ಗುರುವಾರ , ಮಾರ್ಚ್ 4, 2021
29 °C
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರ ವೇತನ–ಭತ್ಯೆ ಹೆಚ್ಚಳ

ಪ್ರಸ್ತಾವ ತಿರಸ್ಕರಿಸಿದ ಹಣಕಾಸು ಇಲಾಖೆ

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಪ್ರಸ್ತಾವ ತಿರಸ್ಕರಿಸಿದ ಹಣಕಾಸು ಇಲಾಖೆ

ಬಾಗಲಕೋಟೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ನೀಡುತ್ತಿರುವ ವೇತನ ಹಾಗೂ ಭತ್ಯೆ ಮಾದರಿಯಲ್ಲಿಯೇ ಉಪಾಧ್ಯಕ್ಷರಿಗೂ ಸವಲತ್ತು ಕಲ್ಪಿಸುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಪ್ರಸ್ತಾವವನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ.2014ರ ಡಿಸೆಂಬರ್‌ 6ರಂದು ಕರ್ನಾಟಕ ಪಂಚಾಯತ್ ಅಧಿನಿಯಮ 1993 ತಿದ್ದುಪಡಿ ಮಾಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ವೇತನ– ಭತ್ಯೆ ಪರಿಷ್ಕರಿಸಲಾಗಿದೆ. ಆದರೆ, ಉಪಾಧ್ಯಕ್ಷರಿಗೆ ಕಲ್ಪಿಸಿರುವ ಸವಲತ್ತುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಹಾಗಾಗಿ ಅಧ್ಯಕ್ಷರಿಗೆ ಇರುವ ಸವಲತ್ತುಗಳ ಪೈಕಿ ಶೇ 70ರಷ್ಟನ್ನು ಉಪಾಧ್ಯಕ್ಷರಿಗೂ ಒದಗಿಸಲು  ಅವಕಾಶ ಮಾಡಿಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಜೂನ್‌ 10ರಂದು ಪ್ರಸ್ತಾವ ಸಲ್ಲಿಸಿತ್ತು.‘ಹೊಸ ತಿದ್ದುಪಡಿಯಲ್ಲಿ ಉಪಾಧ್ಯಕ್ಷರ ಸ್ಥಾನಮಾನದ ಬಗ್ಗೆ ಉಲ್ಲೇಖವಿಲ್ಲದ ಕಾರಣ ವೇತನ–ಭತ್ಯೆಗೆ ಬೇಕಾದ ಹೆಚ್ಚುವರಿ ಅನುದಾನ ಭರಿಸಲು ಸಾಧ್ಯವಿಲ್ಲ’ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.ಹೆಚ್ಚುವರಿ ಹೊರೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಸಲ್ಲಿಸಿರುವ ಪ್ರಸ್ತಾವದ ಅನ್ವಯ ರಾಜ್ಯದ 30 ಜಿಲ್ಲೆಗಳ ಪಂಚಾಯ್ತಿ ಉಪಾಧ್ಯಕ್ಷರ ವೇತನ–ಭತ್ಯೆ ಹೆಚ್ಚಳಗೊಂಡಲ್ಲಿ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ವಾರ್ಷಿಕ ₹ 1.74 ಕೋಟಿ ಹೊರೆಯಾಗುತ್ತದೆ. ಹಾಗಾಗಿ ಇದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆಯನ್ನು ಕೋರಲಾಗಿತ್ತು.ಅನ್ಯಾಯವಾಗಿದೆ: ‘ಕರ್ನಾಟಕ ಪಂಚಾಯತ್ ಅಧಿನಿಯಮದ ತಿದ್ದುಪಡಿಯಲ್ಲಿಯೇ ದೋಷವಿದೆ. ಕಾಯ್ದೆಯಲ್ಲಿ ಅಧ್ಯಕ್ಷರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಉಪಾಧ್ಯಕ್ಷರನ್ನು ಕಡೆಗಣಿಸಿ ಅನ್ಯಾಯ ಮಾಡಲಾಗಿದೆ’ ಎಂದು ಬಾಗಲಕೋಟೆ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಆರೋಪಿಸಿದರು.‘ಯಾವುದೇ ಸ್ಥಾನಮಾನ–ಗೌರವ ಇಲ್ಲದೇ ನಾವು ಕಾಟಾಚಾರಕ್ಕೆ ಉಪಾಧ್ಯಕ್ಷರಾಗುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಜಿಲ್ಲಾ ಪಂಚಾಯ್ತಿ ಸಭೆಗಳನ್ನು ಬಹಿಷ್ಕರಿಸಲಾಗುವುದು’ ಎಂದು ಮುತ್ತಪ್ಪ ಎಚ್ಚರಿಸಿದರು.

*

ಉಪಾಧ್ಯಕ್ಷರ ವೇತನ- ಭತ್ಯೆ ಹೆಚ್ಚಿಸುವಂತೆ ಹಣಕಾಸು ಇಲಾಖೆಗೆ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ಕಾನೂನು ತಿದ್ದುಪಡಿಗೂ ಕ್ರಮ ಕೈಗೊಳ್ಳಲಾಗುವುದು.

-ಎಚ್.ಕೆ. ಪಾಟೀಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.