ಸೋಮವಾರ, ಮೇ 17, 2021
31 °C

ಪ್ರಶಸ್ತಿ ತಪ್ಪಿಸಿಕೊಂಡ ಬಳ್ಳಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಳ್ಳಾರಿ ಜಿಲ್ಲೆಗೆ ಪರಿಸರ ಉತ್ಕೃಷ್ಟತಾ ಪ್ರಶಸ್ತಿ ನೀಡುವುದರಿಂದ ಕೊನೇಗಳಿಗೆಯಲ್ಲಿ ಹಿಂದೆ ಸರಿದಿದೆ.ವಿವಿಧ ವಲಯಗಳಿಂದ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪರಿಸರ ಉತ್ಕೃಷ್ಟತಾ ಪ್ರಶಸ್ತಿ ನೀಡುವುದರಿಂದ ಮಂಡಳಿಯು ಹಿಂದೆ ಸರಿಯಿತು. ಕಳೆದ ವರ್ಷ ಮುಂಗಾರು ಅವಧಿಯಲ್ಲಿ 27 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂಬ ಕಾರಣಕ್ಕಾಗಿ ಮಂಡಳಿಯು ಜಿಲ್ಲೆಗೆ ಪರಿಸರ ಉತ್ಕೃಷ್ಟತಾ ಪ್ರಶಸ್ತಿ ನೀಡಲು ನಿರ್ಧರಿಸಿತ್ತು. ಮಂಡಳಿಯ ಈ ತೀರ್ಮಾನದ ಬಗ್ಗೆ ಮಾಧ್ಯಮಗಳು ಟೀಕೆ ಮಾಡಿ ವರದಿಗಳನ್ನು ಪ್ರಕಟಿಸಿದ್ದವು.ಬುಧವಾರ ಮುಖ್ಯಮಂತ್ರಿಗಳು ಪರಿಸರ ಉತ್ಕೃಷ್ಟತಾ ಪ್ರಶಸ್ತಿ ಪ್ರದಾನ ಮಾಡುವಾಗ ಬಳ್ಳಾರಿ ಜಿಲ್ಲೆಯ ಹೆಸರು ಪಟ್ಟಿಯಲ್ಲಿರಲಿಲ್ಲ. ಬದಲಿಗೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭೆ ಬಳ್ಳಾರಿ ಜಿಲ್ಲೆಯ ಸ್ಥಾನವನ್ನು ಪಡೆದಿತ್ತು. ಅತ್ಯುತ್ತಮ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಚಿಂತಾಮಣೆ ನಗರಸಭೆಗೆ ನೀಡಿದ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್. ಮಂಜುಳಾ ಸ್ವೀಕರಿಸಿದರು.ಈ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಅವರನ್ನು ಪ್ರಶ್ನಿಸಿದಾಗ, `ಬಳ್ಳಾರಿ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ನಡೆದಿದೆ. ಆದರೆ, ಜಿಲ್ಲೆಯನ್ನು ಇದೀಗ ವಿವಾದಗಳು ಸುತ್ತುವರೆದಿರುವುದರಿಂದ ಸದ್ಯಕ್ಕೆ ಆ ಜಿಲ್ಲೆಗೆ ಪ್ರಶಸ್ತಿ ನೀಡುವ ತೀರ್ಮಾನದಿಂದ ಹಿಂದೆ ಸರಿದಿದ್ದೇವೆ. ಆದರೆ, ಆ ಜಿಲ್ಲೆಯ ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಬೇರೆ ಸಂದರ್ಭಗಳಲ್ಲಿ ಜಿಲ್ಲೆಗೆ ಈ ಪ್ರಶಸ್ತಿ ನೀಡುತ್ತೇವೆ~ ಎಂದು ಪ್ರತಿಕ್ರಿಯಿಸಿದರು.`ಪ್ರಸ್ತುತ ಯಾವುದೇ ರೀತಿಯ ವಿವಾದಗಳಿಗೆ ಆಸ್ಪದ ಕೊಡಬಾರದು ಎನ್ನುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯನ್ನು ಪ್ರಶಸ್ತಿಯಿಂದ ಕೈಬಿಡಲಾಗಿದೆ~ ಎಂದು  ಸ್ಪಷ್ಟ ಪಡಿಸಿದರು.ಪರಿಸರ ಉತ್ಕೃಷ್ಟತಾ ಪ್ರಶಸ್ತಿ

ಸಮಾರಂಭದಲ್ಲಿ ಗುಲ್ಬರ್ಗ ಜಿಲ್ಲೆಯ ಸೇಡಂನ ವಾಸವದತ್ತ ಸಿಮೆಂಟ್, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಲಗಂಚಿ ಗ್ರಾಮದ ವೆು: ಬನ್ನಾರಿ ಅಮ್ಮನ್ ಶುಗರ್ಸ್‌ ಲಿಮಿಟೆಡ್ (ಸಕ್ಕರೆ ಮತ್ತು ಡಿಸ್ಟಿಲರಿ ಕ್ಷೇತ್ರ), ಚಿಕ್ಕಮಗಳೂರಿನ ಮೆ: ಲಲಿತಾದ್ರಿ ಕಾಫಿ ಎಸ್ಟೇಟ್ (ಕಾಫಿ  ಸಂಸ್ಕರಣಾ ಕ್ಷೇತ್ರ), ರಾಮನಗರ ಜಿಲ್ಲೆಯ ಮರಡಿ ಎಕೋ ಇಂಡಸ್ಟ್ರೀಸ್‌ಗೆ (ಸಾಮೂಹಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಕ್ಷೇತ್ರ) ಪರಿಸರ ಉತ್ಕೃಷ್ಟತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಘನತ್ಯಾಜ್ಯ ನಿರ್ವಹಣೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭೆಗೆ ಪ್ರಶಸ್ತಿ ನೀಡಲಾಯಿತು. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.