ಶನಿವಾರ, ಮೇ 8, 2021
23 °C

ಪ್ರಶ್ನೆ ಉತ್ತರ

ಜಯರಾಮಪ್ಪ,ಯಾದಲಡಕು ಪ್ರೊಫೆಸರ್,`ಬೇಸ್' ಎಜುಕೇಷನಲ್ ಸರ್ವೀಸ್ ಸಂಸ್ಥೆ Updated:

ಅಕ್ಷರ ಗಾತ್ರ : | |

ಸ್ವಾತಿ ಶಾಸ್ತ್ರಿ

ನಾನು ಬಿ.ಸಿ.ಎ. ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಇದುವರೆಗೂ ಒಟ್ಟಾರೆ ಸರಾಸರಿ ಶೇ 71 ಅಂಕ ಇದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 78 ಮತ್ತು ಪಿ.ಯು.ನಲ್ಲಿ ಶೇ 49.5 ಅಂಕ ಬಂದಿದೆ. ಪಿ.ಯು.ನಲ್ಲಿ ಕಡಿಮೆ ಅಂಕ ಇರುವುದರಿಂದ ನಾನು ಮುಂದೆ ಎಂ.ಸಿ.ಎ.ಗಾಗಿ ಪಿ.ಜಿ.ಸಿ.ಇ.ಟಿ ಪರೀಕ್ಷೆ ಹಾಗೂ ಬ್ಯಾಂಕ್ ಪರೀಕ್ಷೆ ಬರೆಯಬಹುದೇ?
-ಎಂ.ಸಿ.ಎ. ಸ್ನಾತಕೋತ್ತರ ಪದವಿಗೆ ನಡೆಸುವ ಪ್ರವೇಶ ಪರೀಕ್ಷೆಯನ್ನು ನೀವು ಬರೆಯಬಹುದು. ನಿಮಗೆ ಪಿ.ಯು.ನಲ್ಲಿ ಕಡಿಮೆ ಅಂಕ ಇರುವುದರಿಂದ ಈ ಪರೀಕ್ಷೆ ಬರೆಯಲು ಯಾವುದೇ ಅರ್ಥ ಇಲ್ಲ. ಆದ್ದರಿಂದ ಪ್ರಸ್ತುತ ಬಿ.ಸಿ.ಎ. ಅಂತಿಮ ಸೆಮಿಸ್ಟರ್‌ನಲ್ಲಿ ಒಳ್ಳೆಯ ಅಂಕ ಗಳಿಸುವುದು ಮತ್ತು ತದನಂತರ ಬರುವ ಪಿ.ಜಿ ಸಿ.ಇ.ಟಿ.ಗೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುವುದರ ಕಡೆಗೆ ಗಮನ ಹರಿಸಿ.

ವೀರೇಶ್ ಎಸ್. ಬಳಿಗಾರ್, ಕುರುಬಗೊಂಡ, ಹಾವೇರಿ ಜಿಲ್ಲೆ

ನಾನು ದ್ವಿತೀಯ ಪಿ.ಯು. (ವಿಜ್ಞಾನ) ಮುಗಿಸಿದ್ದೇನೆ. ಮುಂದೆ ಬಿ.ಇ. ಆಟೊಮೊಬೈಲ್‌ಗೆ ಸೇರೋಣ ಎಂದುಕೊಂಡಿದ್ದೇನೆ. ಈ ವಿಭಾಗಕ್ಕೆ ಉದ್ಯೋಗ ಅವಕಾಶಗಳು ಇವೆಯೇ? ದೇಶದಲ್ಲಿನ ಕಾರ್, ಬೈಕ್ ಇನ್ನಿತರ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದೇ? ಉತ್ತಮ ಸಂಬಳ ಸಿಗಬಹುದೇ?
-ಬಿ.ಇ. ಆಟೊಮೊಬೈಲ್ ಪದವಿಯ ನಂತರ ಭವಿಷ್ಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ನಮ್ಮ ದೇಶದಲ್ಲಿ ಇವೆ. ಹೆಸರಾಂತ ದೇಶೀಯ ಮತ್ತು ವಿದೇಶೀಯ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ನೀವು ಉತ್ತಮ ಉದ್ಯೋಗ ಮತ್ತು ವೇತನ ಪಡೆಯಲು ಸಾಧ್ಯ. ಆದ್ದರಿಂದ ಭವಿಷ್ಯದ ಉದ್ಯೋಗ ಮತ್ತು ಬೆಳವಣಿಗೆಯ ಬಗೆಗೆ ಚಿಂತಿಸಬೇಕಾದ ಅವಶ್ಯಕತೆ ಇಲ್ಲ.

ಮೌನೇಶ ಜೆ. ಬಡಿಗೇರ್

ನಾನು ದ್ವಿತೀಯ ಪಿ.ಯು. (ವಿಜ್ಞಾನ) ಮುಗಿಸಿದ್ದೇನೆ. ಮುಂದೆ ಏರೋಸ್ಪೇಸ್ ಎಂಜಿನಿಯರ್ ಆಗಬೇಕು ಎಂದುಕೊಂಡಿದ್ದೇನೆ. ಕರ್ನಾಟಕದಲ್ಲಿ ಈ ವಿಷಯವನ್ನು ಬೋಧಿಸುವ ಕಾಲೇಜುಗಳು ಎಲ್ಲಿವೆ? ಎಷ್ಟನೇ ರ‍್ಯಾಂಕ್ ಪಡೆಯಬೇಕು? ಕೋರ್ಸ್ ಮುಗಿಸಿಕೊಳ್ಳಲು ಎಷ್ಟು ಹಣ ಬೇಕಾಗಬಹುದು?
-ದ್ವಿತೀಯ ಪಿಯುಸಿ ನಂತರ ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯ ಪ್ರಸ್ತುತ ಜೈನ್ ತಾಂತ್ರಿಕ ವಿಶ್ವವಿದ್ಯಾಲಯ, ಕನಕಪುರ ರಸ್ತೆ, ಈ ಸಂಸ್ಥೆಯಲ್ಲಿ ಇದೆ. ಈ ಪದವಿಗೆ ಪ್ರವೇಶ ಪಡೆಯಲು ನಿಮಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆಯಬೇಕಾದ ರ‍್ಯಾಂಕ್ ಮತ್ತು ಕೋರ್ಸ್ ಮುಗಿಸಲು ಬೇಕಾಗುವ ಹಣದ ಮಾಹಿತಿಯನ್ನು ಈ ಸಂಸ್ಥೆಯ ಅಂತರ್ಜಾಲದಲ್ಲಿ ಪಡೆಯಬಹುದು. (http://set.jainuniversity.ac.in/   http://www.jainuniversity.ac.in/)

 

ಸಿಜ್ಜತ್

ನಾನು ಪ್ರಥಮ ಪಿ.ಯು. (ಪಿ.ಸಿ.ಎಂ.ಬಿ) ಓದುತ್ತಿದ್ದೇನೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸದ ಆಯ್ಕೆಯಲ್ಲಿ ತುಂಬಾ ಗೊಂದಲದಲ್ಲಿದ್ದೇನೆ. ಒಮ್ಮಮ್ಮೆ ಮೆಡಿಕಲ್ ಮುಗಿಸಿ ಎಂ.ಎಸ್. ಮಾಡಬೇಕು ಎನಿಸುತ್ತದೆ. ಒಮ್ಮೆ ಎಂಜಿನಿಯರಿಂಗ್ ಮಾಡಬೇಕು ಎನಿಸುತ್ತದೆ ಅಥವಾ ಐಐಟಿ ತೆಗೆದುಕೊಂಡು ಏರೋನಾಟಿಕ್ಸ್, ಆಸ್ಟ್ರೋಸಿಕ್ಸ್, ಅಟಾಮಿಕ್ ನ್ಯೂಕ್ಲಿಯರ್ ಫಿಸಿಕ್ಸ್ ಅಥವಾ ಜೆನೆಟಿಕ್ಸ್ ಬಯೊಟೆಕ್ನಾಲಜಿ ಹೀಗೆ ಹಲವಾರು ಗೊಂದಲಗಳು. ಅಲ್ಲದೆ ಶುದ್ಧ ವಿಜ್ಞಾನಕ್ಕೂ ಒಲವು ಇದೆ. ರಾಕೆಟ್ ಸೈನ್ಸ್, ರೋಬೋಟಿಕ್ಸ್ ಅಥವಾ ಮೈಕ್ರೊಬಯಾಲಜಿ ನಂತರ ಪಿಎಚ್.ಡಿ. ಹೀಗೆ ತುಂಬಾ ಗೊಂದಲದಲ್ಲಿ ಇದ್ದೇನೆ. ದಯವಿಟ್ಟು ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ.
-ಪ್ರಸ್ತುತ ಪ್ರಥಮ ಪಿ.ಯು.ಸಿ.ಯಲ್ಲಿ ಅಭ್ಯಾಸ ಮಾಡುತ್ತಿರುವ ನೀವು ಅನಗತ್ಯವಾಗಿ ಅನೇಕ ವಿಚಾರಗಳನ್ನು ಮನದಲ್ಲಿ ತುಂಬಿಕೊಂಡು ಗೊಂದಲವನ್ನು ಸೃಷ್ಟಿಸಿಕೊಂಡಿದ್ದೀರಿ. ಸದ್ಯಕ್ಕೆ ನೀವು ಎರಡು ವರ್ಷದ ಪಿ.ಯು.ಸಿ ಮತ್ತು ನಂತರ ಬರೆಯಬೇಕಾದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಗಮನ ನೀಡಿ. ಅಭ್ಯಾಸ ಮಾಡಿ ಒಳ್ಳೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಉತ್ತಮ ರ‍್ಯಾಂಕ್ ಪಡೆಯುವುದು ನಿಮ್ಮ ಸದ್ಯದ ಗುರಿಯಾಗಿರಬೇಕು.ಈ ಅವಧಿಯಲ್ಲಿ ನಿಮ್ಮ ಆಲೋಚನೆಗಳು ಪಕ್ವವಾಗಿ ನಿಮಗೆ ಹೆಚ್ಚು ಆಸಕ್ತಿ ಇರುವ ವಿಷಯ ಯಾವುದು ಎನ್ನುವ ವಿಚಾರ ಮನದಟ್ಟಾಗುತ್ತದೆ. ಮುಂದಿನ ವಿದ್ಯಾಭ್ಯಾಸವನ್ನು ಆ ವಿಷಯದಲ್ಲಿ ಮುಂದುವರಿಸಬಹುದು. ಭವಿಷ್ಯದ ದೃಷ್ಟಿಯಿಂದ ಯಾವುದೇ ವಿಷಯದಲ್ಲಿ ಒಳ್ಳೆಯ ಸಾಧನೆ ಮಾಡಿದರೂ ತೊಂದರೆಯಿಲ್ಲ. ಆದ್ದರಿಂದ ಈ ಗೊಂದಲಗಳು ಅನಗತ್ಯ. ಅಲ್ಲದೆ ನಿಮ್ಮ ಸಾಧನೆಯ ಮೇಲೂ ಇದು ಪರಿಣಾಮ ಬೀರಬಹುದು.

ಪ್ರಭಂಜನ್

ನಾನು ದ್ವಿತೀಯ ವರ್ಷದ ಬಿ.ಇ. (ಸಿ.ಎಸ್.) ಓದುತ್ತಿದ್ದೇನೆ. ನನಗೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆಯಬೇಕೆಂಬ ಹಂಬಲ ಇದೆ. ಆದರೆ ಪರೀಕ್ಷಾ ವಿಷಯಗಳನ್ನು ಮತ್ತು ಪಠ್ಯಕ್ರಮವನ್ನು ಗಮನಿಸಿದಾಗ, ನಾನು ಓದುತ್ತಿರುವ ವಿಷಯ ಅದರಲ್ಲಿ ಇಲ್ಲದಿರುವುದು ಕಂಡುಬಂತು. ಏನು ಮಾಡುವುದೋ ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಕೊಡಿ.
-ಈ ವರ್ಷದಿಂದ ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಎಲ್ಲ ಅಭ್ಯರ್ಥಿಗಳಿಗೂ ಸಾಮಾನ್ಯ ಜ್ಞಾನಕ್ಕೆ ಬೇಕಾದ ಎಲ್ಲ ವಿಷಯಗಳೂ  ಅಡಕವಾಗಿರುತ್ತವೆ.ಅಂದರೆ ವಿಜ್ಞಾನ, ವಾಣಿಜ್ಯ, ಕಲೆ, ರಾಜಕೀಯ, ಹಣಕಾಸು, ಆಡಳಿತ, ಪ್ರಸ್ತುತ ವಿದ್ಯಮಾನಗಳು, ಇತಿಹಾಸ, ಭಾಷೆ, ಇತ್ಯಾದಿ. ಆದ್ದರಿಂದ ಎಲ್ಲ ಅಭ್ಯರ್ಥಿಗಳಿಗೂ ಸಮಾನಾಂತರವಾದ ಏಕರೂಪ ಪರೀಕ್ಷೆಯನ್ನು ಯು.ಪಿ.ಎಸ್.ಸಿ. ಈ ವರ್ಷದಿಂದ ನಡೆಸಲು ತೀರ್ಮಾನಿಸಿದೆ.

ಅರವಿಂದ ರಜನಿನಾನು ಪ್ರಥಮ ಪಿ.ಯು.ಸಿ. (ಪಿ.ಸಿ.ಎಂ.ಬಿ.) ಓದುತ್ತಿದ್ದೇನೆ. ನನಗೆ ಎಂ.ಸಿ.ಎ. ಮಾಡಬೇಕೆಂಬ ಆಸೆ ಇದೆ. ಎಂ.ಸಿ.ಎ. ಮಾಡಿದವರಿಗೆ ಉದ್ಯೋಗಾವಕಾಶಗಳು ಲಭ್ಯವಿವೆಯೇ? -ಪಿ.ಯು.ಸಿ. ನಂತರ ಬಿ.ಸಿ.ಎ., ಮುಂದುವರಿದು ಎಂ.ಸಿ.ಎ. ಸ್ನಾತಕೋತ್ತರ ಪದವಿಗೆ ನೀವು ಅಭ್ಯಾಸ ಮಾಡಬಹುದು. ಈ ಪದವಿಯ ನಂತರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇರುತ್ತವೆ.

ನಾನು ಬಿ.ಎಸ್ಸಿ. ಹಾರ್ಟಿಕಲ್ಚರ್ ಓದುತ್ತಿದ್ದೇನೆ. ಮುಂದೆ ಕೆ.ಪಿ.ಎಸ್ಸಿ., ಯು.ಪಿ.ಎಸ್ಸಿ., ಐ.ಬಿ.ಪಿ.ಎಸ್. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದೇ? ಇದಕ್ಕೆ ತಯಾರಿ ಹೇಗೆ?-ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಮತ್ತು ಐ.ಬಿ.ಪಿ.ಎಸ್.ನಂತಹ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ವಿಭಾಗದಲ್ಲಿ ಒಂದು ಪದವಿ ಗಳಿಸುವುದು ಅವಶ್ಯಕ. ಆದ್ದರಿಂದ ನೀವು ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ. ಪದವಿಯ ನಂತರ ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಬೇಕಾದ ತಯಾರಿ, ಪರೀಕ್ಷೆ ದಿನಾಂಕ ಮತ್ತು ಇತರ ವಿವರಗಳನ್ನು ಸಂಬಂಧಪಟ್ಟ ಸಂಸ್ಥೆಯ ಅಂತರ್ಜಾಲದಲ್ಲಿ ಪಡೆಯಬಹುದು. (http://www.uhsbagalkot.edu.in/)

ಮಂಜ

ನಾನು ಬಿ.ಇ. ಮೆಕ್ಯಾನಿಕಲ್ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನ್ನ ಭವಿಷ್ಯಕ್ಕೆ ಪೂರಕವಾದ ಯಾವುದಾದರೂ ಕಂಪ್ಯೂಟರ್ ಕೋರ್ಸುಗಳ ಬಗ್ಗೆ ತಿಳಿಸಿಕೊಡಿ. ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ?-ಬಿ.ಇ. ಮೆಕ್ಯಾನಿಕಲ್ ಪದವಿಯ ಆರನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿರುವ ನೀವು ಅರೆಕಾಲಿಕ ಕಂಪ್ಯೂಟರ್ ಕೋರ್ಸುಗಳಲ್ಲಿ ಅಂದರೆ ಸ್ಯಾಪ್, ಮೈಕ್ರೊಸಾಫ್ಟ್, ಜಾವಾ, ಒರಾಕಲ್ ನೆಟ್‌ವರ್ಕಿಂಗ್ ಇತ್ಯಾದಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬಹುದು.

ಮಲ್ಲಪ್ಪ ಹಲ್ಯಾಲ್, ಬನಹಟ್ಟಿ, ಜಮಖಂಡಿ ತಾಲ್ಲೂಕು

ನಾನು ಬಿ.ಬಿ.ಎ. (ಮಾರ್ಕೆಟಿಂಗ್) ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಎಂ.ಬಿ.ಎ. ಓದಲು ಇಷ್ಟವಿಲ್ಲ. ಆದರೆ ಉದ್ಯೋಗಕ್ಕೆ ಎಂ.ಬಿ.ಎ. ಅತ್ಯಂತ ಅವಶ್ಯವೇ? ಇದು ಇಲ್ಲದೆಯೂ ಉದ್ಯೋಗ ಪಡೆಯಬಹುದೇ?
-ಬಿ.ಬಿ.ಎ. ನಂತರ ಉದ್ಯೋಗ ಪಡೆಯಲು ಎಂ.ಬಿ.ಎ. ಪದವಿಯನ್ನು ಪಡೆಯಲೇಬೇಕೆಂಬ ನಿಯಮ ಇಲ್ಲ. ಆದ್ದರಿಂದ ಬಿ.ಬಿ.ಎ. ಪದವಿ ಆಧಾರದ ಮೇಲೆಯೇ ನೀವು ಉದ್ಯೋಗವನ್ನು ಪಡೆಯಲು ಸಾಧ್ಯ.ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇ- ಮೇಲ್‌ನಲ್ಲೂ ಕಳುಹಿಸಬಹುದು: shikshana@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.