ಪ್ರಸ್ತುತ: ಹೀಗೇ ಮುಂದುವರೆದರೆ...

7

ಪ್ರಸ್ತುತ: ಹೀಗೇ ಮುಂದುವರೆದರೆ...

Published:
Updated:

ಹೀಗೇ ಮುಂದುವರೆದರೆ, ಈ ಅಂತಃಕರಣ ಇಲ್ಲದ ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಹೀಗೇ ಮುಂದುವರಿದರೆ, ಕಾರ್ಪೊರೇಟ್ ಸೆಕ್ಟರ್ ದವಡೆಗೆ ಸಿಕ್ಕಿರುವ ಭಾರತ ತನ್ನನ್ನು ಬಿಡಿಸಿಕೊಂಡು ಬಚಾವಾಗದಿದ್ದರೆ, ನಾಳಿನ ಭಾರತ ಹೇಗಿರಬಹುದು?- ಹೀಗೆ ಯಾಕಾದರೂ ಅಂದುಕೊಂಡೆನೋ ಅಂತ ಈಗ ಅನ್ನಿಸುತ್ತಿದೆ.

ಆ ರೀತಿ ಅಂದುಕೊಂಡಿದ್ದಕ್ಕಾಗಿ ಎರಡು ದುಃಸ್ವಪ್ನಗಳು ಈಗ ನನ್ನ ಕಣ್ಮುಂದೆ ಬಂದು ಕೂತಿವೆ.ಒಂದು: ಮುಂಬೈನಲ್ಲಿ ಸಾವಿರಾರು ಗುಡಿಸಲುಗಳ ನಡುವೆ ಒಂದು ಅರಮನೆ ಇದೆ. ಈ ಅರಮನೆ ಕಾರ್ಪೊರೇಟ್ ಕುಳ ಅಂಬಾನಿಯದು. ನಾಳೆ ಇಡೀ ಭಾರತವೇ ಹೀಗಾಗಿ ಬಿಡಬಹುದೆ?ಇನ್ನೊಂದು: ನಮ್ಮ ಬಳ್ಳಾರಿ ಜಿಲ್ಲೆ- ಇಲ್ಲಿ ಅದಿರು ತೆಗೆದೂ ತೆಗೆದೂ ಇಡೀ ಭೂಮಿ ಹಳ್ಳಗಳಾಗಿವೆ. ಇಲ್ಲಿ ಗಾಳಿ, ನೀರೂ ಕೆಂಪಾಗಿವೆ. ನಾಳೆ ಇಡೀ ಭಾರತವೇ ಹೀಗಾಗಿ ಬಿಡಬಹುದೆ? ಭೂಮಿ ನಲುಗ್ತಾ ಇದೆ; ನರಳ್ತಾ  ಇದೆ. ಅಸಮಾನತೆ, ಬಡವ ಬಲ್ಲಿದರ ನಡುವೆ ಅಂತರ ಎಂದೂ ಇಲ್ಲದಷ್ಟು ಉಲ್ಬಣಗೊಳ್ಳುತ್ತಿದೆ. ಆದರೆ ಸಮಾನತೆಗಾಗಿ ಹೋರಾಡಬೇಕಾದ ಸಂಘಟನೆಗಳು, ಸಮುದಾಯಗಳು ತೆವಳುತ್ತಿವೆ. ಉಳಿಗಾಲ?ಗೊತ್ತಾಗುತ್ತಿಲ್ಲ. ಹೀಗೆ ಮುಂದುವರಿದರೆ ಆ ಸ್ಲಂ ಜೋಪಡಿ ಜನರ ರೋಗರುಜಿನ ಹಸಿವಿನ ಆಕ್ರಂದನ ಹತಾಶೆ ನೋಡಲಾಗದೆ `ಮಾನವತೆ ದೃಷ್ಟಿ~ಯಿಂದ ಅವರನ್ನೆಲ್ಲ ಗಣಿ ಗುಂಡಿಗಳಿಗೆ ತುಂಬಿ ಮಣ್ಣುಮುಚ್ಚಿ ಮಣ್ಣುಮಾಡುವುದರತ್ತ ಭಾರತದ ಅಭಿವೃದ್ಧಿ ಸಾಗುತ್ತಿದೆಯೇನೋ ಎಂಬ ಭಯವಾಗುತ್ತದೆ. ಜನರಿಂದ, ಜನರಿಗಾಗಿ, ಜನರಿಗೆ ಅಧಿಕಾರ, ಯಾರಿಗೆ? ಎಲ್ಲವೂ ಮಾರಿಕೆಯ ಸರಕುಗಳಾಗಿ -ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆ, ನ್ಯಾಯ, ದೇವರು, ಎಲ್ಲವೂ. ಇನ್ನು ಉಳಿದಿದ್ದೇನು?ಹೀಗಿದ್ದೂ ನಮಗೆ ಕಾಣುತ್ತಿಲ್ಲ. ನಮ್ಮ ಸಂಘಟನೆಗಳ ಕಣ್ಣಿಗೆ ಪೊರೆಕಟ್ಟಿದೆ ಎಂಬುದಕ್ಕೆ ಒಂದೆರಡು ಉದಾಹರಣೆ - ಸರ್ಕಾರ ನೂರಾರು ದಲಿತ ಹಾಸ್ಟೆಲುಗಳನ್ನು ಮುಚ್ಚಲು ಹೊರಟಿದೆ. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು ತಾನು ಹುಟ್ಟಿ ಬೆಳೆದ ಸ್ಥಳಗಳನ್ನು ನೆನಪಿಸಿಕೊಳ್ಳಬೇಕಿತ್ತು.

 

1973-74ರ ಸಾಲಿನಲ್ಲಿ ದಲಿತ ಸಂಘರ್ಷ ಸಮಿತಿ ತನ್ನ ಹೆಸರು ಪಡೆಯುವ ಮುನ್ನ ಮೈಸೂರಿನ ಅಶೋಕಪುರಂನ ಸಿದ್ಧಾರ್ಥ ಹಾಸ್ಟೆಲ್‌ನಲ್ಲಿ ರಾಜ್ಯದ ಹತ್ತಾರು ಸಂಘಟನೆಗಳು ಸಭೆ ಸೇರಿ ಇಡೀ ರಾಜ್ಯಕ್ಕೆ ಒಂದೇ ಸಂಘಟನೆಗಾಗಿ ತುಡಿಯುತ್ತವೆ. ಈ ತುಡಿತ ಹುಟ್ಟುವುದು ಒಂದು ವಿದ್ಯಾರ್ಥಿ ನಿಲಯದಲ್ಲಿ. ಮುಂದೆ ದಲಿತ ಸಂಘರ್ಷ ಸಮಿತಿ ಹೆಸರಾಗಿ ದಸಂಸ ಕಣ್ಣುಬಾಯಿ ಬಿಡುವುದು, ನಡೆದಾಡುವುದು ರಾಜ್ಯದ ಮೂಲೆ ಮೂಲೆಗಳ ವಿದ್ಯಾರ್ಥಿ ನಿಲಯಗಳಲ್ಲೇ. ಈಗ ಸರ್ಕಾರ ನೂರಾರು ದಲಿತ ವಿದ್ಯಾರ್ಥಿನಿಲಯಗಳನ್ನು ಮುಚ್ಚಲು ಹೊರಟಿದೆ. ದಲಿತ ಸಂಘರ್ಷ ಸಮಿತಿಗಳು ತಾನು ಹುಟ್ಟಿದ ಸ್ಥಳವನ್ನೇ ಮರೆತು ಕೂತಿವೆ!ಈ ಹಿಂದೆ ಒಂದೇ ದಲಿತ ಸಂಘರ್ಷ ಸಮಿತಿ ಇತ್ತು. ಹೆಚ್ಚೆಂದರೆ ಸಾವಿರದಷ್ಟು ಕಾರ‌್ಯಕರ್ತರು ಇದ್ದರು. ಆಗ ದಲಿತ ಸಂಘರ್ಷ ಸಮಿತಿ ಇದೆ ಅನ್ನಿಸುತ್ತಿತ್ತು. ಈಗ ಹತ್ತಾರು ದಲಿತ ಸಂಘರ್ಷ ಸಮಿತಿಗಳೇ ಇವೆ. ಲಕ್ಷಾಂತರ ಕಾರ‌್ಯಕರ್ತರೂ ಇದ್ದಾರೆ. ಈಗ ದಲಿತ ಸಂಘರ್ಷ ಸಮಿತಿ ಇದೆ ಎಂದು ಹೇಳುವ ಧೈರ್ಯವಾಗುತ್ತಿಲ್ಲ. ಯಾಕೆ? ಇದನ್ನು ನಾವು ಯೋಚಿಸಬೇಕಾಗಿದೆ.ಇನ್ನು ನಾವು ಬದುಕುತ್ತಿರುವ ಸಮಾಜವೋ? ಯಾವ ಶತಮಾನಗಳಲ್ಲಿ ಅದಿದೆಯೋ ಅದೂ ತಿಳಿಯದು. ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹೊಸಮನೆಯ ಶನಿಮೂಲೆಯನ್ನು ಸಂತೃಪ್ತಿಗೊಳಿಸಲು ಒಬ್ಬ ದಲಿತ ಹುಡುಗನ ನರಬಲಿ ಆಗಿದೆ. ದಲಿತ ಸಂಘರ್ಷ ಸಮಿತಿ ಮಲಗಿ ಬಿಟ್ಟಿದೆ.ಉಸಿರಾಡುತ್ತಿದೆಯೋ ಇಲ್ಲವೋ ತಿಳಿಯುತ್ತಿಲ್ಲ. ಇಲ್ಲೇ ಮಂಡ್ಯ ಜಿಲ್ಲೆಯಲ್ಲಿ ದಲಿತ ಹುಡುಗನನ್ನು ಪ್ರೇಮಿಸಿದ್ದಕ್ಕಾಗಿ ಒಬ್ಬ ಹುಡುಗಿಯ ಹತ್ಯೆ ಆಕೆಯನ್ನು ಹುಟ್ಟಿಸಿದವರಿಂದಲೇ ಜರುಗಿದೆ. ಇದನ್ನು `ಮರ್ಯಾದಾ ಹತ್ಯೆ~ ಎಂದು ಬೇರೆ ಕರೆಯುತ್ತಿದ್ದಾರೆ. ಇದನ್ನು `ಮರ್ಯಾದಾ ಹತ್ಯೆ~ ಎಂದು ಉಚ್ಚರಿಸುವ ನಮಗೆ ಮೊದಲು ಮಾನ ಮರ‌್ಯಾದೆ ಇಲ್ಲ ಅಷ್ಟೆ. ಇದು ಪಿಶಾಚಿ ಹತ್ಯೆ.ಭಾರತದ ಸಮಾಜದಲ್ಲಿ ಪ್ರತಿಯೊಂದಕ್ಕೂ - ಹಿಂದಿನಿಂದಲೂ ನಡೆದುಕೊಂಡು ಬಂದದ್ದು, ನಮ್ಮ ಪೂರ್ವಿಕರು ಮಾಡಿಕೊಂಡು ಬಂದದ್ದು ಇಂಥವೇ ತುಂಬಿದೆ. ಭಾರತದ ಸಮಾಜದ ಜೀವನದ ಬಹುತೇಕ ನಿರ್ಧಾರ, ಆಳ್ವಿಕೆಗಳು ಸತ್ತವರಿಂದ ನಡೆಯುತ್ತಿವೆ. ಒಟ್ಟಿನಲ್ಲಿ ಸತ್ತವರ ಕೈಯಲ್ಲಿ ಬದುಕಿರುವವರ ಜುಟ್ಟಿದೆ. ಸತ್ತವರು ಬದುಕಿದ್ದಾರೋ ಅಥವಾ ಬದುಕಿರುವವರು ಸತ್ತಿದ್ದಾರೋ ಒಂದೂ ತಿಳಿಯುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಲಿತ ಸಂಘಟನೆಗಳು ಛಿದ್ರವಾಗಿವೆ.ದಲಿತ ಸಮಾಜವೂ ಛಿದ್ರವಾಗಿದೆ-ಅಷ್ಟೇ ಅಲ್ಲ, ಪರಸ್ಪರ ದ್ವೇಷಿಸುತ್ತಿವೆ. ಹೀಗೇ ಮುಂದುವರಿದರೆ ಇದರ ಫಲವೇನು? ಖಾಸಗೀಕರಣ ಹೆಚ್ಚಾಗುತ್ತಾ ಊರಾಚೆ ಇರುವ ದಲಿತರು ಊರಾಚೆಯೇ ಇರಬೇಕಾಗುತ್ತದೆ. ಊರೊಳಗೆ ಇರುವ ಬಡವರು, ತಳಸಮುದಾಯದವರು ಊರಾಚೆಗೆ ನೂಕಲ್ಪಡುತ್ತಾರೆ.

 

ಈಗ ನಮ್ಮ ಕಣ್ಣೆದುರು ಆಗುತ್ತಿರುವುದನ್ನೇ ನೋಡಿದರೆ-ಊರಾಚೆ ಇರುವ ದಲಿತ ಸಮುದಾಯದ ಜನ ಪ್ರತಿನಿಧಿಗಳ ಪ್ರಾತಿನಿಧ್ಯ ದಿನದಿನಕ್ಕೂ ಕಮ್ಮಿಯಾಗುತ್ತಿದೆ.

 

ಊರಾಚೆ ಇರುವವರು ರಾಜಕಾರಣದ ಊರಾಚೆಯೇ ಇರಬೇಕಾಗಿ ಬರಬಹುದೇನೊ ಎಂದೂ ಅನ್ನಿಸುತ್ತಿದೆ. ಇದಕ್ಕೆ ಏನು ಕಾರಣ ಅಂತ ಶಾಸ್ತ್ರ ಕೇಳಬೇಕಾಗಿಲ್ಲ. ದಲಿತ ಸಂಘಟನೆಗಳ ಛಿದ್ರತೆ, ದಲಿತ ಸಮುದಾಯಗಳ ಛಿದ್ರತೆ ಇಲ್ಲಿಗೆ ತಂದಿಟ್ಟಿದೆ.ಈಗ ಏಕಾಏಕಿ ದಲಿತ ಸಂಘಟನೆಗಳೆಲ್ಲಾ ಒಂದಾಗಲಿ ಎಂದು ಆಸೆ ಪಡುವ ಪರಿಸ್ಥಿತಿಯಲ್ಲೂ ನಾವಿಲ್ಲ. ಯಾಕೆಂದರೆ ಆಗ ಹತ್ತಾರು ಜನ ಹೆಂಡತಿಯರನ್ನು ಕಟ್ಟಿಕೊಂಡು ನಿಭಾಯಿಸಲಾಗದ ಜರ್ಜರಿತ ಸ್ಥಿತಿ ದಲಿತ ನಾಯಕತ್ವಕ್ಕೆ ಬಂದು ಬಿಡಬಹುದು. ಅದಕ್ಕಾಗಿ ಒಂದಾಗುವತ್ತ ಮೊದಲ ಹೆಜ್ಜೆಯಾಗಿ ದಲಿತ ಸಂಘಟನೆಗಳು, ದಲಿತ ಸಮುದಾಯ ಒಕ್ಕೂಟದ ಮನೋಭಾವ, ಒಕ್ಕೂಟದ ಕಾರ್ಯಚಟುವಟಿಕೆ ಪಡೆದುಕೊಳ್ಳುವುದು-ಇಂದಿನ ತುರ್ತಾಗಿದೆ.ಈ ದಿಕ್ಕಿನಲ್ಲಿ ಒಂದು ಹೆಜ್ಚೆ- ಪ್ರತಿ ಹೊಸ ವರ್ಷದ ಜನವರಿ ತಿಂಗಳಲ್ಲಿ ಹೊಸ ವರ್ಷದ ಒಂದನೇ ತಾರೀಖಿನಿಂದ ಇಡೀ ತಿಂಗಳು `ಸಂವಿಧಾನವೇ ಭಾರತದ ಧರ್ಮ~ ಎಂಬ ತಿಂಗಳಾಚರಣೆ. ಇದಕ್ಕಾಗಿ ದಲಿತ ಸಂಘರ್ಷ ಸಮಿತಿಗಳು ತಮ್ಮಡನೆ ರೈತಸಂಘ, ಜತೆಗೆ ಎಲ್ಲಾ ಪ್ರಗತಿಪರರೂ ಹಾಗೂ ಅರ್ಧದಷ್ಟಿರುವ ಮಹಿಳಾ ಸಮುದಾಯದ ಕಾಲುಭಾಗವನ್ನಾದರೂ ಒಳಗೊಳ್ಳುತ್ತಾ `ನಂ ನಮ್ಮ ಧರ್ಮಗಳು ನಂ ನಮ್ಮ ಮನೆಯೊಳಗಿರಲಿ; ಸಂವಿಧಾನವೇ ಭಾರತದ ಧರ್ಮವಾಗಲಿ~ ಎಂಬ ಉಳಿವಿನ ವಾಕ್ಯವನ್ನು ಮನೆಮನೆಗೂ ತಲುಪಿಸಲು ಪ್ರತಿ ಹೊಸ ವರ್ಷದ ಇಡೀ ಜನವರಿ ತಿಂಗಳು ರಾಜ್ಯದ ಉದ್ದಗಲಕ್ಕೂ ಜಾಥಾ, ಮೆರವಣಿಗೆ, ಸಂಕಿರಣ, ಇದಕ್ಕಾಗಿ ಹಾಡು, ಲಾವಣಿ, ನಾಟಕ, ತಮ್ಮಟೆ ಪ್ರಚಾರ-ಇತ್ಯಾದಿ ಇತ್ಯಾದಿ. ಇದನ್ನು -ಸ್ಪರ್ಧೆ ಇಲ್ಲದೆ ಮಾಡುವುದನ್ನು, ಹಂಚಿಕೊಂಡು ಮಾಡುವುದನ್ನು ಹಾಗೂ ಒಟ್ಟಾಗಿ ಮಾಡುವುದನ್ನು ನಾವು ಕಷ್ಟಪಟ್ಟು ಪಳಗಿಸಿಕೊಂಡರೆ, ನಾವು ಉಳಿಯಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry