ಪ್ರಾಣಿಗಳ ಶವ ಸಂಸ್ಕಾರಕ್ಕೆ ಚಿತಾಗಾರ

ಬುಧವಾರ, ಜೂಲೈ 17, 2019
24 °C

ಪ್ರಾಣಿಗಳ ಶವ ಸಂಸ್ಕಾರಕ್ಕೆ ಚಿತಾಗಾರ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಪ್ರಾಣಿಗಳ ಶವ ಸಂಸ್ಕಾರಕ್ಕೆ ಚಿತಾಗಾರ ನಿರ್ಮಿಸಲು ನಗರದ ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಕೊನೆಗೂ ಜಾಗ ಗುರುತಿಸಲಾಗಿದೆ.ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ದಕ್ಷಿಣ ಭಾರತದಲ್ಲಿ ಮೊದಲ ಚಿತಾಗಾರವನ್ನು ನಿರ್ಮಿಸಲು ಬಿಬಿಎಂಪಿ ಮೂರು ವರ್ಷಗಳ ಹಿಂದೆಯೇ ಯೋಜನೆ ಸಿದ್ಧಪಡಿಸಿತ್ತು. ಯಲಹಂಕ ಹತ್ತಿರದ ಮೇಟಿ ಅಗ್ರಹಾರದಲ್ಲಿ ಈ ಉದ್ದೇಶಕ್ಕಾಗಿ ಸ್ಥಳವನ್ನೂ ಗುರುತಿಸಲಾಗಿತ್ತು.ವ್ಯವಸ್ಥಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಪ್ರಾಣಿಗಳ ಶವ ಸಂಸ್ಕಾರಕ್ಕೆ ಈ ಯೋಜನೆ ರೂಪಿಸಲಾಗಿತ್ತು. ಸಾರ್ವಜನಿಕರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದ್ದರಿಂದ ಯೋಜನೆಗೆ ತಡೆ ಬಿದ್ದಿತ್ತು.ಮಾಗಡಿ ರಸ್ತೆಯಲ್ಲಿ ಹೊಸ ಪ್ರದೇಶವನ್ನು ಗುರುತಿಸಿರುವ ಬಿಬಿಎಂಪಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.ಮೇಯರ್ ಡಿ.ವೆಂಕಟೇಶಮೂರ್ತಿ ಹಾಗೂ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಶನಿವಾರ ಚಿತಾಗಾರಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಮೇಟಿ ಅಗ್ರಹಾರದಲ್ಲಿ ಪ್ರಾಣಿಗಳ ಶವ ಸಂಸ್ಕಾರಕ್ಕೆ ಚಿತಾಗಾರ ನಿರ್ಮಿಸುವುದು ಸ್ಥಳೀಯರಿಗೆ ಬೇಕಿರಲಿಲ್ಲ. ಹೀಗಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಲ ಚಿತಾಗಾರಕ್ಕೆ ನಿವೇಶನವನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ.ನಿವೇಶನದ ಸುತ್ತ ಯಾವುದೇ ಖಾಸಗಿ ಸ್ವತ್ತುಗಳಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಚಿತಾಗಾರ ನಿರ್ಮಾಣಕ್ಕೆ ್ಙ2.5 ಕೋಟಿ ಖರ್ಚಾಗುವ ನಿರೀಕ್ಷೆ ಇದೆ. ಚಿತಾಗಾರದ ಜತೆಗೆ ಅದರ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಗೆ ವಸತಿಗೃಹ ಮತ್ತು ಪಶುವೈದ್ಯರ ಕೊಠಡಿಯನ್ನು ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.`ಸುಮನಹಳ್ಳಿ ಸ್ಮಶಾನದ ಪಕ್ಕದಲ್ಲೇ ಈ ಚಿತಾಗಾರ ತಲೆ ಎತ್ತಲಿದೆ. ಇದು ಕಾರ್ಯಾರಂಭ ಮಾಡಿದಾಗ ಪ್ರಾಣಿಗಳ ಶವ ಸಂಸ್ಕಾರಕ್ಕೆ ಮೀಸಲಾದ ರಾಜ್ಯದ ಮೊದಲ ಚಿತಾಗಾರ ಎನಿಸಲಿದೆ' ಎಂದು ವೆಂಕಟೇಶಮೂರ್ತಿ ಹೇಳಿದರು.

`ನಗರದಲ್ಲಿ ಇಂತಹ ಇನ್ನಷ್ಟು ಚಿತಾಗಾರ ನಿರ್ಮಿಸುವ ಯಾವುದೇ ಹೊಸ ಯೋಜನೆಗಳು ನಮ್ಮ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದರು.`ಚಿತಾಗಾರದ ನಿರ್ಮಾಣದ ಹೊಣೆಯನ್ನು ಖಾಸಗಿ ಗುತ್ತಿಗೆ ಸಂಸ್ಥೆಗೆ ವಹಿಸಲಾಗಿದೆ. ಪ್ರತಿ ಶವ ಸಂಸ್ಕಾರಕ್ಕೆ ವಿಧಿಸಬೇಕಾದ ದರದ ಕುರಿತು ನಂತರ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದರು. ಮಾಗಡಿ ರಸ್ತೆಯ ಕಡಬಗೆರೆಯಲ್ಲಿ ವಾಸವಾಗಿರುವ ವೆಂಕಟೇಶಮೂರ್ತಿ, `ಸುಮನಹಳ್ಳಿಗೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ. ಉದ್ದೇಶಿತ ಚಿತಾಗಾರದ ಸುತ್ತಲಿನ ಪ್ರದೇಶ ಖಾಲಿಯಾಗಿದೆ. ಹತ್ತಿರದಲ್ಲಿ ಇರುವ ಕಟ್ಟಡವೆಂದರೆ ಭಿಕ್ಷುಕರ ಪುನರ್‌ವಸತಿ ಕೇಂದ್ರವೊಂದೇ' ಎಂದು ತಿಳಿಸಿದರು.

`ಯಾವುದೇ ತೊಂದರೆ ಇಲ್ಲದೆ ಚಿತಾಗಾರ ತಲೆ ಎತ್ತಲಿದೆ' ಎಂಬ ನಿರೀಕ್ಷೆ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry