`ಪ್ರಾಕೃತಿಕ ಘಟನೆಗಳ ಬಗ್ಗೆ ಆತಂಕ ಬೇಡ'

7

`ಪ್ರಾಕೃತಿಕ ಘಟನೆಗಳ ಬಗ್ಗೆ ಆತಂಕ ಬೇಡ'

Published:
Updated:

ಯಾದಗಿರಿ: ದೇವರು, ದೈವ ಭಕ್ತಿಗಳ ಬಗ್ಗೆ ನಂಬಿಕೆಯಿರಲಿ. ಆದರೆ ಅವುಗಳ ಬಗ್ಗೆ ಭಯಬೇಡ. ಪ್ರಕೃತಿಯಲ್ಲಿ ನಡೆಯುವ ಘಟನೆಗಳು ಸಾಮಾನ್ಯ. ಅವುಗಳ ಬಗ್ಗೆ ಆತಂಕ ಪಡುವುದು ಬೇಡ ಎಂದು ನಗರಸಭೆ ಅಧ್ಯಕ್ಷೆ ಲಲಿಲಾ ಅನಪೂರ ಹೇಳಿದರು.ನಗರದ ನ್ಯೂ ಕನ್ನಡ ಪದವಿಪೂರ್ವ ಕಾಲೇಜು ಆವರಣದಲ್ಲಿ ಖಾಸಾಮಠ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅನಿಕೇತನ ಟ್ರಸ್ಟ್, ಬಸವಮಾರ್ಗ ಪ್ರತಿಷ್ಠಾನ, ಸಗರನಾಡು ಸೇವಾ ಪ್ರತಿಷ್ಠಾನಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಳಯ-ಪ್ರಳಯಾಂತಕರು ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಳಯ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಅತಿರಂಜಿತ ಸುದ್ದಿ ವಿಶ್ಲೇಷಣೆಗಳಿಂದ ಜನರಲ್ಲಿ ಪ್ರಳಯದ ಭೀತಿ ಹೆಚ್ಚಾಗಿದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಪ್ರಳಯದ ಬಗ್ಗೆ ಜನರಲ್ಲಿ ಭೀತಿ ಹುಟ್ಟಿಸುತ್ತಿರುವುದು ಮಾಧ್ಯಮಗಳು. ಇದು ಕೇವಲ ವದಂತಿ. ದಿನ ಬೇಳಗಾದರೆ ಟಿವಿ ವಾಹಿನಿಗಳು ತಮ್ಮ ಟಿಆರ್‌ಪಿ ಹೆಚ್ಚಳಕ್ಕೆ ಜನರನ್ನು ತುದಿಗಾಲಲ್ಲಿ ನಿಲ್ಲಿಸಿ ಆಕರ್ಷಣೆ ಹೆಚ್ಚಿಸುತ್ತಿವೆ. ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯನ್ನು ಬಿಟ್ಟು ಪ್ರಚಾರದ ಹಾದಿ ಹಿಡಿದಿರುವುದು ಅವುಗಳ ಘನತೆಗೆ ತಕ್ಕುದಲ್ಲ ಎಂದು ಅಭಿಪ್ರಾಯಪಟ್ಟರು.ಉಪನ್ಯಾಸ ನೀಡಿದ ದೇವೆಂದ್ರ ಹೆಗ್ಗಡೆ, ಇಂದು ಆತಂಕ ನಿರಾತಂಕಗಳ ನಡುವಿನ ಬದುಕು ನಮ್ಮದಾಗಿದೆ. ದೈವತ್ವ, ದೇವರು, ಕಲ್ಪನೆ ಇದು ಚರ್ಚೆಯ ವಸ್ತು. ಇದಕ್ಕೆ ಹಾದಿಯಾಗಲಿ, ಅಂತ್ಯವಾಗಲಿ ಇಲ್ಲ ಎಂದರು. ನಂಬಿಕೆಗಳಿಂದ ದಿನದರ್ಶಿಕೆಗಳ ಪ್ರಾರಂಭವಾಗಿದೆ. ಹಾಗಾಗಿ ಪ್ರಳಯ ಎಂಬುದು ಕೇವಲ ಕಾಲ್ಪನಿಕ ಕಟ್ಟುಕತೆ. ಇದರಲ್ಲಿ ಹುರುಳಿಲ್ಲ ಎಂಬುದು ಸತ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಘುನಾಥರಡ್ಡಿ ಪಾಟೀಲ, ದಿನದರ್ಶಿಕೆಗಳ ನಿಗದಿತ ಸಮಯಕ್ಕನುಗುಣವಾಗಿ ವಿಶಿಷ್ಟ ದಿನಗಳನ್ನು ಆಯ್ಕೆ ಮಾಡಿಕೊಂಡು ವೈಭವಿಕರಣದ ಸುದ್ದಿಗಳನ್ನು ಹಬ್ಬಿಸುವ ಯತ್ನ ನಡೆಯುತ್ತಿದೆ ಎಂದು ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಪ್ಪ ಕಲಬುರ್ಗಿ, ಅನಿಕೇತನ ಟ್ರಸ್ಟ್ ಅಧ್ಯಕ್ಷ ಮಲ್ಲೇಶ ಕುರಕುಂದಿ, ವೆಂಕಟರಾವ ಕುಲಕರ್ಣಿ, ಶರಣಗೌಡ ವೇದಿಕೆಯಲ್ಲಿದ್ದರು. ಅಶೋಕ ಆವಂತಿ ನಿರೂಪಿಸಿದರು. ಪ್ರಕಾಶರಡ್ಡಿ ಸ್ವಾಗತಿಸಿದರು. ಎಂ.ಎಸ್.ಅಂಗಡಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry