ಸೋಮವಾರ, ಜೂನ್ 14, 2021
26 °C
9ರಿಂದ ನಗರದೇವತೆ ದುರ್ಗಾಂಬಿಕಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಪ್ರಾಣಿವಧೆ, ಬೆತ್ತಲೆ ಸೇವೆಗೆ ಅವಕಾಶ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾರ್ವಜನಿಕ ಸ್ಥಳ ಹಾಗೂ ದುರ್ಗಾಂಬಿಕಾ ದೇವಸ್ಥಾನದ ಸುತ್ತಮುತ್ತ ಕೋಣ ಅಥವಾ ಕುರಿ ಬಲಿಗೆ ಅವಕಾಶ ನೀಡುವುದಿಲ್ಲ. ಬೆತ್ತಲೆ ಹಾಗೂ ಅರೆಬೆತ್ತಲೆ ಸೇವೆಯನ್ನೂ ಮಾಡುವಂತಿಲ್ಲ... ಇದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್‌ ಅವರ ಖಡಕ್‌ ಸೂಚನೆ.ಮಾರ್ಚ್‌ 9ರಿಂದ ಪ್ರಾರಂಭವಾಗುವ ದುರ್ಗಾಂಬಿಕಾ ಹಾಗೂ ಚೌಡೇಶ್ವರಿ ಜಾತ್ರೆ ಸಂದರ್ಭದಲ್ಲಿ ಪ್ರಾಣಿವಧೆ ಮಾಡುವಂತಿಲ್ಲ. ಈ ದೇಶದ ಕಾನೂನಿಗೆ ಎಲ್ಲರೂ ಬೆಲೆ ಕೊಡಬೇಕು. ಪೂರ್ಣ ಪ್ರಮಾಣದ ಬಟ್ಟೆತೊಟ್ಟು ಅದರ ಮೇಲೆ ಬೇವಿನುಡುಗೆ ಧರಸಿ ಆಚರಣೆಗೆ ಇಲಾಖೆಯ ಅಭ್ಯಂತರ ಇಲ್ಲ. ಅರೆಬೆತ್ತಲೆ ಹಾಗೂ ಬೆತ್ತಲೆ ಸೇವೆ ಕಂಡುಬಂದರೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಮಚ್ಚುಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗುವಂತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿವಧೆ ನಡೆದರೆ ದೇವಸ್ಥಾನ ಸಮಿತಿಯವರು ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣ ಆಗುತ್ತಾರೆ. ದೇವಸ್ಥಾನ ಸಮಿತಿಗೆ ಪ್ರಾಣಿವಧೆ ನಿಷೇಧ ಮಾಡಲು ಸಾಧ್ಯವಾಗದಿದ್ದರೆ ಜಾತ್ರೆ ಆಚರಣೆ ನಮಗೆ ವಹಿಸಿಕೊಡಿ ಎಂದು ಹೇಳಿದರು.ಜಾತ್ರೆಗೆ ಹೆಚ್ಚಿನ ಭಕ್ತರು ಸೇರುವುದರಿಂದ ಕಳ್ಳರ ಕಾಟ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಹೊರಗಿನ ಠಾಣೆಗಳಿಂದ ಕ್ರೈಂ ಸಿಬ್ಬಂದಿ ಕರೆಸಿಕೊಳ್ಳಲಾಗುವುದು. ದೇವಸ್ಥಾನದ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗುವುದು. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಇದೆ. ಹೀಗಾಗಿ, ಮಧ್ಯರಾತ್ರಿಯ ತನಕ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ ಎಂದು ಎಚ್ಚರಿಸಿದರು.ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಮಾತನಾಡಿ, ಕಾನೂನು ಚೌಕಟ್ಟಿನ ಅಡಿ ಜಾತ್ರೆ ನಡೆಯಬೇಕು. ದೇವಿ ಎಲ್ಲಿಯೂ ಕೋಣನ ತಲೆಯೇ ಬೇಕು ಎಂದು ಕೇಳಿಲ್ಲ. ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಹಿಂದೆ ಕೋಣನ ಬಲಿ ನೀಡಲಾಗುತ್ತಿತ್ತು. ಕಾಲ ಬದಲಾದಂತೆ ಅಲ್ಲಿಯೂ ಪ್ರಾಣಿವಧೆ ನಿಷೇಧ ಮಾಡಲಾಗಿದೆ. ಸಮಾಜ ಬದಲಾವಣೆ ಆಗಬೇಕು. ನಾವೂ ಆಧುನಿಕತೆಗೆ ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು.‘1959ರ ಬಲಿ ನಿಷೇಧ ಪ್ರತಿಬಂಧಕ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ದೊಡ್ಡಜಾತ್ರೆಯಾಗಿದ್ದು ವಿಜೃಂಭಣೆಯಿಂದ ಆಚರಣೆ ಮಾಡಿ. ಅದುಬಿಟ್ಟು ಪ್ರಾಣಿಬಲಿ ನೀಡುವುದು ಸರಿಯಲ್ಲ. ಪ್ರಾಣಿಹಿಂಸೆ ಮಾಡಿ ಹಬ್ಬದ ಆಚರಣೆ ಮಾಡುವುದರಿಂದ ಭವಿಷ್ಯದ ಮಕ್ಕಳಿಗೆ ಕೆಟ್ಟ ಸಂದೇಶ ನೀಡಿದಂತೆ ಆಗುತ್ತದೆ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿನಾರಾಯಣ್‌ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಪ್ರಾಣಿಬಲಿ ನಿಷೇಧವಿದೆ ಎಂದು ಹೇಳಿದರು.ಬೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್‌ ಗ್ಯಾನಪ್ಪ ಮಾತನಾಡಿ, ಹಬ್ಬಕ್ಕೆ ಯಾವುದೇ ತೊಂದರೆ ಆಗಬಾರದೆಂದು ದೇವಸ್ಥಾನಕ್ಕೆ ವಿಶೇಷ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಜತೆಗೆ, 500 ಕೆ.ವಿ. ವಿದ್ಯುತ್‌ ಪರಿವರ್ತಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹಬ್ಬದ ವೇಳೆ ವಿದ್ಯುತ್‌ ಕಡಿತವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.ಪಾಲಿಕೆ ಆಯುಕ್ತ ನಾರಾಯಣಪ್ಪ ಮಾತನಾಡಿ, ದೇಗುಲದ ಸಮೀಪ ಭಕ್ತರಿಗೆ ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಶುಭಾಶಯದ ಫಲಕಗಳಿಗೆ ಅವಕಾಶ ಇಲ್ಲ. ಅವುಗಳನ್ನು ತೆರವು ಮಾಡಲಾಗುವುದು ಎಂದು ಹೇಳಿದರು.ಮುಖಂಡರ ಅಭಿಪ್ರಾಯ...: ಮುಖಂಡ ಶಿವಕುಮಾರ್‌ ಮಾತನಾಡಿ, ನೂರಾರು ವರ್ಷಗಳಿಂದ ದುಗ್ಗಮ್ಮ ಹಬ್ಬ ಆಚರಣೆ ಮಾಡಲಾಗುತ್ತದೆ. ಕಳೆದ ವರ್ಷ ಆಧಾರರಹಿತವಾಗಿ ಧರ್ಮದರ್ಶಿ ಹಾಗೂ ಮುಖಂಡರ ಮೇಲೆ ದೂರು ದಾಖಲು ಮಾಡಲಾಯಿತು. ದೇವಸ್ಥಾನದಲ್ಲಿ ಕೋಣನ ಬಲಿ ಅಥವಾ ಬೆತ್ತಲೆಸೇವೆ ನಡೆಯುವುದಿಲ್ಲ. ಕೆಲವು ‘ಡೋಂಗಿ ಮಠಾಧೀಶರು’ ಹಾಗೂ ‘ಬುದ್ಧಿಜೀವಿಗಳು’ ಹಬ್ಬವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅನ್ಯ ಕೋಮಿನವರು ಪ್ರಾಣಿವಧೆ ಮಾಡಿದಾಗ ಯಾವ ಮಠಾಧೀಶರೂ ಮಾತನಾಡುವುದಿಲ್ಲ. ಜಿಲ್ಲಾಡಳಿತವೂ ಕ್ರಮ ಕೈಗೊಳ್ಳುವುದಿಲ್ಲ ಎಂದು ದೂರಿದರು.ಅದಕ್ಕೆ ಜಿಲ್ಲಾಧಿಕಾರಿ ಅಂಜನಕುಮಾರ್‌ ಪ್ರತಿಕ್ರಿಯಿಸಿ, ‘ನೀವು ಈ ರೀತಿ ಪ್ರಚೋದನಕಾರಿ ಮಾತನಾಡಬಾರದು’ ಎಂದು ಎಚ್ಚರಿಕೆ ನೀಡಿದರು. ಹೀಗೆಲ್ಲಾ ಮಾತನಾಡಿದರೆ ‘ಜಾತ್ರೆಯನ್ನೇ ನಿಷೇಧಿಸಬೇಕಾಗುತ್ತದೆ’ ಎಂದು ಎಸ್ಪಿ ಪ್ರಕಾಶ್‌ ಎಚ್ಚರಿಕೆ ನೀಡಿದರು.ಆಗ ಸಭೆಯಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಭೆಯಲ್ಲಿದ್ದ ಇತರ ಮುಖಂಡರು ಜಾತ್ರೆಗೆ ಸಂಬಂಧಿಸಿದಂತೆ ಮಾತ್ರ ಅನಿಸಿಕೆ ವ್ಯಕ್ತಪಡಿಸಬೇಕು ಎಂದು ತಾಕೀತು ಮಾಡಿದರು; ಗದ್ದಲ ತಣ್ಣಗಾಯಿತು.

ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಜಾತ್ರೆಗೆ ಹೆಚ್ಚಿನ ಸಂಖ್ಯೆ ಭಕ್ತರು ಬರಲಿದ್ದಾರೆ. ಅವರಿಗೆ ತೊಂದರೆ ಆಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಮೊಬೈಲ್‌ ಶೌಚಾಲಯ, ಪ್ರಾಥಮಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂದು ಸಲಹೆ ನೀಡಿದರು.ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ದಲಿತಕೇರಿಗಳಲ್ಲಿಯೇ ಹೆಚ್ಚಾಗಿ ಹಬ್ಬ ಆಚರಣೆ ಮಾಡುವುದರಿಂದ ಅಂತಹ ಪ್ರದೇಶಗಳಿಗೆ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಎಲ್‌.ಎಂ.ಹನುಮಂತಪ್ಪ ಮಾತನಾಡಿ, ಅನಧಿಕೃತ ಮದ್ಯದ ಅಂಗಡಿಗಳನ್ನು ಬಂದ್‌ ಮಾಡಿಸಬೇಕು. ದೇವಸ್ಥಾನದ ಅಕ್ಕಪಕ್ಕ ಇರುವ ಮನೆಗಳಿಗೆ ಹಬ್ಬ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಮಾತನಾಡಿ, ಹಬ್ಬದ ವೇಳೆ ಚಿಕುನ್‌ಗುನ್ಯಾ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆ ಬರದಂತೆ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಶಿವಯೋಗಪ್ಪ, ಪರಮೇಶ್‌, ಮಾಲತೇಶ್‌ ಜಾಧವ್‌, ಕೊಟ್ರಬಸಪ್ಪ ಅನಿಸಿಕೆ ವ್ಯಕ್ತಪಡಿಸಿದರು. ಡಿವೈಎಸ್‌ ತಿಮ್ಮಪ್ಪ, ಸಿಪಿಐ ಎಚ್‌.ಕೆ.ರೇವಣ್ಣ, ಚಂದ್ರಹಾಸ್‌ ಲಕ್ಷ್ಮಣನಾಯಕ ಹಾಜರಿದ್ದರು.ಕೋಣ ಬಲಿ ತಡೆ ಸಾಧ್ಯವೆ?

ದಾವಣಗೆರೆ: ಹಿಂದಿನ ದುಗ್ಗಮ್ಮನ ಜಾತ್ರೆಯಲ್ಲಿ ಕೋಣ ಬಲಿ ತಡೆಯಲು ಜಿಲ್ಲಾಡಳಿತ ಹಲವು ರೀತಿಯಲ್ಲಿ ಕ್ರಮ ಕೈಗೊಂಡಿತ್ತು. ಅದರ ನಡುವೆಯೂ ಕೋಣನ ಬಲಿ ನಡೆದಿತ್ತು. ಈ ಬಾರಿಯಾದರೂ ಬಲಿ ತಡೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುವುದೇ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

ಹಿಂದಿನ ಜಾತ್ರೆಯ ಅವಧಿಯಲ್ಲಿ ಜಿಲ್ಲಾಧಿಕಾರಿಯಾಗಿ ಎಸ್‌.ಎಸ್‌.ಪಟ್ಟಣಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್‌ ಅಧಿಕಾರಿ ಹಲವು ಸುತ್ತಿನ ಸಭೆ ನಡೆಸಿ, ಕೋಣ ಬಲಿ ಮಾಡಬಾರದು. ದೇವಿಗೆ ಸಿರಿಂಜ್‌ ಮೂಲಕ ರಕ್ತ ತಂದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪಟ್ಟಕ್ಕೆ ಬಿಟ್ಟಿದ್ದರು ಎನ್ನಲಾದ ಕೋಣವೊಂದನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಆವರಗೆರೆಯ ಗೋಶಾಲೆಯಲ್ಲಿ ಬಿಟ್ಟಿದ್ದರು.ಆವರಗೆರೆಯ ಗೋಶಾಲೆಯಿಂದ ತಹಶೀಲ್ದಾರ್‌ ನೇತೃತ್ವದಲ್ಲಿ ಪಶು ವೈದ್ಯರ ತಂಡವೊಂದು ಸಿರಿಂಜ್‌ನಲ್ಲಿ ರಕ್ತ ತರಲು ತೆರಳಿತ್ತು. ಅಲ್ಲಿಂದ ಮಧ್ಯರಾತ್ರಿ ರಕ್ತವನ್ನು ತರುವುದರೊಳಗೆ ದೇವಸ್ಥಾನದ ಆವರಣದಲ್ಲಿ ಕೋಣನ ತಲೆಯೊಂದನ್ನು ಪೊಲೀಸರು ವಶಪಡಿಸಿಕೊಂಡು ಹಲವರನ್ನು ಬಂಧಿಸಿದ್ದರು. ಆಗ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೂ ಹಲ್ಲೆ ನಡೆದಿತ್ತು. ಈ ಬಾರಿಯಾದರೂ ಕೋಣ ಬಲಿ ತಡೆಯಲು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸರಿಗೆ ಸಾಧ್ಯವಾಗುವುದೇ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.ಕಾರ್ಯಕ್ರಮಗಳು

* ಮಾರ್ಚ್‌ 9ರಂದು ಸಾರುಹಾಕುವ ಕಾರ್ಯಕ್ರಮ.

* 10, 11 ಹಾಗೂ 12ರಂದು ದೇವಿಗೆ ಉಡಿ ತುಂಬುವುದು, ಮಹಾ ಮಂಗಳಾರತಿ ಹಾಗೂ ಮಹಾಪೂಜೆ.

* ಮಾರ್ಚ್‌ 8 ಹಾಗೂ 9ರಂದು ಬೆಳಿಗ್ಗೆ 10.30ಕ್ಕೆ ದೇವರಾಜ ಅರಸು ಬಡಾವಣೆ ಮೈದಾನದಲ್ಲಿ ಟಗರು ಕಾಳಗ.

* 13ರಿಂದ 25ರವರೆಗೆ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.