ಬುಧವಾರ, ಆಗಸ್ಟ್ 4, 2021
20 °C

ಪ್ರಾಚೀನ ಶಿಲಾಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಚೀನ ಶಿಲಾಶಾಸನ ಪತ್ತೆ

ಬೆಳ್ತಂಗಡಿ: ತಾಲ್ಲೂಕಿನ ನಾರಾವಿ ಶ್ರೀಸೂರ್ಯ ನಾರಾಯಣ ದೇವಸ್ಥಾನ ಆವರಣದಲ್ಲಿ 550 ವರ್ಷಗಳಿಗೂ ಹಿಂದಿನ ಶಿಲಾ ಶಾಸನವೊಂದು ಪತ್ತೆಯಾಗಿದೆ ಎಂದು ಶಾಸನ ತಜ್ಞ ಉಜಿರೆಯ ಡಾ. ವೈ.ಉಮಾನಾಥ ಶೆಣೈ ತಿಳಿಸಿದ್ದಾರೆ.ಕ್ರಿ.ಶ 1430ರಿಂದ 1460ರವರೆಗೆ ವೇಣೂರನ್ನು ಆಳಿದ ಅಜಿಲ ಎಂಬ ಜೈನ ಅರಸು ಮನೆತನದ ರಾಣಿ ರಮಾದೇವಿ ಈ ಶಿಲಾಶಾಸನ ಬರೆಸಿದ್ದಾರೆ. ಶಾಸನದಲ್ಲಿ ಒಟ್ಟು 22 ಪಂಕ್ತಿಗಳಿದ್ದು, ಮೇಲ್ಭಾಗದಲ್ಲಿ ಶಿವಲಿಂಗ, ಅದರ ಅಕ್ಕಪಕ್ಕದಲ್ಲಿ ದೀಪ ಮತ್ತು ವಿಜಯನಗರ ಸಾಮ್ರಾಜ್ಯದ ಸಂಕೇತವಾದ ಖಡ್ಗದ ಆಕೃತಿ ಇದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಆಕೃತಿಗಳಿವೆ ಎಂದು ಅವರು ವಿವರಿಸಿದರು.ನಾರಾವಿಯ ಸೂರ್ಯನಾರಾಯಣ ದೇವರಿಗೆ ನೈವೇದ್ಯ ಅರ್ಪಿಸಲಿಕ್ಕಾಗಿ ದೇವಾಲಯದೆದುರಿನ ಗದ್ದೆ, ತೆಂಕಣ ದಿಕ್ಕಿನ ಇನ್ನೊಂದು ಗದ್ದೆ, ದಕ್ಷಿಣದಲ್ಲಿರುವ ಮಜಲು ಗದ್ದೆ ಮತ್ತು ಬಡಗು ದಿಕ್ಕಿನಲ್ಲಿರುವ ಹೊಸಗದ್ದೆ ಸೇರಿ ಒಟ್ಟು 60 ಮುಡಿ ಬೀಜಾವರಿಯ ಗದ್ದೆಗಳನ್ನು ಉಂಬಳಿ ಬಿಟ್ಟಿರುವುದು ಶಾಸನದಲ್ಲಿ ಉಲ್ಲೇಖಿತವಾಗಿದೆ.ಅಳದಂಗಡಿಯಿಂದ ಆಳಿದ ರಾಣಿ ರಮಾದೇವಿ ಅಳದಂಗಡಿ ಬಸದಿ ಶ್ರೀಪಾರ್ಶ್ವನಾಥ ತೀರ್ಥಂಕರನ ಸೇವಾರ್ಥ ಹಾಗೂ ಚಾತುರ್ವರ್ಣ ಆಹಾರಾರ್ಥ ಭೂಮಿ ಉಂಬಳಿ ಬಿಟ್ಟು ಇದೇ ದಿನ ಬರೆಸಿದ್ದ ಇನ್ನೊಂದು ಶಿಲಾಶಾಸನವನ್ನೂ ಬಸದಿಯ ಬದಿಯಲ್ಲಿ ಇಂದಿಗೂ ಕಾಣಬಹುದು ಎಂದು ಡಾ.ಶೆಣೈ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.