ಪ್ರಶ್ನೆ- ಉತ್ತರ

7

ಪ್ರಶ್ನೆ- ಉತ್ತರ

Published:
Updated:

ಲೋಕೇಶ ವಿ.ಎಸ್

ನಾನು ಬಿ.ಕಾಂ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಎಂ.ಕಾಂ ಮಾಡುವ ಆಸೆ ಇದೆ. ಬಿ.ಕಾಂ ಪದವೀಧರರಿಗೆ ಉದ್ಯೋಗಾವಕಾಶಗಳ ಬಗ್ಗೆ ಅಥವಾ ಅದಕ್ಕೆ ಅನುಕೂಲಕರ ಕೋರ್ಸುಗಳೇನಾದರೂ ಇದ್ದರೆ ತಿಳಿಸಿ.

ಎಂ.ಕಾಂ ಸ್ನಾತಕೋತ್ತರ ಪದವಿಗೆ ನೀವು ಬಿ.ಕಾಂ ತರಗತಿಯ ಮೂರು ವರ್ಷಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಈ ಸ್ನಾತಕೋತ್ತರ ಪದವಿಯ  ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಜೇಷ್ಟತಾ ಪಟ್ಟಿ ತಯಾರಿಸಿ, ಅದರ ಅಧಾರದ ಮೇಲೆ ಪ್ರವೇಶ ನೀಡುತ್ತಾರೆ. ಎಂ.ಕಾಂ ಪದವಿಯ ನಂತರ ನಿಮಗೆ ಹೆಚ್ಚಿನ ವಿದ್ಯಾಭ್ಯಾಸದ ಆಸೆ ಇದ್ದರೆ ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆಯಬಹುದು. ಇದರ ಆಧಾರದ ಮೇಲೆ ಅಧ್ಯಾಪಕರಾಗಿ ಅಥವಾ ಅದಕ್ಕೆ ಸರಿಸಮನವಾದ ಉದ್ಯೋಗಕ್ಕೆ ಸೇರಲು ಅರ್ಹರಾಗಿರುತ್ತೀರಿ.

ಸುಚೇತ್, ಮೈಸೂರು

ನಾನು ಪಾಲಿಮರ್ ಸೈನ್ಸ್ ಟೆಕ್ನಾಲಜಿ ವಿಷಯ ವ್ಯಾಸಂಗ ಮಾಡುತ್ತಿದ್ದು, ಇದಕ್ಕಿರುವ ಉದ್ಯೋಗಾವಕಾಶ ಕುರಿತು ಮಾಹಿತಿ ಒದಗಿಸಿ.

ಪಾಲಿಮರ್ ಸೈನ್ಸ್ ಮತ್ತು ಟೆಕ್ನಾಲಜಿ ವಿಷಯದಲ್ಲಿ ವ್ಯಾಸಂಗ ಮಾಡುತ್ತಿರುವ ನಿಮಗೆ ಜವಳಿ ಮತ್ತು ಪೆಟ್ರೋಲಿಯಂ ಉತ್ಪಾದನಾ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ. ಅಂತಹ ಅನೇಕ ಹೆಸರಾಂತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನಮ್ಮಲ್ಲಿ ಇವೆ. ಉದಾ: ಒಎನ್‌ಜಿಸಿ, ರಿಲಯನ್ಸ್, ರೇಮಂಡ್ಸ್ ಇತ್ಯಾದಿ.

ಚಿದಾನಂದಮೂರ್ತಿ, ತುಮಕೂರು

ನಾನು ದ್ವಿತೀಯ ಪಿ.ಯು.ಸಿ.ಯಲ್ಲಿ 3 ವರ್ಷಗಳ ಹಿಂದೆಯೇ ಅನುತ್ತೀರ್ಣನಾಗಿದ್ದೇನೆ. ಮತ್ತೆ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಜೆಟ್‌ಕಿಂಗ್‌ನಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಕೋರ್ಸ್ ಮುಗಿಸಿದ್ದೇನೆ. ನನಗೆ ದೃಶ್ಯ ಮಾಧ್ಯಮದಲ್ಲಿ ಕರ್ತವ್ಯ ಮಾಡಬೇಕೆಂಬ ಮಹದಾಸೆ ಇದೆ. ವರದಿಗಾರನಾಗಿ ಅಥವಾ ತಾಂತ್ರಿಕ ವಿಭಾಗದಲ್ಲಾದರೂ ಕೆಲಸ ಮಾಡಬೇಕೆಂಬ ಅತೀವ ಹಂಬಲ ಇದೆ. ದಯಮಾಡಿ ಸೂಕ್ತ ಸಲಹೆ, ಮಾರ್ಗದರ್ಶನ ಕೊಡಿ.

ಕಂಪ್ಯೂಟರ್ ಹಾರ್ಡ್‌ವೇರ್ ನೆಟ್‌ವರ್ಕಿಂಗ್ ಕೋರ್ಸ್ ಮಾಡಿರುವ ನೀವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸುವುದು ಉಚಿತ. ಇದರ ಬದಲಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ ಇಚ್ಛೆ ಇದ್ದರೆ ಸರ್ಕಾರಿ ಅಥವಾ ಖಾಸಗಿ ದೂರದರ್ಶನ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಕ್ಕಾಗಿ ಅರ್ಜಿ ಸಲ್ಲಿಸಬಹುದು.

ಡಾ. ಕೆ.ವಿ.ಸಂತೋಷ್, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.

ನಾನು ಬಿ.ಡಿ.ಎಸ್ (ಡೆಂಟಲ್) ಪದವೀಧರನಾಗಿದ್ದು, ಖಾಸಗಿ ದಂತ ಚಿಕಿತ್ಸಾಲಯ ನಡೆಸುತ್ತಿದ್ದೇನೆ. ಕೆ.ಎ.ಎಸ್ ಪರೀಕ್ಷೆ ಬರೆಯಲು ಇಚ್ಛಿಸಿದ್ದೇನೆ. ಅದಕ್ಕಾಗಿ ಕೋಚಿಂಗ್, ಸಿಲೆಬಸ್, ಸಮಯ ನಿರ್ವಹಣೆ ಮುಂತಾದವುಗಳ ಬಗ್ಗೆ ತಿಳಿಸಿಕೊಡಿ. ನಾನು ಯಾವ ವಿಷಯ ಆಯ್ಕೆ ಮಾಡಿಕೊಳ್ಳಲಿ?

ಖಾಸಗಿ ದಂತ ಚಿಕಿತ್ಸಾಲಯ ನಡೆಸುತ್ತಿರುವ ನೀವು ಕೆ.ಎ.ಎಸ್ ಪರೀಕ್ಷೆಗೆ ಬೇಕಾದ ಸಿದ್ಧತೆಯನ್ನು ಖಾಸಗಿಯಾಗಿಯೇ ನಿಮ್ಮ ಕೆಲಸದ ನಂತರ ದೊರೆಯುವ ಸಮಯವನ್ನು ಉಪಯೋಗಿಸಿಕೊಂಡು ಮಾಡುವುದು ಸೂಕ್ತ. ಏಕೆಂದರೆ ಈ ಪರೀಕ್ಷೆಗೆ ಬೇಕಾದ ತರಬೇತಿ ನೀಡುವ ಸಂಸ್ಥೆಗಳು ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಈ ಪರೀಕ್ಷೆಗೆ ಬೇಕಾದ ಪಠ್ಯಕ್ರಮಗಳು ಕೆ.ಪಿ.ಎಸ್.ಸಿ ಸಂಸ್ಥೆಯ ಅಂತರ್ಜಾಲದಲ್ಲಿ ದೊರೆಯುತ್ತದೆ. ಅದಕ್ಕೆ ಪೂರಕವಾದ ಪುಸ್ತಕಗಳನ್ನು ಕೊಂಡು ನೀವು ತಯಾರಿ ಮಾಡಿಕೊಳ್ಳಬಹುದು. http://kpsc.kar.nic.in 

ರವಿಶಂಕರ್ ಎಂ, ಹೂವಿನಹಡಗಲಿ

ನನ್ನ ತಂಗಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಅವಳಿಗೆ ಪಿ.ಯು.ಸಿ ಬಿಟ್ಟು ಬೇರೆ ಕೋರ್ಸಿಗೆ ಸೇರಿಸಬೇಕೆಂದಿದ್ದೇವೆ. ಎಸ್ಸೆಸ್ಸೆಲ್ಸಿ ಆಧಾರದ ಮೇಲೆ ಡಿಪ್ಲೊಮಾ ಇರುವಂತೆ ಮಹಿಳೆಯರಿಗೆ ಅನುಕೂಲಕರವಾದ ಯಾವ ಯಾವ ಕೋರ್ಸುಗಳು ಇವೆ ತಿಳಿಸಿ. ಎಸ್ಸೆಸ್ಸೆಲ್ಸಿ ನಂತರ ಮುಂದಿನ ಕೋರ್ಸ್‌ಗೆ ಸೇರಲು ಯಾವುದಾದರೂ ಪುಸ್ತಕಗಳನ್ನು ಓದಬೇಕೆಂದರೆ ತಿಳಿಸಿ.

ಹತ್ತನೇ ತರಗತಿಯ ವಿದ್ಯಾಭ್ಯಾಸದ ನಂತರ ಪದವಿ ಪೂರ್ವ ಶಿಕ್ಷಣದ ಬದಲಾಗಿ ಫ್ಯಾಷನ್ ಡಿಸೈನ್, ಮಾಡೆಲಿಂಗ್, ಪೇಂಟಿಂಗ್ ಇತ್ಯಾದಿ ಯಾವುದಾದರೂ ವೃತ್ತಿಪರ ಕೋರ್ಸ್ ಸೇರಬಹುದು. ಇಂತಹ ಕೋರ್ಸ್‌ಗಳಿಗೆ ಪ್ರವೇಶ ಪಡೆದರೆ ನಿರ್ದಿಷ್ಟವಾದ ತಯಾರಿಯ ಅವಶ್ಯಕತೆ ಇರುವುದಿಲ್ಲ. ನೀವು ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಅಧಾರದ ಮೇಲೆ ಪ್ರವೇಶ ದೊರೆಯುತ್ತದೆ.

ಪ್ರತಾಪ್ ಎಂ.ಎಸ್, ಮಂಕುಂದ, ಚನ್ನಪಟ್ಟಣ

ನಾನು ಬಿ.ಎಸ್ಸಿ (ಸಿ.ಬಿ.ಝಡ್) ಪದವಿ ಪಡೆದಿದ್ದೇನೆ. ಈಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಎಂ.ಬಿ.ಎ ಮಾಡಬೇಕೆಂಬ ಆಸೆ ಇದೆ. ಸಂಜೆ ಕಾಲೇಜಿನಲ್ಲಿ ಮಾಡಬಹುದೇ? ಬಿ.ಎಸ್ಸಿ ಪಡೆದಿರುವ ನನಗೆ ಇದನ್ನು ಓದಲು ಕಷ್ಟವಾಗುತ್ತದೆಯೇ? ಇದಕ್ಕೆ ಉದ್ಯೋಗಾವಕಾಶಗಳು ಹೇಗಿವೆ ಮತ್ತು ದೂರಶಿಕ್ಷಣದಲ್ಲಿ ರಸಾಯನಶಾಸ್ತ್ರ ವಿಚಾರದಲ್ಲಿ ಎಂ.ಎಸ್ಸಿ ಮಾಡಬಹುದೇ? ಇವೆರಡರಲ್ಲಿ ಯಾವುದು ಸೂಕ್ತ? ಗೊಂದಲ ಉಂಟಾಗಿದೆ.

ಎಂ.ಬಿ.ಎ ಪದವಿಗೆ ಬೇಕಾದ ಅಭ್ಯಾಸವನ್ನು ನೀವು ಸಂಜೆ ಕಾಲೇಜಿನಲ್ಲಿ ಅಥವಾ ದೂರಶಿಕ್ಷಣದ ಮೂಲಕವೂ ಮಾಡಬಹುದು. ಇದಕ್ಕೆ ಪೂರಕವಾದ ಪರಿಶ್ರಮ ಹಾಕಲು ಇಚ್ಛೆ ಇದ್ದರೆ ಈ ಪದವಿಯನ್ನು ಗಳಿಸುವುದು ಕಷ್ಟವಾಗಲಾರದು. ಎಂ.ಬಿ.ಎ ಪದವಿಯಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ವಿಷಯದ ಮೇಲೆ, ಉದಾಹರಣೆಗೆ ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ ಇವುಗಳ ಅಧಾರದ ಮೇಲೆ ಅನೇಕ ಖಾಸಗಿ ಸಂಸ್ಥೆಗಳಲ್ಲಿ ಸೂಕ್ತವಾದ ಉದ್ಯೋಗ ದೊರೆಯುತ್ತದೆ. ನೀವು ತಿಳಿಸಿರುವಂತೆ ದೂರಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ರಸಾಯನಶಾಸ್ತ್ರದಲ್ಲಿ ಪಡೆಯುವುದು ಸಾಧ್ಯ. ಆದರೆ ಇದಕ್ಕೆ ಇನ್ನೂ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ಎಂ.ಬಿ.ಎ ಪದವಿ ಪಡೆಯುವುದು ಉತ್ತಮ.

ಪ್ರೀತಿಕಾ ತೋಳಾರ್, ಹೆಬ್ರಿ, ಉಡುಪಿ

ನಾನು ಈಗ ದ್ವಿತೀಯ ಪಿ.ಯು.ಸಿ ಓದುತ್ತಿದ್ದೇನೆ. ನನಗೆ ಎಂಜಿನಿಯರಿಂಗ್ ಮಾಡಲು ಆಸಕ್ತಿ ಇದೆ. ಎಂಜಿನಿಯಿಂಗ್‌ನಲ್ಲಿ ಯಾವ ವಿಷಯವನ್ನು ಆಯ್ದುಕೊಂಡರೆ ಸೂಕ್ತ ಎನ್ನುವ ಗೊಂದಲವಿದೆ. ನನಗೆ ಮಾಹಿತಿ ವಿಜ್ಞಾನದಲ್ಲಿ ಆಸಕ್ತಿ ಇದೆ. ಇದನ್ನು ಆಯ್ಕೆ ಮಾಡಿಕೊಳ್ಳಬಹುದೇ? ಇದು ಹೆಣ್ಣು ಮಕ್ಕಳಿಗೆ ಸೂಕ್ತವೇ? ಇದಕ್ಕೆ ಉದ್ಯೋಗಾವಕಾಶಗಳು ಹೇಗೆ?

ದ್ವಿತೀಯ ಪಿಯುಸಿ ನಂತರ ತಾಂತ್ರಿಕ ಪದವಿಯಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯ ನಿಮ್ಮ ಆಸಕ್ತಿಯನ್ನು ಅವಲಂಬಿಸಿರುತ್ತದೆ. ನೀವು ತಿಳಿಸಿರುವಂತೆ ಮಾಹಿತಿ ತಂತ್ರಜ್ಞಾನದಲ್ಲಿ ಆಸಕ್ತಿ ಇದ್ದರೆ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಹೆಣ್ಣು ಮಕ್ಕಳಿಗೆ ಇಂತಹುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಬಂಧ ನಿಸ್ಸಂದೇಹವಾಗಿ ಇರುವುದಿಲ್ಲ. ಇಂದು ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಉತ್ತಮವಾಗಿ ಕೆಲಸ ಮಾಡಿ ಕೀರ್ತಿ ಗಳಿಸುತ್ತಿದ್ದಾರೆ. ಸದ್ಯಕ್ಕೆ ನೀವು ತಿಳಿಸಿರುವ ಪದವಿಯ ನಂತರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶ ಇರುತ್ತವೆ.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳುಹಿಸಬಹುದು: http://shikshana@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry