ಗುರುವಾರ , ನವೆಂಬರ್ 21, 2019
24 °C
ಮಹಾಪ್ರಸಾದದ ಬಗ್ಗೆ ಸ್ವಾರಸ್ಯಕರ ಚರ್ಚೆ

ಪ್ರಸಾದ ವಿತರಣೆಗೆ ಹೈಕೋರ್ಟ್ ಅನುಮತಿ

Published:
Updated:

ಧಾರವಾಡ: ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಪ್ರಸಾದ ವಿತರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆಯೇ ಎನ್ನುವ ಪ್ರಶ್ನೆ ಮಂಗಳವಾರ ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಚರ್ಚೆಗೆ ಒಳಗಾಯಿತು.ಇಲ್ಲಿಗೆ ಸಮೀಪದ ರಾಯಾಪುರ ಸದಾನಂದ ಬಾಬಾ ಆಶ್ರಮದ ವ್ಯವಸ್ಥಾಪಕ ಎಸ್.ಎಸ್.ಲಕ್ಕಣ್ಣವರ ಎನ್ನುವವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಹಾಪ್ರಸಾದ ಎಂದರೆ ಏನು..? ಪ್ರಸಾದ ಎಂದರೆ ಏನು ವಿತರಣೆ ಮಾಡಲಾಗುತ್ತದೆ, ಯಾರಿಗೆ ವಿತರಿಸಲಾಗುತ್ತದೆ ಎನ್ನುವ ಪ್ರಶ್ನೆಗಳನ್ನು ನ್ಯಾಯಪೀಠ ಮುಂದಿಟ್ಟಿತು.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಇದೇ 19ರಂದು ಆಶ್ರಮದಲ್ಲಿ ನಡೆಯುವ ಸದಾನಂದ ನವಮಿ ಆಚರಣೆಗೆ ಚುನಾವಣಾಧಿಕಾರಿಗಳಿಂದ ಟ್ರಸ್ಟ್ ಅನುಮತಿ ಪಡೆದಿತ್ತು. ಅನುಮತಿ ನೀಡುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಅಹೋರಾತ್ರಿ ಭಜನೆ, ಜಾಗರಣೆ ಮತ್ತು ಮಹಾಪ್ರಸಾದ ವಿತರಣೆಗೆ ನಿರ್ಬಂಧ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಆಶ್ರಮದ ಪರವಾಗಿ ರಿಟ್ ಅರ್ಜಿ ದಾಖಲಾಗಿತ್ತು.ಮಹಾರಾಷ್ಟ್ರ, ಬೆಂಗಳೂರು ಮತ್ತು ವಿಜಾಪುರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ. ಹೀಗಾಗಿ ಈ ನಿರ್ಬಂಧ ಸಡಿಲಿಸಿ ಪ್ರಸಾದ ವಿತರಣೆಗೆ ಅನುಮತಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.ಧಾರ್ಮಿಕ ಆಚರಣೆಯ ಸಂದರ್ಭದ ವಿಧಿ ವಿಧಾನಗಳಿಗೆ ಚುನಾವಣೆ ಹೇಗೆ ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ದಿಲೀಪ ಭೋಸ್ಲೆ ಅವರಿದ್ದ ಏಕಸದಸ್ಯ ಪೀಠ ಪ್ರಸಾದ ವಿತರಣೆಗೆ ಅನುಮತಿ ನೀಡುವಂತೆ ಚುನಾವಣಾಧಿಕಾರಿಗಳಿಗೆ ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಿತು.

ಪ್ರತಿಕ್ರಿಯಿಸಿ (+)