ಪ್ರಶ್ನೆ ಉತ್ತರ

7

ಪ್ರಶ್ನೆ ಉತ್ತರ

Published:
Updated:

ವಿನಯ್ ಕುಮಾರ್

ನಾನು ರೆಗ್ಯುಲರ್ ಬಿಎಡ್‌ಗೆ ಸೇರಿಕೊಂಡು, ಇದರ ಜತೆಜತೆಯಲ್ಲಿಯೇ ದೂರ ಶಿಕ್ಷಣದ ಮೂಲಕ ಎಂಎ ಮಾಡಬಹುದೇ? ದಯಮಾಡಿ ಸಲಹೆ ಕೊಡಿ.ನೀವು ಈಗಾಗಲೇ ಪದವೀಧರರಾಗಿರುವುದರಿಂದ ಬಿಎಡ್ ಜೊತೆಗೆ ಎಂಎ ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣದ ಮೂಲಕ ಮಾಡುವುದು ಸಾಧ್ಯ. ಆದ್ದರಿಂದ ನಿಮಗೆ ಸೂಕ್ತವೆನಿಸುವ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡು ಈ ಪದವಿಯನ್ನು ಪಡೆಯಬಹುದು.

 

ಮೇಘ, ಚಿಕ್ಕಮಗಳೂರು

ನಾನು ಈಗ ಬಿಇ ಓದುತ್ತಿದ್ದೇನೆ. ಈ ಪರೀಕ್ಷೆಗಳ ಜೊತೆಜೊತೆಗೆ ತೆಗೆದುಕೊಳ್ಳಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕೊಡಿ. ಅವುಗಳಿಂದ ನನ್ನ ಭವಿಷ್ಯದ ವ್ಯಾಸಂಗ ಅಥವಾ ಉದ್ಯೋಗಕ್ಕೆ ಅನುಕೂಲವೇ ತಿಳಿಸಿಕೊಡಿ.ಸ್ಮರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್, ಐಪಿಎಸ್ ಇವುಗಳಿಗೆ ಹಾಜರಾಗಲು ಪದವೀಧರರಾಗಿರಬೇಕು. ಆದ್ದರಿಂದ ನೀವು ಬಿಇ ಮುಗಿಸಿದ  ನಂತರವಷ್ಟೇ ಈ ಪರಿಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯ.

 

ಆದರೆ ಈ ಪರೀಕ್ಷೆಗಳ ತಯಾರಿಗೆ ಪೂರ್ವಭಾವಿಯಾಗಿ ಕೆಲವು ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬಹುದು. ಅವುಗಳೆಂದರೆ ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಸಾಮಾನ್ಯ ಆಂಗ್ಲಭಾಷೆ ಇತ್ಯಾದಿ ವಿಷಯಗಳಲ್ಲಿ ವಿಷಯ ಸಂಗ್ರಹಣೆ ಮತ್ತು ಅಧ್ಯಯನವನ್ನು ಈಗಿನಿಂದಲೇ ಮಾಡಬಹುದು.

ನಂದೀಶ್

ನಾನು ಶೇ 66 ಅಂಕದೊಂದಿಗೆ ಬಿಕಾಂ ಮುಗಿಸಿದ್ದೇನೆ. ನನಗೆ ಸಿಎ ಮಾಡಬೇಕೆಂಬ ಹಂಬಲ ಇದೆ. ಆದರೆ ಅದು ಬಲು ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಅದನ್ನು ಪಾಸು ಮಾಡುವುದು ಅತ್ಯಂತ ಕಷ್ಟಕರ ಎನ್ನುತ್ತಾರೆ. ದಯಮಾಡಿ ಈ ಕೋರ್ಸಿನ ಬಗ್ಗೆ ಮಾಹಿತಿ ನೀಡಿ ನನಗೆ ಮಾರ್ಗದರ್ಶನ ಕೊಡಿ.ಸಿಎ ಮಾಡುವುದು ಕಠಿಣ ಎನ್ನುವುದು ಸತ್ಯ. ಆದರೆ ಪ್ರತೀ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಇದರಲ್ಲಿ ಉತ್ತೀರ್ಣರಾಗಿ ಉತ್ತಮ ಉದ್ಯೋಗಾವಕಾಶ ಪಡೆಯುತ್ತಾರೆ ಎನ್ನುವುದೂ ಸತ್ಯ. ಆದ್ದರಿಂದ ಸಿಎ ಮಾಡುವುದು ಅಸಾಧ್ಯವೇನೂ ಅಲ್ಲ. ಅದಕ್ಕೆ ಬೇಕಾದ ಪರಿಶ್ರಮವನ್ನು ಹಾಕಲು ನೀವು ಮಾನಸಿಕವಾಗಿ ಸಿದ್ಧರಾಗಬೇಕು.

 

ನಿವೇದಿತಾ, ಚಿಕ್ಕಮಗಳೂರು

ನಾನು ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ ವಿಷಯದಲ್ಲಿ ಡಿಪ್ಲೊಮಾ ಪಡೆದಿರುತ್ತೇನೆ. ನಾನು ಈಗ ದೂರಶಿಕ್ಷಣದ ಮೂಲಕ ಎಂಬಿಎ ಮಾಡಬಹುದೇ? ದಯಮಾಡಿ ಮಾರ್ಗದರ್ಶನ ಕೊಡಿ.ಎಂಬಿಎ ಪದವಿಯನ್ನು ದೂರಶಿಕ್ಷಣದ ಮೂಲಕ ಮಾಡಲು ಪದವೀಧರರಾಗಿರುವುದು ಅವಶ್ಯಕ. ಡಿಪ್ಲೊಮಾವನ್ನು ಪದವಿಗೆ ಸಮನಾದ ಶಿಕ್ಷಣವೆಂದು ಈವರೆಗೆ ಪರಿಗಣಿಸಿಲ್ಲ. ಆದ್ದರಿಂದ ನೀವು ಮೊದಲು ಒಂದು ಪದವಿಯನ್ನು ಗಳಿಸುವುದು ಅವಶ್ಯಕ

ಮೇಘನಾ

ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಬಿಎಸ್ಸಿ (ಕೃಷಿ) ಮಾಡಬೇಕೆಂಬ ಆಸೆ ಇದೆ. ಆದ್ದರಿಂದ ಈ ಕೋರ್ಸಿನ ಕುರಿತಾಗಿ ಮಾಹಿತಿ ಕೊಡಿ. ಈ ವಿಭಾಗದಲ್ಲಿ ಓದಲು ಬರುವ ವಿಷಯಗಳು ಯಾವುವು? ಇದಕ್ಕೆ ಭವಿಷ್ಯವಿದೆಯೇ? ಸೂಕ್ತ ಮಾಹಿತಿ ನೀಡಿ.

ಬಿಎಸ್ಸಿ (ಕೃಷಿ) ಮಾಡಲು ಪಿಯುಸಿ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಅಭ್ಯಾಸ ಮಾಡುವುದು ಅವಶ್ಯಕ. ಎರಡನೇ ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ನೀವು ಪಡೆಯುವ ಅಂಕಗಳ ಜೊತೆ ಕೃಷಿ ವಿಶ್ವವಿದ್ಯಾಲಯ ನಡೆಸುವ ಪ್ರವೇಶ ಪರೀಕ್ಷೆ ಅಂಕಗಳ ಆಧಾರದ ಮೇಲೆ ಈ ಪದವಿಗೆ ಪ್ರವೇಶವನ್ನು ನೀಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್

(www.uasbangalore.edu.in)  ನೋಡಬಹುದು. ಈ ಪದವಿಯ ನಂತರ ಆಧುನಿಕ ಕೃಷಿಕಾರರಾಗಿ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಸ್ವತಃ ನಿಮಗೇ ಇರುತ್ತದೆ. ಇದರ ಜೊತೆಗೆ ಹಲವು ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಈ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಇರುತ್ತವೆ. 

 

ಗುರುರಾಜ್, ಹುಬ್ಬಳ್ಳಿ

ನಾನು ಬಿಎಸ್ಸಿ (ಸಿಬಿಝೆಡ್) ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಬಿಎಸ್ಸಿ ನಂತರ ಕ್ಲಿನಿಕಲ್ ರಿಸರ್ಚ್ ಎಂಎಸ್ಸಿ ಮಾಡಬೇಕೆಂದಿದ್ದೇನೆ. ಇದರ ತರಬೇತಿ ನೀಡುವ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಗ್ಗೆ ಮಾಹಿತಿ ಕೊಡಿ. ಅಂತೆಯೇ ಹಲವಾರು ಜನ ಅಧ್ಯಾಪಕರು ಇದಕ್ಕೆ ಭವಿಷ್ಯವಿಲ್ಲ ಎನ್ನುತ್ತಾರೆ. ನನಗೆ ಗೊಂದಲವಾಗುತ್ತಿದೆ. ದಯಮಾಡಿ ತಿಳಿಸಿ.ಕ್ಲಿನಿಕಲ್ ರಿಸರ್ಚ್‌ನಲ್ಲಿ ಎಂಎಸ್ಸಿ ಮಾಡಿದರೆ ಇರುವ ಉದ್ಯೋಗಾವಕಾಶಗಳು ಕಡಿಮೆ ಎನ್ನುವುದು ಸತ್ಯ. ಈ ವಿಷಯದಲ್ಲಿ ತರಬೇತಿ ನೀಡುವ ಅನೇಕ ವಿಶ್ವವಿದ್ಯಾಲಯಗಳು ಇವೆ. ಬೇಕಾದ ಜ್ಞಾನ, ಮಾಹಿತಿಯನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳ ವೆಬ್‌ಸೈಟ್‌ನಲ್ಲಿ ಪಡೆಯಬಹುದು (www.icriindia.com)

ಸಚಿನ್.ಆರ್.ಬಿರಾದರ್

ನಾನು ಬಿಇ ಸಿವಿಲ್ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಇದನ್ನು ಓದಿದವರಿಗೆ ಇರುವ ಉದ್ಯೋಗಾವಕಾಶಗಳು ಯಾವುವು? ಅಂತೆಯೇ ನಾನು ಸಿವಿಲ್ ಪರೀಕ್ಷೆಗಳನ್ನು ಬರೆಯಬಹುದೇ? ಅದಕ್ಕೆ ನಾನು ಆಯ್ಕೆ ಮಾಡಿಕೊಳ್ಳಬೇಕಾದ ವಿಷಯಗಳು ಯಾವುವು? ದಯಮಾಡಿ ಸಲಹೆಕೊಡಿ.ಬಿಇ (ಸಿವಿಲ್) ಪದವೀಧರರಿಗೆ ಸದ್ಯದ ಪರಿಸ್ಥಿತಿಯಲ್ಲಿ ವಿಪುಲವಾದ ಉದ್ಯೋಗಾವಕಾಶಗಳು ಇವೆ. ಕಾರಣ ಅಗಾಧವಾದ ಜನಸಂಖ್ಯಾ ಸ್ಫೋಟದಿಂದ ಸಮೂಹ ವಾಸದ ಸಮುಚ್ಚಯಗಳು, ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳಿಗೆ ಭಾರೀ ಬೇಡಿಕೆ ಇದೆ. ವೇಗ ಗತಿಯಲ್ಲಿ ಇವುಗಳ ಕಾಮಗಾರಿ ನಡೆಯುತ್ತಿದೆ.ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ ಅನೇಕ ಬೃಹತ್ ಖಾಸಗಿ ಸಂಸ್ಥೆಗಳು ಇವುಗಳ ನಿರ್ಮಾಣ ಕಾರ್ಯದಲ್ಲಿ ನಿರತವಾಗಿವೆ. ಅವುಗಳಲ್ಲಿ ಬಿಇ ಸಿವಿಲ್ ಪದವಿ ಪಡೆದ ಅಭ್ಯರ್ಥಿಗಳ ಸೇವೆ ಅವಶ್ಯಕ.ಬಿಇ ಪದವಿಯ ನಂತರ ಕೆಎಎಸ್, ಐಎಎಸ್, ಐಪಿಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅರ್ಹರಾಗುತ್ತೀರಿ. ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ವೆಬ್‌ಸೈಟ್‌ಗಳಲ್ಲಿ ಪಡೆಯಬಹುದು (http://kpsc.kar.nic.in/ www.upsc.gov.in)

ಅರುಣಕುಮಾರ್, ಶಿವಮೊಗ್ಗ

ನನಗೆ ಜಾಹೀರಾತು ಉದ್ಯಮದಲ್ಲಿ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಹಂಬಲವಿದೆ. ದಯಮಾಡಿ ಇದನ್ನು ತರಬೇತಿ ನೀಡುವ ಸಂಸ್ಥೆಗಳ ಬಗ್ಗೆ ತಿಳಿಸಿಕೊಡಿ. ಅವುಗಳ ಅಂತರ್ಜಾಲ ತಾಣದ ವಿಳಾಸವಿದ್ದರೆ ತಿಳಿಸಿ.ಆಧುನಿಕ ಜಗತ್ತಿನಲ್ಲಿ ಜಾಹೀರಾತು ಉದ್ಯಮ ಬೃಹದಾಕಾರವಾಗಿ ಬೆಳೆದಿದೆ. ನಾವು ಕೊಂಡುಕೊಳ್ಳುವ ಎಲ್ಲಾ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳು ಪ್ರಚಾರಕ್ಕಾಗಿ ಜಾಹೀರಾತು ಉದ್ಯಮವನ್ನು ಅವಲಂಬಿಸಿರುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಡಿಪ್ಲೊಮಾ/ ಪದವಿ ಪಡೆದ ಅಭ್ಯರ್ಥಿಗಳಿಗೆ ಉತ್ತಮ ಭವಿಷ್ಯವಿದೆ.

 

ಇದಕ್ಕೆ ಬೇಕಾದ ತರಬೇತಿ ನೀಡುವ ಅನೇಕ ಸಂಸ್ಥೆಗಳು ಇವೆ. ಅಂತಹ ಒಂದು ಸಂಸ್ಥೆ ಜೈನ್ ವಿಶ್ವವಿದ್ಯಾಲಯ. ವಿವರಗಳನ್ನು ಈ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪಡೆಯಬಹುದು (http://kpsc.kar.nic.in/ www.upsc.gov.in)

 

ಡನ್ನಿ ಆರ್ನಾಲ್ಡ್ನಾನು ಮೆಕ್‌ಟ್ರಾನಿಕ್ಸ್‌ನಲ್ಲಿ ಸ್ವಾಯತ್ತ ಕಾಲೇಜೊಂದರಲ್ಲಿ ಡಿಪ್ಲೊಮಾ ಮಾಡುತ್ತಿದ್ದೇನೆ. ನಾನು ಬಿಎಸ್ಸಿ ಮಾಡಬೇಕೆಂದಿದ್ದೇನೆ. ಡಿಪ್ಲೊಮಾ ನಂತರ ನಾನು ಪ್ರಾಣಿಶಾಸ್ತ್ರ ವಿಷಯದಲ್ಲಿ ಬಿಎಸ್ಸಿ. ಸೇರಬಹುದೇ? ದಯಮಾಡಿ ಸಲಹೆ ಕೊಡಿ. ಅಂತೆಯೇ ಫೋಟೋಗ್ರಫಿಗೆ ಸಂಬಂಧಪಟ್ಟ ಕೋರ್ಸುಗಳು ಇವೆಯೇ? ಇದ್ದರೆ ಅದರಲ್ಲಿ ನಾನು ಭವಿಷ್ಯ ಹೇಗೆ ರೂಪಿಸಿಕೊಳ್ಳಬಹುದು? ದಯಮಾಡಿ ಮಾರ್ಗದರ್ಶನ ಕೊಡಿ.

ಬಿಎಸ್ಸಿ ಪದವಿಗೆ ಪ್ರವೇಶ ಪಡೆಯಲು ಪಿಯು ಪಾಸಾಗಿರುವುದು ಅತ್ಯವಶ್ಯಕ. ಆದ್ದರಿಂದ ನೀವು ಸದ್ಯಕ್ಕೆ ನಿಮ್ಮ ಡಿಪ್ಲೊಮಾ ನಂತರ ಪ್ರಾಣಿಶಾಸ್ತ್ರ ವಿಷಯದಲ್ಲಿ ಬಿಎಸ್ಸಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಇದರ ಬದಲಾಗಿ ನೀವೇ ತಿಳಿಸುವಂತೆ ಫೋಟೋಗ್ರಫಿಗೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಮಾಡಬಹುದು. ಇದರಲ್ಲಿ ಖಾಸಗಿಯಾಗಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ.

 

ಪೂಜಿತ, ಶಿವಮೊಗ್ಗ

ನಾನು ಕೈಗಾರಿಕಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಮಾಡಿದ್ದೇನೆ. ಮುಂದೆ ಇದೇ ವಿಷಯದಲ್ಲಿ ಓದಲು ಇರುವ ಅವಕಾಶ ಮತ್ತು ಕೋರ್ಸುಗಳ ಬಗ್ಗೆ ಮಾಹಿತಿ ಕೊಡಿ. ಹೊರದೇಶದಲ್ಲಿ ಹೆಚ್ಚಿನ ಓದಿಗೆ ಅವಕಾಶವಿದೆಯೇ? ವಿಶ್ವವಿದ್ಯಾಲಯಗಳು ಯಾವುವು? ಇದಕ್ಕೆ ಭವಿಷ್ಯ ಮತ್ತು ಉದ್ಯೋಗಾವಕಾಶಗಳಿವೆಯೇ?ಕೈಗಾರಿಕಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ಅದೇ ವಿಷಯದಲ್ಲಿ ಸಂಶೋಧಕರಾಗಿ ಮುಂದುವರೆಸಬಹುದು. ಇದರಿಂದ ನೀವು ಪಿಎಚ್.ಡಿ ಪದವಿಯನ್ನು ಪಡೆಯಲು ಸಾಧ್ಯ. ಭವಿಷ್ಯದ ದೃಷ್ಟಿಯಿಂದ ಇಂದಿನ ಆಧುನಿಕ ಜಗತ್ತಿನಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ತಲೆ ಎತ್ತುತ್ತಿರುವುದರಿಂದ ನಿಮಗೆ ಹೇರಳವಾದ ಉದ್ಯೋಗಾವಕಾಶಗಳು ಇರುತ್ತವೆ. ಇದಕ್ಕೆ ನೀವು ಆಯ್ಕೆ ಮಾಡಿಕೊಳ್ಳಬೇಕಾದ ವಿಶ್ವವಿದ್ಯಾಲಯದ ವಿವರಗಳನ್ನು ಯುಜಿಸಿ ವೆಬ್‌ಸೈಟ್‌ನಲ್ಲಿ ಪಡೆಯಬಹುದು (www.ugc.ac.in).

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:
 shikshana@prajavani.co.in 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry