ಮಂಗಳವಾರ, ಏಪ್ರಿಲ್ 13, 2021
23 °C

ಪ್ರಸಾರಾಂಗಗಳ ಜವಾಬ್ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದವೀಧರರನ್ನು ತಯಾರಿಸುವ ಕಾರ್ಖಾನೆಗಳಾಗಿ ಬದಲಾಗುತ್ತಿರುವ ವಿಶ್ವವಿದ್ಯಾಲಯಗಳು ತಮ್ಮ ಪ್ರಮುಖ ಜವಾಬ್ದಾರಿಯಾದ ಜ್ಞಾನಪ್ರಸಾರ ಕಾರ್ಯವನ್ನು ಮರೆಯುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ.

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಈ ಆತಂಕಕ್ಕೆ ಇತ್ತೀಚೆಗೆ ದನಿಕೊಟ್ಟು, ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಕನ್ನಡ ಭಾಷೆಗೆ ಅಪಾಯ ಒದಗಿದೆ ಎಂದು ವಿಷಾದಿಸಿದ್ದಾರೆ. ಪಠ್ಯಕ್ರಮದ ಚೌಕಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ವಿಶ್ವವಿದ್ಯಾಲಯದ ಆಚೆ ಇರುವ ಜನಸಾಮಾನ್ಯರಿಗೆ ಜ್ಞಾನದ ವಿವಿಧ ಪ್ರಕಾರಗಳಲ್ಲಿ `ಜನಶಿಕ್ಷಣ~ ನೀಡುವುದೂ ಮಹತ್ವದ ಕೆಲಸ.ಇದಕ್ಕಾಗಿ ವಿವಿಧ ಶೈಕ್ಷಣಿಕ ವಿಷಯಗಳ ವಿಭಾಗಗಳಲ್ಲದೆ ಎಲ್ಲವನ್ನೂ ಒಳಗೊಳ್ಳುವ ಪ್ರತ್ಯೇಕ ವಿಭಾಗ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಇದ್ದೇ ಇರುತ್ತದೆ. `ಪ್ರಸಾರಾಂಗ~ ಎಂಬ ಅದರ ಹೆಸರೇ ಬಹಳ ಅರ್ಥಪೂರ್ಣ. ಗ್ರಾಮೀಣ ಪ್ರದೇಶಗಳೂ ಸೇರಿದಂತೆ ನಾಡಿನಾದ್ಯಂತ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸುವುದು ಮತ್ತು ಒಳ್ಳೆಯ ಪುಸ್ತಕಗಳನ್ನು ಹೊರತರುವುದು ಅವುಗಳ ಕರ್ತವ್ಯ.ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳು ತಮ್ಮ ಪ್ರಕಟಣೆಗಳಿಂದಲೂ ಪ್ರಸಿದ್ಧವಾಗಿವೆ. ಕುವೆಂಪು ಮೊದಲಾದ ಧೀಮಂತರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಈ ದಿಕ್ಕಿನಲ್ಲಿ ಹಲವಾರು ಮಾದರಿಗಳನ್ನು ನಿರ್ಮಿಸಿತು.ನಿಘಂಟು, ವಿಶ್ವಕೋಶಗಳಂಥ ಅಗತ್ಯದ ಬೃಹತ್ ಯೋಜನೆಗಳನ್ನು ಅದು ಕೈಗೆತ್ತಿಕೊಂಡಿತು. ಅಲ್ಲದೆ ಒಂದು ರೂಪಾಯಿಗೂ ಕಡಿಮೆ ಬೆಲೆಯ ಸಾವಿರಾರು ಪುಟ್ಟ ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ನಾಡಿನ ಒಂದೆರಡು ತಲೆಮಾರುಗಳ ಜನರಿಗೆ ಕನ್ನಡ ಭಾಷೆಯಲ್ಲೇ ತುಂಬಿಕೊಟ್ಟ ಜ್ಞಾನ ಬಹಳ ಅಮೂಲ್ಯವಾದದ್ದು.ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಸೇರಿ ಇದ್ದ ಕೆಲವೇ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳೂ ಒಳ್ಳೆಯ ಪುಸ್ತಕಗಳನ್ನು ಪೈಪೋಟಿಯಿಂದ ಸುಲಭ ಬೆಲೆಯಲ್ಲಿ ಹೊರತಂದವು. `ಕನ್ನಡವನ್ನು ಕಟ್ಟುವ ಕೆಲಸ~ ಇದಲ್ಲದೆ ಮತ್ತಾವುದು?ಈಗ `ಜಿಲ್ಲೆಗೊಂದು ಗಲ್ಲಿಗೊಂದು~ ವಿಶ್ವವಿದ್ಯಾಲಯ ಸ್ಥಾಪನೆಯ ಕಾಲ ಬಂದುಬಿಟ್ಟಿದೆ; ಒತ್ತಾಯ ಹೆಚ್ಚಿದಂತೆ ವಿಷಯಕ್ಕೊಂದು ವಿಶ್ವವಿದ್ಯಾಲಯ ಹುಟ್ಟುತ್ತಿದೆ. ಆದರೆ ಅವುಗಳ ಜ್ಞಾನಪ್ರಸಾರದ ಮುಖವೇ ಆಗಿದ್ದ ಪ್ರಸಾರಾಂಗಗಳೆಲ್ಲಿ ಕಾಣುತ್ತಿವೆ? ಒಂದೆರಡು ವಿಶ್ವವಿದ್ಯಾಲಯಗಳನ್ನು ಬಿಟ್ಟರೆ, ಬಹುತೇಕ ಹಳೆಯ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ನಿಷ್ಕ್ರಿಯವಾಗಿವೆ.ಕೆಲವು ಕುಲಪತಿಗಳಿಗಂತೂ ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ ಇರುವುದೇ ಮರೆತುಹೋಗಿದೆ. ಇನ್ನು ಪ್ರಸಾರಾಂಗಗಳನ್ನು ಸದಾ ಜೀವಂತವಾಗಿಡುತ್ತಿದ್ದ ಕನ್ನಡ ಮತ್ತಿತರ ಭಾಷಾ ವಿಭಾಗಗಳು, ಮಾನವಿಕ ವಿಭಾಗಗಳೂ ಸೊರಗಿ ಮಲಗಿವೆ. ವಿಶ್ವವಿದ್ಯಾಲಯಗಳಲ್ಲಿದ್ದ ಸಾಹಿತ್ಯ ಪ್ರಾಧ್ಯಾಪಕರ ಆಸಕ್ತಿಯ ಫಲವಾಗಿ ನಡೆಯುತ್ತಿದ್ದ ವಿಚಾರ ಸಂಕಿರಣಗಳು, ಪ್ರಚಾರೋಪನ್ಯಾಸಗಳು ಕನ್ನಡ ನಾಡಿನಲ್ಲಿ ಬಹುಮುಖ್ಯ ಸಾಂಸ್ಕೃತಿಕ ಸಂವಾದಗಳನ್ನು ಹುಟ್ಟು ಹಾಕುತ್ತಿದ್ದ ಸುವರ್ಣಯುಗ ಇತ್ತು.

 

ಈ ಹಿನ್ನೆಲೆಯಲ್ಲಿ, ಹೊಸಕಾಲದ ಅಗತ್ಯಗಳಿಗೆ ಕನ್ನಡವನ್ನು ಸನ್ನದ್ಧಗೊಳಿಸುವ ಅತ್ಯಗತ್ಯ ಕಾರ್ಯವನ್ನು ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಮತ್ತು ವಿಭಾಗಗಳು ನಿರ್ವಹಿಸಬೇಕಲ್ಲವೇ? ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವ ಈ ಹೊತ್ತಿನಲ್ಲಿ ಪ್ರಸಾರಾಂಗಗಳ ಜವಾಬ್ದಾರಿಯ ಬಗ್ಗೆ ಸಾರ್ವತ್ರಿಕ ಚಿಂತನೆ ನಡೆಯಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.