ಬುಧವಾರ, ಏಪ್ರಿಲ್ 21, 2021
24 °C

ಪ್ರಸಾರಾಂಗಗಳ ವಿರುದ್ಧ ಕಂಬಾರರ ಕೆಂಗಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ರಾಜ್ಯದ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಕನ್ನಡ ಭಾಷೆಗೆ ಅಪಾಯ ಎದುರಾಗಿದೆ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ವಿಷಾದಿಸಿದರು.ಬಿಡದಿಯ ಜ್ಞಾನವಿಕಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರಿಗೆ ಜ್ಞಾನವನ್ನು ಒದಗಿಸುವುದು ವಿ.ವಿಗಳಲ್ಲಿನ ಪ್ರಸಾರಾಂಗಗಳ ಕೆಲಸ. ಆದರೆ ಆ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಅವು ವಿಫಲವಾಗಿವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ. ಪ್ರತಿ ವಿಶ್ವವಿದ್ಯಾಲಯಕ್ಕೂ ತನ್ನದೇ ಆದ ಧ್ಯೇಯ ಮತ್ತು ಉದ್ದೇಶಗಳಿರುತ್ತವೆ. ಆದರೆ ಅವುಗಳು ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.ರಾಜ್ಯದ ವಿ.ವಿಗಳಲ್ಲಿ ಉನ್ನತ ಹುದ್ದೆಗಳಿಗಾಗಿ ಕಲಹಗಳು ನಡೆಯುತ್ತಿವೆ. ಅಧ್ಯಾಪಕರು ಸರಿಯಾಗಿ ಬೋಧನಾ ಕಾರ್ಯ ನಡೆಸುತ್ತಿಲ್ಲ. ಇದರಿಂದಾಗಿ ಗುಣಮಟ್ಟದ ವಿದ್ಯಾರ್ಥಿ ಸಮೂಹ ಹೊರಬರುತ್ತಿಲ್ಲ. ಅಧ್ಯಾಪಕರು ವೇತನಕ್ಕಾಗಿಯಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಎಲ್ಲರಲ್ಲೂ ಇಂಗ್ಲಿಷ್ ವ್ಯಾಮೋಹ ಹೊಕ್ಕಿದೆ. ಕನ್ನಡದ ಸ್ಥಿತಿ ಕೆಳಮಟ್ಟಕ್ಕೆ ತಲುಪುತ್ತಿದೆ. ಬ್ರಿಟಿಷರು ನಮ್ಮಲ್ಲಿ ತುಂಬಿ ಹೋಗಿರುವ ಕೀಳರಿಮೆಯಿಂದ ಹೊರಬರಲು ನಮಗೆ ಇನ್ನೂ ಆಗುತ್ತಿಲ್ಲ. ಈ ಕೀಳರಿಮೆ ದೂರ ಮಾಡಬೇಕಾದ ಪ್ರಸಾರಾಂಗಗಳು ನಿಷ್ಕ್ರಿಯವಾಗಿವೆ ಎಂದು ಅವರು ಹರಿಹಾಯ್ದರು. ವಿದ್ಯೆ ಎಂದರೆ ಇಂಗ್ಲಿಷ್, ಇಂಗ್ಲಿಷ್ ಎಂದರೆ ವಿದ್ಯೆ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಕಂಠಪಾಠಕ್ಕೆ ಶರಣಾಗಿರುತ್ತಾರೆ. ಅಂಥವರಲ್ಲಿ ಸೃಜನಶೀಲತೆ ಕೊರತೆ ಇರುತ್ತದೆ. ಜೀವನದಲ್ಲಿ ಉಂಟಾಗುವ ಒತ್ತಡವನ್ನು ಪರಿಹರಿಸಿಕೊಳ್ಳುವಲ್ಲಿಯೂ ಅವರು ವಿಫಲರಾಗುತ್ತಾರೆ ಎಂದರು. ಭಾಷಾ ವಿಷಯದಲ್ಲಿ ಸರ್ಕಾರಗಳು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ವಿದ್ಯಾಭ್ಯಾಸ ಮುಗಿಸಿದವರಿಗೆ ಸೂಕ್ತ ಕೆಲಸವನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದು. ಆದರೆ ಈ ನಿಟ್ಟಿನಲ್ಲಿ ಸರ್ಕಾರಗಳೂ ವಿಫಲವಾಗುತ್ತಿವೆ ಎಂದು ಕಂಬಾರರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.