ಸೋಮವಾರ, ಅಕ್ಟೋಬರ್ 21, 2019
24 °C

ಪ್ರಶಸ್ತಿ ಕೊಡಿಸುವ ಹೆಸರಲ್ಲಿ ಅಮಾಯಕರಿಗೆ ಪಂಗನಾಮ

Published:
Updated:

ರಾಯಚೂರು: ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಬುದ್ಧ, ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ ಅವರಂಥ ಮಹಾನ್ ಚೇತನಗಳ ಹೆಸರಿನಲ್ಲಿ ಪ್ರಶಸ್ತಿ ಕೊಡಿಸುವುದಾಗಿ ಹೇಳಿ ರಾಯಚೂರು ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಭಾರತೀಯ ದಲಿತ ಸಾಹಿತ್ಯ ಆಕಡೆಮಿ ರಾಜ್ಯ ಘಟಕದ ಅಧ್ಯಕ್ಷ ರಾಮಣ್ಣ ಆರ‌್ಹೆಜ್ಜೆ ಅವರು ಪಂಗನಾಮ ಹಾಕಿದ್ದಾರೆ ಎಂದು ಭಾರತೀಯ ದಲಿತ ಸಾಹಿತ್ಯ ಆಕಡೆಮಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ನರಸಿಂಹಲು ಆರೋಪಿಸಿದ್ದಾರೆ.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ಬರಬೇಕು ಎಂದು ದೆಹಲಿಗೆ ಕರೆದು ಅಲ್ಲಿ ಪ್ರಶಸ್ತಿ ಕೊಡಿಸಿಲ್ಲ. ಪ್ರಶಸ್ತಿ ಸ್ವೀಕಾರಕ್ಕೆ ತಾವು ಸೇರಿದಂತೆ ತೆರಳಿದ ಬಹುತೇಕರು ಸಾಕಷ್ಟು ತೊಂದರೆ ಪಟ್ಟಿದಾಗಿ ಹೇಳಿದರು.ದೆಹಲಿಯಲ್ಲಿ ನಡೆದ 27ನೇ ವರ್ಷದ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನ ಈಚೆಗೆ ನಡೆಯಿತು. ಇದರಲ್ಲಿ ಕರ್ನಾಟಕದಿಂದ ಸುಮಾರು 2500 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆಯ್ಕೆ ಆದವರೆಲ್ಲರೂ ಬ್ಯಾಂಕ್ ಮೂಲಕ ಒಂದು ಸಾವಿರ ರೂಪಾಯಿ ರಾಜ್ಯ ಸಮಿತಿಗೆ ಪಾವತಿಸಬೇಕು ಎಂಬ ಆದೇಶ ಪತ್ರ ರವಾನಿಸಲಾಗಿತ್ತು.ಎರಡು ದಿನಕ್ಕೆ ಊಟ ಮತ್ತು ವಸತಿ ವ್ಯವಸ್ಥೆಗೆ ರಾಷ್ಟ್ರೀಯ ನಿಗದಿಗೊಳಿಸಿರುವಂಥದ್ದು. ಇದಕ್ಕೆ ಆರ‌್ಹೆಜ್ಜೆ ಅವರು  500 ರೂಪಾಯಿ ಹೆಚ್ಚುವರಿಯಾಗಿ ಪಡೆದಿದ್ದಾರೆ. ಕೆಲವರಿಂದ 1,500 ರೂಪಾಯಿ ನೇರವಾಗಿ ತಾವೇ ಪಡೆದಿದ್ದಾರೆ. ಇದಕ್ಕೆ ರಸೀದಿ ಕೊಟ್ಟಿಲ್ಲ ಎಂದು ಆಪಾದಿಸಿದರು.ಪ್ರಶಸ್ತಿ ಪಡೆಯುವ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಒಂದು  ವಾರದವರೆಗೆ ಓಓಡಿ ಸೌಲಭ್ಯ ಇದೆ. ಸಿಎಂ ಅನುಮತಿ ನೀಡಿದ್ದಾರೆ. ರಾಜ್ಯ ರೈಲ್ವೆ ಸಚಿವ ಮುನಿಯಪ್ಪ ಅವರಿಗೆ ಹೇಳಿ  ಪ್ರಶಸ್ತಿ ಸ್ವೀಕರಿಸಲು ತೆರಳುವವರಿಗಾಗಿ ಎರಡು ವಿಶೇಷ ಬೋಗಿಗಳನ್ನು ಜೋಡಣೆ ಮಾಡಿಸಿದ್ದೇನೆ. ದೆಹಲಿಯಲ್ಲಿ ಕರ್ನಾಟಕದ ಸಂಸದರ ಭವನ ತಮಗಾಗಿ ಕಾಯ್ದಿರಿಸಿದ್ದೇನೆ ಎಂದು ಹೇಳಿದ್ದರು. ಆದರೆ, ಅಲ್ಲಿ ಇವ್ಯಾವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಕುಟುಂಬದವರೊಂದಿಗೆ ತೆರಳಿದ ಜನತೆ ಸಮಸ್ಯೆ ಎದುರಿಸಿದ್ದಾರೆ ಎಂದು ಹೇಳಿದರು.ಪ್ರಶಸ್ತಿ ಪಡೆಯಲು ಸರತಿ ಸಾಲಿನಲ್ಲಿ ನಿಂತು ಗುದ್ದಾಡುವ ಸ್ಥಿತಿ ಕಂಡು ಅನೇಕರು ವಾಪಸ್ಸಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಹ್ವಾನಿಸಿ ಕೊಡದೇ ಇರುವುದಕ್ಕೆ ಪ್ರಶ್ನೆ ಮಾಡಿದವರಿಗೆ ಅಸಂಬದ್ಧ ಉತ್ತರ ನೀಡಿ ಕಳುಹಿಸಿದ್ದಾರೆ. ಇದಕ್ಕೆ ತಾವೇ ಸಾಕ್ಷಿ ಎಂದು ತಿಳಿಸಿದರು.ಪ್ರಶಸ್ತಿಯನ್ನು ಈ ಹಿಂದೆ ಕೊಡುವಾಗ ಅರ್ಹ ವ್ಯಕ್ತಿಗಳನ್ನು ಗುರುತಿಸಲಾಗುತ್ತಿತ್ತು.  ಈಚೆಗೆ ಆ ಎಲ್ಲ ಮಾನದಂಡ ಗಾಳಿಗೆ ತೂರಲಾಗಿದೆ. ಕಂಡ ಕಂಡವರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಆರೋಪಿಸಿದರು.ಪ್ರಶಸ್ತಿ ಸ್ವೀಕಾರಕ್ಕೆ ತಮ್ಮನ್ನೂ ಆಹ್ವಾನಿಸಲಾಗಿತ್ತು. ಹಣವನ್ನು ಪಾವತಿಸಿದ್ದೇವು. ಡಿಸೆಂಬರ್ 11ರಂದು ಪ್ರಶಸ್ತಿ ಪ್ರದಾನ ನಡೆಯಿತು. ಆದರೆ ನಮ್ಮ ಹೆಸರು ಕೂಗಲಿಲ್ಲ. ಪ್ರಶಸ್ತಿ ಪ್ರದಾನ ಮಾಡಲಿಲ್ಲ. ಅಲ್ಲಿ ಆರ‌್ಹೆಜ್ಜೆ ಅವರು ಕಾಣಿಸಲಿಲ್ಲ. ನಿರಾಶೆಯಿಂದ ಮರಳುವಾಗ ಭೇಟಿಯಾದ ಆರ‌್ಹೆಜ್ಜೆ ಅವರು 12ರಂದು ಮುಂಜಾನೆ 11ಕ್ಕೆ ತಮಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಒಂದು ದಿನ ಉಳಿದುಕೊಳ್ಳಿ ಎಂದು ಹೇಳಿದರು. ಪ್ರಶಸ್ತಿ ಆಸೆಯಿಂದ ಉಳಿದುಕೊಂಡೆವು. ಆದರೆ ಮರು ದಿನ ಸಂಜೆ 5.30ರವರೆಗೂ ಬರಲಿಲ್ಲ. ಸಮಾರೋಪ ಸಮಾರಂಭ ಮುಗಿಯುವ ಸಂದರ್ಭದಲ್ಲಿ ಆಗಮಿಸಿದರು. ಪ್ರಶಸ್ತಿ ಕೊಡಿಸುವ ಬಗ್ಗೆಯೂ ಮಾತನಾಡಲಿಲ್ಲ. ಕೊನೆಗೆ ನಿರಾಶೆಯಿಂದ ಸಮಾರಂಭ ನಡೆದ ಸ್ಥಳದಲ್ಲಿಯೇ ಇದ್ದ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಹಿಂದೆ ಕಣ್ಣೀರು ಹಾಕಿ ನೊಂದು ತವರಿಗೆ ಮರಳಬೇಕಾಯಿತು ಎಂದು ರಾಯಚೂರಿನ ಕಲಾವಿದ ಡಿಂಗ್ರಿ ನರಸಣ್ಣ, ಯಾದಗಿರಿಯ ನರಸಿಂಹಲು ಗುಪ್ತಾ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಪ್ರಶಸ್ತಿ ಕೊಡಿಸದೇ ಇರುವ ಬಗ್ಗೆ ಆಕ್ಷೇಪ, ತಕರಾರು ಮಾಡಿದಾಗ ಬೆಂಗಳೂರಲ್ಲಿಯೇ ಸಮಾರಂಭ ಏರ್ಪಡಿಸಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ ಮಾಡುವ ಹುಸಿ ಭರವಸೆ ನೀಡಿದ್ದಾರೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಲು ಹೇಳಿದರು. ರಾಜ್ಯದ ಘಟಕದ ಅಧ್ಯಕ್ಷರ ಈ ಧೋರಣೆಯಿಂದ ಅವಮಾನ ಆಗಿದೆ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತಾವು ರಾಜೀನಾಮೆ ಸಲ್ಲಿಸುವುದಾಗಿ ಹೇಳಿದರು.

Post Comments (+)