ಶುಕ್ರವಾರ, ಆಗಸ್ಟ್ 23, 2019
22 °C

ಪ್ರಶ್ನೆಪತ್ರಿಕೆಯಲ್ಲಿ ಭೂಮಂಡಲೀಕರಣ, ಗಾಜಿನ ಮನೆ!

Published:
Updated:
ಪ್ರಶ್ನೆಪತ್ರಿಕೆಯಲ್ಲಿ ಭೂಮಂಡಲೀಕರಣ, ಗಾಜಿನ ಮನೆ!

ಬೆಂಗಳೂರು: `ಭಾರತದಲ್ಲಿ ಭೂಮಂಡಲೀಕರಣದ ಪ್ರಭಾವವನ್ನು ವಿವರಿಸಿ'. ಇದು 2002ನೇ ಸಾಲಿನ ಕೆಎಎಸ್ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ (ಜನರಲ್ ಸ್ಟಡೀಸ್) ಪ್ರಶ್ನೆ ಪತ್ರಿಕೆಯ ಒಂದು ಪ್ರಶ್ನೆ. ಇದಕ್ಕೆ 20 ಅಂಕ. ಪರೀಕ್ಷೆ ಬರೆಯಲು ಕುಳಿತವರಿಗೆ ಗಾಬರಿ.

ಭೂಮಂಡಲೀಕರಣ ಅಂದರೆ ಏನೆಂದು ಅರ್ಥವಾಗದೆ ತಲೆ ಚಿಟ್ಟು ಹಿಡಿಯಿತು. 20 ಅಂಕ ಹೋಯ್ತು ಎಂದು ಕೈಕೈ ಹಿಸುಕಿಕೊಂಡರು. ಕೊನೆಗೆ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆ ನೋಡಿದಾಗ ಅದರಲ್ಲಿ ‘describe the impact of globalization in India’ಎಂಬ ಪ್ರಶ್ನೆ ಇತ್ತು. ಪ್ರಶ್ನೆ ಪತ್ರಿಕೆಯನ್ನು ಭಾಷಾಂತರ ಮಾಡಿದ್ದ ಪುಣ್ಯಾತ್ಮ `ಗ್ಲೋಬಲೈಸೇಷನ್' ಶಬ್ದವನ್ನು `ಭೂಮಂಡಲೀಕರಣ' ಎಂದು ಅನುವಾದಿಸಿದ್ದ.ಮುಖ್ಯ ಪರೀಕ್ಷೆಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಆಯ್ಕೆಯ ಮಾಧ್ಯಮದಲ್ಲಿಯೇ ಉತ್ತರ ಬರೆಯಬೇಕು. ಎರಡೂ ಪತ್ರಿಕೆಗಳಲ್ಲಿ ಪ್ರಶ್ನೆಗಳು ಮಾತ್ರ ಒಂದೇ ಇರುತ್ತವೆ. ಪ್ರಶ್ನೆ ಪತ್ರಿಕೆಯನ್ನು ಭಾಷಾಂತರ ಮಾಡುವವರು ತಪ್ಪು ಮಾಡಿದರೆ ಅದರ ಪರಿಣಾಮವನ್ನು ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ.ಒಂದೋ ಎರಡೋ ತಪ್ಪಾದರೆ ಕ್ಷಮಿಸಿ ಬಿಡಬಹುದು. ಆದರೆ 2002ರಲ್ಲಿ ಸಾಮಾನ್ಯ ಅಧ್ಯಯನ ವಿಷಯದ ಪರೀಕ್ಷೆ ನಡೆದಿದ್ದು 300 ಅಂಕಗಳಿಗೆ. ಅದರಲ್ಲಿ 139 ಅಂಕಗಳ ಪ್ರಶ್ನೆಗಳೇ ತಪ್ಪು ಭಾಷಾಂತರವಾಗಿದ್ದವು. ಸಾಮಾನ್ಯ ಜ್ಞಾನ ಇರುವ ಯಾವುದೇ ವ್ಯಕ್ತಿಗೆ ತಿಳಿಯುವ ವಿಷಯಗಳೂ ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರಿಗೆ ಇರಲಿಲ್ಲ ಎನ್ನುವುದು ಮಾತ್ರ ಅಚ್ಚರಿಯ ಅಂಶ ಎಂದು ಅಭ್ಯರ್ಥಿಯೊಬ್ಬರು ಕಿಡಿಕಾರುತ್ತಾರೆ.ಇದೇ ಪ್ರಶ್ನೆ ಪತ್ರಿಕೆಯ ಇನ್ನಷ್ಟು ಅಧ್ವಾನಗಳು ಹೀಗಿವೆ. ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ‘Non-aligned movement’ ಬಗ್ಗೆ ಲಘು ಟಿಪ್ಪಣಿ ಬರೆಯಿರಿ ಎಂದು ಇದ್ದರೆ ಅದೇ ಪ್ರಶ್ನೆ ಕನ್ನಡದಲ್ಲಿ `ಅನಿರಪೇಕ್ಷ ಆಂದೋಳನ'ದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ ಎಂದಿದೆ. ನಿಜವಾಗಿ ಇದು `ಅಲಿಪ್ತ ಚಳವಳಿ' ಎಂದಾಗಬೇಕಿತ್ತು.

ಇಂಗ್ಲಿಷ್‌ನಲ್ಲಿ ‘Green house effect’ ಎಂದು ಇದ್ದರೆ ಅದನ್ನು ಕನ್ನಡದಲ್ಲಿ `ಗಾಜಿನ ಮನೆ ಪರಿಣಾಮ' ಎಂದು ಭಾಷಾಂತರಿಸಲಾಗಿದೆ. ಸರಿಯಾದ ಅರ್ಥ `ಹಸಿರು ಮನೆ ಪರಿಣಾಮ'. ಅಪರಾಧ ಶಾಸ್ತ್ರ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ‘normal and abnormal behavior’ ಎಂದಿದ್ದರೆ ಅದನ್ನು ಕನ್ನಡದಲ್ಲಿ `ಪ್ರಸಾಮಾನ್ಯ ಮತ್ತು ಅಸಾಮಾನ್ಯ' ಎಂದು ಭಾಷಾಂತರಿಸಲಾಗಿದೆ.

ಆದರೆ ಇದು `ಸಾಮಾನ್ಯ ಮತ್ತು ಅಸಾಮಾನ್ಯ' ಎಂದಾಗಬೇಕಿತ್ತು. ಅದೇ ರೀತಿ ‘Forensic Examination’ ಎಂಬ ಪದವನ್ನು `ನ್ಯಾಯಾಲಿಕ ಪರೀಕ್ಷಣೆ' ಎಂದು ಭಾಷಾಂತರಿಸಲಾಗಿದೆ. ಇದು ವಿಧಿ ವಿಜ್ಞಾನ ಪರೀಕ್ಷೆ ಎಂದಾಗಬೇಕಿತ್ತು. ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ‘Expain the concept of prostitution as given in the Immoral Traffic (Prevension) Act and recommendend measures for rehabilitation of sex workers’ ಎಂದಿದ್ದರೆ ಅದನ್ನು ಕನ್ನಡದಲ್ಲಿ `ಅನೈತಿಕ ಶರೀರ ವ್ಯಾಪಾರ (ನಿವಾರಣೆ) ಅಧಿನಿಯಮದಲ್ಲಿ ಕೊಟ್ಟಿರುವಂತೆ ವೇಶ್ಯಾವೃತ್ತಿಯ ಪರಿಕಲ್ಪನೆಯನ್ನು ಮತ್ತು ಲೈಂಗಿಕ ಕೆಲಸಗಾರರ ಪುನರ್ವಾಸನೆಗಾಗಿ ಶಿಫಾರಸ್ಸು ಮಾಡಿದ ಸೂಕ್ತ ಉಪಾಯಗಳನ್ನು ವಿವರಿಸಿ' ಎಂದು ಕೇಳಲಾಗಿದೆ.ಮಾನವ ಶಾಸ್ತ್ರ ಪತ್ರಿಕೆ-2ರಲ್ಲಿ ಭಾಷಾಂತರ ಹೀಗಿದೆ. `‘Write an essay on the middle palaeolithic culture of India’ ನ್ನುವುದನ್ನು `ಭಾರತದ ಮಧ್ಯ ಪುರಾಪಾಷಾಣಿ ಸಂಸ್ಕೃತಿಯ ಮೇಲೆ ಒಂದು ಪ್ರಬಂಧ ಬರೆಯಿರಿ' ಎಂದಾಗಿದೆ. ಇದು `ಭಾರತದ ಮಧ್ಯ ಶಿಲಾಯುಗೀಯ ಸಂಸ್ಕೃತಿಯ ಬಗ್ಗೆ ಪ್ರಬಂಧ ಬರೆಯಿರಿ' ಎಂದಾಗಬೇಕಿತ್ತು.

ಅದೇ ಪತ್ರಿಕೆಯಲ್ಲಿ `‘Industrilisation has resulted in detribalization’ Discuss the comment critically’ ಎಂದಿದ್ದರೆ ಅದನ್ನು `ಕೈಗಾರಿಕೀಕರಣವು ಜನಜಾತೀಯತಾ ಕ್ಷಯಣದಲ್ಲಿ ಫಲಿತಾಂಶ ಹೊಂದಿತು' ಎಂದು ಅನುವಾದಿಸಲಾಗಿದೆ. ಇದು `ಕೈಗಾರಿಕೀಕರಣವು ಆದಿವಾಸಿಗಳ ರೂಪಾಂತರಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ವಿಮರ್ಶಾತ್ಮಕವಾಗಿ ಬರೆಯಿರಿ' ಎಂದಾಗಬೇಕಿತ್ತು.ಸಾಮಾನ್ಯ ಅಧ್ಯಯನ ಪತ್ರಿಕೆ-1 ರಲ್ಲಿ ಕನ್ನಡದಲ್ಲಿ `ಅಂತರರಾಷ್ಟ್ರೀಯ ಲಾನ್ ಟೆನ್ನಿಸ್‌ನಲ್ಲಿ ಕರ್ನಾಟಕದ ಸಾಧನೆ' ಬಗ್ಗೆ ಬರೆಯಿರಿ ಎಂದಿದ್ದರೆ ಅದು ಇಂಗ್ಲಿಷ್‌ನಲ್ಲಿ ‘India’s achievement in International Lawn Tennis’ ಎಂದು ಇದೆ. ಅದೇ ರೀತಿ ‘Bring out the implications of the US war against terror in South Asia’ ಎಂದಿದ್ದರೆ ಅದನ್ನು ಕನ್ನಡದಲ್ಲಿ `ದಕ್ಷಿಣ ಏಷ್ಯದಲ್ಲಿನ ಅತಿಶಯ ಭಯದ ವಿರುದ್ಧ ಸಂಯುಕ್ತ ರಾಜ್ಯದ ಯುದ್ಧದತೊಡಗಿಸುವಿಕೆಯನ್ನು ಹೊರತನ್ನಿ' ಎಂದು ಪ್ರಶ್ನೆ ಕೇಳಲಾಗಿದೆ. ಇದು ಸರಿಯಾದ ಅರ್ಥದಲ್ಲಿ `ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನೆಯ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನದ ಯುದ್ಧದ ಪರಿಣಾಮಗಳನ್ನು ವಿವರಿಸಿ' ಎಂದಾಗಬೇಕಿತ್ತು.ಇಲ್ಲಿ US ಎಂಬ ಪದಕ್ಕೆ ಸಂಯುಕ್ತ ರಾಜ್ಯ ಎಂದು ಅನುವಾದಿಸಲಾಗಿದೆ. ಆದರೆ ಇದೇ ಪ್ರಶ್ನೆ ಪತ್ರಿಕೆಯ ಇನ್ನೊಂದು ಪ್ರಶ್ನೆಯಲ್ಲಿ `‘Write a brief note on Union territories ಎಂಬ ಪ್ರಶ್ನೆಗೆ `ಸಂಯುಕ್ತ ರಾಜ್ಯ ಕ್ಷೇತ್ರಗಳ ಮೇಲೆ ಒಂದು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ' ಎಂದು ಅನುವಾದಿಸಲಾಗಿದೆ. ಇದು ಕೇಂದ್ರಾಡಳಿತ ಪ್ರದೇಶಗಳ ಕುರಿತು ಟಿಪ್ಪಣಿ ಬರೆಯಿರಿ ಎಂದಾಗಬೇಕಿತ್ತು. ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಸಂಯುಕ್ತ ರಾಜ್ಯ ಎನ್ನುವುದು ಅಮೆರಿಕ ಸಂಸ್ಥಾನವೂ ಆಗುತ್ತದೆ. ಕೇಂದ್ರಾಡಳಿತ ಪ್ರದೇಶವೂ ಆಗುತ್ತದೆ.Critically evaluate how India is trying to deal with the Pakistan sponsored cross-Border Terrorism since December 2001’  ಎಂಬ ಪ್ರಶ್ನೆ ಇಂಗ್ಲಿಷ್ ಮಾಧ್ಯಮದ ಪ್ರಶ್ನೆ ಪತ್ರಿಕೆಯಲ್ಲಿದ್ದರೆ ಅದೇ ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಯಲ್ಲಿ `ಡಿಸೆಂಬರ್ 2001ರಿಂದಲೂ ಪಾಕಿಸ್ತಾನದ ಕೊಡುಗೆಯಾದ ಪ್ರತಿಸೀಮಾಂತ ಭಯೋತ್ಪಾದಕತೆಯೊಂದಿಗೆ ಭಾರತವು ಹೇಗೆ ವ್ಯವಹರಿಸಲು ಪ್ರಯತ್ನಿಸುತ್ತಿದೆ ಎಂದು ವಿಮರ್ಶಾತ್ಮಕವಾಗಿ ಪರಿಗಣಿಸಿ' ಎಂದಿದೆ. ಇದು ಪಾಕಿಸ್ತಾನ ಪ್ರಚೋದಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಡಿಸೆಂಬರ್ 2001ರಿಂದ ಭಾರತವು ಹೇಗೆ ನಿಭಾಯಿಸುತ್ತಿದೆ ಎನ್ನುವುದರ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯಿರಿ ಎಂದಾಗಬೇಕಿತ್ತು.ತಹಶೀಲ್ದಾರ್, ಉಪ ವಿಭಾಗಾಧಿಕಾರಿಯಂತಹ ಉನ್ನತ ಹುದ್ದೆಗೆ ಆಯ್ಕೆ ಮಾಡುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸ್ಥಿತಿ ಇದು. Alamatti controversy ಇಲ್ಲಿ ಆಲಮಟ್ಟಿ ವಾಗ್ವಾದವಾಗುತ್ತದೆ. croping pattern ಕೃಷಿ ವಿಧಾನವಾಗುತ್ತದೆ. Bangalore-Mysore corridor ಬೆಂಗಳೂರು-ಮೈಸೂರು ಮೊಗಸಾಲೆಯಾಗುತ್ತದೆ.

ಹೀಗೆ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆ-1ರಲ್ಲಿ 300ಕ್ಕೆ 139 ಅಂಕಗಳ ಪ್ರಶ್ನೆಗಳು ಹಾಗೂ ಪತ್ರಿಕೆ-2ರಲ್ಲಿ 300ಕ್ಕೆ 120 ಅಂಕಗಳ ಪ್ರಶ್ನೆಗಳು ತಪ್ಪಾಗಿವೆ. ಇದನ್ನು ಅಭ್ಯರ್ಥಿಗಳು ಪ್ರಶ್ನಿಸಿದರೆ ಅವರಿಗೆ ಸೂಕ್ತ ಉತ್ತರವಿಲ್ಲ. ಕೆಲವರು ಆಡಳಿತ ನ್ಯಾಯ ಮಂಡಳಿ ಮತ್ತು ಕೆಲವರು ಹೈಕೋರ್ಟ್ ಮೊರೆ ಹೋಗಿ ಅಂಕವನ್ನು ಸರಿಪಡಿಸಿಕೊಂಡರು. ಇನ್ನು ಕೆಲವರಿಗೆ ಅದೂ ಸಾಧ್ಯವಾಗಲಿಲ್ಲ.

ಪ್ರಶ್ನೆ ಪತ್ರಿಕೆಯಲ್ಲಿಯೇ ತಪ್ಪುಗಳು ಇರುವುದರಿಂದ ಕೃಪಾಂಕ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದರೂ ಅದನ್ನೂ ಕೂಡ ಕೆಪಿಎಸ್‌ಸಿ ತನಗೆ ಬೇಕಾದಂತೆ ಬಳಸಿಕೊಂಡಿತು. ಕೆಲವರಿಗೆ ಕೃಪಾಂಕ ನೀಡಿ ಉದ್ಯೋಗವನ್ನೂ ಕೊಟ್ಟಿತು. ಇನ್ನು ಕೆಲವರನ್ನು ಕಡೆಗಣಿಸಿತು.

ಹೀಗೆ ಕೆಪಿಎಸ್‌ಸಿಯಿಂದ ಉದ್ಯೋಗ ಸಿಗದೇ ಇರುವವರು ಇನ್ನೂ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿದ್ದಾರೆ. ಇದು ಕೇವಲ 2002ರ ಪ್ರಶ್ನೆಪತ್ರಿಕೆಯಲ್ಲಿನ ಲೋಪ ಮಾತ್ರ ಅಲ್ಲ. ಪ್ರತಿ ಬಾರಿ ಹೀಗೆಯೇ ಆಗುತ್ತದೆ ಎನ್ನುವುದು ನಾಲ್ಕು ಬಾರಿ ಪರೀಕ್ಷೆ ಬರೆದ ಅನುಭವಿ ಅಭ್ಯರ್ಥಿಯ ಮಾತು.

Post Comments (+)