ಗುರುವಾರ , ಆಗಸ್ಟ್ 22, 2019
27 °C

ಪ್ರಶ್ನೆ - ಉತ್ತರ

Published:
Updated:

ಸುನೀತ ರಾಥೋಡ ಬಿ.ಎಚ್.

ನಾನು ಅಂತಿಮ ವರ್ಷದ ಬಿ.ಎ. ಪದವಿ ಬರೆದಿದ್ದೇನೆ. ನಂತರ ಎಂ.ಎ. ಜರ್ನಲಿಸಂ ಮಾಡಬೇಕೆಂದಿದ್ದೇನೆ. ಇದರಿಂದ ಮುಂದೆ ಉಪಯೋಗ ಇದೆಯಾ? ನಾನು ಪಿ.ಯು.ಸಿ.ಯಲ್ಲಿ ಶೇ 69 ಅಂಕ ಗಳಿಸಿದ್ದು, ಕಂಪ್ಯೂಟರ್ ಗೊತ್ತಿದೆ. ಡಿ.ಟಿ.ಪಿ.ಗೂ ಹೋಗುತ್ತಿದೇನೆ. ಮುಂದೆ ಏನು ಮಾಡಿದರೆ ಭವಿಷ್ಯವಿದೆ?-ನೀವು ಭವಿಷ್ಯದಲ್ಲಿ ಏನು ಮಾಡಬೇಕು, ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆ ಎಂಬುದರ ಮೇಲೆ ಉತ್ತರ ಅವಲಂಬಿಸಿದೆ. ನೀವು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಟ್ಟರೆ ಅದಕ್ಕೆ ಬೇಕಾದ ರಿಪೋರ್ಟಿಂಗ್, ಎಡಿಟಿಂಗ್, ಬರವಣಿಗೆ ಮುಂತಾದವುಗಳಲ್ಲಿ ಪ್ರಾವೀಣ್ಯ ಹೊಂದಿರಬೇಕಾಗುತ್ತದೆ. ದೃಶ್ಯ ಮಾಧ್ಯಮ ಇದಕ್ಕಿಂತ ಭಿನ್ನವಾಗಿರುತ್ತದೆ. ಕಚೇರಿಯಲ್ಲಿ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡಲು ಸಿದ್ಧ ಇರಬೇಕಾಗುತ್ತದೆ. ಇನ್ನು ಕಂಪ್ಯೂಟರ್ ಕಲಿಕೆಯಿಂದ ಡೇಟಾ ಎಂಟ್ರಿ, ಡಿ.ಟಿ.ಪಿ., ಲೆಕ್ಕಪತ್ರಗಳು, ಶಾಲಾ ಶಿಕ್ಷಕಿ ಇತ್ಯಾದಿಗಳನ್ನು ನಿರ್ವಹಿಸಬಹುದು. ನಿಮಗೆ ಎಲ್ಲಿ ಕೆಲಸ ಮಾಡಲು ಇಷ್ಟವೋ ಅದನ್ನು ಆರಿಸಿಕೊಳ್ಳಿ.

ಕುಸುಮಾ ಓಬಳಪ್ಪ

ನಮ್ಮ ಮನೆಯಲ್ಲಿ ಚಿಕ್ಕ ವಯಸ್ಸಿನ ಮಹಿಳೆಯೊಬ್ಬರಿದ್ದಾರೆ. ಅವರು ಒಂಬತ್ತನೇ ತರಗತಿಯವರೆಗೆ ಕಲಿತಿದ್ದು ನಾನು ಅವರನ್ನು ಎಸ್.ಎಸ್.ಎಲ್.ಸಿ. ಪೂರ್ತಿ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇನೆ. ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು ಜೀವನ ನಿರ್ವಹಣೆಗೇ ಅವರ ಸಮಯ ಹೋಗುತ್ತಿದೆ. ಅವರು ಎಸ್.ಎಸ್.ಎಲ್.ಸಿ.ಗೆ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ ತಿಳಿಸಿ.-ನೀವು ಮಾಡುತ್ತಿರುವ ಕೆಲಸ ಸ್ತುತ್ಯರ್ಹ. ಯಾವುದಾದರೂ ಮಾನ್ಯತೆ ಪಡೆದ ಪ್ರೌಢಶಾಲೆಯ ಮೂಲಕ ನೋಂದಣಿ ಮಾಡಿಸಿಕೊಂಡು, ಖಾಸಗಿಯಾಗಿ ಎಸ್.ಎಸ್. ಎಲ್.ಸಿ. ಪರೀಕ್ಷೆ ಕಟ್ಟಬಹುದು. ಅವರು ಅಲ್ಪಸ್ವಲ್ಪ ಬಿಡುವು ಮಾಡಿಕೊಂಡು, ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ನೆರವು ಪಡೆದು ಹಾಗೂ ನಿಮ್ಮಂತಹವರ ಸಹಕಾರದಿಂದ ಪರೀಕ್ಷೆಗೆ ತಯಾರಿ ನಡೆಸಬಹುದು.

ಸಿದ್ಧರಾಮ್ ವಿ. ಮಲ್ಲಾಡ್ ಬಿ.ಕೆ., ಬಿಜಾಪುರ

ಕನ್ನಡದಲ್ಲಿ ಎಂ.ಎ. ಮಾಡಿದ್ದೇನೆ. ಪದವಿ ಕಾಲೇಜು ಉಪನ್ಯಾಸಕನಾಗಲು ಏನು ಮಾಡಬೇಕು?-ಸ್ನಾತಕೋತ್ತರ ಪದವೀಧರರು ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಆಯ್ಕೆಯಾಗಲು ಬೇಕಾದ ಅರ್ಹತೆ ಸೆಟ್ ಅಥವಾ ನೆಟ್‌ನಲ್ಲಿ ಉತ್ತೀರ್ಣತೆ. ಇದಲ್ಲದೆ ಮುಂದೆ ಉತ್ತಮ ಸ್ಥಾನಮಾನ ಗಳಿಸಲು ಪಿಎಚ್.ಡಿ. ಅಗತ್ಯ. ಕೆಲವು ಅನುದಾನರಹಿತ ಖಾಸಗಿ ಕಾಲೇಜುಗಳಲ್ಲಿ ಎಂ.ಎ. ಮಾಡಿದವರಿಗೂ ಈ ಹುದ್ದೆ ದೊರಕಬಹುದು.

ರಕ್ಷಾ ದಿವ್ಯ

ನಾನು 2006ರಲ್ಲಿ ಎಸ್.ಎಸ್.ಎಲ್.ಸಿ. ಕಟ್ಟಿದ್ದು 2007ರಲ್ಲಿ ಉತ್ತೀರ್ಣಳಾದೆ. ಮುಂದೆ 2009ರಲ್ಲಿ ಪಿ.ಯು.ಸಿ. ನಂತರ 2012ರಲ್ಲಿ ಬಿ.ಕಾಂ. ಮುಗಿಸಿದ್ದೇನೆ. ನನಗೆ ಕೆಲಸ ಮಾಡಲು ಆಸಕ್ತಿ ಇಲ್ಲದೆ ಒಂದು ವರ್ಷ ವ್ಯರ್ಥವಾಯಿತು. ಈಗ ನಾನು ಕೆಲಸ ಮಾಡಲೇ ಬೇಕಾಗಿದೆ.  ನನ್ನ ವಿದ್ಯಾರ್ಹತೆಗೆ ಕೆಲಸ ಸಿಗುತ್ತಿಲ್ಲ. ಸಿ.ಎ. ಮಾಡಿದವರ ಬಳಿ ತರಬೇತಿ ಪಡೆಯಲು ಅವಕಾಶ ಸಿಗುತ್ತಿಲ್ಲ. ಸಲಹೆ ನೀಡಿ.-ನೀವು ಬಿ.ಕಾಂ. ಮುಗಿಸಿದ್ದೀರಿ.  ನಿಮಗೆ ಒಂದು ಗೌರವಾನ್ವಿತ ಕೆಲಸ ಸಿಗುವುದು ಕಷ್ಟವೇನಿಲ್ಲ. ಈ ಬಗ್ಗೆ ಮನಸ್ಸಿಟ್ಟು ಪ್ರಯತ್ನ ನಡೆಸಿ.  ಯಾವುದೇ ಖಾಸಗಿ ಸಂಸ್ಥೆಯಲ್ಲಿ ಸಂಬಳ ಕಡಿಮೆಯಾದರೂ ಚಿಂತೆ ಇಲ್ಲ ಸೇರಿಕೊಳ್ಳಿ. ನೀವು ಯಾರಾದರೂ ಸಿ.ಎ., ತೆರಿಗೆ ಸಲಹೆಗಾರರು ಮುಂತಾದವರ ಕಡೆ ಗುಮಾಸ್ತರಾಗಿ ಸೇರಬಹುದು. ಇದಲ್ಲದೆ ನಿಮಗೆ ಕಂಪ್ಯೂಟರ್ ಜ್ಞಾನ ಇದ್ದಲ್ಲಿ ಉತ್ತಮ ಅವಕಾಶಗಳಿವೆ. ಇಂತಹ ಕೆಲಸವೇ ಆಗಬೇಕೆಂದು ಸುಮ್ಮನೇ ಇರದೆ, ಯಾವುದಾದರೂ ಒಂದು ಕಡೆ ಸೇರಲು ಪ್ರಯತ್ನಿಸಿ. ಸ್ವಲ್ಪ ಅನುಭವ ಗಳಿಸಿಕೊಂಡು ಮುಂದೆ ಬೇರೆ ಕಡೆ ಪ್ರಯತ್ನಿಸಬಹುದು.

ನರಸಿಂಹಮೂರ್ತಿ ಆರ್., ದೇವನಹಳ್ಳಿ

2007ರಲ್ಲಿ ಪಿ.ಯು.ಸಿ. ಮುಗಿದಿದ್ದು ಐದು ವರ್ಷದ ಎಲ್.ಎಲ್.ಬಿ.ಗೆ ಸೇರಿದೆ. ಆರ್ಥಿಕ ಸಮಸ್ಯೆಯಿಂದ ಎರಡು ವರ್ಷದ ನಂತರ ಕೆಲಸಕ್ಕೆ ಸೇರಿ ಮುಂದೆ ಬೇರೆ ಕಾಲೇಜಿನಲ್ಲಿ ಓದು ಮುಂದುವರಿಸಿದೆ. ಈಗ ನನಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ. ಪದವಿ ಪಡೆಯುವ ಅಪೇಕ್ಷೆ ಇದೆ. ನನ್ನ ವಯಸ್ಸು 25. ಸಲಹೆ ನೀಡಿ.-ನೀವು ಈಗಾಗಲೇ ಪಿ.ಯು.ಸಿ. ಮುಗಿಸಿದ್ದೀರಿ. ದೂರಶಿಕ್ಷಣದ ಮೂಲಕ ನಿಮಗೆ ಇಷ್ಟವಾದ ವಿಷಯಗಳನ್ನು ಆರಿಸಿಕೊಂಡು ಪದವಿ ಪಡೆಯಬಹುದು. ಪದವಿಗಳಲ್ಲೂ ಆಯ್ಕೆಗೆ ಅವಕಾಶಗಳಿವೆ. ಮುಂದೆ ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದು.

ಪಿ.ಆರ್.ಇಳಕಲ್ಲು, ಸೋರೆಗಾಂವ್

ನಾನು ಬಿ.ಕಾಂ. ಮೊದಲ ವರ್ಷದವರೆಗೆ ಓದಿದ್ದೇನೆ. ಮುಂದೆ ಓದಲಾಗಲಿಲ್ಲ. ಈಗ ಪದವಿ ಗಳಿಸಿದವರಿಗೆ ಸರ್ಕಾರಿ ನೌಕರಿ ದೊರಕುತ್ತದೆ.  ನನಗೆ ಈಗ 34 ವರ್ಷ. ಓದು ಮುಂದುವರಿಸಿ ನೌಕರಿಗೆ ಪ್ರಯತ್ನಿಸುವುದು ಉತ್ತಮವೋ ಅಥವಾ ಬ್ಯಾಂಕುಗಳಲ್ಲಿ ಸಾಲ ಪಡೆದು ವ್ಯಾಪಾರ ಮಾಡುವುದು ಉತ್ತಮವೋ? ಯಾವ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಇದೆ?-ಈಗ ನೀವು ಶಿಕ್ಷಣ ಮುಂದುವರಿಸಿ ಪದವಿ ಪಡೆದರೂ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ನೌಕರಿ ಪಡೆಯುವುದು ಕಷ್ಟ. ಆದ್ದರಿಂದ ನೀವು ಎರಡನೆಯ ಆಯ್ಕೆಯಾದ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಇದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಬೇಕಾಗುತ್ತದೆ.  ಯಾವ ವೃತ್ತಿಯಲ್ಲಿ ನಿಮಗೆ ಅನುಭವ, ಆಸಕ್ತಿ ಇದೆ ಎಂಬುದನ್ನು ನೋಡಿಕೊಂಡು ಮುಂದುವರಿಯಿರಿ.  ಬೇಕಾದರೆ ಯಾವುದಾದರೂ ಅಲ್ಪಾವಧಿ ವೃತ್ತಿ ತರಬೇತಿ ಸಹಾ ಪಡೆಯಬಹುದು. ನೀವು ವ್ಯಾಪಾರ ಪ್ರಾರಂಭಿಸಲು ಬಯಸುವ ಸ್ಥಳ ಮುಂತಾದ ವಿವರಗಳನ್ನು ನಿರ್ಧರಿಸಿಕೊಳ್ಳಿ. ಯಾವುದೇ ಬ್ಯಾಂಕಿಗೆ ಸಾಲ ಕೋರಿ ಒಂದು ಪ್ರಾಜೆಕ್ಟ್ ವರದಿ ಸಲ್ಲಿಸಬೇಕಾಗುತ್ತದೆ. ಇದರ ಆಧಾರದ ಮೇಲೆ ನಿಮಗೆ ಸಾಲ ಸಿಗಬಹುದು. ಬ್ಯಾಂಕಿನವರು ಸಾಲಕ್ಕೆ ಆಧಾರ ಮತ್ತು ಕೆಲವರ ಜಾಮೀನು ಸಹಾ ಕೇಳಬಹುದು.

ಮಡಿವಾಳಪ್ಪ ವೈ.ಡಿ.

ನಾನು ಪಿ.ಯು.ಸಿ. ಕಲಾ ವಿಭಾಗದಲ್ಲಿ ಶೇ 56 ಅಂಕ ಪಡೆದಿದ್ದೇನೆ. ಮುಂದೆ ಬಿ.ಎ. ಓದಬೇಕೆಂಬ ಆಸೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಈಗ ಖಾಸಗಿ ಉದ್ಯೋಗದಲ್ಲಿದ್ದೇನೆ. ಈ ಸಂಸ್ಥೆಯಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಕೆಲಸ ಮಾಡಬೇಕಾಗುತ್ತದೆ.  ಮುಂದೆ ಓದಲು ಏನು ಮಾಡಬೇಕು?-ನೀವು ಇರುವ ಊರಿನಲ್ಲಿ ಅಥವಾ ಸಮೀಪದಲ್ಲಿ ಸಂಜೆ ಕಾಲೇಜು ಇದ್ದಲ್ಲಿ ನೀವು ಅಲ್ಲಿ ಸೇರಿಕೊಂಡು ಓದು ಮುಂದುವರಿಸಬಹುದು.  ಇಲ್ಲವಾದರೆ ದೂರಶಿಕ್ಷಣ ನಿಮ್ಮಂತಹವರ ಸಹಾಯಕ್ಕೆ ಬರುತ್ತದೆ. ಯಾವುದಾದರೂ ಮುಕ್ತ ವಿ.ವಿ.ಯಲ್ಲಿ ನಿಮಗೆ ಬೇಕಾದ ಕೋರ್ಸಿಗೆ ನೋಂದಣಿ ಮಾಡಿಸಿಕೊಳ್ಳಿ. ನಮ್ಮ ಹಾಗೆ ಅನೇಕರು ಕಷ್ಟದ ಪರಿಸ್ಥಿತಿಯಲ್ಲಿ ಓದು ಮುಂದುವರಿಸಿ ಮೇಲೆ ಬಂದಿದ್ದಾರೆ.

ವಿನಯ್ ಸಿ.ಎಸ್.

ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಶೇ 81.6 ಹಾಗೂ ಪಿ.ಯು.ಸಿ.ಯಲ್ಲಿ ಶೇ 92.6 ಅಂಕ ಗಳಿಸಿದ್ದೇನೆ. ಸ್ವ ಇಚ್ಛೆಯಂತೆ ಬಿ.ಕಾಂ. ಆಯ್ದುಕೊಂಡಿದ್ದೇನೆ. ಮುಂದೆ ಸಿ.ಎ., ಸಿ.ಎಸ್., ಐ.ಎ.ಎಸ್., ಕೆ.ಎ.ಎಸ್. ಮಾಡಲು ನನ್ನ ಆರ್ಥಿಕ ಸ್ಥಿತಿ ಮುಳುವಾಗಿದೆ. ನಾನು ಕುಬ್ಜನಾಗಿರುವುದರಿಂದ ಸೈನಿಕನಾಗಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಇಂಗ್ಲಿಷ್ ಮಾಧ್ಯಮಕ್ಕೆ ಒಗ್ಗುವುದು ಕಷ್ಟವಾಗಿದೆ. ಕುಟುಂಬದ ಹಿನ್ನೆಲೆಯಿಂದ ಮಾನಸಿಕವಾಗಿ ಸಂದಿಗ್ಧನಾಗಿದ್ದೇನೆ. ಹೇಗಾದರೂ ನನ್ನ ಆಸೆಗೆ ಜೀವ ತುಂಬುವ ಉತ್ತರ ನೀಡುವಿರಾ?-ನೀವು ಓದಿನಲ್ಲಿ ಮುಂದಿದ್ದೀರಿ. ಬೇರೆ ಬೇರೆ ಆಯ್ಕೆಗಳ ಬಗ್ಗೆ ಸಹಾ ನಿಮಗೆ ತಿಳಿವಳಿಕೆ ಚೆನ್ನಾಗಿದೆ. ಆದರೆ ಆರ್ಥಿಕ ಪರಿಸ್ಥಿತಿ, ಕುಬ್ಜತೆ, ಕನ್ನಡ ಮಾಧ್ಯಮ ಮುಂತಾದವು ನಿಮ್ಮ ಆಸೆಗಳ ಈಡೇರಿಕೆಗೆ ಅಡ್ಡಿಯಾಗಿವೆ ಎಂಬ ಭಾವನೆ ನಿಮಗಿದೆ. ನೀವು ಮೊದಲು ಮಾಡಬೇಕಾದ ಕೆಲಸ ನಿಮ್ಮ ಮನಸ್ಸಿನಲ್ಲಿರುವ ಕೀಳರಿಮೆಯನ್ನು ತುಳಿದು, ಬದುಕನ್ನು ಧೈರ್ಯವಾಗಿ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು.  ಜಗತ್ತಿನಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿಗಳು ಮತ್ತು ಇತರ ಅನೇಕರು ಕುಳ್ಳರಾಗಿದ್ದರೂ ಅವರ ಸಾಧನೆ ಅಪಾರ. ಹಣಕಾಸಿನ ಮುಗ್ಗಟ್ಟಿನಿಂದ ಬಿಡಿಸಿಕೊಂಡು ಎಷ್ಟು ಜನ ಮೇಲೆ ಬಂದಿಲ್ಲ. ಮೊದಲು ಕೆಲ ಕಾಲ ಕಷ್ಟ ಎನಿಸಿದರೂ ಮುಂದೆ ಇಂಗ್ಲಿಷ್‌ಗೆ ಹೊಂದಿಕೊಳ್ಳುವುದು ಅಸಾಧ್ಯವೇನಲ್ಲ. ನಿಮ್ಮಂತಹವರಿಗೆ ಸಹಾಯ ನೀಡುವ ಅನೇಕ ಸಂಸ್ಥೆಗಳಿವೆ. ಖಾಸಗಿ ಜನರಿದ್ದಾರೆ. ಅಂತಹ ಸಹಾಯ ಪಡೆದುಕೊಂಡು ಬದುಕನ್ನು ಎದುರಿಸಿ ಯಶಸ್ವಿಯಾಗಿ. ಪ್ರಾಮಾಣಿಕ ಪ್ರಯತ್ನಕ್ಕೆ ಎಂದಿಗೂ ಸೋಲಿಲ್ಲ. 

ರಕ್ಷಿತಾ ಕೆ.ಸಿ. ರಾಮನಗರ

ನಾನು ದ್ವಿತೀಯ ಪಿ.ಯು.ಸಿ.ಯನ್ನು ವಾಣಿಜ್ಯ ವಿಭಾಗದಲ್ಲಿ ಮುಗಿಸಿದ್ದು 513 ಅಂಕಗಳನ್ನು ಗಳಿಸಿದ್ದೇನೆ.  ಮುಂದಿನ ವ್ಯಾಸಂಗದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ನನಗೆ ಬಿ.ಸಿ.ಎ. ಮತ್ತು ಬಿ.ಕಾಂ. ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಬಗ್ಗೆ ಗೊಂದಲವಿದ್ದು ಮುಂದೆ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದೇನೆ. ಇನ್ನೂ ಯಾವುದಾದರೂ ಉತ್ತಮ ಕೋರ್ಸುಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ಕೋರುತ್ತೇನೆ.

ಬಿ.ಸಿ.ಎ. ಮತ್ತು ಬಿ.ಕಾಂ. ಎರಡೂ ಉತ್ತಮ ಕೋರ್ಸುಗಳು. ಇವು ಮುಂದೆ ಎಂ.ಸಿ.ಎ., ಎಂ.ಕಾಂ., ಹಾಗೂ ಇನ್ನಿತರ ಕೋರ್ಸುಗಳಿಗೆ ಹಾದಿಯಾಗಲಿದ್ದು ಉತ್ತಮ ನೌಕರಿ ದೊರಕುವ ಸಾಧ್ಯತೆ ಇದೆ.  ನಿಮ್ಮ ಆಸಕ್ತಿ ನೋಡಿಕೊಂಡು ಮುಂದುವರಿಯಿರಿ. ಈಗಿನ ಕಾಲದಲ್ಲಿ ಖಾಸಗಿ ರಂಗದಲ್ಲಿ ಹೆಚ್ಚಿನ ಅವಕಾಶಗಳಿದ್ದು, ಸರ್ಕಾರಿ ನೌಕರಿಯನ್ನೇ ನೆಚ್ಚಿಕೊಳ್ಳುವ ಅಗತ್ಯ ಇಲ್ಲ. ಅದು ಸಿಕ್ಕಿದರೆ ಒಳ್ಳೆಯದು ಅಷ್ಟೆ. ಪಿ.ಯು.ಸಿ. ಕಲಿತವರಿಗೆ ಬೇಕಾದಷ್ಟು ಕೋರ್ಸುಗಳು ಲಭ್ಯವಿದ್ದು, ಪ್ರತಿಯೊಂದು ಬೇರೆ ಬೇರೆ ವೃತ್ತಿರಂಗಗಳಲ್ಲಿ ಕೆಲಸ ಮಾಡುವ ಪರಿಣತಿ ಒದಗಿಸುತ್ತವೆ. ಸದ್ಯಕೆ ನೀವು ಪದವಿಗೆ ಓದುವುದು ವಿಹಿತವೆಂದು ನನ್ನ ಭಾವನೆ.

ಸಿದ್ದಣ್ಣ ಸಜ್ಜನ, ಬಿಜಾಪುರ

ನಾನು ಇದೀಗ ಬಿ.ಎ., ನಾಲ್ಕನೇ ಸೆಮೆಸ್ಟರನ್ನು ಬೆಳಾಗವಿ ರಾಣಿ ಚೆನ್ನಮ್ಮ ವಿವಿಯಿಂದ ಮುಗಿಸಿದ್ದೇನೆ.  ನಾನು ಈಗ ಪೋಲಿಸ್ ಹುದ್ದೆಗೆ ನೇಮಕವಾಗಿದ್ದೇನೆ.  ಮುಂದೆ ನನಗೆ ಬಿ.ಎ. ಮೂರನೇ ವರ್ಷವನ್ನು ದೂರ ಶಿಕ್ಷಣ ಅಥವ ರೆಗ್ಯೂಲರ್ ಇವೆರಡರಲ್ಲಿ ಯಾವುದರಲ್ಲಿ ಮುಂದುವರಿಸಿದರೆ ಅನುಕೂಲ ತಿಳಿಸಿ. ಕೆಲವರು ಹೇಳುವ ಪ್ರಕಾರ ಇದೇ ಸೆಮೆಸ್ಟರ್‌ನಲ್ಲಿ ಮುಂದುವರೆದರೆ, ಮುಂದೆ ಬೇರೆ ಹುದ್ದೆಗೆ ಪದವಿ ಆಧಾರದ ಮೇಲೆ ಅರ್ಜಿ ಸಲ್ಲಿಸಿದರೆ ಅದು ವಿಚಾರಣೆಗೆ ಒಳಪಡುತ್ತದೆ ಎಂದು ಹೇಳುತ್ತಿದ್ದಾರೆ.  ದೂರ  ಶಿಕ್ಷಣ ನಮ್ಮ ವಿವಿಯಲ್ಲಿ ಮಾಡಲು ಬರುವುದಿಲ್ಲ ಎಂದು ಕೆಲವರು ಹೇಳುತ್ತಿರುವುದರಿಂದ ನಾನು ಧಾರವಾಡದಲ್ಲಿ ಶಿಕ್ಷಣ ಮುಂದುವರಿಸ ಬಯಸಿದ್ದೇನೆ.  ನಾನು ಆರಿಸಿಕೊಂಡಿರುವ ಇಂಗ್ಲೀಷು, ಇತಿಹಾಸ, ರಾಜ್ಯಶಾಸ್ತ್ರ ಅಲ್ಲವೆಯೇ ?  ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಯಾವ ವಿವಿಯ ಪದವಿ ಎಂದು ನಮೂದಿಸಬೇಕು ?

ನಿಮ್ಮ ಅನೇಕ ಅನುಮಾನಗಳನ್ನು ಪರಿಹರಿಸಲು ಅಸಾಧ್ಯ ಎಂದೇನೂ ಅನಿಸುವುದಿಲ್ಲ. ಮೊದಲಿಗೆ ನೀವು ಶಿಕ್ಷಣ ಮುಂದುವರಿಸುವ ಬಗ್ಗೆ ನಿಮ್ಮ ಇಲಾಖೆಯಲ್ಲಿ ಸಹೃದಯ ಹಿರಿಯ ಅಧಿಕಾರಿಗಳನ್ನು ವಿಚಾರಿಸಿ ಸ್ಪಷ್ಟ ಉತ್ತರ ಪಡೆದುಕೊಳ್ಳಿ. ನಿಮ್ಮ ಕಾಂಬಿನೇಷನ್ ಧಾರವಾಡದಲ್ಲೂ ಇದ್ದೇ ಇರುತ್ತದೆ. ಯಾವುದಕ್ಕೂ ವೆಬ್‌ಸೈಟ್ ಮೂಲಕ ಅನುಮಾನ ಪರಿಹರಿಸಿ ಕೊಳ್ಳಿ. ನಿಮಗೆ ಪದವಿ ಪತ್ರವನ್ನು ಯಾವ ವಿ.ವಿ. ನೀಡುತ್ತಿದೆಯೋ, ಅದನ್ನು ನೀವು ನಮೂದಿಸಬೇಕಾಗುತ್ತದೆ. ಆದರೆ ಅಂಕಪಟ್ಟಿಗಳನ್ನು ವಿವರವಾಗಿ ನೀಡಬೇಕಾಗುತ್ತದೆ.

ಸಿದ್ದೇಶ ಜಿ.ಡಿ.

ನಾನು ಮೊದಲ ಬಿ.ಕಾಂ. ಓದುತ್ತಿದ್ದೇನೆ. ಪಿ.ಯು.ಸಿ. ಕಾಮರ್ಸ್‌ನಲ್ಲಿ 474 ಅಂಕಗಳು ಬಂದಿವೆ.  ಬಿ.ಕಾಂ. ಆದ ಮೇಲೆ ಸಿಎ ಮಾಡಬೇಕೆಂದಿದ್ದೇನೆ. ಅದಕ್ಕೆ ಎಷ್ಟು ಪರ್ಸಂಟೇಜ್ ತೆಗೆಯಬೇಕು? ಯಾವುದಾದರೂ ಕೆಲಸ ಇದ್ದರೆ ತಿಳಿಸಿ.

ಸಿ.ಎ. ಒಂದು ಸ್ವತಂತ್ರ ಸಂಸ್ಥೆ ನಡೆಸುವ ಪರೀಕ್ಷೆಯಾಗಿದ್ದು, ಅದನ್ನು ಮಾಡಲು ಬುದ್ಧಿವಂತಿಕೆ ಹಾಗೂ ಶ್ರಮ ಎರಡೂ ಬೇಕು. ಪಿ.ಯು.ಸಿ. ಆದವರು ಮೂರು ಹಂತಗಳಲ್ಲಿ ಈ ಪರೀಕ್ಷೆ ಬರೆಯಬಹುದು. ಬಿ.ಕಾಂ.ನವರಿಗೆ ಕೆಲವು ವಿನಾಯಿತಿಗಳಿವೆ. ಜೊತೆಗೆ ಹಿರಿಯ ಸಿ.ಎ. ಬಳಿ ಮೂರು ವರ್ಷ ವೃತ್ತಿ ಕಲಿಯಬೇಕಾಗುತ್ತದೆ. ಉದ್ಯೋಗ ಮಾರ್ಗದರ್ಶಿ ಮುಂತಾದ ಪತ್ರಿಕಾ ಪ್ರಕಟಣೆಗಳಿಂದ ಉದ್ಯೋಗದ ಬಗ್ಗೆ ಮಾಹಿತಿ ದೊರಕುತ್ತದೆ. ನೌಕರಿಯನ್ನು ಮಾಡಲೇಬೇಕಾದ ಅಗತ್ಯ ಇಲ್ಲದಿದ್ದಲ್ಲಿ ಶಿಕ್ಷಣ ಮುಂದುವರಿಸುವುದು ಉತ್ತಮ.

ಲಕ್ಷ್ಮಿ ಆರ್. ಹೆಬ್ಬಾಳ

ನಾನು ಬಿ.ಎ. ನಾಲ್ಕು ಸೆಮಿಸ್ಟರ್ ಬರೆದಿದ್ದು ಮದುವೆಯಾದ ಕಾರಣ ಓದು ಮುಂದುವರಿಸಲಾಗಲಿಲ್ಲ. ಈಗ ಹಳೆಯ ಸ್ಕೀಂ ರದ್ದಾಗಿದೆ. ನೀವು ಈ ಹಿಂದೆ ವಯಸ್ಸಿನ ಆಧಾರದ ಮೇಲೆ ಬಿ.ಎ. ಬರೆಯಲು ಅವಕಾಶವಿದೆ ಎಂದು ತಿಳಿಸಿದ್ದೀರಿ. ನಾನು ಮೂರು ವರ್ಷಗಳನ್ನು ಒಂದೇ ಬಾರಿಗೆ ಬರೆಯಲು ಬಯಸಿದ್ದೇನೆ. ಇಂತಹ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ ದೊರೆಯಬಹುದೇ?

ವಯಸ್ಸಿನ ಆಧಾರದ ಮೇಲೆ ಬಿ.ಎ. ಬರೆಯಲು ಅವಕಾಶ ಇದ್ದರೂ ಅದನ್ನು ವರ್ಷ ವರ್ಷ ಬರೆದು ಉತ್ತೀರ್ಣರಾಗಬೇಕಾದ ನಿಯಮ ಬಹುತೇಕ ವಿ.ವಿ.ಗಳಲ್ಲಿ ಇದೆ. ಯಾವುದೇ ಮಾನ್ಯತೆ ಪಡೆದ ಪದವಿ ಪಡೆದಿದ್ದರೂ ಸರ್ಕಾರಿ ನೌಕರಿಗೆ ಅವಕಾಶವಿದೆ.ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ, ಬೆಂಗಳೂರು 560 001

ಇ-ಮೇಲ್- shikshanapv@gmail.com

Post Comments (+)