ಪ್ರಶ್ನಾವಳಿಯ ಆರು ಸ್ತರಗಳು

7

ಪ್ರಶ್ನಾವಳಿಯ ಆರು ಸ್ತರಗಳು

Published:
Updated:
ಪ್ರಶ್ನಾವಳಿಯ ಆರು ಸ್ತರಗಳು

ನಾವು ಹೇಳುತ್ತಿರುವುದು ಇನ್ನೊಬ್ಬರಿಗೆ ಸರಿಯಾಗಿ ಅರ್ಥವಾಗಿದೆಯೇ ಎಂದು ತಿಳಿದುಕೊಳ್ಳಲು, ಇತರರು ಹೇಳಿದ್ದರ ಹಿಂದೆ   ಅಡಗಿರುವ ಒಳಗುಟ್ಟು ಅರಿತುಕೊಳ್ಳಲು     ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ಅನಿವಾರ್ಯ.ನಮ್ಮ   ವ್ಯವಹಾರ ಬದುಕಿನಲ್ಲಿ, ಅಂದರೆ ಆಫೀಸಿನ ಚೌಕಟ್ಟಿನಲ್ಲಿ ಹಾಗೂ    ಗ್ರಾಹಕರ ನೆಲೆಗಟ್ಟಿನಲ್ಲಿ,   ದೈನಂದಿನ ಸಂವಹನದಲ್ಲಿ ಬರುವ ಬಹುತೇಕ  ಪ್ರಶ್ನೆಗಳನ್ನೆಲ್ಲ ಆರು ಗುಂಪುಗಳಲ್ಲಿ  ವರ್ಗೀಕರಿಸಬಹುದು...                               ----------------------

ಕಟ್ಟುತ್ತ ಪ್ರಶ್ನೆಗಳನೊಂದೊಂದೆ ಜಾಣ್ಮೆಯಲಿ /

ನಿಟ್ಟಿಸಿರು ನೀನದಕೆ ದೊರೆವ ಉತ್ತರದ //

ಒಟ್ಟುಗೂಡಿಸಲದಕೆ ಸೂಕ್ತ ಅರ್ಥವನೊಂದು /

ಗುಟ್ಟು ಬಯಲಾಗುವುದು - ನವ್ಯಜೀವಿ //

ನಮ್ಮ ಸಂವಹನ ಕ್ರಿಯೆಯಲ್ಲಿ ಸರಿಯಾಗಿ ಪ್ರಶ್ನೆಗಳನ್ನು ಕೇಳುವುದು ಅತ್ಯಂತ ಮುಖ್ಯವಾದ ಅಂಶ ಎಂಬುದನ್ನು ಈಗಾಗಲೇ ಓದಿದ್ದೇವೆ. ಮನೆಯಲ್ಲಾಗಲೀ ಅಥವಾ ಶಾಲಾ ಕಾಲೇಜುಗಳಲ್ಲಾಗಲೀ `ಪ್ರಶ್ನೆ ಕೇಳುವ ಕಲೆ~ಯನ್ನು ಯಾರೂ ನಮಗೆ ಪರಿಚಯಿಸುವುದಿಲ್ಲ. ಯಾರೂ ಇದರ ಬಗ್ಗೆ ತರಬೇತಿ ನೀಡುವುದಿಲ್ಲ.ಹೀಗಾಗಿ ಇದರ ಬಗ್ಗೆ ಸವಿಸ್ತಾರವಾಗಿ ಬರೆಯುವ ಬಯಕೆ ನನ್ನದು. ಉತ್ತರಗಳ ನಾಡಿನಲ್ಲಿ ಪ್ರಶ್ನೆಗಳ ಈ ಸರಮಾಲೆಯನ್ನು ಕಂಡು `ಕೊರೆಯುತ್ತಿದ್ದೇನೆ~ ಎಂದು ಭಾವಿಸಬೇಡಿ. ಸುಲಭವೆಂದು ತೋರುವ ಈ `ಕಲೆ~ ಅಷ್ಟು ಸುಲಭದಲ್ಲಿ ಎಲ್ಲರಿಗೂ ಆಗಿಬರುವುದಿಲ್ಲ ಎಂಬ ಸತ್ಯವನ್ನು ಸ್ವಾನುಭವದಿಂದ ಕಂಡುಕೊಂಡಿರುವುದರಿಂದ ಈ ಕಾಳಜಿ ಅಷ್ಟೆ!ವ್ಯವಹಾರದ ಬದುಕಿನಲ್ಲಿ ಮತ್ತೊಬ್ಬರೊಡನೆ ಮಾತಿಗಿಳಿದಾಗ, ಮಾತನ್ನು ಕೇವಲ ಮಾತಾಗಿಸದೆ ಅದಕ್ಕೊಂದು ನಿಖರವಾದ ಗತಿ ಹಾಗೂ ಅರ್ಥ ನೀಡಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ.ಆ ದಿಸೆಯಲ್ಲಿ ನಾವು ನಮ್ಮದೇ ಅನಿಸಿಕೆಗಳನ್ನು ಪ್ರಪಂಚದ ಮುಂದೆ ಹೇಗೆ ಮಾಡಿಸುತ್ತೇವೆ ಎಂಬುದು ಅದೆಷ್ಟು ಮುಖ್ಯವೋ ಹಾಗೆಯೇ ಇನ್ನಿತರರ ಅನಿಸಿಕೆಗಳನ್ನು ದ್ವಂದ್ವರಹಿತವಾಗಿ ಅರ್ಥ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಇವೆರಡರ ಸಮ್ಮಿಲನದಿಂದ ಹೊರಹೊಮ್ಮುವ ಪರಿಹಾರ ಮಾರ್ಗಗಳೆ ವ್ಯವಹಾರ ಜಗತ್ತಿನಲ್ಲಿನ ನಮ್ಮ ಕಾರ್ಯಗತಿ ಕೂಡ.ನಾವು ಹೇಳುತ್ತಿರುವುದು ಇನ್ನೊಬ್ಬರಿಗೆ ಸರಿಯಾಗಿ ಅರ್ಥವಾಗಿದೆಯೇ ಎಂದು ತಿಳಿದುಕೊಳ್ಳಲು ಹಾಗೂ ಇತರರು ಹೇಳುತ್ತಿರುವುದರ ಹಿಂದೆ ಅಡಗಿರುವ ಒಳಗುಟ್ಟನ್ನು ನಾವು ಅರಿತುಕೊಳ್ಳಲು ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ಅನಿವಾರ್ಯ. ನಮ್ಮ ವ್ಯವಹಾರ ಬದುಕಿನಲ್ಲಿ, ಅಂದರೆ ನಮ್ಮದು ಆಫೀಸಿನ ಚೌಕಟ್ಟಿನಲ್ಲಿ ಹಾಗೂ ಗ್ರಾಹಕರ ನೆಲೆಗಟ್ಟಿನಲ್ಲಿ, ನಮ್ಮ ದೈನಂದಿನ ಸಂವಹನದಲ್ಲಿ ಬರುವ ಬಹುತೇಕ ಪ್ರಶ್ನೆಗಳನ್ನೆಲ್ಲ ನಾನಿಲ್ಲಿ ಕೆಳಕಂಡ ಆರು ಗುಂಪುಗಳಲ್ಲಿ ವರ್ಗೀಕರಿಸಿದ್ದೇನೆ:1) ಸತ್ಯಾನ್ವೇಷಣೆ

2) ಸತ್ಯ ಸಾಕ್ಷಾತ್ಕಾರ

3) ಪರ್ಯಾಯಾಲೋಚನೆ

4) ವಿಮರ್ಶನ

5) ಪರಿಹಾರ ಮಾರ್ಗ ಹಾಗೂ

6) ಕಾರ್ಯಾಚರಣೆ
ನಮ್ಮ ದೈನಂದಿನ ಖಾಸಗಿ ಬದುಕಿನಲ್ಲಿ ಪ್ರಶ್ನೆಗಳು ಇನ್ನೂ ವಿಸ್ತಾರದಲ್ಲಿರಬಹುದು. ಆದರೆ ವ್ಯವಹಾರ ಬದುಕಿನಲ್ಲಿ ಅವುಗಳು ಆಳದಲ್ಲಿರಬೇಕು, ಸೂಕ್ಷ್ಮವಾಗಿರಬೇಕು, ಭಾವರಹಿತವಾಗಿರಬೇಕು. ಗುರಿ ಸಾಧನೆಯ ಏಕಮೇವ ಗುರಿ ಅದಕ್ಕಿರಬೇಕು. ಇದನ್ನಾಧರಿಸಿಯೇ ಈ ವರ್ಗೀಕರಣ ಮಾಡಿದ್ದೇನೆ.ಮಾತನಾಡುವುದಕ್ಕೆ ಮೊದಲಿದ್ದಾಗ ಯಾವ ವಿಷಯದ ಬಗ್ಗೆ ಚರ್ಚೆಯಾಗಬೇಕು ಎಂಬುದನ್ನು ಮೊದಲೇ ನಿರ್ಧರಿಸುವುದು ಸಮಂಜಸ. ಹೇಳುತ್ತಿರುವವರೂ ಹಾಗೂ ಕೇಳುತ್ತಿರುವವರೂ, ಹೀಗೆ ಇಬ್ಬರೂ ತಮ್ಮ ಮಾತು ಹಾಗೂ ಯೋಚನೆಗಳನ್ನು ಒಂದೇ ವಿಷಯದಲ್ಲಿ ಹಾಗೂ ಆ ವಿಷಯದ ಒಂದೇ ಸ್ತರದಲ್ಲಿ ಕೇಂದ್ರೀಕರಿಸಿದಾಗಲೇ ಆ ಮಾತಿಗೊಂದು ನೆಲೆಗಟ್ಟು.ಕುಶಲೋಪರಿ ನಂತರ ಸಂವಹನವನ್ನು ಇಂತಹ ಒಂದು ಚೌಕಟ್ಟಿನಲ್ಲಿ ತ್ವರಿತವಾಗಿ ತಂದು ನಿಲ್ಲಿಸುವುದು ಅಷ್ಟು ಸುಲಭವಲ್ಲ. ಮುಂದೆ ಕುಳಿತವನ ಮಾತನ್ನು ತದೇಕಚಿತ್ತದಲ್ಲಿ ಕೇಳುತ್ತಿರುವಾಗಲೇ ಅವನ ಮಾತಿನಲ್ಲಿ ಹಾಗೂ ಅದರ ಇಂಗಿತದಲ್ಲಿ ಇರುವ ಒಳಾರ್ಥ ಗ್ರಹಿಸಬೇಕು. `ಯಾರು, ಎಲ್ಲಿ, ಏಕೆ, ಏನು, ಯಾವಾಗ~ ಎಂಬ ಪ್ರಶ್ನೆಗಳನ್ನೆಲ್ಲ ಇಲ್ಲಿ ಸರಿ ಪ್ರಮಾಣದಲ್ಲಿ ಬಳಸಬೇಕು. ಒಂದು ಪ್ರಶ್ನೆಗೆ ದೊರೆವ ಉತ್ತರ ಸ್ಪಷ್ಟವಿಲ್ಲದಾಗ `ದಯವಿಟ್ಟು ಸ್ವಲ್ಪ ವಿವರಿಸುತ್ತೀರ?~ ಎಂದು ಸರಳವಾಗಿ ಕೇಳುವುದು ಅತಿ ಮುಖ್ಯ ಎನ್ನಿಸಿಬಿಡುತ್ತದೆ.ಸಂವಹನದಲ್ಲಿ ಭಾಗಿಗಳಾದವರೆಲ್ಲ `ಒಂದೇ ಹಾಳೆಯ ಮೇಲೆ ಕಲೆತಾಗ~ ಮಾತ್ರವೇ ಆ ಹಾಳೆಯಲ್ಲಿ ಸ್ಪಷ್ಟ ಹಾಗೂ ಸುಂದರ ಅಕ್ಷರಗಳು ಮೂಡಿಯಾವು. ನಂತರ ಆ ಅಕ್ಷರಗಳನ್ನು ಜೋಡಿಸುತ್ತ ವಾಕ್ಯಗಳನ್ನು ರಚಿಸಿ ಕತೆ-ಕಾದಂಬರಿಗಳನ್ನು ಸೃಜಿಸುವುದು ಸುಲಭವಾದೀತು. ಕಟ್ಟಡಕ್ಕಿರುವ ಅಡಿಪಾಯದಂತಹ ಈ ಮೂಲಸ್ತರವನ್ನು ಎಲ್ಲರೂ ದ್ವಂದ್ವವಿಲ್ಲದೇ ಹಾಗೂ ಸಮಯ ಹಾಳುಮಾಡದೆ ಬಂದು ಸೇರುವುದೇ `ಸತ್ಯಾನ್ವೇಷಣೆ~ಯ ಮೂಲ ಗುರಿ.ಈಗ ಸತ್ಯದ ಸಾಕ್ಷಾತ್ಕಾರವಾಗಬೇಕು. ಅಂದರೆ ವಿಷಯವೇನೆಂದು ಅರಿತಾದ ನಂತರ ಆ ವಿಷಯದ ಎಲ್ಲ ಪದರಗಳನ್ನೂ ಜಾಲಾಡಿ ಅದರಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮವಾದ ಬಿಡಿ ಸತ್ಯಗಳನ್ನು ಒಂದುಗೂಡಿಸಿ ಬೃಹತ್ ಸತ್ಯವನ್ನಾಗಿಸಿ ಎಲ್ಲರೂ ಅದನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನೋಡುವಂತಾಗಬೇಕು. `ಆಗ್ಲಿಂದ ನೋಡ್ತಾ ಇದೀನಿ. ನಾನೇನೋ ಮಾತಾಡಿದ್ರೆ, ಇವನೇನೋ ಹೇಳ್ತಾನೆ~ ಎಂದು ಗೊಣಗುವ ಎಲ್ಲರೂ ಪ್ರಾಯಶಃ ಈ ಸ್ತರದ ಪ್ರಶ್ನೆಗಳನ್ನು ಕೇಳದೆಯೇ ಇರಬಹುದು!`ಇದು ಸರಿಯೇ?~, `ನೀನು ಹೇಳುತ್ತಿರುವ ವಿಷಯ ಇದು ತಾನೆ?~ ಹಾಗೂ `ಮುಂದುವರೆಯುವ ಮುನ್ನ ಮತ್ತೊಮ್ಮೆ ನಿನ್ನ ವಿಚಾರವನ್ನು ಸ್ಪಷ್ಟ ಪಡಿಸುತ್ತೀಯ?~ ಇತ್ಯಾದಿ ಪ್ರಶ್ನೆಗಳೆಲ್ಲ ಮುಸುಕಿದ ಮೋಡವನ್ನು ಅತ್ತಿತ್ತ ಚದುರಿಸಿ ಶಶಿಯ ದರ್ಶನ ಮಾಡಿಸುತ್ತವೆ.ಸತ್ಯಾನ್ವೇಷಣೆ ಸಮಯದಲ್ಲಿ ಪ್ರಶ್ನೆಗಳು ವಿಷಯದ ಸಂಗ್ರಹಣೆಯತ್ತಲೇ ಗಮನ ಕೊಟ್ಟಿರುತ್ತವೆ. ಚಿತ್ರ ಬಿಡಿಸುವುದಕ್ಕೆ ಬೇಕಾದ ಎಲ್ಲ ಸಾಮಾನುಗಳನ್ನು ಒಟ್ಟುಗೂಡಿಸುವುದೇ ಅದರ ಕೆಲಸ. ಆದರೆ ಸತ್ಯ ಸಾಕ್ಷಾತ್ಕಾರದ ವೇಳೆಗೆ `ಚಿತ್ರಪಟವನ್ನು ಗೋಡೆಗೆ ತೂಗಿ ಹಾಕಲಾಗುತ್ತದೆ~. ಮೊಳೆ ಹೊಡೆದು ಅಲ್ಲಿ ಅದನ್ನು ಸ್ಥಿರಗೊಳಿಸಲಾಗುತ್ತದೆ.ಇಂತಹ ಪ್ರಶ್ನೆಗಳನ್ನು ಕೇಳುತ್ತ ಸಾಗಿದ್ದರಿಂದಲೇ ನಮ್ಮ ಭರತವರ್ಷದ ಋಷಿವರ್ಯರು ಜಗತ್ತಿಗೆ ಇಂದಿಗೂ ಸಂಪೂರ್ಣ ಅರ್ಥವಾಗಿರದ ಬದುಕಿನ ಅನೇಕ ಗುಪ್ತ ವಿಚಾರಗಳನ್ನು ತಮ್ಮ ವೇದೋಪನಿಷತ್ತುಗಳಲ್ಲಿ ಸೂತ್ರವಾಗಿಸಿದ್ದಾರೆ.ಇಂತಹ ಪ್ರಶ್ನೆಗಳನ್ನು ಕೇಳುತ್ತ ಸಾಗಿದ್ದರಿಂದಲೇ ಯೂರೋಪಿನ ಸಾಹಸಿಗರು ತಮ್ಮದಲ್ಲದ ನೆಲಗಳನ್ನು ಅರಸಿ ಅಲ್ಲಿ ತಮ್ಮ ಆಳ್ವಿಕೆ ನಡೆಸಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳುತ್ತ ಸಾಗಿದ್ದರಿಂದಲೇ ವಿಶ್ವದ ವಿಜ್ಞಾನಿಗಳೆಲ್ಲ ತಮ್ಮ ಅದ್ಭುತವಾದ ಸಿದ್ಧಾಂತಗಳನ್ನು ಜಗತ್ತಿಗೆ ನೀಡಿ ನಮ್ಮೆಲ್ಲರ ಬದುಕನ್ನು ಹಸನ ಮಾಡಿದ್ದಾರೆ.ವಿಷಯವೇನೆಂದು ಇಷ್ಟರ ಹೊತ್ತಿಗೆ ಗೊತ್ತಾಗಿದೆ. ಸತ್ಯ ತೆರೆದ ಕನ್ನಡಿಯಾಗಿದೆ. ಆದರೆ ಇದೊಂದೇ ಸತ್ಯದ ಸ್ವರೂಪವೇ? ಮುಂದಿರುವ ವಿಷಯಕ್ಕೆ ಅಥವಾ ಸತ್ಯಕ್ಕೆ ಅಥವಾ ಸಾಧಿಸಬೇಕೆಂದು ಗುರುತಿಸಲಾದ ಕೆಲಸಕ್ಕೆ ಇರುವುದೊಂದೇ ಪರಿಹಾರವೆ? ಬೋರ್ಡ್‌ರೂಮಿನ ಸುತ್ತಮುತ್ತಲಂತೂ ಗುರಿ ಗೊತ್ತಾದ ಬಳಿಕ ಅದನ್ನು ತಲುಪಲು ಇರುವ ಅನೇಕ ಮಾರ್ಗಗಳನ್ನು ತುಲನೆ ಮಾಡುತ್ತ ಸರಿ ಮಾರ್ಗವೊಂದನ್ನು ನಿರ್ಧರಿಸುವುದೇ ಅತಿ ವಿಶಿಷ್ಠವಾದ ಕೆಲಸ.ಯಾರು ಅತಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಕೆಲಸವನ್ನು ಅತಿ ಕಡಿಮೆ ಸಮಯದಲ್ಲಿ ಸಾಧಿಸುವರೋ ಅವರೇ ಇಲ್ಲಿ ವಿಜಯಿಗಳು. ಬರೆದಿರುವ ನಾಲ್ಕು ಸಾವಿರ ಸಾಲಿನ ತಂತ್ರಾಂಶವನ್ನು ಅದು ಹೇಗೆ ಎರಡು ಸಾವಿರಕ್ಕಿಳಿಸಬಹುದು ಎಂಬ ಲೆಕ್ಕಾಚಾರ ಇಲ್ಲಿ ಸರ್ವದಾ ನಡೆದಿರುತ್ತದೆ. ನಾವು ನಿನ್ನೆ ಮಾಡಿದ ಕೆಲಸಕ್ಕಿಂತ ಇಂದು ಮಾಡುತ್ತಿರುವ ಕೆಲಸ ಅಷ್ಟರ ಮಟ್ಟಿಗೆ ಉತ್ತಮವಾಗಿಲ್ಲದಿದ್ದರೆ ಸ್ಪರ್ಧಾಳುಗಳು ನಮ್ಮನ್ನು ಹಿಂಜಿಹಾಕಿ ಬಿಡುತ್ತಾರೆಂಬುದೇ ಇಂದಿನ ವ್ಯವಹಾರ ಜಗತ್ತಿನ ವಾಸ್ತವ.ಈ ಹಂತದಲ್ಲಿ `ಏಕೆ~ ಎಂಬ ಪ್ರಶ್ನೆಗಿಂತ `ಹೇಗೆ~ ಎಂಬ ಪ್ರಶ್ನೆಯ ವಿವಿಧ ಆಕಾರಗಳಿಗೇ ಹೆಚ್ಚು ಪ್ರಾಶಸ್ತ್ಯ. `ನೀವು ಹೇಳುತ್ತಿರುವುದು ಸರಿ. ಆದರೆ ಇದನ್ನು ಇನ್ನಾವ ರೀತಿಯಲ್ಲಿ ಮಾಡಿದರೆ ಹಣ ಹೆಚ್ಚು ಉಳಿಸಬಹುದು ಅಥವಾ ಗಳಿಸಬಹುದು?~ ಎಂಬ ಪ್ರಶ್ನೆಗೆ ದೊರೆವ ಉತ್ತರವೇ ಎಲ್ಲ ಕಂಪೆನಿಗಳ ಜೀವಾಳವೂ ಹೌದು. `ಇದೊಂದೇ ಏಕೆ? ಮತ್ತಿನ್ನೊಂದು ಹೇಗೆ?~ ಎಂಬ ಪ್ರಶ್ನೆಯನ್ನು ಉತ್ತರಿಸುವಾಗಲೇ ನಮ್ಮಲ್ಲಿನ ಕ್ರಿಯಾತ್ಮಕವಾದ ಎಲ್ಲ ಗುಣಗಳೂ ಜಾಗೃತಗೊಂಡು ನಮ್ಮನ್ನು ಯಶದತ್ತ ಕೊಂಡೊಯ್ಯುವ ಸಾಧನವೂ ಆದೀತು. ಈ ಸ್ತರದ ಪ್ರಶ್ನೆಗಳೆಲ್ಲ `ಪರ್ಯಾಯಾಲೋಚನೆ~ಯ ದೀವಟಿಗೆಗಳು.ಇದರಲ್ಲಿ ಮೇಲ್ನೋಟಕ್ಕೆ ಗೋಚರಿಸಿದ ಮತ್ತೊಂದು ಅದ್ಭುತವಾದ ಅಂಶವೊಂದಿದೆ. ಉದಾಹರಣೆಗೆ, ಚೆನ್ನಾಗಿ ಓದಿಕೊಂಡ ಯಾರನ್ನಾದರೂ ನೀವು `ಏಕೆ ನೀನು ಇಷ್ಟೆಲ್ಲ ಓದಿದ್ದೀಯೆ?~ ಎಂದು ಕೇಳಿ ನೋಡಿ. ಉತ್ತರ ಸ್ಫುಟವಾಗಿರುತ್ತದೆ. ತನ್ನ ಓದಿಗಾಗಿ ಒಂದೆರಡು ಕಾರಣಗಳನ್ನು ನೀಡುತ್ತಾನೆ.ಅದೇ ನೀವವನನ್ನು `ಹೇಗೆ ನೀನು ಇಷ್ಟೆಲ್ಲ ಓದಿದ್ದೀಯೆ?~ ಎಂದು ಕೇಳಿ ನೋಡಿ. ಅವನೊಳಗಿನ ಸಾರ್ಥಕಭಾವ ಭುಗಿಲೇಳುತ್ತದೆ. ತಾನದೆಷ್ಟು ಕಷ್ಟಪಟ್ಟು ಓದಿದ್ದೇನೆ, ಓದಿಗಾಗಿ ತಾನೇನೆಲ್ಲ ತ್ಯಾಗಗಳನ್ನು ಮಾಡಬೇಕಾಯಿತು ಎಂಬುದನ್ನೆಲ್ಲ `ಸಂತೃಪ್ತಿ~ ಎಂಬ ಭಾವದಲ್ಲಿ ಅದ್ದಿ ಅದ್ದಿ ನುಡಿಯುತ್ತಾನೆ.ಅವನ ವಿಚಾರಕ್ಕೂ ವಿಭಿನ್ನವಾದ ವಿಚಾರಧಾರೆಯೊಂದನ್ನು ನೀವೀಗ ಅವನೊಡನೆ ಚರ್ಚಿಸಬಹುದು. ಅದಕ್ಕವನು ತನ್ನ ಮನಸ್ಸನ್ನು ಸಂಪೂರ್ಣವಾಗಿ ತೆರೆದಿದ್ದಾನೆ. ಋಷಿಯಲ್ಲಿ ಮಾತನಾಡುತ್ತಿದ್ದಾನೆ.ಅಸಲಿನಲ್ಲಿ ನಮಗೆ ಬೇಕಿರುವುದು ಅದೇ ತಾನೆ?ಲೇಖಕರನ್ನು  

satyesh.bellur@gmail.com

  ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry