ಪ್ರಶ್ನೆ-ಉತ್ತರ

6

ಪ್ರಶ್ನೆ-ಉತ್ತರ

Published:
Updated:

ರೋಹಿತ್ ವಿ.

ನಾನು ಇ ಅಂಡ್ ಸಿ ವಿಭಾಗದಲ್ಲಿ 2ನೇ ವರ್ಷದ ಬಿ.ಇ ಮಾಡುತ್ತಿದ್ದೇನೆ. ನನಗೆ ಜೀವಶಾಸ್ತ್ರದಲ್ಲಿ ಅತೀವವಾದ ಆಸಕ್ತಿ ಇದೆ. ನನಗೆ ಈ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಯಾಕೋ ಮನಸ್ಸಾಗುತ್ತಿಲ್ಲ.ಎಂ.ಬಿ.ಬಿ.ಎಸ್ ಮಾಡೋಣ ಎನಿಸುತ್ತಿದೆ. ನಾನು ಪಿ.ಯುಸಿಯಲ್ಲಿ ಪಿ.ಸಿ.ಎಂ.ಬಿ ಕಲಿತಿದ್ದೇನೆ. ನಾನು ಈಗ ಪುನಃ ಸಿ.ಇ.ಟಿ ಬರೆದು ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಬಹುದೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ.

ಜೀವಶಾಸ್ತ್ರದಲ್ಲಿ ನಿಮಗೆ ಇಷ್ಟು ಆಸಕ್ತಿ ಇರುವುದಾದರೆ ನೀವು ಎಂಜಿನಿಯರಿಂಗ್ ಓದಲು ಬಂದದ್ದೇಕೆ ಎಂದು ತಿಳಿಯುತ್ತಿಲ್ಲ. ಗುರಿಯಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಯಶಸ್ಸು ಗಗನಕುಸುಮವಾಗುತ್ತದೆ. ಈಗಲಾದರೂ ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ. ಮೊದಲೇ ವೈದ್ಯಕೀಯ ಕ್ಷೇತ್ರಕ್ಕೆ ಹೋಗದೇ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬಂದ ಕಾರಣಗಳನ್ನು ವಿಮರ್ಶಿಸಿಕೊಂಡು ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ.ವೈದ್ಯಕೀಯ ಕ್ಷೇತ್ರಕ್ಕೆ ಹೋಗುವುದೇ ನಿಮ್ಮ ಗುರಿಯಾಗಿದ್ದರೆ, ಈಗಿನಿಂದಲೇ ಏಪ್ರಿಲ್ ತಿಂಗಳಲ್ಲಿ ನಡೆಯುವ `ನೀಟ್~ ಆಯ್ಕೆ ಪರೀಕ್ಷೆಗೆ ತಯಾರಿ ಪ್ರಾರಂಭಿಸಿ. ಈ ವರ್ಷ ವೈದ್ಯಕೀಯ ಕಾಲೇಜುಗಳ ಎಂ.ಬಿ.ಬಿ.ಎಸ್ ಸೀಟಿಗಾಗಿ ರಾಷ್ಟ್ರ ಮಟ್ಟದಲ್ಲಿ ನೀಟ್ (ಘೆ.ಉ.ಉ.) ಎಂಬ ಒಂದೇ ಪರೀಕ್ಷೆ ನಡೆಯುತ್ತಿದೆ. ಎನ್.ಸಿ.ಆರ್.ಟಿ ಪಠ್ಯಕ್ರಮವನ್ನು ಆಧರಿಸಿರುವ ಈ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದರೆ ನೀವು ಈ ದೇಶದ ಯಾವುದೇ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಓದಬಹುದು.

ಮಲ್ಲಿಕಾರ್ಜುನ ಭಾವಿಕಟ್ಟಿ

 ನಾನು ಪಿ.ಯು. ಪರೀಕ್ಷೆಯಲ್ಲಿ ಪಿ.ಸಿ.ಬಿ ವಿಷಯದಲ್ಲಿ ಶೇ 76 ಅಂಕ ಪಡೆದುಕೊಂಡಿದ್ದೆ. ಅಂತೆಯೇ ಸಿ.ಇ.ಟಿ- 2012 ಪರೀಕ್ಷೆಯಲ್ಲೂ 85/100 ಪಡೆದುಕೊಂಡಿದ್ದೆ. ನಾನು ಸಾಮಾನ್ಯ ವರ್ಗದ ವಿದ್ಯಾರ್ಥಿ. ಕೊನೆ ಗಳಿಗೆಯಲ್ಲಿ ನನಗೆ ಸೀಟು ಸಿಗಲಿಲ್ಲ. ಕೊನೆಗೆ ಮ್ಯೋನೇಜ್‌ಮೆಂಟ್ ಖೋಟಾದಡಿ ಎಂಜಿನಿಯರಿಂಗ್ ಪ್ರವೇಶ ಪಡೆಯೋಣ ಎಂದುಕೊಂಡಿದ್ದೇನೆ. ಇದು ಸರಿಯೇ ಅಥವಾ 2013ನೇ ವರ್ಷದ ಸಿ.ಇ.ಟಿ ಪರೀಕ್ಷೆ ಬರೆದು ಎಂ.ಬಿ.ಬಿ.ಎಸ್ ಪ್ರವೇಶಿಸಬಹುದೇ?

 ವೈದ್ಯಕೀಯ ಶಾಸ್ತ್ರದಲ್ಲಿ ನಿಮಗೆ ಆಸಕ್ತಿಯಿದ್ದರೆ ಇನ್ನೊಮ್ಮೆ ಸಿ.ಇ.ಟಿ ಪರೀಕ್ಷೆ  ತೆಗೆದುಕೊಂಡು ಉತ್ತಮ ರ‌್ಯಾಂಕ್ ಪಡೆಯಲು ಪ್ರಯತ್ನಿಸಬಹುದು. ಆದರೆ ಈ ವರ್ಷ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ರಾಷ್ಟ್ರ ಮಟ್ಟದಲ್ಲಿ `ನೀಟ್~ ಎಂಬ ಒಂದೇ ಒಂದು ಪರೀಕ್ಷೆ ಇರುತ್ತದೆ. ಇದು ಪಿ.ಯು. ಹಂತದ ಎನ್.ಸಿ.ಆರ್.ಟಿ ಪಠ್ಯಕ್ರಮವನ್ನು ಆಧರಿಸಿರುತ್ತದೆ. ಈ ವರ್ಷ ನೀವು ಈ ಪರೀಕ್ಷೆ ತೆಗೆದುಕೊಂಡು ಉತ್ತಮ ರ‌್ಯಾಂಕ್ ಪಡೆದರೆ ಎಂ.ಬಿ.ಬಿ.ಎಸ್ ಓದಬಹುದು.

ಗಂಗಾಧರ ಕಾಳಿ

 ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಗ ಅಂತಿಮ ವರ್ಷದ ಬಿ.ಬಿ.ಎಂ ಮಾಡುತ್ತಿದ್ದೇನೆ. ಪದವಿ ನಂತರ ನನಗೆ ಉತ್ತಮ ಕೆಲಸ ದೊರೆತು ಹೆಚ್ಚು ಸಂಬಳ ಸಿಗುತ್ತದೆಯೇ ಅಥವಾ ಎಂ.ಬಿ.ಎ ಮಾಡುವುದು ಸೂಕ್ತವೇ?

ಬಿ.ಬಿ.ಎಂ ಓದುತ್ತಿರುವಾಗಲೇ ಮುಂದೆ ಸಿಗಬಹುದಾದ ಉದ್ಯೋಗ ಮತ್ತು ಸಂಬಳದ ಬಗ್ಗೆ ಕನಸು ಕಾಣುವುದು ಸಹಜವಾದರೂ ಸಮಂಜಸವಲ್ಲ. ನಿಮಗೆ ಸಿಗಬಹುದಾದ ಉದ್ಯೋಗ ಮತ್ತು ಸಂಬಳ ನಿಮ್ಮ ಡಿಗ್ರಿಗಿಂತಲೂ ನೀವು ಸಂಪಾದಿಸಿರುವ ಜ್ಞಾನ ಮತ್ತು ಕೌಶಲವನ್ನು ಅವಲಂಬಿಸಿರುತ್ತದೆ. ಬಿ.ಬಿ.ಎಂ ನಂತರ ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಎಂ.ಬಿ.ಎ ಮಾಡುವುದೂ ಅಪೇಕ್ಷಣೀಯ. ವಿದ್ಯಾರ್ಥಿ ದೆಸೆಯಲ್ಲಿಯೇ ಹೆಚ್ಚು ಓದಿ ಹೆಚ್ಚಿನ ಡಿಗ್ರಿ ಮತ್ತು ಜ್ಞಾನವನ್ನು ಸಂಪಾದಿಸುವುದು ಶ್ರೇಯಸ್ಕರ.

ಶ್ರೀನಿವಾಸ

ನಾನು 2010ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದೆ. ಕೆಲವು ಸೆಮಿಸ್ಟರ್‌ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದೆ. ಎರಡನೇ ಪ್ರಯತ್ನದಲ್ಲಿ ಉತ್ತಮ ಅಂಕಗಳನ್ನು ಪಡೆದು 5 ರಿಂದ 8ನೇ ಸೆಮಿಸ್ಟರ್‌ವರೆಗಿನ ಅಂಕಗಳನ್ನು ಆಧರಿಸಿ ಗ್ರೇಡ್ ನೀಡಿದ್ದಾರೆ. ನನಗೆ ಪ್ರಥಮ ಶ್ರೇಣಿ ದೊರೆತಿದೆ. ನನ್ನ ಪ್ರಥಮ ಪ್ರಯತ್ನದಲ್ಲಿ 3ನೇ ಸೆಮಿಸ್ಟರ್‌ನಿಂದ 8ನೇ ಸೆಮಿಸ್ಟರ್‌ನ ಒಟ್ಟು ಶೇಕಡಾವಾರು ಅಂಕಗಳು ಶೇ 53.42 (5ರಿಂದ 8ನೇ ಸೆಮಿಸ್ಟರ್ ಶೇ 60.80), ಎರಡನೇ ಪ್ರಯತ್ನದಿಂದ 3 ರಿಂದ 8ನೇ ಸೆಮಿಸ್ಟರ್ ಶೇ 57.80. ನಾನು ಈಗ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವಾಗ ಇವೆರಡರಲ್ಲಿ ಯಾವುದನ್ನು ನಮೂದಿಸಬೇಕು? ನಾನು ಹಿಂದುಳಿದ ವರ್ಗಕ್ಕೆ ಸೇರಿದ್ದೇನೆ.

ಹಿಂದಿನ ಸೆಮಿಸ್ಟರ್‌ಗಳಲ್ಲಿ ಕಡಿಮೆ ಅಂಕ ಬಂದಿದ್ದರೂ ಇತ್ತೀಚಿನ ಸೆಮಿಸ್ಟರ್‌ಗಳಲ್ಲಿ ಉತ್ತಮ ಅಂಕಗಳು ಬಂದಿರುವುದು ಸಂತೋಷ. ನೀವು ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಸರ್ಕಾರಿ ಉದ್ಯೋಗ ದೊರೆಯುವುದರಲ್ಲಿ ಸಂಶಯವಿಲ್ಲ. ಡಿಗ್ರಿ ಸರ್ಟಿಫಿಕೇಟ್‌ನಲ್ಲಿ ಪ್ರಥಮ ದರ್ಜೆ ನೀಡಿರುವುದರಿಂದ, ನೀವು ಕೆಲಸಕ್ಕೆ ಅರ್ಹರಾಗಿಯೇ ಇರುವಿರಿ. ಆದ್ದರಿಂದ ಆತಂಕ ಬೇಡ.

 

ಸರ್ಕಾರಿ ಕೆಲಸ ದೊರೆಯುವ ತನಕ ಯಾವುದಾದರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ, ಹೀಗೆ ಕೆಲಸ ಪಡೆಯಲು, ಸಂಪರ್ಕಗಳನ್ನು ಎದುರಿಸಲು ಬೇಕಾದ ಕೌಶಲ ಸಂಪಾದಿಸಿ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿ. ಕೀಳರಿಮೆ ಕಿತ್ತೊಗೆದು ಆತ್ಮವಿಶ್ವಾಸದಿಂದ ಮುಂದುವರಿಯಿರಿ.

ಗಣೇಶ ಎಚ್.ಜಿ, ದಾವಣಗೆರೆ

 ನಾನು 2007ರಲ್ಲಿ ಬಿ.ಕಾಂ ಪದವಿ ಪಡೆದೆ. ನಂತರ ಒಂದು ವರ್ಷ ಸ್ಟೋರ್‌ಕೀಪರ್ ಆಗಿ, ನಂತರ ಒಂದು ವರ್ಷ ಆಫೀಸ್ ಬಾಯ್ ಆಗಿ ಕೆಲಸ ಮಾಡಿದೆ. ಬಳಿಕ ಐ.ಟಿ.ಐ ಕೋರ್ಸ್ ಮಾಡಿದೆ. ಈಗ ನನಗೆ 27 ವರ್ಷ. ನಾನು ಸಾಮಾನ್ಯ ವರ್ಗದ ಅಭ್ಯರ್ಥಿ. ಸರ್ಕಾರಿ ಕೆಲಸಗಳಲ್ಲಿ ವಯಸ್ಸಿನ ಮಿತಿಯನ್ನು 28ಕ್ಕೆ ಸೀಮಿತಗೊಳಿಸಿದ್ದಾರೆ. ಆದ್ದರಿಂದ ತುಂಬಾ ಗೊಂದಲದಲ್ಲಿದ್ದೇನೆ. ದಯಮಾಡಿ ಗೊಂದಲ ಪರಿಹರಿಸಿ. ಜೊತೆಗೆ ನನಗೆ ಇಂಗ್ಲಿಷ್ ಭಾಷೆ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ. ಇಂಗ್ಲಿಷ್ ಜ್ಞಾನ ಮತ್ತು ಬರವಣಿಗೆಯನ್ನು ವೃದ್ಧಿಸಿಕೊಳ್ಳುವುದು ಹೇಗೆ?

ನೀವು ಬಿ.ಕಾಂ ಪದವಿ ಗಳಿಸಿ, ಅನೇಕ ಕಡೆ ಕೆಲಸ ಮಾಡಿ ಅನುಭವ ಪಡೆದಿರುವುದರಿಂದ ಉದ್ಯೋಗದ ಬಗ್ಗೆ ಚಿಂತಿತರಾಗಬೇಕಾಗಿಲ್ಲ.  ಈಗ ಸರ್ಕಾರಿ ಉದ್ಯೋಗಕ್ಕಿಂತ ಖಾಸಗಿ ಉದ್ಯೋಗಗಳೇ ವಿಪುಲವಾಗಿರುವುದರಿಂದ, ಸರ್ಕಾರಿ ಉದ್ಯೋಗ ಸಿಗಲಾರದೆಂಬ ಆತಂಕ ಬೇಡ. ಖಾಸಗಿ ಉದ್ಯೋಗಗಳಲ್ಲಿ ಭದ್ರತೆ ಇಲ್ಲ ಎಂಬುದನ್ನು ಬಿಟ್ಟರೆ, ಉಳಿದೆಲ್ಲ ದೃಷ್ಟಿಯಿಂದ ಅದೇ ಉತ್ತಮವಾದುದು.

 

ನಿಮ್ಮ ಪ್ರತಿಭೆಗೆ ಮನ್ನಣೆ, ಕೆಲಸಕ್ಕೆ ಸೂಕ್ತ ಪ್ರತಿಫಲ, ಬೇಕಾದ ಕೆಲಸ ಪಡೆಯುವ ಸ್ವಾತಂತ್ರ್ಯ ಖಾಸಗಿ ಉದ್ಯೋಗದಲ್ಲಿ ಮಾತ್ರ ಸಿಗುತ್ತದೆ. ಇಂಗ್ಲಿಷ್ ಭಾಷೆ ಮೇಲೆ ಪ್ರಭುತ್ವ ಸಾಧಿಸುವ ಕಡೆ ಗಮನಕೊಡಿ. ಇಂಗ್ಲಿಷ್ ಸಂಭಾಷಣೆಯ ಕೋರ್ಸುಗಳಿಗೆ ಸೇರಿಕೊಳ್ಳಿ. ಇಂಗ್ಲಿಷ್ ಪತ್ರಿಕೆ, ಕತೆ, ಕಾದಂಬರಿ ಓದಿ. ಟಿ.ವಿಯಲ್ಲಿ ಇಂಗ್ಲಿಷ್ ಕಾರ್ಯಕ್ರಮ ನೋಡಿ.  ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲೇ ಮಾತನಾಡಲು, ಪತ್ರ ವ್ಯವಹಾರ ಮಾಡಲು ಪ್ರಾರಂಭಿಸಿ. ಹೀಗೆ ಮಾಡಿದರೆ ನಿಧಾನವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಕೌಶಲ ಬೆಳೆಯುತ್ತದೆ.

ಪ್ರದ್ಯುಮ್ನ ಭಾರದ್ವಾಜ್, ಮೈಸೂರು

 ನಾನು ಬಿ.ಇ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮೊದಲನೇ ಸೆಮಿಸ್ಟರ್‌ನಲ್ಲಿ 2 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ನನಗೇಕೋ ಎಂಜಿನಿಯರಿಂಗ್ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವೆನಿಸುತ್ತಿದೆ. ಆದರೆ ನನಗೆ ಇತ್ತೀಚೆಗೆ 2ನೇ ಸೆಮಿಸ್ಟರ್ ಸುಲಭ ಎನಿಸುತ್ತಿದೆ. ಆದರೆ ಮುಂಬರುವ ಸೆಮಿಸ್ಟರ್‌ಗಳು ಹೇಗೋ ಎಂದು ದಿಗಿಲಾಗುತ್ತಿದೆ.

ಎಂಜಿನಿಯರಿಂಗ್ ಕೋರ್ಸುಗಳಿಗೆ ಹೋದ ಅನೇಕ ವಿದ್ಯಾರ್ಥಿಗಳಿಗೆ ನಿಮ್ಮ ಅನುಭವವೇ ಆಗಿದೆ. ಹೊಸ ಕೋರ್ಸು, ಅಲ್ಲಿನ ಅಧ್ಯಾಪಕರು, ಪರೀಕ್ಷಾ ಕ್ರಮಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಅಲ್ಲಿನ ಪರಿಚಯ ಆಪ್ತವಾದ ಮೇಲೆ ಎಲ್ಲವೂ ಸುಲಭವಾಗುತ್ತದೆ. ಆದ್ದರಿಂದ ನೀವು ಧೈರ್ಯಗುಂದದೆ ಎಂಜಿನಿಯರಿಂಗ್ ಮುಂದುವರಿಸುವುದು ಒಳ್ಳೆಯದು.

 

ಶ್ರದ್ಧೆಯಿಂದ ಓದಿದರೆ ಖಂಡಿತ ಯಶಸ್ಸು ಪಡೆಯಬಹುದು. ಬಿ.ಎಸ್ಸಿ/ಬಿ.ಕಾಂ ಕೋರ್ಸುಗಳೂ ಸುಲಭವಲ್ಲ. ಎಲ್ಲ ಕೋರ್ಸುಗಳಲ್ಲೂ ಅದರದ್ದೇ ರೀತಿಯ ಕಷ್ಟಗಳಿರುತ್ತವೆ. ಕಷ್ಟವೆಂದು ಒಂದು ಕೋರ್ಸಿನಿಂದ ಮತ್ತೊಂದು ಕೋರ್ಸಿಗೆ ಹೋಗುವುದು ವ್ಯರ್ಥವಾದ ತಿರುಗಾಟವಾಗುತ್ತದೆ. ನಿಮ್ಮ ಆಸಕ್ತಿ ಯಾವ ಕ್ಷೇತ್ರದ ಕಡೆ ಇದೆ ಎಂದು ಗುರುತಿಸಿಕೊಂಡು, ಎಷ್ಟು ಕಷ್ಟವಾದರೂ ಆ ಕ್ಷೇತ್ರದಲ್ಲೇ ಮುಂದುವರಿಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry