ಭಾನುವಾರ, ಫೆಬ್ರವರಿ 28, 2021
23 °C

ಪ್ರಶ್ನೆ- ಉತ್ತರ

ಎಲ್. ಎಸ್. ಶ್ಯಾಮಸುಂದರಶರ್ಮ ಶಿಕ್ಷಣ ತಜ್ಞರು Updated:

ಅಕ್ಷರ ಗಾತ್ರ : | |

ಪ್ರಶ್ನೆ- ಉತ್ತರ

ವಿಜಯ ನಂದಿನಿ ಸತೀಶ್

ನಾನು 2004ರಲ್ಲಿ ಪಿಯುಸಿ ಬರೆದಿದ್ದು, ಅದರಲ್ಲಿ ಮೂರು ವಿಷಯಗಳು ಉಳಿದಿವೆ. ಅಷ್ಟರಲ್ಲಿ ನನ್ನ ಮದುವೆಯಾದುದರಿಂದ ಅವನ್ನು ಮುಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ನಾನು ವಯಸ್ಸಿನ ಆಧಾರದ ಮೇಲೆ ಮೈಸೂರು ವಿ.ವಿ.ಯಿಂದ ದೂರಶಿಕ್ಷಣದಲ್ಲಿ ಬಿ.ಎ. ಮಾಡಿ, ಅರ್ಥಶಾಸ್ತ್ರದ ಪ್ರಥಮ ಎಂ.ಎ. ಕೂಡ ಮುಗಿಸಿದ್ದೇನೆ. ಅಷ್ಟರಲ್ಲಿ ಒಬ್ಬರ ಸಲಹೆಯಂತೆ ಬಿ.ಎಡ್. ಕಾಲೇಜಿಗೆ ಸೇರಲು ಪ್ರಯತ್ನಿಸಿದೆ. ಒಂದು ವರ್ಷವಾಯಿತು. ಬಿ.ಎಡ್. ಕಾಲೇಜಿಗೆ ಸೇರಲು ಪಿಯುಸಿ ಇಲ್ಲದವರಿಗೆ ಸಾಧ್ಯವಿಲ್ಲ ಎಂದು ತಿಳಿಯಿತು. ಈಗ ನಾನು ಪಿಯುಸಿ ಮಾಡಬೇಕೇ ಅಥವಾ ಎಂ.ಎ. ಓದಬೇಕೇ ಎಂಬ ಸಂದಿಗ್ಧದಲ್ಲಿ ಇದ್ದೇನೆ. ಪಿಯುಸಿ ಇಲ್ಲದೆ ಎಂ.ಎ. ಮಾಡಿದರೆ ನನಗೆ ನೌಕರಿ ಸಿಗಬಹುದೇ?



ನಿಮ್ಮ ಪತ್ರದಿಂದ ನೀವು ಓದಲು ತೆಗೆದುಕೊಂಡ ಶ್ರಮ ಹಾಗೂ ಕಷ್ಟನಷ್ಟಗಳ ಬಗ್ಗೆ ವಿವರವಾಗಿ ತಿಳಿಯಿತು. ಈಗಿನ ನಿಯಮಾವಳಿಗಳ ಪ್ರಕಾರ 10+2+3 ಕ್ರಮದಲ್ಲಿ ಓದಿದವರಿಗೆ ಮಾತ್ರ ಬಿ.ಎಡ್.ಗೆ ಅವಕಾಶವಿದೆ. ಅಷ್ಟೇ ಏಕೆ ಶಾಲಾ ವಿಷಯಗಳನ್ನು ಒಳಗೊಂಡ ಬಿ.ಕಾಂ.ಗೆ ಕೂಡ ಬೆಂಗಳೂರು ವಿ.ವಿ.ಯಲ್ಲಿ ಇನ್ನೂ ಅವಕಾಶ ಕೊಟ್ಟಿಲ್ಲ. ನಿಮ್ಮಂತಹ ಯಾರಾದರೂ ಸರ್ಕಾರಕ್ಕೆ ಅಹವಾಲು ಸಲ್ಲಿಸಿದರೆ, ಸರ್ಕಾರಿ ಗೊತ್ತುವಳಿ ಸ್ವೀಕರಿಸಿ ಇದನ್ನು ಸರಿಪಡಿಸಬಹುದು. ಇನ್ನು ನೀವು ಪಿಯುಸಿ ಕಲಿತ ಕಾಲೇಜಿನಲ್ಲಿ ವಿಚಾರಿಸಿ ಅವಕಾಶ ಇದ್ದಲ್ಲಿ ಉಳಿದ ಮೂರು ವಿಷಯಗಳನ್ನು ಮುಗಿಸಿಕೊಳ್ಳಿ. ಏನೇ ಆದರೂ ಎಂ.ಎ. ಪೂರ್ತಿಗೊಳಿಸುವುದನ್ನು ಬಿಡಬೇಡಿ. ಪಿಯುಸಿ ಇಲ್ಲದೆಯೂ ಎಂ.ಎ. ಕಲಿತ ಅನೇಕರು ಉತ್ತಮ ಉದ್ಯೋಗದಲ್ಲಿ ಇದ್ದಾರೆ. ಅದರಲ್ಲೂ ಅರ್ಥಶಾಸ್ತ್ರಕ್ಕೆ ಇಂದು ಬೇಡಿಕೆ ಇದೆ.

ಸೌಮ್ಯ, ತ್ಯಾಮಗೊಂಡ್ಲು

ನಾನು ಈಗ ಮೊದಲ ಬಿ.ಕಾಂ. ಓದುತ್ತಿದ್ದೇನೆ. ನನಗೆ ಎಸಿಎಸ್ ಮಾಡುವ ಆಸೆ ಇದೆ. ದಯಮಾಡಿ ಈ ಬಗ್ಗೆ ವಿವರ ನೀಡಿ.



ಭಾರತೀಯ ಕಂಪೆನಿ ಸೆಕ್ರೆಟರಿಗಳ ಸಂಸ್ಥೆಯು ಈ ಪರೀಕ್ಷೆಗಳನ್ನು ನಡೆಸುತ್ತಿದೆ. ಬೆಂಗಳೂರು ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಐಸಿಎಸ್‌ಐ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಫೌಂಡೇಷನ್, ಇಂಟರ್ ನಂತರ ಮುಖ್ಯ ಪರೀಕ್ಷೆ ಇರುತ್ತದೆ. ಬಿ.ಕಾಂ. ಕಲಿತವರಿಗೆ ಕೆಲವು ವಿನಾಯಿತಿ ಉಂಟು. ಯಾವುದಕ್ಕೂ ನೀವು ಸಂಸ್ಥೆಯ ವೆಬ್‌ಸೈಟ್ ಮೂಲಕ ಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಪ್ರವೀಣ್ ಶೆಟ್ಟಿ

ನಾನು ಬಿ.ಎಡ್. ರೆಗ್ಯುಲರ್ ಆಗಿ ಕಲಿಯುತ್ತಿದ್ದು, ಎಂ.ಎ. ಪರೀಕ್ಷೆಯನ್ನು ದೂರ ಶಿಕ್ಷಣದಲ್ಲಿ ಓದುತ್ತಿದ್ದೇನೆ. ಹೀಗೆ ಒಂದೇ ಕಾಲದಲ್ಲಿ ಎರಡು ಕೋರ್ಸುಗಳನ್ನು ಮಾಡುವುದರಿಂದ ತೊಂದರೆ ಆಗಬಹುದೇ?

ಇತ್ತೀಚೆಗೆ ಎರಡು ಕೋರ್ಸುಗಳನ್ನು ಒಟ್ಟಿಗೆ ಮಾಡುವುದಕ್ಕೆ ಅವಕಾಶ ನೀಡಿ ಪತ್ರಿಕಾ ಪ್ರಕಟಣೆ ಹೊರಬಿದ್ದಿದೆ. ಅದರ ಮೊದಲೂ ಒಟ್ಟಿಗೆ ಬೇರೆ ಬೇರೆ ಕೋರ್ಸುಗಳನ್ನು ಮಾಡುವವರ ಸಂಖ್ಯೆ ಸಾಕಷ್ಟು ಇತ್ತು. ಹೀಗಾಗಿ ನೀವೂ ಮುಂದುವರಿಯಬಹುದು.

ರಾಜೇಶ್ವರಿ

ನಾನು ಈಗ ಬೆಂಗಳೂರು ವಿ.ವಿ.ಯಲ್ಲಿ ಎಂ.ಎ. ಸೋಷಿಯಾಲಜಿ ದೂರ ಶಿಕ್ಷಣದ ಮೂಲಕ ಮಾಡುತ್ತಿದ್ದೇನೆ. ನನಗೆ ಇನ್ನೂ ಓದಬೇಕೆಂಬ ಆಸೆ ಇದೆ.  ಮುಂದೆ ಯಾವ ಕೋರ್ಸು ಮಾಡಬಹುದು ತಿಳಿಸಿ. ನನಗೆ ಮದುವೆ ಆಗಿರುವುದರಿಂದ ರೆಗ್ಯುಲರ್ ಆಗಿ ಕಲಿಯಲು ಸಾಧ್ಯವಿಲ್ಲ.



ಎಂ.ಎ. ಸೋಷಿಯಾಲಜಿಗೆ ಸಂಬಂಧಿಸಿದಂತೆ ಅನೇಕ ಡಿಪ್ಲೊಮಾ ಕೋರ್ಸುಗಳು ದೂರ ಶಿಕ್ಷಣದಲ್ಲಿ ಲಭ್ಯವಿವೆ. ಅದರಲ್ಲೂ ಇಗ್ನೋದಲ್ಲಿ ಅವಕಾಶಗಳು ಹೆಚ್ಚಾಗಿವೆ. ಇವಲ್ಲದೆ ಸಾಂಪ್ರದಾಯಿಕವಾದ ಎಂ.ಫಿಲ್., ಪಿಎಚ್.ಡಿ.ಗಳೂ ಇದ್ದು ಇವುಗಳ ನಿಯಮಾವಳಿಗಳಲ್ಲಿ ದೂರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಇಲ್ಲ. ಇವಲ್ಲದೆ ಎಂಬಿಎ ಮುಂತಾದ ವಿಷಯಗಳೂ ಉಂಟು. ನಿಮ್ಮ ಆಸಕ್ತಿಯನ್ನು ಅವಲಂಬಿಸಿ ಇನ್ನೂ ಅನೇಕ ಕೋರ್ಸುಗಳು ಲಭ್ಯವಿವೆ.

ಸಿದ್ದು ಆರ್.ಕೆ.

ನಾನು ಬಿ.ಎ. ಮಾಡಬೇಕೆಂದಿದ್ದೇನೆ. ಬಿಜಾಪುರದ ಎಲ್ಲ ಕಾಲೇಜುಗಳು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುತ್ತಿವೆ.  ನಾನು ಸಂಸ್ಥೆಗಳು ನಡೆಸುವ ಕಾಲೇಜುಗಳಲ್ಲಿ ಸೇರಬಯಸಿದ್ದೇನೆ. ಆದರೆ ಇಂತಹ ಕಾಲೇಜುಗಳಿಂದ ಪಡೆದ ಸರ್ಟಿಫಿಕೇಟ್‌ಗಳಿಗೆ ಸರ್ಕಾರಿ ಕಾಲೇಜಿನಿಂದ ಪಡೆದ ಸರ್ಟಿಫಿಕೇಟ್‌ನಷ್ಟು ಬೆಲೆ ಕೊಡುತ್ತಾರೆಯೇ? ಹೊಸದಾಗಿ ಪ್ರಾರಂಭವಾದ ಸಂಸ್ಥಾ ಕಾಲೇಜುಗಳಲ್ಲಿ ಕಲಿಯುಬಹುದೇ?



ನಿಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಂಸ್ಥಾ ಕಾಲೇಜು ಎಂಬುದಕ್ಕೆ ಖಾಸಗಿ ಕಾಲೇಜು ಎಂದು ಭಾವಿಸುತ್ತೇನೆ. ಕಾಲೇಜು ಯಾವುದೇ ಆದರೂ ಪರೀಕ್ಷೆ ನಡೆಸುವುದು ವಿ.ವಿ. ತಾನೇ. ಹೀಗಾಗಿ ಸರ್ಕಾರಿ- ಖಾಸಗಿ ಯಾವುದೇ ಇರಲಿ ನೀವು ಗಳಿಸುವ ಅಂಕಗಳಿಗೆ ಪ್ರಾಶಸ್ತ್ಯ ಸಿಗುತ್ತದೆ.  ಹೊಸದಾಗಿ ಪ್ರಾರಂಭಿಸಲಾದ ಕಾಲೇಜುಗಳಲ್ಲಿ ಅಗತ್ಯ ಸೌಕರ್ಯ, ಗುಣಮಟ್ಟದ ಶಿಕ್ಷಣ ಸಿಗುವಂತಿದ್ದರೆ ಯಾವುದೇ ಬಾಧಕ ಇಲ್ಲ.  ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಖಾಸಗಿ ರಂಗದಲ್ಲಿ ನೌಕರಿಗೆ ಆಯ್ಕೆ ಮಾಡುವಾಗ ಕಾಲೇಜಿನ ಹೆಸರೂ ಪರಿಗಣನೆಗೆ ಬರುವುದುಂಟು.  ಆದರೆ ಇದರಲ್ಲಿ ಸರ್ಕಾರಿ, ಖಾಸಗಿ ಎಂಬುದಕ್ಕಿಂತ ಹೆಚ್ಚಾಗಿ ಕಾಲೇಜಿನ ಪ್ರಸಿದ್ಧಿಗೆ ಮಹತ್ವ ದೊರೆಯುತ್ತದೆ.

ಅಶೋಕ್, ರಾಯಚೂರು

ನಾನು ಬಿ.ಎಸ್ಸಿ. ಕೊನೆಯ ವರ್ಷ ಕಲಿಯುತ್ತಿದ್ದು, ಮುಂದೆ ಐಎಎಸ್ ಮಾಡುವ ಅಪೇಕ್ಷೆ ಹೊಂದಿದ್ದೇನೆ. ಚೆನ್ನಾಗಿ ಓದುತ್ತಿದ್ದೇನೆ. ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ನನ್ನ ಹೆಸರು ಅಶೋಕ್ ಎಂದಿದ್ದು, ಪಿಯುಸಿ ಹಾಗೂ ಪದವಿ ಅಂಕಪಟ್ಟಿಗಳಲ್ಲಿ ಅಶೋಕ್ ಎಸ್. ಧವಳಗಿ ಎಂದು ನಮೂದಾಗಿದೆ. ಇದರಿಂದ ಮುಂದೆ ತೊಂದರೆ ಆಗಬಹುದೇ? ಇದನ್ನು ಹೇಗೆ ಸರಿಪಡಿಸಬಹುದು?



ಎಸ್ಸೆಸ್ಸೆಲ್ಸಿ ಹಾಗೂ ಇತರ ಎಲ್ಲ ಪರೀಕ್ಷೆಗಳ ದಾಖಲೆಗಳಲ್ಲೂ ಒಂದೇ ರೀತಿ ಹೆಸರು ಇರಬೇಕಾದದ್ದು ಅಪೇಕ್ಷಣೀಯ. ಇಲ್ಲವಾದರೆ ಇದು ಅನೇಕ ಗೊಂದಲಗಳಿಗೆ ಕಾರಣ ಆಗಬಹುದು. ಆದ್ದರಿಂದ ನೀವು ಆದಷ್ಟು ಜಾಗ್ರತೆಯಿಂದ ಇದನ್ನು ಸರಿಪಡಿಸಿಕೊಳ್ಳಿ. ಇತ್ತೀಚೆಗೆ ಹೆಸರು ಮುಂತಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸರ್ಟಿಫಿಕೇಟ್ ನೀಡುವ ಸಂಸ್ಥೆಗಳಿಗೆ ಆದೇಶ ನೀಡಲು ಕೋರ್ಟಿನ ಅನುಮತಿ ಬೇಕಾಗುತ್ತದೆ.  ಆದ್ದರಿಂದ ನೀವು ಯಾರಾದರೂ ವಕೀಲರ ನೆರವು ಪಡೆದುಕೊಂಡು ಮುಂದುವರಿಯಿರಿ.

ಮನು, ಮಂಡ್ಯ

ನಾನು ಬಿ.ಎ. ಮುಗಿಸಿ ಒಂದು ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿ.ಎ.ವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮುಗಿಸಿದ್ದರಿಂದ ನನಗೆ ಇಂಗ್ಲಿಷ್ ಓದಲು, ಬರೆಯಲು ಯಾವುದೇ ಕಷ್ಟ ಇಲ್ಲದಿದ್ದರೂ ಮಾತನಾಡಲು ತುಂಬಾ ಕಷ್ಟವಾಗಿದೆ. ಆದರೂ ಕೆ.ಎ.ಎಸ್. ಮಾಡಬೇಕೆಂದಿದ್ದೇನೆ. ದಯವಿಟ್ಟು ಏನಾದರೂ ಉಪಾಯ ತಿಳಿಸಿ.



ಕೆ.ಎ.ಎಸ್. ಪರೀಕ್ಷೆ ನೀವು ಆರಿಸಿಕೊಳ್ಳುವ ವಿಷಯಗಳನ್ನು ಅವಲಂಬಿಸುತ್ತದೆ. ಇದನ್ನು ಕನ್ನಡದಲ್ಲೂ ಬರೆಯಲು ಅವಕಾಶ ಇದೆ.  ಹೀಗಿದ್ದರೂ ಇಂಗ್ಲಿಷ್ ಭಾಷೆಯ ಮೇಲೆ ಸಾಕಷ್ಟು ಹಿಡಿತವಿದ್ದರೆ ವ್ಯವಹರಿಸಲು ಖಂಡಿತಾ ಸಹಾಯ ಆಗುತ್ತದೆ. ನೀವು ಯಾವುದಾದರೂ ಸ್ಪೋಕನ್ ಇಂಗ್ಲಿಷ್ ತರಗತಿಗೆ ಸೇರಿಕೊಳ್ಳಬಹುದು. ರೇಡಿಯೊ, ದೂರದರ್ಶನಗಳಲ್ಲಿ ಪ್ರಸಾರವಾಗುವ ವಾರ್ತೆ ಮುಂತಾದ ಕಾರ್ಯಕ್ರಮ ವೀಕ್ಷಣೆ ಅನುಕೂಲಕರ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಸಂಕೋಚವಿಲ್ಲದೆ ಇಂಗ್ಲಿಷ್‌ನಲ್ಲಿ ಧೈರ್ಯ ವಹಿಸಿ ಮಾತನಾಡಿ. ಭಾಷೆ ತಾನಾಗಿ ರೂಢಿಯಾಗುತ್ತದೆ.

ಜಗದೀಶ್ ಸಿ.ಆರ್.

ನಾನು ವಯಸ್ಸಿನ ಆಧಾರದ ಮೇಲೆ ಪಿಯುಸಿ ಇಲ್ಲದೆ ನೇರವಾಗಿ ಬಿ.ಎ. ಮಾಡುತ್ತಿದ್ದೇನೆ. ಇದರಿಂದ ಏನೂ ತೊಂದರೆ ಇಲ್ಲವೇ?

ದೂರ ಶಿಕ್ಷಣದಲ್ಲಿ ಪಡೆದ ಪದವಿಯನ್ನು ರೆಗ್ಯುಲರ್ ಆಗಿ ಪಡೆದ ಪದವಿಯಂತೆಯೇ ಪರಿಗಣಿಸುತ್ತಾರೆ. ಆದರೆ ಕೆಲವು ವೇಳೆ ನೌಕರಿ ನೀಡುವವರು ಅಥವಾ ಬಿ.ಎಡ್. ಮುಂತಾದ ಕೋರ್ಸುಗಳಿಗೆ ಆಯ್ಕೆ ಮಾಡುವಾಗ 10+2+3 ಈ ಕ್ರಮದಲ್ಲಿ ಕಲಿತವರಿಗೆ ಅವಕಾಶ ಎಂಬ ಷರತ್ತು ಇದ್ದಲ್ಲಿ ಮಾತ್ರ ತೊಂದರೆ ಆಗಬಹುದು. ಆದರೆ ದೂರ ಶಿಕ್ಷಣ ಪಡೆದು ಸಾವಿರಾರು ಜನ ಉತ್ತಮ ನೌಕರಿಯಲ್ಲಿ ಇದ್ದಾರೆ.

ಕೆ.ಎಸ್.ಎಸ್. ಗೌಡ

ನಾನು ಬಿ.ಕಾಂ. ಮುಗಿಸಿದ್ದೇನೆ.  ಮುಂದೆ ಎಂ.ಕಾಂ. ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ. ಎಂ.ಕಾಂ.ನಲ್ಲಿ ಯಾವ ವಿಷಯ ಆರಿಸಿಕೊಳ್ಳಬೇಕು. ಅಕೌಂಟೆನ್ಸಿ ಅಥವಾ ಫೈನಾನ್ಸ್ ಇವೆರಡರಲ್ಲಿ ಯಾವುದು ಉತ್ತಮ?



ನೀವು ತಿಳಿಸಿರುವ ಎರಡು ವಿಷಯಗಳೂ ಉತ್ತಮವೇ ಆಗಿದ್ದು ಎರಡಕ್ಕೂ ಸಮಾನವಾದ ಬೇಡಿಕೆ ಇದೆ. ಆದರೆ ಕೇವಲ ವಿಷಯಕ್ಕಿಂತಲೂ ಮಹತ್ವವಾದದ್ದು ಈ ವಿಷಯಗಳಲ್ಲಿ ನಿಮ್ಮ ಸಾಧನೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನೌಕರಿ ನೀಡುವವರು ಅತ್ಯುತ್ತಮ ಅಭ್ಯರ್ಥಿಯನ್ನು ಆರಿಸಿಕೊಳ್ಳಲು ಅಪೇಕ್ಷೆ ಹೊಂದಿರುತ್ತಾರೆ. ಆದ್ದರಿಂದ ನೀವು ನಿಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಉತ್ತಮ ಸಾಧನೆ ಮಾಡುವತ್ತ ಗಮನ ನೀಡಿ.



ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ, ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.com 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.