ಗುರುವಾರ , ನವೆಂಬರ್ 21, 2019
26 °C

ಪ್ರಶ್ನೆ-ಉತ್ತರ

Published:
Updated:

ರಶ್ಮಿತ ಕೆ.ಎಸ್. ಕಾಗಲವಾಡಿ

ನಾನು ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದೇನೆ. ಮುಂದೆ ಬಿ.ಕಾಂ. ಅಥವಾ ಬಿ.ಬಿ.ಎಂ. ಪದವಿಯ ಪೈಕಿ ಯಾವುದನ್ನು ಮಾಡಲಿ ಎಂಬ ಗೊಂದಲದಲ್ಲಿದ್ದೇನೆ. ಯಾವುದನ್ನು ತೆಗೆದುಕೊಂಡರೆ ಉತ್ತಮ ಭವಿಷ್ಯ ಇದೆ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳು ಇವೆ?ವಿಷಯದಲ್ಲಿ ಪರಿಣತಿ, ಕಾರ್ಯಶ್ರದ್ಧೆ ಇರುವವರು ಭವಿಷ್ಯದಲ್ಲಿ ಯಶಸ್ಸು ಗಳಿಸುತ್ತಾರೆ. ನೀವು ನಿಮಗೆ ಎರಡೂ ವಿಷಯಗಳಲ್ಲಿ ಆಸಕ್ತಿ ಇದೆ ಎಂದು ತಿಳಿಸಿದ್ದೀರಿ. ಎರಡೂ ಪದವಿಗಳ ಕಾರ್ಯ ವ್ಯಾಪ್ತಿಯ ಬಗ್ಗೆ ನೀವು ಮೊದಲು ಸ್ಪಷ್ಟ ತಿಳಿವಳಿಕೆ ಪಡೆದುಕೊಳ್ಳಿ. ಈ ಎರಡರಲ್ಲೂ ಸಾಮ್ಯ ಹಾಗೂ ವ್ಯತ್ಯಾಸಗಳು ಇವೆ. ಸ್ಥೂಲವಾಗಿ ಹೇಳಬೇಕಾದರೆ ಲೆಕ್ಕಪತ್ರ ಕ್ಷೇತ್ರ ನಿಮಗೆ ಇಷ್ಟವಾದರೆ ಬಿ.ಕಾಂ. ತೆಗೆದುಕೊಳ್ಳಿ. ಆಡಳಿತದಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ಬಿ.ಬಿ.ಎಂ.ಗೆ ಹೋಗಿ.  ಅನೇಕರು ಬಿ.ಕಾಂ. ಮುಗಿಸಿ ಆಡಳಿತ ಕ್ಷೇತ್ರದಲ್ಲಿ ಅಥವಾ ಬಿಬಿಎಂ ಮಾಡಿ ಹಣಕಾಸಿನ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ನೀವು ನಿಮ್ಮ ಆಸಕ್ತಿಯ ಕ್ಷೇತ್ರ ಹಾಗೂ ಅನುಕೂಲ ಎರಡನ್ನೂ ಆಧಾರವಾಗಿ ಇಟ್ಟುಕೊಂಡು ಪದವಿ ಬಗ್ಗೆ ತೀರ್ಮಾನ ಕೈಗೊಳ್ಳಿ. ಉದ್ಯೋಗ ಹಾಗೂ ಭವಿಷ್ಯದ ದೃಷ್ಟಿಯಿಂದ ಎರಡಕ್ಕೂ ಸಮಾನ ಅವಕಾಶಗಳಿವೆ.

ಪರಶುರಾಂ ಸುರ್ವೆ, ದಾವಣಗೆರೆ

ನಾನು 1993ರಲ್ಲಿ ಹತ್ತನೇ ತರಗತಿ ಮುಗಿಸಿ ಕುಟುಂಬದ ತೊಂದರೆಯಿಂದಾಗಿ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಪಿ.ಯು.ಸಿ. ಸೇರಿಕೊಂಡು ಕೆಲಸದ ಒತ್ತಡದಿಂದ ಇಂಗ್ಲಿಷ್‌ನಲ್ಲಿ ಫೇಲಾದೆ. ಈಗ ನಾನು ವಯಸ್ಸಿನ ಆಧಾರದ ಮೇಲೆ ಎಂ.ಎ. ಅಥವಾ ಎಂ.ಕಾಂ. ಮಾಡಬಹುದೇ? ಅದರಿಂದ ಕೆ.ಎ.ಎಸ್. ಅಥವಾ ಪಿ.ಡಿ.ಒ. ಪರೀಕ್ಷೆಗೆ ಹಾಜರಾಗಬಹುದೇ?ನೀವು ವಯಸ್ಸಿನ ಆಧಾರದ ಮೇಲೆ ನೇರವಾಗಿ ಬಿ.ಎ. ಅಥವಾ ಬಿ.ಕಾಂ. ಮಾಡಬಹುದು. ಪದವಿ ಗಳಿಸಿದ ಮೇಲೆ ಇತರ ಅರ್ಹತೆಗಳು ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬಹುದು ಹಾಗೂ ಓದು ಮುಂದುವರಿಸಬಹುದು.

ಲಿಖಿತ ಎ. ಗುಬ್ಬಿ, ತುಮಕೂರು

ನಾನು ಪ್ರಥಮ ಪಿ.ಯು.ಸಿ. ಮುಗಿಸಿದ್ದೇನೆ. ಐಪಿಎಸ್ ಪರೀಕ್ಷೆ ಬರೆಯುವ ಅಪೇಕ್ಷೆ ಇದೆ. ವಿವರ ತಿಳಿಸಿ.ನೀವು ಯು.ಪಿ.ಎಸ್.ಸಿ. ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಪ್ರಾಥಮಿಕ ಹಂತ, ಅಂತಿಮ ಪರೀಕ್ಷೆ, ವೈದ್ಯಕೀಯ ಅರ್ಹತೆ ಆಧಾರದ ಮೇಲೆ ನೀವು ಮುಂದುವರಿಯಬಹುದು. ಇತ್ತೀಚೆಗೆ ಈ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳು ಆಗಿದ್ದು, `ಪ್ರಜಾವಾಣಿ' ಪತ್ರಿಕೆಯ ಹಿಂದಿನ ಸಂಚಿಕೆಗಳಲ್ಲಿ ಪೂರ್ಣ ವಿವರ ಪಡೆಯಬಹುದು, ಯು.ಪಿ.ಎಸ್.ಸಿ. ವೆಬ್‌ಸೈಟ್ ಮೂಲಕವೂ ವಿವರ ಪಡೆಯಬಹುದು. 

ಆರ್.ಪಾಟೀಲ್

ನಾನು ರೈಲ್ವೆ ಇಲಾಖೆಯಲ್ಲಿ `ಡಿ' ದರ್ಜೆ ಹುದ್ದೆಗೆ ಆಯ್ಕೆಯಾಗಿದ್ದೇನೆ. ನಾನೊಬ್ಬ ಪದವೀಧರ. ಮುಂದೆ ಇಲಾಖಾ ಪರೀಕ್ಷೆ ಬರೆದು ಒಳ್ಳೆಯ ಹುದ್ದೆಗೆ ಹೋಗಬಹುದೇ?  ಒಳ್ಳೆಯ ಅವಕಾಶಗಳು ಸಿಗಬಹುದೇ?ನೀವು ಕೇಂದ್ರ ಸರ್ಕಾರದ ಇಲಾಖಾ ಪರೀಕ್ಷೆಗಳನ್ನು ಬರೆದು ಬೇರೆ ಹುದ್ದೆಗಳಿಗೆ ಆಯ್ಕೆಯಾಗಬಹುದು. ನಿಮಗೆ ಈ ಹುದ್ದೆಗೆ ಸೇರಿಕೊಳ್ಳದೇ, ಬೇರೆ ಪ್ರಯತ್ನಗಳಲ್ಲಿ ಜಯಶೀಲನಾಗುವೆ ಎಂಬ ವಿಶ್ವಾಸವಿದ್ದಲ್ಲಿ ಹಾಗೇ ಮಾಡಿ. ಇಲ್ಲವಾದರೆ ಕೈಗೆ ಬಂದಿರುವ ಸರ್ಕಾರಿ ಕೆಲಸ ಬಿಡದೆ ಅದಕ್ಕೆ ಸೇರಿಕೊಳ್ಳಿ.

ದರ್ಶನ್, ಚಿಕ್ಕಮಗಳೂರು

ನಾನು ಪಿ.ಯು.ಸಿ. ಕಲಾ ವಿಭಾಗದಲ್ಲಿ ಶೇ 83 ಅಂಕ ಗಳಿಸಿದ್ದೇನೆ. ಪ್ರಥಮ ಬಿ.ಎ. ಒಂದನೇ ಸೆಮಿಸ್ಟರ್‌ನಲ್ಲಿ ಶೇ 78 ಅಂಕ ಗಳಿಸಿದ್ದೇನೆ. ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡಬೇಕೆಂದುಕೊಂಡಿದ್ದೇನೆ. ಅದಕ್ಕೆ ಉತ್ತಮ ಅವಕಾಶ ಇದೆಯೇ? ಬಿ.ಕಾಂ ಅಥವಾ ಬಿ.ಬಿ.ಎಂ. ಮಾಡಲೇ?ನೀವು ಈಗಾಗಲೇ ಕಲಾ ವಿಭಾಗದಲ್ಲಿ ಹೆಚ್ಚುಕಡಿಮೆ ಒಂದು ವರ್ಷ ಕಳೆದಿದ್ದೀರಿ. ಈಗ ಅದನ್ನು ಬಿಟ್ಟು ಬೇರೆ ಕೋರ್ಸ್ ಮಾಡುವುದಕ್ಕಿಂತ ಅದನ್ನೇ ಮುಂದುವರಿಸುವುದು ಉತ್ತಮ ಎಂದು ನನಗೆ ಅನಿಸುತ್ತದೆ. ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡಿದವರಿಗೆ ಅವಕಾಶಗಳು ಸಾಕಷ್ಟಿವೆ. ನಿಮ್ಮ ಮುಂದಿನ ಕೋರ್ಸಿನ ಬಗ್ಗೆ ಪದವಿ ನಂತರ ಪುನರ್‌ಪರಿಶೀಲನೆ ಮಾಡಬಹುದು.

ಹೆಸರಿಲ್ಲ, ರಾಯಚೂರು

ನಾನು ದ್ವಿತೀಯ ಪಿ.ಯು.ಸಿ. ಐದು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ಈಗ್ಗೆ ಎರಡು ವರ್ಷ ಕಳೆದಿವೆ. ಈಗ ನಾನು ಸರ್ಕಾರಿ ಉದ್ಯೋಗ ಮಾಡಬೇಕಾದರೆ ದ್ವಿತೀಯ ಪಿ.ಯು.ಸಿ. ಮುಗಿಸಿಕೊಳ್ಳಬೇಕೇ ಅಥವಾ ಬೇರೆ ಕೋರ್ಸನ್ನು ಮಾಡಬೇಕಾಗುತ್ತದೆಯೇ?ಈಗ ಸಾಮಾನ್ಯವಾಗಿ ಸರ್ಕಾರಿ ನೌಕರಿಗಳಿಗೆ ಪಿ.ಯು.ಸಿ. ಕನಿಷ್ಠ ವಿದ್ಯಾರ್ಹತೆಯಾಗಿದೆ. ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿಯನ್ನು ಪರಿಗಣಿಸುವುದುಂಟು. ಹೀಗಾಗಿ ನಿಮ್ಮಿಂದ ಐದು ವಿಷಯಗಳನ್ನು ಜಾಗ್ರತೆಯಾಗಿ ಮುಗಿಸಿಕೊಳ್ಳುವುದು ಸಾಧ್ಯವೇ ಯೋಚಿಸಿ ನೀವೇ ತೀರ್ಮಾನ ತೆಗೆದುಕೊಳ್ಳಿ.  ಪಿ.ಯು.ಸಿ. ಮುಗಿಸಿಕೊಂಡರೂ ಸರ್ಕಾರಿ ಹುದ್ದೆ ಪಡೆಯಲು ಸಾಕಷ್ಟು ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರಿ, ಖಾಸಗಿ ಅಥವಾ ಸ್ವಂತ ಉದ್ಯೋಗ ಈ ಮೂರಕ್ಕೂ ಅನುಕೂಲವಾಗುವ ಹಾಗೆ ಯಾವುದಾದರೂ ವೃತ್ತಿ ತರಬೇತಿ ಪಡೆದುಕೊಳ್ಳಿ. ಉದಾಹರಣೆಗೆ ಡಿಪ್ಲೊಮಾ, ಐಟಿಐ, ಕಂಪ್ಯೂಟರ್, ಅಲ್ಪಕಾಲಿಕ ವೃತ್ತಿ ತರಬೇತಿಗಳು ಇತ್ಯಾದಿ. ಇದರಿಂದ ನಿಮಗೆ ಅನುಕೂಲ ಆಗಬಹುದು.

ರಮೇಶ, ಸಿರವಾರ, ಮಾನ್ವಿ ತಾಲ್ಲೂಕು

ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ಕೃಷಿಯ ಬಗ್ಗೆ ಓದಬೇಕೆಂದು ಆಸೆಯಿದೆ. ಹತ್ತನೇ ತರಗತಿಯ ನಂತರ ಇದಕ್ಕೆ ಸಂಬಂಧಿಸಿದ ಕೋರ್ಸುಗಳ ಬಗ್ಗೆ ಮಾಹಿತಿ ನೀಡಿ. ಇದನ್ನು ಓದಲು ನಾನು ಏನು ಮಾಡಬೇಕು?ಹತ್ತನೇ ತರಗತಿ ನಂತರ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಜೇನು ಸಾಕಣೆ, ಮೀನುಗಾರಿಕೆ, ರೇಷ್ಮೆ ಇಲಾಖೆ, ಅರಣ್ಯ ಸಂರಕ್ಷಣೆ ಮುಂತಾದ ಅನೇಕ ವಿಷಯಗಳ ಬಗ್ಗೆ ಡಿಪ್ಲೊಮಾ ಹಾಗೂ ಅಲ್ಪಾವಧಿ ತರಬೇತಿಗಳು ಇವೆ. ಕೆಲವು ಕೋರ್ಸುಗಳಿಗೆ ಸ್ಟೈಫಂಡ್ ಹಾಗೂ ವಸತಿ ಸೌಕರ್ಯ ಲಭ್ಯವಿದೆ. ನಿಮ್ಮ ಜಿಲ್ಲಾ ಕೇಂದ್ರದಲ್ಲಿ ಸಂಬಂಧಿಸಿದ ಇಲಾಖೆಗಳಲ್ಲಿ ವಿಚಾರಿಸಿದರೆ ಈ ಬಗ್ಗೆ ಮಾಹಿತಿ ಸಿಗುತ್ತದೆ. ಇವುಗಳ ಬಗ್ಗೆ ಪತ್ರಿಕಾ ಪ್ರಕಟಣೆಗಳೂ ಆಗಿಂದಾಗ್ಗೆ ಬರುತ್ತಿರುತ್ತವೆ.  ಲಾಲ್‌ಬಾಗ್, ಹೆಸರುಘಟ್ಟ, ಮಂಡ್ಯ, ಧಾರವಾಡ ಮತ್ತು ಇನ್ನೂ ಅನೇಕ ಕಡೆ ಇರುವ ನಾನಾ ಇಲಾಖೆಗಳ ಕೃಷಿ ಕ್ಷೇತ್ರಗಳಲ್ಲಿ ಇಂತಹ ತರಬೇತಿ ಲಭ್ಯವಿದೆ. 

ಹೆಸರಿಲ್ಲ,  ಗದಗ ಜಿಲ್ಲೆ

ನಾನು ಒಂದರಿಂದ ಹತ್ತನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಓದಿರುವೆ ಹಾಗೂ ಪಿ.ಯು.ಸಿ.ಯಲ್ಲಿ ಉರ್ದುವನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದೇನೆ. ಮುಂದೆ ಕನ್ನಡ ಮಾಧ್ಯಮದಲ್ಲಿ ಬಿ.ಎ. ಮುಗಿಸಿ ಕನ್ನಡ ಮಾಧ್ಯಮದಲ್ಲೇ ಬಿ.ಎಡ್. ಕಲಿಯುತ್ತಿದ್ದೇನೆ. ನಾನು ಉರ್ದು ಪ್ರಥಮ ಭಾಷೆಯ ಆಧಾರದ ಮೇಲೆ ಉರ್ದು ಸಿ.ಇ.ಟಿ.ಯನ್ನು ಬರೆಯಬಹುದೇ? ಉರ್ದು ಮಾಧ್ಯಮದ ಶಿಕ್ಷಕಿಯಾಗಬಹುದೇ? ದಯವಿಟ್ಟು ತಿಳಿಸಿ.ಪದವಿ ಹಾಗೂ ಬಿ.ಎಡ್. ಅರ್ಹತೆ ಪರಿಗಣಿಸಿ ಸಿ.ಇ.ಟಿ. ನಡೆಸುವಾಗ ಅಲ್ಲಿ ಕಲಿತಿರುವ ವಿಷಯಗಳೇ ಪ್ರಧಾನವಾಗುತ್ತವೆ. ನೀವು ಪದವಿ ಮಟ್ಟದಲ್ಲಿ ಉರ್ದು ಕಲಿಯದಿದ್ದಲ್ಲಿ ಅದರ ಪರಿಗಣನೆ ಸಿಗಲಾರದು. ಆದ್ದರಿಂದ ನಿಮ್ಮ ಆಯ್ಕೆ ವಿಷಯಗಳ ಸಿ.ಇ.ಟಿ. ಬರೆಯಿರಿ. ನಿಮಗೆ ಉರ್ದು ಮಾಧ್ಯಮದಲ್ಲಿ ಬೋಧಿಸುವ ಆಸಕ್ತಿ ಇದ್ದಲ್ಲಿ ಆಯ್ಕೆ ಹೊಂದಿದ ಮೇಲೆ ಮೇಲಧಿಕಾರಿಗಳು ಅದಕ್ಕೆ ಅವಕಾಶ ನೀಡಬಹುದು.

ಬಸವರಾಜ್ ನ್ಯಾಮಗೌಡ, ಜಮಖಂಡಿ

ನಾನು  ಈಗ ಬಿ.ಎ. ಅಂತಿಮ ವರ್ಷ ಓದುತ್ತಿದ್ದೇನೆ. ಜೊತೆಗೆ ಕಂಪ್ಯೂಟರ್ ಕೂಡಾ ಕಲಿಯುತ್ತಿದ್ದೇನೆ. ನನಗೆ ಪದವಿ ಮುಗಿಸಿದ ತಕ್ಷಣ ಕೆಲಸ ಸಿಗಬೇಕು.  ದಯವಿಟ್ಟು ನನಗೆ ಇದರ ಬಗ್ಗೆ ಸರಿಯಾದ ಮಾಹಿತಿ ನೀಡಿ.  ನನಗೆ ಬಿ.ಎಡ್., ಎಂ.ಎ. ಮಾಡಲು ಆಸಕ್ತಿ ಇಲ್ಲ.ನೀವು ಕಂಪ್ಯೂಟರ್‌ನಲ್ಲಿ ಯಾವ ಕೋರ್ಸ್ ಆರಿಸಿಕೊಂಡಿದ್ದೀರಿ ಎಂಬ ವಿವರ ಸಿಕ್ಕಿಲ್ಲ. ಅದೇನೇ ಇರಲಿ ನೀವು ಈ ವಿಭಾಗದಲ್ಲೇ ಪದವಿ ಮುಗಿಸಿದ ನಂತರ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಸರ್ಕಾರಿ ಉದ್ಯೋಗಕ್ಕಿಂತ ಖಾಸಗಿ ವಲಯದಲ್ಲಿ ನಿಮಗೆ ಅವಕಾಶಗಳು ಚೆನ್ನಾಗಿವೆ. ಮೊದಲು ಯಾವುದಾದರೂ ಕೆಲಸಕ್ಕೆ ಸೇರಿಕೊಂಡು ನಂತರ, ಹೆಚ್ಚಿನ ಓದು ಹಾಗೂ ಅನುಭವದಿಂದ ಇನ್ನೂ ಉತ್ತಮ ಉದ್ಯೋಗಕ್ಕೆ ಸೇರಿಕೊಳ್ಳಬಹುದು.ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳುಹಿಸಬಹುದು:shikshana@prajavani.co.in

ಪ್ರತಿಕ್ರಿಯಿಸಿ (+)