕೆಯನ್ನು ಕಲಾತ್ಮಕವಾಗಿ ವಿವಿಧ ಜಾಮಿತಿಗಳಲ್ಲಿ ಬಳಸಿಕೊಂಡು, ಜತಿ ಮತ್ತು ಅಡುವು ವೈವಿಧ್ಯ ನೃತ್ತದೊಂದಿಗೆ ಸಮದ್ಧಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.