ಪ್ರಸ್ತಾವ ಸಲ್ಲಿಸಲು ಶೆಟ್ಟರ್ ಸಲಹೆ

7

ಪ್ರಸ್ತಾವ ಸಲ್ಲಿಸಲು ಶೆಟ್ಟರ್ ಸಲಹೆ

Published:
Updated:

ಬಾದಾಮಿ: ವಿಶ್ವ ಪ್ರಸಿದ್ಧ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದರು.ಅವರು ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಪುರಸಭೆಯ ಆಶ್ರಯದಲ್ಲಿ ಬುಧವಾರ ಜರುಗಿದ ಸಮಾರಂಭದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವರು ಮತ್ತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಯತ್ನಿಸುವುದಾಗಿ ಭರವಸೆ ನೀಡಿದರು.‘ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐಹೊಳೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡುವ ಯೋಜನೆ ಸರ್ಕಾರದ ಹಂತದಲ್ಲಿದೆ. ಐಹೊಳೆ ಗ್ರಾಮದ ಜನತೆ ಸಂಪೂರ್ಣ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ.

 

ಪರಿಹಾರದಲ್ಲಿ ಶೇ.50ರಷ್ಟು ಕೇಂದ್ರ ಹಾಗೂ ಶೇ.50ರಷ್ಟು  ರಾಜ್ಯ ಭರಿಸಲಿದೆ. ಜನತೆಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ ಮೇಲೆ ಸ್ಥಳಾಂತರ ಕಾಮಗಾರಿ ನಡೆಯಲಿದೆ. ಈ ಕುರಿತು ಕಂದಾಯ ಸಚಿವರ ಜೊತೆಗೆ ಚರ್ಚಿಸಲಾಗಿದೆ’ ಎಂದರು.ಈ ಸಂದರ್ಭದಲ್ಲಿ ಅವರು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿವರಗಳನ್ನು ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು.ಸಚಿವ ಶೆಟ್ಟರ್ ಅವರು ರೂ.6.88 ಕೋಟಿ ವೆಚ್ಚದ ಏಷಿಯನ್ ಅಭಿವೃದ್ಧಿ ನೆರವಿನ ಉತ್ತರ ಕರ್ನಾಟಕ ವಲಯ ಬಂಡವಾಳ ಹೂಡಿಕೆ ಯೋಜನೆಯಡಿ ಮಳೆ ನೀರು ಚರಂಡಿ ಯೋಜನೆ ಕಾಮಗಾರಿಗೆ ಭೂಮಿಪೂಜೆ, ರೂ.10.65 ಲಕ್ಷ ವೆಚ್ಚದ ಸಮುದಾಯ ಭವನ, ಉದ್ಘಾಟನೆ ಹಾಗೂ ರೂ.10 ಲಕ್ಷ ವೆಚ್ಚದ ಡಾ.ಜಗಜೀವನರಾಮ ಭವನದ ಭೂಮಿ ಪೂಜೆ ನೆರವೇರಿಸಿದರು.ಪುರಸಭೆ ಅಧ್ಯಕ್ಷೆ ಶಾಂತಮ್ಮ ಅಮರಗೋಳ, ಉಪಾಧ್ಯಕ್ಷೆ ಅನಸೂಯಾ ಹುನಗುಂದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಶೀಲಾಬಾಯಿ ಹೆಬ್ಬಳ್ಳಿ, ವೀರಪುಲಿಕೇಶಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸಿ. ಪಟ್ಟಣದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಪುರಸಭೆಯ ಸದಸ್ಯರು ವೇದಿಕೆಯಲ್ಲಿದ್ದರು.ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಬಾದಾಮಿ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry