ಸೋಮವಾರ, ಜೂನ್ 21, 2021
23 °C

ಪ್ರಶಸ್ತಿ ಕಟ್ಕೊಂಡು ನಾನೇನ್ ಮಾಡ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮನೆ ತುಂಬ ಪ್ರಶಸ್ತಿ, ಫಲಕಗಳೇ ತುಂಬಿಕೊಂಡು ಹೋಗಿವೆ. ಅವುಗಳನ್ನು ಇಡಲಿಕ್ಕೆ ಜಾಗವಿಲ್ಲದಂತಾಗಿದೆ. ಈ ಪ್ರಶಸ್ತಿಗಳನ್ನು ತೊಳಕೊಂಡು ಕುಡಿಲ್ಯಾ? ಇವುಗಳನ್ನು ಕಟ್ಟಿಕೊಂಡು ನಾನೇನ್ ಮಾಡ್ಲಿ? ಜೀವನೋಪಾಯಕ್ಕಾಗಿ ದುಡ್ಡು ಕೊಡ್ರಿ ಎಂದು ಅವಲತ್ತುಕೊಂಡು ಸಾಕಾಗಿ ಹೋಗಿದೆ.ನಾ ಇದ್ದಾಗ ದುಡ್ಡು ಕೊಡದ ಸರ್ಕಾರದವರು ನಾ ಸತ್ತ ಮ್ಯಾಲ ಕೊಡ್ತಾರೇನ್ರಿ? ಇದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕನವರ ಪ್ರಶ್ನೆ! ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗುಲ್ಬರ್ಗಕ್ಕೆ ಆಗಮಿಸಿದಾಗ ತಮ್ಮ ಜೀವನದ ಯಶೋಗಾಥೆಯನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡದ್ದು ಇಲ್ಲಿದೆ.ನಾನು ನೂರು ವರ್ಷದ ಬಡವಿ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ನಮ್ಮೂರು.

ಬಿಕ್ಕಲು ಚಿಕ್ಕಯ್ಯನೊಂದಿಗೆ ಮದುವೆಯಾಯಿತು. ಮದುವೆಯಾಗಿ 20 ವರ್ಷ ಕಳೆದರೂ

ಮಕ್ಕಳಾಗಿರಲಿಲ್ಲ.

 

ಜನರಾಡುವ ಕೊಂಕು ಮಾತಿನಿಂದ ಇಬ್ಬರೂ ದೂರ ಉಳಿದೆವು. ಕೂಲಿ-ನಾಲಿ ಮಾಡುತ್ತ ಉಳಿದ ಸಮಯದಲ್ಲಿ ಹುಲಿಕಲ್‌ನಿಂದ ಕುದೂರಿನವರೆಗೆ ಸುಮಾರು ನಾಲ್ಕು ಕಿ. ಮೀ. ರಸ್ತೆಯ ಎಡ-ಬಲದಲ್ಲಿ ಆಲದ ಮರ ನೆಡುತ್ತ ಅವುಗಳಿಗೆ ನಿರಂತರ ಹತ್ತು ವರ್ಷ ನೀರು, ಮುಳ್ಳುಬೇಲಿ ಹಾಕುತ್ತ ಸ್ವಂತ ಮಕ್ಕಳಂತೆ ಆರೈಕೆ ಮಾಡಿದೆವು.ಕೆಲವು ದಿನಗಳಲ್ಲಿ ನನ್ನ ಗಂಡ ಚಿಕ್ಕಯ್ಯ ಅನಾರೋಗ್ಯದಿಂದ ತೀರಿ ಹೋದ. ಮುಂದೆ ಅದ್ಯಾರೋ ಪುಣ್ಯಾತ್ಮರು ನಾ ಮಾಡಿದ ಕೆಲಸ ದೊಡ್ಡದು ಎಂದು ದೆಹಲಿಗೆ ಕರೆದುಕೊಂಡು ಹೋಗಿ ಪ್ರಶಸ್ತಿ ಕೊಡಿಸಿದರು. ಅದಾದ ನಂತರ ನಮ್ಮ ಸರ್ಕಾರದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರು ನೂರಾರು ಪ್ರಶಸ್ತಿ, ಪುರಸ್ಕಾರ ನೀಡಿದ್ದಾರೆ. ಆದರೆ ಇವುಗಳಿಂದ ಹೊಟ್ಟೆ ತುಂಬುತ್ತದೆಯೇ?ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಬೆಂಗಳೂರಿನಲ್ಲಿ ನನಗೊಂದು ಮನೆ, ಜೀವನಾಂಶ ನೀಡುವುದಾಗಿ ಹೇಳಿದ್ದರು. ಈಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರೂ ಮನೆ ಮಂಜೂರಾಗಿದೆ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಯಾರೂ `ಕ್ಯಾರೆ~ ಅನ್ನುತ್ತಿಲ್ಲ. ನಮ್ಮೂರಿಗೆ ಹೆರಿಗೆ ಆಸ್ಪತ್ರೆ, ಜೀವನಾಂಶ, ಸಾಕು ಮಗ ಉಮೇಶ ಅವರಿಗೊಂದು ಉದ್ಯೋಗ  ಕೊಡಿ ಎಂಬುದೇ ನನ್ನ ಆಗ್ರಹವಾಗಿದೆ.ಹೀಗೆ ಮಾತನಾಡುತ್ತಿರುವಾಗಲೇ ಶಾಲಾ ಮಕ್ಕಳು, ಮಹಿಳೆಯರು ಬಂದು ಅಜ್ಜಿಗೆ ಕೈ ಕುಲುಕಿ ಕಾಲಿಗೆ ನಮಸ್ಕರಿಸುತ್ತಿರುವಾಗ, ನಿಮಗ ವಿದ್ಯೆ ಬರಲಿ. ಮುತ್ತೈದೆತನ ಚೆನ್ನಾಗಿರಲಿ, ಮಕ್ಕಳ ಭಾಗ್ಯ ಕರುಣಿಸಲಿ ಅದರ ಜೊತಿಗಿ ಗಿಡ ನೆಡ್ರಿ ಎಂದು ಆಶೀರ್ವಾದ ಮಾಡುತ್ತಿದ್ದರು. ಮಕ್ಕಳಾಗದೆ ಬಂಜೆತನ ಪಟ್ಟ ಕಟ್ಟಿಕೊಂಡಿದ್ದ ಸಾಲುಮರದ ತಿಮ್ಮಕ್ಕ ಮರಗಳಲ್ಲೇ ಮಕ್ಕಳನ್ನು ಕಂಡವರು. ಆ ಮೂಲಕವೇ ಕತ್ತಲೆ ಆವರಿಸಿದ ಬದುಕಿಗೆ ಬೆಳದಿಂಗಳು ನೀಡಿದವರು. ಸಮಾಜಕ್ಕೆ ನೆರಳು ನೀಡಿದ ಇವರನ್ನು ಪೋಷಿಸುವುದು ನಮ್ಮ ಕರ್ತವ್ಯವಲ್ಲವೇ? ಸಹಾಯ ಮಾಡಲಿಚ್ಚಿಸುವವರು 98458 47962ಗೆ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.