ಗುರುವಾರ , ಜುಲೈ 29, 2021
21 °C

ಪ್ರಶ್ನೆ ಉತ್ತರ

ಜಯರಾಮಪ್ಪ Updated:

ಅಕ್ಷರ ಗಾತ್ರ : | |

ವಿನುತಾ

-ನಾನು ಬಿ.ಕಾಂ ಕೊನೆಯ ವರ್ಷದಲ್ಲಿದ್ದೇನೆ. ಫಲಿತಾಂಶ ಶೇ 70-75 ಬರುವ ನಿರೀಕ್ಷೆ ಇದೆ. ನನಗೆ ಎಂ.ಕಾಂ ಮಾಡುವ ಆಸೆ. ಸಿ.ಎಸ್ ಮತ್ತು ಸಿ.ಎ. ಮಾಡು ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ. ಸಿ.ಎ. ವಿದ್ಯಾಭ್ಯಾಸದ ಅವಧಿ ತುಂಬಾ ದೀರ್ಘವಾಗಿರುವುದರಿಂದ ನನ್ನ ತಂದೆ ಬೇಡವೆಂದು ಹೇಳುತ್ತಿದ್ದಾರೆ. ಸಿ.ಎಸ್. ಪಠ್ಯಕ್ರಮ ತುಂಬಾ ಕಠಿಣವಾಗಿರುತ್ತದೆ ಎಂದು ಹೇಳುತ್ತಾರೆ. ಅದು ನಿಜವೆ? ಮತ್ತು ಎಂ.ಕಾಂನಲ್ಲಿ ಯಾವ ವಿಷಯದಲ್ಲಿ ಓದಿದರೆ ಹೆಚ್ಚು ಉದ್ಯೋಗವಕಾಶಗಳು ಇರುತ್ತವೆ ಎಂಬುದನ್ನು ದಯವಿಟ್ಟು ತಿಳಿಸಿ. ನನಗೆ ಮೈಸೂರಿನ ಮಾನಸ-ಗಂಗೋತ್ರಿಯಲ್ಲಿ  ಓದುವ ಆಸೆ. ಅಲ್ಲಿ ಸೀಟು ಸೀಗಬಲ್ಲದೆ?ಸಿ.ಎ. ವಿದ್ಯಾಭ್ಯಾಸದ ಅವಧಿ ದೀರ್ಘವಾಗಿರುವುದು ನಿಜ. ಆದರೆ ಉದ್ಯೋಗಾವಕಾಶ ಹಾಗೂ ಉತ್ತಮ ಭವಿಷ್ಯದ ದೃಷ್ಟಿಯಿಂದ ಸಿ.ಎ. ಮಾಡುವುದು ಸೂಕ್ತ. ಅದೇ ರೀತಿ ಸಿ.ಎಸ್. ಪಠ್ಯಕ್ರಮ ಕಠಿಣವಾಗಿರುವುದು ನಿಜ. ಆದರೆ ಇಲ್ಲಿಯೂ ಉದ್ಯೋಗಾವಕಾಶ ಮತ್ತು ಉತ್ತಮ ಭವಿಷ್ಯದ ದೃಷ್ಟಿಯಿಂದ ಇದು ಒಂದು ಉತ್ತಮ ಆಯ್ಕೆ ಆಗಿರುತ್ತದೆ. ಎಂ.ಕಾಂನಲ್ಲಿ ಅನೇಕ ವಿಷಯಗಳು ಇರುತ್ತವೆ. ಉದಾ: ಹಣಕಾಸು ನಿರ್ವಹಣೆ, ಕಂಪನಿ ವ್ಯವಹಾರಗಳ ನಿರ್ವಹಣೆ ಇತ್ಯಾದಿ. ಇಂದಿನ ಪರಿಸ್ಥಿತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಪುಲವಾದ ಉದ್ಯೋಗಾವಕಾಶಗಳು ಇರುತ್ತವೆ. ಸ್ನಾತಕೋತ್ತರ ಪದವಿಯ ಪ್ರವೇಶ, ನೀವು ಪದವಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು ಮತ್ತು ವಿಶ್ವವಿದ್ಯಾಲಯವು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ ವಿವರಗಳನ್ನು ವಿಶ್ವವಿದ್ಯಾಲಯಗಳ ಅಂತರ್ಜಾಲದಲ್ಲಿ ಪಡೆಯಬಹುದು.

 

ಶ್ರೀಕಾಂತ್, ಧಾರವಾಡ

-ನಾನು ಈಗ ಬಿ.ಎಸ್ಸಿ. (ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ) ಓದುತ್ತಿದ್ದೇನೆ. ನನಗೆ ಮುಂದೆ  ಇಂಡಿಯನ್ ಏರ್‌ಫೋರ್ಸ್  (ಪೈಲಟ್) ಅಥವಾ ನೇವಿ ಸೇರಿಕೊಳ್ಳುವ ಗುರಿ ಇದೆ. ಆದರೆ ನನ್ನ ಕೆನ್ನೆಗೆ (ಮುಖದಲ್ಲಿ) ಗಾಯವಾಗಿ ಒಂದೆರೆಡು ಹೊಲಿಗೆ ಬಿದ್ದಿದ್ದವು. ಅದರ ಸ್ವಲ್ಪ ಪ್ರಮಾಣದ ಗುರುತು ಉಳಿದುಕೊಂಡಿರುವುದರಿಂದ ನಾನು  ಮೆಡಿಕಲ್ ಚೆಕ್‌ಆಪ್‌ನಲ್ಲಿ  ಪಾಸಾಗಲು ಸಾಧ್ಯವೇ?ಇಂಡಿಯನ್ ಏರ್‌ಫೋರ್ಸ್ ಅಥವಾ ಇಂಡಿಯನ್ ನೇವಿಯಲ್ಲಿ ಉದ್ಯೋಗ ಪಡೆಯಲು ಈಗ ನಿಮಗೆ ಕೆನ್ನೆಯಲ್ಲಿ ಗಾಯವಾಗಿ ಅದಕ್ಕೆ ಹಾಕಿರುವ ಹೊಲಿಗೆಯ ಗುರುತಿನಿಂದ ಯಾವುದೇ ಅಡ್ಡಿ ಬರಲಾರದು. ಇದನ್ನು ಒಂದು ಅಂಗ ವೈಕಲ್ಯ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಕ್ಷೇತ್ರದಲ್ಲಿ  ನೀವು ಯಾವುದೇ ಆತಂಕವಿಲ್ಲದೆ ಉದ್ಯೋಗವನ್ನು ಅರಸಬಹುದು.

 

ಉಮಾ, ರಾಮನಗರ

-ನಾನು ಹತ್ತನೇ ತರಗತಿಯವರೆಗೆ ರಾಮನಗರದಲ್ಲಿಯೇ  ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಹತ್ತನೇ ತರಗತಿಯಲ್ಲಿ ಶೇ 85.58 ತೆಗೆದುಕೊಂಡು ಪಾಸಾದೆ. ನಂತರ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ 69 ತೆಗೆದುಕೊಂಡೆ ಮತ್ತು ಪದವಿಯಲ್ಲಿ (ಸಿ.ಬಿ.ಬಿಟಿ) ಶೇ 75 ತೆಗೆದುಕೊಂಡು ಪಾಸಾದೆ. ನಮ್ಮದು ತೀರಾ ಬಡಕುಟುಂಬ, ಇದರಿಂದ ಮುಂದೆ ಓದಲು ಕಷ್ಟವಾಯಿತು. ನಾನು ದೂರ ಶಿಕ್ಷಣದಲ್ಲಿ  ಎಂ.ಎಸ್ಸಿ ಮಾಡಬೇಕೆಂದುಕೊಂಡಿದ್ದೇನೆ. ನನ್ನ ಪ್ರಶ್ನೆಗಳೆಂದರೆ (1) ನಾನು ಎಂ.ಎಸ್ಸಿ ದೂರಶಿಕ್ಷಣದಲ್ಲಿ ಮಾಡಬಹುದೇ? (2) ದೂರಶಿಕ್ಷಣದಲ್ಲಿ  ಯಾವ ವಿಷಯದಲ್ಲಿ ಎಂ.ಎಸ್ಸಿ. ಮಾಡಿದರೆ ಮುಂದೆ ಒಳ್ಳೆಯ ಭವಿಷ್ಯವಿದೆ. (ರಸಾಯನಶಾಸ್ತ್ರ, ಜೀವಶಾಸ್ತ್ರ, ಬಯೋಟೆಕ್) (3)ದೂರಶಿಕ್ಷಣದಲ್ಲಿ ಎಂ.ಎಸ್ಸಿ ಮಾಡಿದರೆ ಅಧ್ಯಾಪಕರಾಗಬಹುದೇ?. ಸರ್ಕಾರಿ ಕಾಲೇಜುಗಳಲ್ಲಿ ಅಂದರೆ ಸರ್ಕಾರಿ ಕೆಲಸ ಸಿಗುತ್ತದೆಯೇ? (4) ದೂರ ಶಿಕ್ಷಣದಲ್ಲಿ ಎಂ.ಎಸ್ಸಿ ಮಾಡಿದ ನಂತರ ನಾನು ಎಂ.ಫಿಲ್ ಮತ್ತು ಪಿಎಚ್.ಡಿ ಮಾಡಬೇಕೆಂದಿರುವೆ, ಇದಕ್ಕೆ ನಾನು ಅರ್ಹಳಾಗುತ್ತೇನಾ?ಪಿಎಚ್.ಡಿ ಮಾಡುವುದಕ್ಕೆ ಎಷ್ಟು ಅಂಕಗಳನ್ನು ಪಡೆಯಬೇಕು? (5)ದೂರಶಿಕ್ಷಣದಲ್ಲಿ  ಎಂ.ಎಸ್ಸಿ. ಮಾಡಲು ಹಣ ಹೆಚ್ಚು ಬೇಕಾಗುತ್ತದೆಯೇ? (6) ಸಂಜೆ ಕಾಲೇಜುಗಳಿಗೂ, ದೂರಶಿಕ್ಷಣ ಕೋರ್ಸ್‌ಗಳಿಗೂ ಏನು ವ್ಯತ್ಯಾಸಗಳು? ದಯವಿಟ್ಟು  ಉತ್ತರಿಸಿ ಮಾರ್ಗದರ್ಶನ ನೀಡಿ.ದೂರಶಿಕ್ಷಣದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆಯುವುದು ಸಾಧ್ಯ. ಆದರೆ ಪೂರಕವಾಗಿ ಪ್ರಯೋಗಶಾಲೆಯ ಅಗತ್ಯವಿರುವ ವಿಷಯಗಳಾದ ರಸಾಯನಶಾಸ್ತ್ರ, ಜೀವಶಾಸ್ತ್ರ ಅಥವಾ ಬಯೋಟೆಕ್ ವಿಷಯಗಳಲ್ಲಿ ದೂರಶಿಕ್ಷಣ ವ್ಯವಸ್ಥೆಯಲ್ಲಿ ಪದವಿಗಳಿಸುವುದು ಸಾಧ್ಯವಿರಲಾರದು. ಇದರ ಹೊರತಾಗಿ ವಾಣಿಜ್ಯಶಾಸ್ತ್ರ, ಕಲಾಶಾಸ್ತ್ರ, ಅಥವಾ ವಿಜ್ಞಾನದಲ್ಲಿ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ಸೂಕ್ತ. ಸಂಜೆ ಕಾಲೇಜಿನಲ್ಲಿ ನೀವು ನೇರವಾಗಿ ತರಗತಿಯಲ್ಲಿ ವಿದ್ಯಾರ್ಥಿಯಾಗಿ ಪಾಠ ಪ್ರವಚನಗಳನ್ನು ಕೇಳುತ್ತೀರಾದರೆ, ದೂರಶಿಕ್ಷಣದಲ್ಲಿ ವಿವಿ, ಆ ವಿಷಯಕ್ಕೆ ಸಂಬಂಧಿಸಿದ ಪುಸ್ತಕ,   ನೋಟ್ಸ್  ಒದಗಿಸುತ್ತದೆ. ಸ್ವತಃ  ಅಭ್ಯಾಸ ಮಾಡಿ ಪರೀಕ್ಷೆ ಬರೆಯಬೇಕಾಗುತ್ತದೆ.

 ಶ್ವೇತಾ.ವ.ಬಡಿಗೇರ, ಜಮಖಂಡಿ

-ನಾನು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 77 ರಷ್ಟು ಅಂಕಗಳಿಸಿ ಬಿಎಸ್ಸಿಯಲ್ಲಿ ಪಿ.ಸಿ.ಎಂ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸ್ವರ್ಧಾತ್ಮಕ ಪರೀಕ್ಷೆಗಳ ಕಡೆ ಆಸಕ್ತಿ ಜಾಸ್ತಿ. ನನಗೆ ಮುಂದೆ ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಆಸೆ. ಈ ಪರೀಕ್ಷೆಯಲ್ಲಿ ನಾನು ಯಾವ ವಿಷಯಗಳನ್ನು ತೆಗೆದುಕೊಂಡರೆ ಉತ್ತಮ? ಅದಕ್ಕೆ ಪೂರಕವಾದ ಪುಸ್ತಕಗಳು ಯಾವುವು? ಮತ್ತು ಪರೀಕ್ಷೆಗೆ ಪೂರ್ವ ತಯಾರಿಯನ್ನು ಈಗಿನಿಂದ ಯಾವ ತರಹ ಮಾಡಬೇಕು. ಕೋಚಿಂಗ್ ಸೆಂಟರ್‌ಗಳು ಎಲ್ಲೆಲ್ಲಿವೆ? ಪರೀಕ್ಷೆಯ ವಿಧಾನ ಹೇಗೆ? ಪ್ರತಿವರ್ಷ ಈ ಪರೀಕ್ಷೆ ನಡೆಸುತ್ತಾರೆಯೇ? ದಯವಿಟ್ಟು  ತಿಳಿಸಿ.ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಐ.ಎ.ಎಸ್ ಇತ್ಯಾದಿ ಪರೀಕ್ಷೆಗಳಲ್ಲಿ ಎರಡು ವಿಧದ ವಿಷಯಗಳಲ್ಲಿ ನೀವು ಪರಿಣತಿ ಹೊಂದಿರಬೇಕಾಗುತ್ತದೆ. ಮೊದಲನೆಯದು ಸಾಮಾನ್ಯಜ್ಞಾನ, ಪ್ರಬಂಧ ಮತ್ತು ಪ್ರಚಲಿತ ವಿದ್ಯಮಾನಗಳು, ಎರಡನೆಯದಾಗಿ ನೀವು ಪದವಿ ಪರೀಕ್ಷೆಯಲ್ಲಿ ಕಲಿತಿರುವ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಅಥವಾ ಕಲಾವಿಭಾಗದಲ್ಲಿ ಬರುವ ಇತಿಹಾಸ ಮುಂತಾದ ವಿಷಯಗಳಲ್ಲಿ ಪರಿಣತಿ ಇರಬೇಕಾಗುತ್ತದೆ. ಮೊದಲನೆಯ ವಿಷಯಕ್ಕೆ ಯಾವುದೇ ಆಯ್ಕೆಗಳಿಲ್ಲ. ಎರಡನೆಯದರಲ್ಲಿ ನಿಮಗೆ ತಿಳಿದಿರುವ, ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.ಪೂರ್ವತಯಾರಿಗಾಗಿ ನೀವು ದಿನಪತ್ರಿಕೆ, ಸಾಪ್ತಾಹಿಕ ಪುರವಣಿ ಮತ್ತು ವಾರಕ್ಕೆ, ಹದಿನೈದು ದಿನಕ್ಕೆ ಅಥವಾ ತಿಂಗಳಿಗೊಮ್ಮೆ ಬರುವ ನಿಯತಕಾಲಿಕೆಗಳಿಂದ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ವಿಷಯಗಳನ್ನು ಸಂಗ್ರಹಿಸಬಹುದು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಾಗಿಯೇ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಪರೀಕ್ಷೆಗಳಿಗೆ ತರಬೇತಿ ನೀಡುವ ಅನೇಕ ಸಂಸ್ಥೆಗಳು ಬೆಂಗಳೂರಿನಲ್ಲಿ ಇವೆ. ಈ ಪರೀಕ್ಷೆಗಾಗಿ ಪ್ರಕಣೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ.

 

ಶೋಭಾ ರಘುಪ್ರಸಾದ್, ಮರಿಯಮ್ಮನಹಳ್ಳಿ

-ನನ್ನ ತಮ್ಮ ಡಿಪ್ಲೊಮಾ ಸಿವಿಲ್ ಮೊದಲನೆ ವರ್ಷ ಕಲಿಯುತ್ತಿದ್ದಾನೆ. ಈಗ ಡಿಪ್ಲೊಮಾ ಸಿವಿಲ್‌ಗೆ ಬೇಡಿಕೆ ಇದೆಯಾ? ಯಾಕೆಂದರೆ ಕೆಲವರು  ಸಿವಿಲ್  ಒಳ್ಳೆಯದಲ್ಲ. ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಒಳ್ಳೆಯದು ಎನ್ನುತ್ತಿದ್ದಾರೆ. ಈ ಮಾತನ್ನು ಕೇಳಿದಾಗಲೆಲ್ಲಾ ನನಗೆ ಆತಂಕ ಆಗುತ್ತಿದೆ. ಅವನಿಗೆ ಸಿವಿಲ್ ಒಳ್ಳೆಯದೇ? ಮುಂದೆ ಬಿ.ಇ. ಪದವಿ ಮಾಡುವವನಿದ್ದಾನೆ. ಬಿ.ಇ.ಯಲ್ಲಿ ಅವನಿಗೆ ಯಾವ ಬ್ರಾಂಚ್ ಒಳ್ಳೆಯದು? ಮತ್ತು ಬಿ.ಇ.ಯಲ್ಲಿ ಮೆರಿಟ್ ಸೀಟು ತೆಗೆದುಕೊಳ್ಳಲು  ಡಿಪ್ಲೊಮಾದಲ್ಲಿ  ಶೇಕಡಾ ಎಷ್ಟು ಅಂಕಗಳು ಬರಬೇಕು? ದಯವಿಟ್ಟು ಮಾಹಿತಿ ನೀಡಿ.ಡಿಪ್ಲೊಮಾ ಸಿವಿಲ್ ನಂತರ ಅದೇ ವಿಷಯದಲ್ಲಿ  ಬಿ.ಇ ಪದವಿಯನ್ನು ಪಡೆದರೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳು ಇವೆ. ನೆರೆಹೊರೆಯವರು ಹೇಳುವ ಮಾತುಗಳಿಗೆ ಆತಂಕಪಡುವ ಅಗತ್ಯವಿಲ್ಲ. ನಗರೀಕರಣದಿಂದ ವಸತಿ ಸಮುಚ್ಚಯಗಳನ್ನು ಕಟ್ಟುವ ಅನೇಕ ಹೆಸರಾಂತ ಸಂಸ್ಥೆಗಳು ಇವೆ. ಅಲ್ಲದೆ ರಸ್ತೆ ನಿರ್ಮಾಣ ಮತ್ತು ನೀರಾವರಿಗೆ ಸಂಬಂಧಿಸಿದ ಕಾಮಗಾರಿಗಳು ಈಗ ಸಾಕಷ್ಟು ನಡೆಯುತ್ತಿವೆ. ಇಂತಹ ಎಲ್ಲಾ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಹೇರಳವಾಗಿ ಇವೆ. 

 

ಸಹದೇವಪ್ಪ.ತಿ.ತೆಗ್ಗಿಹಳ್ಳಿ

-ಸರ್ ನಾನು ಸೈನ್ಯದಲ್ಲಿ  17 ವರ್ಷಗಳು ಕ್ಲರ್ಕ್ ಆಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡು ಈಗ ಧಾರವಾಡದಲ್ಲಿದ್ದೇನೆ. ನಾನು ಎಸ್.ಎಸ್.ಎಲ್.ಸಿ ನಂತರ ಜೆ.ಓ.ಡಿ.ಸಿ (ಎಲೆಕ್ಟ್ರಿಕಲ್) ಓದಿದ್ದೆ. ಇದು ಪಿ.ಯು.ಸಿ. ಸಮನಾಗಿದ್ದರಿಂದ ಡಿಗ್ರಿ ಮಾಡಲು ಅನುಕೂಲವಾಗಿದ್ದರಿಂದ ಸೈನ್ಯಕ್ಕೆ ಸೇರುವ ಮೊದಲೇ ಬಿ.ಎ (ಇಂಗ್ಲಿಷ್) ಮಾಡಿಕೊಂಡಿದ್ದೇನೆ. ನಿವೃತ್ತಿಯಾದ ನಂತರ ಎಕ್ಸ್ ಸರ್ವಿಸ್‌ಮನ್ ಕೋಟಾದಲ್ಲಿ  ಹಲವು ಕಡೆ ಉದ್ಯೋಗಕ್ಕಾಗಿ ಪ್ರಯತ್ನಮಾಡಿದ್ದೇನೆ. ಅದರಲ್ಲಿ ಕಂದಾಯ ಮತ್ತು ಅಂಚೆ ಇಲಾಖೆಯವರು ತತ್ಸಮಾನ ಅರ್ಹತೆ ಮೇಲೆ ಅಸಿಸ್ಟೆಂಟ್ ಹುದ್ದೆಗೆ ಕರೆದಿದ್ದರು. ಆದರೆ ತತ್ಸಮಾನದಲ್ಲಿ ಜೆ.ಓ.ಡಿ.ಸಿ ಆಗಿರದಿದ್ದರಿಂದ (ಆರ್ಮಿ ಕೋಟಾವಿದ್ದರೂ) ಅದು ಸಿಗಲಿಲ್ಲ. ಡಿಗ್ರಿ ಮೇಲೆ ಬ್ಯಾಂಕಿನ ಪರೀಕ್ಷೆಗಳನ್ನು ಬರೆದಿದ್ದೇನೆ. ಯಾವುದೂ ಕೈಗೆಟುಕಲಿಲ್ಲ.ಈಗ ನಾನು ಬಿ.ಎಲ್.ಐ.ಎಸ್. (ಬಿ.ಲಿಬ್) ಕೆ.ಎಸ್.ಒ.ಯು ಮುಖಾಂತರ ಮುಗಿಸಿದ್ದೇನೆ. ನನಗೆ ಈಗ 39 ವರ್ಷಗಳು ಯಾವ ಇಲಾಖೆಗೆ ಅರ್ಹನಾಗುವೆನು ಅಥವಾ ಮುಂದೆ ನಾನು ಯಾವ ಕೋರ್ಸ್/ತರಬೇತಿ ಮಾಡಿದರೆ ಉದ್ಯೋಗ ದೊರಕುತ್ತದೆ? ನನ್ನ ವಿದ್ಯಾರ್ಹತೆ ಮತ್ತು ಸರ್ವಿಸ್ ಮೇಲೆ ಯಾವ ಉದ್ಯೋಗ ಸಿಗುತ್ತದೆಯೆಂದು ತಿಳುಸುವಿರಾ? ನನಗೆ ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ನನ್ನ ಈ ಸಮಸ್ಯೆಗೆ ಪರಿಹಾರ ತಿಳಿಸಿಕೊಡಿ?ಸದ್ಯಕ್ಕೆ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸರ್ಕಾರಿ ಕೆಲಸ ದೊರೆಯುವ ಅವಕಾಶ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ನೀವು ಗಳಿಸಿರುವ ಜೆ.ಓ.ಡಿ.ಸಿ (ಎಲೆಕ್ಟ್ರಿಕಲ್) ಅಥವಾ  ಬಿ.ಎ. (ಇಂಗ್ಲಿಷ್) ಆಧಾರದ ಮೇಲೆ ಖಾಸಗಿ ಸಂಸ್ಥೆಗಳಲ್ಲಿ  ಸೂಕ್ತ ಉದ್ಯೋಗವನ್ನು ಅರಸುವುದು ಒಳ್ಳೆಯದು. ಗಣಕಯಂತ್ರ ಶಾಸ್ತ್ರದಲ್ಲಿ ಅರೆಕಾಲಿಕವಾಗಿ ಜಾವ, ಸ್ಯಾಪ್, ಮೈಕ್ರೋಸಾಫ್ಟ್  ಇತ್ಯಾದಿ ಯಾವುದಾದರೂ ಒಂದು ವೃತ್ತಿಪರ ಸರ್ಟಿಫಿಕೇಷನ್ ಕೋರ್ಸ್ ಮಾಡುವುದು ಒಳ್ಳೆಯದು. ಮಲ್ಲಿಕಾರ್ಜುನ, ಸಿಂದಗಿ

-ಸರ್ ನಾನು ಬಿ.ಎ. ಪದವಿಯಲ್ಲಿ  ಇತಿಹಾಸ, ಸ್ಟ್ಯಾಟ್, ಜನಪದಸಾಹಿತ್ಯವನ್ನು ಮುಖ್ಯ ವಿಷಯಗಳನ್ನಾಗಿ ತೆಗೆದುಕೊಂಡು, ಪ್ರಥಮ ದರ್ಜೆಯಲ್ಲಿ ಮುಗಿಸಿದೆ. ಮುಂದೆ ಬಿ.ಇಡಿ ಮಾಡಬೇಕು ಅಂತ ಅರ್ಜಿ ತುಂಬಿದೆ. ಪ್ರವೇಶ ಪರೀಕ್ಷೆ ಕೂಡಾ ಬರೆದು ನೋಡಿದೆ ಆಗಲಿಲ್ಲ. ಕಾರಣ ನಾನು ಹಾಕಿದ ಅರ್ಜಿ ತಿರಸ್ಕರಿಸಿದರು. ಅದಕ್ಕೆ ಬೆಂಗಳೂರಿಗೆ ಹೋಗಿ ವಿಚಾರಿಸಲಾಗಿ ನೀವು ಬಿ.ಎ. ಪದವಿಯಲ್ಲಿ ಓದಿದ ವಿಷಯಗಳು ಬಿ.ಇಡ್‌ಗೆ ಅರ್ಹವೆನಿಸುವುದಿಲ್ಲ ಅಂತ ಹೇಳಿದರು. ನಾನು ಓದಬೇಕು ಮುಂದೆ ಏನಾದರೂ ಸಾಧನೆ ಮಾಡಬೇಕು ಅಂತ ಆಸೆ. ಕಾಲೇಜು, ಡಿಗ್ರಿ ಕಾಲೇಜಿನಲ್ಲಿ ಅಧ್ಯಾಪಕನಾಗಬೇಕು.ಅದಕ್ಕೆ ನಿಮ್ಮ ಸಲಹೆಯ ಮೇರೆಗೆ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ. ದಯವಿಟ್ಟು ಮಾರ್ಗದರ್ಶನ ನೀಡಿ.ಕಾಲೇಜಿನಲ್ಲಿ ಅಧ್ಯಾಪಕನಾಗುವ ಆಸೆ ನಿಮಗೆ ಇದ್ದರೆ ನೀವು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅದರ ಜೊತೆಗೆ ಎಂ.ಲ್ ಪದವಿ ಪಡೆಯಬೇಕು. ನಂತರ ಸರ್ಕಾರವು ನಡೆಸುವ ಎನ್.ಇ.ಟಿ ಅಥವಾ ಎಸ್.ಎಲ್.ವಿ.ಟಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ನಿಮಗೆ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುವ ಅವಕಾಶ ಹೆಚ್ಚು ಇರುತ್ತದೆ.ಶಿವಲಿಂಗಪ್ಪ,  ಹಾಸನ

ಪ್ರಶ್ನೆ 1:
ನಮ್ಮ ಮಗ ಎಸ್.ಎಸ್.ಎಲ್.ಸಿ.ಯಲ್ಲಿ ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣತೆ ಹೊಂದಿದ್ದು ನಂತರ ಬಿ.ಇಯಲ್ಲಿ (ಇಲೆಕ್ಟ್ರಾನಿಕ್ಸ್  ಕಮ್ಯುನಿಕೇಷನ್) ದ್ವಿತೀಯ ದರ್ಜೆಯಲ್ಲಿ ಪದವಿ ಪಡೆದಿರುತ್ತಾನೆ. ಈಗ ಎಂ.ಎಸ್ (ಎಂಬಿಡೆಡ್ ಸಿಸ್ಟಮ್) ಓದುತ್ತಿದ್ದಾನೆ. ಈಗಾಗಲೇ ಪ್ರಥಮ ಸೆಮಿಸ್ಟರ್‌ನಲ್ಲಿ  7.5 ನೊಂದಿಗೆ ಉತ್ತೀರ್ಣನಾಗಿದ್ದಾನೆ. ಈ ಕೋರ್ಸ್ 2 ವರ್ಷಗಳ ಅವಧಿಯಾಗಿರುತ್ತದೆ. ಎಂ.ಎಸ್‌ನಲ್ಲಿ ಉನ್ನತ ಶಿಕ್ಷಣ ಪಡೆದರೆ ಯಾವ ಯಾವ ಉದ್ಯೋಗಗಳು ಸಿಗುತ್ತವೆ. ಅಥವಾ ಯಾವುದಾದರೂ ಪರೀಕ್ಷೆ ಬರೆಯಬೇಕೆ ಎಂಬುದನ್ನು ತಿಳಿಸಿ. ಉನ್ನತ ಶಿಕ್ಷಣವನ್ನು ಮಣಿಪಾಲ್ ಇನ್ಸ್‌ಟಿಟ್ಯೂಟ್‌ನಲ್ಲಿ ಎಂ.ಎಸ್. (ಎಂಬಿಡೆಡ್ ಸಿಸ್ಟಮ್) ಓದುತ್ತಿರುತ್ತಾನೆ. ದಯವಿಟ್ಟು ಮಾರ್ಗದರ್ಶನ, ಉದ್ಯೋಗ ಮಾಹಿತಿಯನ್ನು ಒದಗಿಸಿಕೊಡಬೇಕೆಂದು ವಿನಂತಿ.ಪ್ರಶ್ನೆ 2: ನಮ್ಮ ಮಗಳು ಬಿ.ಇ. (ಮಾಹಿತಿ ವಿಜ್ಞಾನ) 3ನೇ ವರ್ಷದಲ್ಲಿ  ಓದುತ್ತಿದ್ದಾಳೆ. ಇವಳಿಗೆ ಯಾವ ರೀತಿಯ ಉದ್ಯೋಗಗಳು ದೊರೆಯುತ್ತವೆ. ಇಲ್ಲಿಯವರೆಗೂ ಬಂದಿರುವ ಸೆಮಿಸ್ಟರುಗಳಲ್ಲಿ 8.69 ಪಡೆದಿರುತ್ತಾಳೆ. ಮುಂದೆ ಎಂ.ಟೆಕ್ ಮಾಡಬಹುದೇ, ಗೇಟ್ ಪರೀಕ್ಷೆಯನ್ನು ಯಾವಾಗ ಬರೆಯಬೇಕು ತಿಳಿಸಿ.ನಿಮ್ಮ ಮಗ ಸದ್ಯ ಪಡೆಯುತ್ತಿರುವ ಎಂ.ಎಸ್ ಪದವಿಯಿಂದ ಅವನಿಗೆ ಮಾಹಿತಿ ತಂತ್ರಜ್ಞಾನ (ಸಾಫ್ಟ್‌ವೇರ್) ಸಂಸ್ಥೆಗಳಲ್ಲ್ಲಿ ಮತ್ತು ವಿದ್ಯುನ್ಮಾನ (ಇಲೆಕ್ಟ್ರಾನಿಕ್ಸ್) ಸಂಸ್ಥೆಗಳಲ್ಲಿಉದ್ಯೋಗವಕಾಶ ವಿಪುಲವಾಗಿ ಇರುತ್ತವೆ. ಈತನಿಗೆ ಎಂ.ಎಸ್. ಮಾಡುವ ಅವಧಿಯೊಳಗೆ ಇಂತಹ ಸಂಸ್ಥೆಗಳಿಂದ (ಕ್ಯಾಂಪಸ್ ಪ್ಲೇಸ್‌ಮೆಂಟ್) ಆಗುವ ಅವಕಾಶ ಸಾಕಷ್ಟು ಇರುತ್ತದೆ. ಆದ್ದರಿಂದ ನೀವು ನಿಮ್ಮ ಮಗನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ.ನಿಮ್ಮ ಮಗಳು ಮಾಹಿತಿ ವಿಜ್ಞಾನ ವಿಷಯದಲ್ಲಿ  ಬಿ.ಇ. ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವುದರಿಂದ ಅವಳಿಗೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಇರುತ್ತವೆ. ಸದ್ಯಕ್ಕೆ ಅವಳಿಗೆ ಬಂದಿರುವ ಅಂಕಗಳು ಉತ್ತಮವಾಗಿ ಇವೆ. ಬಿ.ಇ. ಪದವಿಯ ನಂತರ ಎಂ.ಟೆಕ್ ಮಾಡಬಹುದು. ಇದಕ್ಕೆ ಗೇಟ್ ಪ್ರವೇಶ ಪರೀಕ್ಷೆಯನ್ನು ಬಿ.ಇ. ಪದವಿಯ ನಂತರ ಬರೆಯಬೇಕಾಗುತ್ತದೆ.

 ಜೆ. ಪ್ರಿಯದರ್ಶಿನಿ, ಬಿಡದಿ

ನನ್ನದು 99ನೇ ಬ್ಯಾಚ್ ಬಿ.ಇ.(ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್) ಜಿ.ವಿ.ಐ.ಟಿ ಕಾಲೇಜಿನಲ್ಲಿ  ಓದುತ್ತಿದ್ದೆ. 3 ವರ್ಷ ಕೋರ್ಸ್ ಮುಗಿದು 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾಗ ಅಂದರೆ 7ನೇ ಸೆಮಿಸ್ಟರ್ ಪರೀಕ್ಷೆ  ವೇಳೆಯಲ್ಲಿ ಪರೀಕ್ಷಾ ಪ್ರವೇಶಪತ್ರ ತೆಗೆದುಕೊಳ್ಳಲು ಕಾಲೇಜ್‌ಗೆ ಹೋದಾಗ ನನಗೆ ಜ್ಞಾಪಕ ಶಕ್ತಿ ಹೋಗಿ (ಅ.ಗಿ.ಖಿ-ಅಡಿಡಿಚಿಟ ಗಿಟಿ ಖಿಡಿ ತೊಂದರೆ) ನನ್ನ ಹೆಸರು, ಓದಿದ್ದು ಎಲ್ಲಾ ಮರೆತು ಹೋಗಿ ಪರೀಕ್ಷೆಗೆ ಹೋಗಲು ಸಾಧ್ಯವಾಗಲಿಲ್ಲ. ಮತ್ತೆ ಸರಿ ಹೋಗಲು ನನಗೆ 1 ವರ್ಷ ತೆಗೆದುಕೊಂಡಿತು.ಅಷ್ಟರಲ್ಲಿ ಕಷ್ಟ ಪಟ್ಟು 7ನೇ ಸೆಮಿಸ್ಟರ್ ಪ್ರಾಕ್ಟಿಕಲ್ ಮುಗಿಸಿದೆ. ಆದರೆ ಜಾಸ್ತಿ ಓದಲು ಸಾಧ್ಯವಾಗದೆ ಥಿಯರಿ ಓದಲಾಗದೆ ಪರೀಕ್ಷೆಗೆ ಹೋಗಲಿಲ್ಲ. ಆಮೇಲೆ 2 ವರ್ಷ ಆದ ಮೇಲೆ ಮತ್ತೆ ಪರೀಕ್ಷೆ ಕಟ್ಟಲು ಹೋದಾಗ ಕಾಲೇಜಿನವರು ಸರಿಯಾಗಿ ಸಹಕರಿಸದೆ, ನಿನ್ನ ಹೆಸರು ಎಲ್ಲಾ ಹೊರಟು ಹೋಗಿದೆ. ನೀನು ಮತ್ತೆ ಪರೀಕ್ಷೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿ ಕಳಿಸಿಬಿಟ್ಟರು. ನಂತರ ನನ್ನ ಮದುವೆಯಾುತು. ನಾನು ಬಿ.ಇ. ವಿದ್ಯಾಭ್ಯಾಸಕ್ಕೆ ಅಂತ್ಯ ಹಾಡಿದೆ. ಆದರೆ ಈಗ ನನಗೆ ಕೆಲಸ ಬೇಕೆನಿಸಿದೆ. 3ವರ್ಷ ಡಿಗ್ರಿ ಮುಗಿಸಿದರೂ 7ನೇ ಮತ್ತು 8ನೇ ಸೆಮಿಸ್ಟರ್ ಮುಗಿಸದ ಕಾರಣ ನನಗೆ ಡಿಗ್ರಿ ಸರ್ಟಿಫಿಕೇಟ್ ಸಿಗಲಿಲ್ಲ.  ನಾನು ಕಾಲೇಜ್ ಬಿಟ್ಟು 7 ವರ್ಷವಾಗಿದೆ ಮತ್ತೆ ಓದಲು ಕಾಲೇಜಿನವರು ಸೇರಿಸಿಕೊಳ್ಳುವುದಿಲ್ಲ.ಈಗ ನಾನು ಏನು ಮಾಡಲಿ. ಓದು ಮುಂದುವರಿಸಲಾ ಅಥವಾ ಕೆಲಸಕ್ಕೆ ಹೋಗಲು ಯಾವ ಕಡೆ ಸೇರಿಕೊಂಡರೆ ಒಳ್ಳೆಯದು. ದಯಮಾಡಿ ಸಲಹೆ ನೀಡಿ.

ನಿಮ್ಮ ಸದ್ಯದ ಪರಿಸ್ಥಿತಿಯಲ್ಲಿ  ನೀವು ಗಳಿಸಿರುವ ವಿದ್ಯಾಭ್ಯಾಸದ ಆಧಾರದ ಮೇಲೆ ಬಿ.ಪಿ.ಓ - ಕಾಲ್ ಸೆಂಟರ್(ಃ..ಔ - ಅಚಿಟಟ ಅಟಿಣಡಿ) ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸಬಹುದು. ಇದರ ಜೊತೆಗೆ ಅರೆಕಾಲಿಕವಾಗಿ, ಜಾವಾ, ಸ್ಯಾಪ್, ಮೈಕ್ಟ್ರೋಸಾಫ್ಟ್ ಇಂತಹ ಯಾವುದಾದರೂ ಒಂದು ಸರ್ಟಿಫಿಕೇಟ್ ಕೋರ್ಸ್ ಮಾಡುವುದರಿಂದ ನಿಮಗೆ ಉದ್ಯೋಗಾವಕಾಶ ಹೆಚ್ಚುತ್ತದೆ.

- ರಶ್ಮಿ. ಜಿ. ತುಮಕೂರು

ಬಿಎಸ್ಸಿ ಪದವಿಯನ್ನು ಸಿ.ಬಿ.ಝೆಡ್., ಎಂ.ಎಸ್.ಸಿಯನ್ನು ಃಣಛಿಟಿಟಥಿ, ಹಾಗೂ ಬಿ.ಇಡಿ.ಯನ್ನು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದಿದ್ದೇನೆ. ಬಿಎಸ್ಸಿಯಲ್ಲಿ  ಶೇ 65.57, ಎಂಎಸ್ಸಿ ಶೇ  59.7 ಪಡೆದಿರುತ್ತೇನೆ. ನಾನು ಎಲ್ಲ ಪರೀಕ್ಷೆಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಾಲೇಜಿನಲ್ಲಿ ಮಾಡಿರುತ್ತೇನೆ.  ನಾನು ಎಂ.ಫಿಲ್ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಕಾರಣ, ಕೆಲಸಕ್ಕೆ ಹೋಗಬೇಕು. ದಯವಿಟ್ಟು ಎಂ.ಫಿಲ್ ಮಾಡಲು ಬಾಹ್ಯವಾಗಿ ಯಾವುದಾದರೂ ವಿಶ್ವವಿದ್ಯಾಲಯವನ್ನು ಹಾಗೂ ನನ್ನ ವಿಷಯಕ್ಕೆ ಸಂಬಂಧಪಟ್ಟಂತೆ ನಿಯಮವೇನು ಮತ್ತು ಅಂದಾಜು ಎಷ್ಟು ಹಣಬೇಕಾಗುತ್ತದೆ ಎಂದು  ತಿಳಿಸಿ.ದೂರಶಿಕ್ಷಣದ ಮೂಲಕ ಎಂ.ಫಿಲ್ ಮಾಡಲು ಅನೇಕ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಇದೆ. ಉದಾ: ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಇತ್ಯಾದಿ. ಶುಲ್ಕ, ನಿಯಮಗಳು ಇನ್ನಿತರ ಸಂಬಂಧ ಪಟ್ಟ ವಿವರಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ  ಪಡೆಯಬಹುದು. 

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.