ಪ್ರಶ್ನೋತ್ತರ ?

7

ಪ್ರಶ್ನೋತ್ತರ ?

Published:
Updated:

ಲತಾ, ಮೈಸೂರು

ಪ್ರಶ್ನೆ: ನನ್ನ ಹತ್ತಿರ ರೂ.50,000 ಇದೆ. ಈ ಹಣ ಬ್ಯಾಂಕಿನಲ್ಲಿ ಇರಿಸಿ ಬರುವ ಬಡ್ಡಿಯಿಂದ ಎಲ್‌ಐಸಿ ಪ್ರೀಮಿಯಂ ಮೊತ್ತವನ್ನು ರೂ.1000 ರಂತೆ ಆರು ತಿಂಗಳಿಗೊಮ್ಮೆ ರೂ.6333 ಕಟ್ಟಬೇಕೆಂದಿದ್ದೇನೆ. ಯಾವ ಬ್ಯಾಂಕಿನಲ್ಲಿ ಹಣ ಇರಿಸಬಹುದು. ಇದಕ್ಕೆ ಪ್ಯಾನ್ ಕಾರ್ಡು ಮಾಡಿಸಬೇಕೆ. ತಿಂಗಳಿಗೆ ಶೇ 2 ರಷ್ಟು ಬಡ್ಡಿ ಕೊಡುವ ಬ್ಯಾಂಕಿನ ಹೆಸರು ತಿಳಿಸಿ.


ಉತ್ತರ: ತಾವು ಬ್ಯಾಂಕೊಂದರಲ್ಲಿ ರೂ.50,000 ಇರಿಸಿ ಬರುವ ಬಡ್ಡಿಯಲ್ಲಿ ರೂ.6,333 ಎಲ್‌ಐಸಿ ಕಂತಿನ ಹಣ ಕಟ್ಟಬೇಕೆಂದಿದ್ದೀರಿ. ನಿಮ್ಮ ಯೋಜನೆಯೇನೋ ಸರಿಯಾಗಿದೆ.ಆದರೆ, ಇಂದಿನ ಬ್ಯಾಂಕ್ ಠೇವಣಿ ವಾರ್ಷಿಕ ಬಡ್ಡಿ ದರ ಶೇ 9-10ರಷ್ಟು ಇರುವುದರಿಂದ ನಿಮ್ಮ ರೂ. 50,000 ಬ್ಯಾಂಕಿನಲ್ಲಿ ಇರಿಸಿದರೆ ಗರಿಷ್ಠ ವಾರ್ಷಿಕ ಬಡ್ಡಿ ರೂ. 5,000 ಮಾತ್ರ ಬರುತ್ತದೆ.ನಿಮಗೆ ಎಲ್‌ಐಸಿ ಪ್ರೀಮಿಯಂ ಕಟ್ಟಲು ವಾರ್ಷಿಕವಾಗಿ ರೂ.12,666 ಬೇಕಾಗುತ್ತದೆ. ಈಗಾಗಲೇ ಎಲ್‌ಐಸಿ ಪಾಲಿಸಿ ಪಡೆ ಯದಿದ್ದರೆ, ಆರು ತಿಂಗಳಿಗೊಮ್ಮೆ  ರೂ.2,500 ಕಟ್ಟುವಷ್ಟು ಹಣಕ್ಕೆ ಸರಿಯಾಗಿ ಪಾಲಿಸಿ ತೆಗೆದುಕೊಳ್ಳಿ, ಅಥವಾ ಹೆಚ್ಚಿನ ಠೇವಣಿ ಇರಿಸಿರಿ.ಮೈಸೂರಿನಲ್ಲಿ ನಿಮ್ಮ ಮನೆ ಸಮೀಪದ ಯಾವುದಾದರೊಂದು ಬ್ಯಾಂಕ್ ಆರಿಸಿಕೊಳ್ಳಿ. ರೂ.50,000 ಇರಿಸಲು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡು ಅಗತ್ಯವಿದೆ. `ಪ್ಯಾನ್~ ಕಾರ್ಡು ಪಡೆಯುವುದರಿಂದ ಆದಾಯ ತೆರಿಗೆ ಕೊಡಬೇಕಾಗುತ್ತದೆ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ.

 

ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರ. ದೇಶದಲ್ಲಿ ಸೇವೆ ಸಲ್ಲಿಸುವ ಯಾವುದೇ ಖಾಸಗಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ವಿದೇಶಿ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಶೇ 2 ಬಡ್ಡಿ ಅಂದರೆ ತಿಂಗಳಿಗೆ ಶೇ 2 ಅಥವಾ ವಾರ್ಷಿಕ 24, ಠೇವಣಿ ಮೇಲೆ ಬಡ್ಡಿ ವಿತರಿಸುವುದಿಲ್ಲ.ಬ್ಯಾಂಕುಗಳು ಹೊರತುಪಡಿಸಿ, ಲೇವಾದೇವಿದಾರರು (Money Lenders)  ಅಥವಾ ಕೆಲವು ವ್ಯಕ್ತಿಗಳು ನಿಮ್ಮ ಬಯಕೆಯಂತೆ  ಠೇವಣಿ ಮೇಲೆ ತಿಂಗಳಿಗೆ ಶೇ 2 ರಂತೆ ಬಡ್ಡಿ ಕೊಡಬಹುದು. ಹೆಚ್ಚಿನ ಬಡ್ಡಿ ಆಮಿಷ ತೋರಿಸಿ, ಅಸಲು ಹಿಂತಿರುಗಿಸದ   ಉದಾಹರಣೆಗಳೂ ಇವೆ. ಜಾಗ್ರತೆ ಇರಲಿ.ಡಾ. ಕೆ. ವಿ. ಸಂತೋಷ್, ಹೊಳಲ್‌ಕೆರೆ  ಚಿತ್ರದುರ್ಗ

ಪ್ರಶ್ನೆ: ನಾನು ಖಾಸಗಿ ಇನ್ಶುರನ್ಸ್ ಕಂಪೆನಿಯಾದ ರಿಲಯನ್ಸ್ ಲೈಫ್ ಇನ್ಶುರನ್ಸ್‌ನಲ್ಲಿ 4 ವರ್ಷಗಳ ಹಿಂದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗುವಂತೆ ಒಂದು ಪಾಲಿಸಿ ಮಾಡಿಸಿದ್ದೆ. ಈ ಪಾಲಿಸಿಯ ಪೋರ್ಟೆಬಿಲಿಟಿಯ ಬಗ್ಗೆ `ಎಲ್‌ಐಸಿ~ಯಲ್ಲಿ ವಿಚಾರಿಸಿದಾಗ, ಅವರು ಇದು ಸಾಧ್ಯವಿಲ್ಲ ಎನ್ನುತ್ತಾರೆ.

 

ನನಗೆ ಖಾಸಗಿ ಇನ್ಶುರನ್ಸ್‌ನಲ್ಲಿ ಮುಂದುವರಿಯಲು ಇಷ್ಟವಿಲ್ಲ. ಮೂರು ಕಂತಿನ ನಂತರ ಹಣ ಕಟ್ಟಿಲ್ಲ. ಈ ಪಾಲಿಸಿ ಮುಕ್ತಾಯ ಮಾಡಲು ಕೇಳಿದರೆ ಶೇ 50 ಕೂಡಾ ಬರುವುದಿಲ್ಲ ಎನ್ನುತ್ತಾರೆ.

 

ಪೂರ್ತಿ ಮಾಹಿತಿ ಕೊಡಲು ಕಂಪನಿಗೆ ಫೋನ್ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನನ್ನಂತೆ ಹಲವರು ಎಲ್‌ಐಸಿಗೆ ಬರಲು ಸಿದ್ಧರಿದ್ದಾರೆ. ಏನು ಮಾಡಬೇಕು ಎಂಬುದನ್ನು ತಿಳಿಸಿರಿ.
ಉತ್ತರ: ನೀವು ರಿಲಯನ್ಸ್ ಇನ್ಶುರನ್ಸ್ ಕಂಪೆನಿಯಲ್ಲಿ 4 ವರ್ಷಗಳ ಹಿಂದೆ ಯುಲಿಪ್ (unit linked insurance plan) ಪಾಲಿಸಿ ಮಾಡಿರಬೇಕು ಎಂದುಕೊಂಡಿದ್ದೇನೆ. ಷೇರು ಮಾರುಕಟ್ಟೆಯ ಹೂಡಿಕೆ ಇದರಲ್ಲಿ ಇರುತ್ತದೆ.

 

ಇಂತಹ ಪಾಲಿಸಿಗಳಲ್ಲಿ ಹೂಡಿದ ಗರಿಷ್ಠ ಹಣವನ್ನು ಇನ್ಶುರನ್ಸ್ ಕಂಪೆನಿಯವರು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಾರೆ. ಇದು ಪ್ರಾಯಶಃ ನಿಮ್ಮ ಅಂದಿನ ಇಚ್ಛೆಯಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ಸಂವೇದಿ ಸೂಚ್ಯಂಕಕ್ಕೆ (sensex) ಅನುಗುಣವಾಗಿ, ಮೇಲೆ ಕೆಳಗೆ ಹೋಗುತ್ತಿರುತ್ತದೆ.

 

4 ವರ್ಷಗಳ ಹಿಂದಿನ ಸೂಚ್ಯಂಕ ಇಂದು ಮೇಲೆ ಹೋಗದಿರುವುದರಿಂದ, ನಿಮ್ಮ ಹೂಡಿಕೆ ವೃದ್ಧಿಯಾಗಲಿಲ್ಲ. ರಿಲಯನ್ಸ್ ಇನ್ಶುರನ್ಸ್ ಕಂಪನಿಯವರು, ಇಂದಿನ ನಿವ್ವಳ ಸಂಪತ್ತು ಮೌಲ್ಯ (ಎನ್‌ಎಪಿ) ಆಧಾರದ ಮೇಲೆ ಶೇ 50 ಕೂಡಾ ಬರಲಿಕ್ಕಿಲ್ಲ ಎಂದಿರಬಹುದು.ಯಾವುದೇ ಪಾಲಿಸಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡುವಾಗ ಪರಿಣತರಿಂದ ವಿಚಾರಿಸುವುದು ಉತ್ತಮ ಮಾರ್ಗ. ಇಂತಹ ಪಾಲಿಸಿಗಳನ್ನು ಎಲ್‌ಐಸಿಗಾಗಲೀ ಅಥವಾ ಇನ್ನಿತರ ಕಂಪನಿಗಳಿಗೆ ವರ್ಗಾಯಿಸಲು ಬರುವುದಿಲ್ಲ.ಯುಲಿಪ್ ಪಾಲಿಸಿಗಳ ಹಣ ಪಡೆಯುವ ಅವಧಿ (lock in period)  ಮೂರು ವರ್ಷ. ನೀವು ಈಗಾಗಲೇ 4ನೇ ವರ್ಷದಲ್ಲಿರುವುದರಿಂದ ನಿಮಗೆ ಎರಡು ದಾರಿಗಳಿವೆ. ನಿಮಗೆ ಬರಬಹುದಾದ ಹಣ ಅಂದರೆ ನಿಮ್ಮ ಹೂಡಿಕೆಯ ಯುನಿಟ್ಟುಗಳ  ಎನ್‌ಎವಿ (net asset value)  ಎಷ್ಟೊ ಅಷ್ಟನ್ನೂ ಪಡೆಯುವುದು, ಅಥವಾ ಸಂವೇದಿ ಸೂಚ್ಯಂಕ ಮೇಲಕ್ಕೆ ಹೋಗುವ ತನಕ ಕಾಯುವುದು.

 

ನಿಮಗೊಂದು ಕಿವಿಮಾತು. ಷೇರು ವ್ಯವಹಾರ ಅಥವಾ ಮ್ಯೂಚುವಲ್ ಫಂಡುಗಳಲ್ಲಿ ಹಣ ಹೂಡುವ ಮುನ್ನ ಇಂತಹ ನಷ್ಟ ಅಥವಾ ಕಂಟಕ (risk) ಎದುರಿಸುವ ಸಾಮರ್ಥ್ಯವಿದ್ದರೆ ಮಾತ್ರ ಹಣ ಹೂಡಬೇಕು. ಈ ವ್ಯವಹಾರದಲ್ಲಿ ಲಾಭಗಳಿಸುವ ಸಾಧ್ಯತೆ ಇದ್ದರೂ, ನಷ್ಟ ಅನುಭವಿಸುವ ಸಾಧ್ಯತೆ ಕೂಡಾ ಇರುತ್ತದೆ.ಕುಬೇರಪ್ಪ, ಕಾಳಿದಾಸ ನಗರ, ಹರಿಹರ

ಪ್ರಶ್ನೆ: ಮನೆ ಕಟ್ಟಲು ಸಾಲ ತೆಗೆಯಲು ಯಾವ ರೀತಿಯ ಹಣಕಾಸಿನ ವ್ಯವಸ್ಥೆ ಬ್ಯಾಂಕ್‌ನಲ್ಲಿ ಇದೆ. ಅದರಲ್ಲಿ ಸರಳ ಹಾಗೂ ಕಡಿಮೆ ಬಡ್ಡಿ ಇರುವ ಬಗ್ಗೆ ತಿಳಿಸಿರಿ. ಗೃಹ ಸಾಲಕ್ಕೆ ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತದೆ, ಮತ್ತು ವಾರ್ಷಿಕ ಆದಾಯ ತೆರಿಗೆಯಲ್ಲಿ ಶೇಕಡಾ ಎಷ್ಟು ರಿಯಾಯತಿ ದೊರೆಯುತ್ತದೆ. ವಿವರವಾಗಿ ತಿಳಿಸಿರಿ.
ಉತ್ತರ: ಮನೆ ಕಟ್ಟಲು ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತದೆ. ಗೃಹ ಸಾಲ ಆದ್ಯತಾ ರಂಗದಡಿ ಬರುವುದರಿಂದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಸೌಲಭ್ಯ ನೀಡಲು ನೆರವಾಗುತ್ತವೆ. ಇದೇ ನೀವು ಬಯಸುವ ಹಣಕಾಸು ವ್ಯವಸ್ಥೆ ಎಂದು ತಿಳಿಯುತ್ತೇನೆ.

 

ಗೃಹ ಸಾಲ, ನೀವು ಕಟ್ಟುವ ಮನೆಗೆ ತಗಲುವ ಖರ್ಚು ವೆಚ್ಚದ ಮೇಲೆ ಹೊಂದಿಕೊಂಡಿರುತ್ತದೆ. ನಿಮ್ಮ ಪ್ಲ್ಯಾನ್ ಹಾಗೂ ತಗಲುವ ಖರ್ಚು ರೂ.10 ಲಕ್ಷ ಎಂದಾದರೆ ಸಾಮಾನ್ಯವಾಗಿ ರೂ. 7.50 ರಿಂದ ರೂ.8 ಲಕ್ಷದವರೆಗೆ ಸಾಲ ದೊರೆಯುತ್ತದೆ.

 

ಗೃಹ ಸಾಲ ಮರುಪಾವತಿ ಮಾಡಲು ಗರಿಷ್ಠ 240 ತಿಂಗಳು ಅವಧಿ ಸಿಗುತ್ತದೆ. ಸಾಲ ಮರುಪಾವತಿಗೆ ತಿಂಗಳ ಕಂತು ಮತ್ತು ಬಡ್ಡಿ ಸೇರಿ ಒಂದು ಮೊತ್ತವನ್ನು ನಿರ್ಧರಿಸುತ್ತಾರೆ. ಇದನ್ನು ಇಎಂಐ (equated monthly instalment- EMI) ಎಂದು ಕರೆಯುತ್ತಾರೆ.ಬ್ಯಾಂಕುಗಳಲ್ಲಿ ಗೃಹ ಸಾಲ ನೀಡುವಾಗ ಒಮ್ಮೆಲೇ ನಿರ್ಧರಿಸುವ ಬಡ್ಡಿ  (Fixed interest rate)  ಹಾಗೂ ಕಾಲ ಕಾಲಕ್ಕೆ ಬದಲಾಗುವ ಬಡ್ಡಿ ದರ (Floating Rate)   ಹೀಗೆ ಎರಡು ನಮೂನೆಗಳಿವೆ. ನೀವು ಸ್ಥಿರವಾಗಿ ನಿರ್ಧರಿಸುವ ಬಡ್ಡಿ ಆರಿಸಿಕೊಂಡರೆ ಈ ಬಡ್ಡಿ ದರ ಸಾಲ ತೀರುವ ತನಕ ಅದೇ ಬಡ್ಡಿ ದರವಿರುತ್ತದೆ.

 

ಆದರೆ, ಈ ಬಡ್ಡಿ ದರ ಬದಲಾಗುವ ಬಡ್ಡಿ ದರಕ್ಕಿಂತ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಬದಲಾಗುವ ಬಡ್ಡಿ ದರ, ಒಮ್ಮೆಲೇ ನಿರ್ಧರಿಸುವ ಬಡ್ಡಿಗಿಂತ ಸ್ವಲ್ಪ ಕಡಿಮೆಯಾದರೂ, ಹಣದುಬ್ಬರದಿಂದ (Inflation)  ಮುಂದಿನ ವರ್ಷಗಳಲ್ಲಿ ಹೆಚ್ಚಾಗಲೂಬಹುದು.

 

ಹಣದುಬ್ಬರ ಕಡಿಮೆ ಆದಲ್ಲಿ, ಬಡ್ಡಿ ದರ ಕೂಡಾ ಕಡಿಮೆಯಾಗುತ್ತದೆ. ನೀವು ಕಡಿಮೆ ಬಡ್ಡಿ ವಿಚಾರದಲ್ಲಿ ಪ್ರಶ್ನೆ ಕೇಳಿದ್ದೀರಿ. ಗೃಹ ಸಲ 20 ವರ್ಷಗಳ ಅಂದರೆ 240 ತಿಂಗಳುಗಳ ಅವಧಿಗೆ ಪಡೆಯುವುದಾದರೆ ಫಿಕ್ಸೆಡ್ ಬಡ್ಡಿ ದರ ಆರಿಸಿಕೊಳ್ಳಿ. ಇಂದಿನ ಹಣದುಬ್ಬರದ ವೇಗವನ್ನು ತಡೆಹಿಡಿಯಲು ಇಂದು ನಿರ್ಧರಿಸಿದ ಬಡ್ಡಿ ದರ ಮುಂದೆ ಸಹಾಯವಾದೀತು.ಇನ್ನು ಗೃಹ ಸಾಲಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗಬಹುದೇ ಎಂಬುದನ್ನು ಕೇಳಿರುತ್ತೀರಿ. ಬ್ಯಾಂಕುಗಳಲ್ಲಿ ದೊರೆಯುವ ಗೃಹ ಸಾಲಕ್ಕೆ ಸರ್ಕಾರದ ಸಬ್ಸಿಡಿ ಇರುವುದಿಲ್ಲ. ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬಂದಲ್ಲಿ, ಗೃಹ ಸಾಲದ ವಾರ್ಷಿಕ ಕಂತು ತುಂಬಿದ್ದರಲ್ಲಿ ಗರಿಷ್ಠ ರೂ.1 ಲಕ್ಷದಷ್ಟು ಮೊತ್ತವು ಆದಾಯ ತೆರಿಗೆ ಸೆಕ್ಷನ್ 80 ಸಿ. ಆಧಾರದ ಮೇಲೆ ಹಾಗೂ ಗೃಹ ಸಾಲದ ಮೇಲಿನ ಬಡ್ಡಿಯು ಆರ್ಥಿಕ ವರ್ಷದಲ್ಲಿ ಸಲ್ಲಿಸಿರುವುದರಲ್ಲಿ ಗರಿಷ್ಠ ರೂ.1-50 ಲಕ್ಷ, ನಿಮ್ಮ ಒಟ್ಟು ಆದಾಯದಿಂದ (Gross Income) ಕಳೆದು ಉಳಿದ ಮೊತ್ತಕ್ಕೆ ಮಾತ್ರ ಆದಾಯ ತೆರಿಗೆ ಸಲ್ಲಿಸುವ ಸೌಲತ್ತು ಇರುತ್ತದೆ. (ಗೃಹ ಸಾಲದ ಬಡ್ಡಿ ಆದಾಯವು ತೆರಿಗೆ ಸೆಕ್ಷನ್ 24. ಬಿ. ಆಧಾರದ ಮೇಲೆ ಇರುತ್ತದೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry