ಭಾನುವಾರ, ಮೇ 22, 2022
21 °C

ಪ್ರಾಚಾರ್ಯರ ಅಮಾನತುಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನೂರಾರು ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುತ್ತಿರುವ ಕಾಲೇಜಿನ ಪ್ರಾಚಾರ್ಯ ವೆಂಕಟರಮಣ ರೆಡ್ಡಿ ಅವರನ್ನು ತಕ್ಷಣದಿಂದ ಅಮಾನತುಗೊಳಿಸಲು ಶಿಫಾರಸು ಮಾಡಿ ಎಂದು ಸಂಸದ ಎಸ್. ಶಿವರಾಮಗೌಡ, ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಸಲಹೆ ನೀಡಿದರು. ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಶನಿವಾರ ನಡೆಯಬೇಕಿದ್ದ ತ್ರೈಮಾಸಿಕ ಮೊದಲ ಕಿರು ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜು ಆವರಣದಲ್ಲಿ ಹಠಾತ್ ಧರಣಿ ನಡೆಸಿದರು.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಸದ ಮತ್ತು ಶಾಸಕರಿಗೆ ವಿದ್ಯಾರ್ಥಿಗಳು ಕಾಲೇಜಿನ ಹತ್ತಾರು ಸಮಸ್ಯೆಗಳನ್ನು ಹಾಗೂ ಪ್ರಾಂಶುಪಾಲರ ಬೇಜವಾಬ್ದಾರಿಯನ್ನು ಉಭಯ ಚುನಾಯಿತ ಪ್ರತಿನಿಧಿಗಳಿಗೆ

ವಿವರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಾಚಾರ್ಯಯ ಕೊಠಡಿಗೆ ತೆರಳಿದ ಶಾಸಕ ಮತ್ತು ಸಂಸದರು, ಪ್ರಾಚಾರ್ಯರರಿಂದ ಘಟನೆಗೆ ಕಾರಣ ಪಡೆದರು. ವಸ್ತುಸ್ಥಿತಿ ಅವಲೋಕಿಸಿದ ಸಂಸದ ಶಿವರಾಮಗೌಡ, ಈ ಕೂಡಲೆ ಪ್ರಾಚಾರ್ಯರನ್ನು ವರ್ಗಾಯಿಸಲು ಸಂಬಂಧಿತರ ಗಮನ ಸೆಳೆಯಿರಿ ಎಂದು ಶಾಸಕರಿಗೆ ತಿಳಿಸಿದರು.ಪದವಿ ಪ್ರಥಮ ವರ್ಷದ ತರಗತಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದ್ದೀರಿ. ಅವರಿಗೆ ಪೀಠೋಪಕರಣ, ಸಿಬ್ಬಂದಿ ವ್ಯವಸ್ಥೆಯ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಂಸದ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ಕೂಡಲು ಆಸನದ ವ್ಯವಸ್ಥೆ, ಗ್ರಂಥಾಲಯ, ರೀಡಿಂಗ್ ಕೋಣೆ, ಸಿಬ್ಬಂದಿ ಕೊರತೆ, ಬಸ್ ಸೌಕರ್ಯ, ಐ.ಡಿ. ಕಾರ್ಡ್, ಪ್ರಯೋಗಾಲಯದ ಸಮಸ್ಯೆ, ಎಸ್‌ಸಿ ಮತ್ತು ಎಸ್ಟಿಯವರಿಗೆ ಮಂಜೂರಾದ ರೂ, 3000 ಬದಲಿಗೆ ರೂ, 1600 ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.ಮಧ್ಯಾಹ್ನ ಪುನಃ ಕಾಲೇಜಿಗೆ ಆಗಮಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಪ್ರತ್ಯೇಕವಾಗಿ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸಭೆ ನಡೆಸಿದರು. ವಾರ ಹತ್ತು ದಿನದೊಳಗೆ ವಿದ್ಯಾರ್ಥಿಗಳ ಬಹುಪಾಲು ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.