`ಪ್ರಾಣ ಉಳಿಸಿತು ಪುಣ್ಯಕೋಟಿ'

7

`ಪ್ರಾಣ ಉಳಿಸಿತು ಪುಣ್ಯಕೋಟಿ'

Published:
Updated:

ಇಳಕಲ್: ಬುಧವಾರ ಸಂಜೆ ಸುರಿದ ಅಲ್ಪ ಮಳೆಗೆ ಬನ್ನಿಕಟ್ಟಿ ಹತ್ತಿರದ ಅಂಬಾಭವಾನಿ ದೇವಸ್ಥಾನ ಮುಂದಿರುವ ಕಬ್ಬಿಣದ ವಿದ್ಯುತ್ ಕಂಬದಲ್ಲಿ ವಿದ್ಯುತ್ ಹರಿದ ಪರಿಣಾಮ ಗುರುವಾರ ಬೆಳಗ್ಗೆ 7 ಗಂಟೆಗೆ ಹಸುವೊಂದು ಕಂಬಕ್ಕೆ ಒರಗಿದಾಗ ಸಾವನ್ನಪ್ಪಿದೆ.ಬನ್ನಿಕಟ್ಟಿ ಪ್ರದೇಶ ಹೆಚ್ಚು ಜನಸಂದಣೆ ಸ್ಥಳ. ಇಲ್ಲಿರುವ ಜೋಡು ಕಂಬಗಳನ್ನು ಹಿಡಿದು ಮಕ್ಕಳು ನಿತ್ಯ ಆಟ ಆಡುತ್ತಾರೆ. ಅದನ್ನು ಕಂಡವರು ಮಕ್ಕಳಿಗೆ ಕಂಬ ಮುಟ್ಟಬಾರದು ಎಂದು ಗದರಿಸುವುದು ನಿತ್ಯದ ಪರಿಪಾಠ. ದಿನವೂ ಹತ್ತಾರು ಬಿಡಾಡಿ ಹಸುಗಳು ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ವಾಸ್ತವ್ಯ ಹೂಡುತ್ತವೆ. ಬೆಳಕಾಗುತ್ತಿದ್ದಂತೆ ಆಹಾರ ಹುಡುಕಿಕೊಂಡು ಹೊರಡುತ್ತವೆ. ಆದರೆ ಗುರುವಾರ ಬೆಳಗ್ಗೆ ಆರು ಗಂಟೆಗೆ ದೇವಸ್ಥಾನದ ಪೂಜಾರಿ ದೇವಸ್ಥಾನದ ಮುಂಭಾಗ ಸ್ವಚ್ಛಗೊಳಿಸಲು ಬಂದಾಗ ಒಂದು ಹಸು ಮಾತ್ರ ಇನ್ನೂ ಅಲ್ಲಿಯೇ ಮಲಗಿತ್ತು. ಅದನ್ನು ಹೊರಡಿಸಲು ಎಷ್ಟು ಹೊಡೆದರೂ ಹಸು ಅಲ್ಲಿಂದ ಕದಲಲಿಲ್ಲ.ಎಂದಿನಂತೆ ಮಕ್ಕಳು ದೇವಸ್ಥಾನದ ಮುಂಭಾಗ ಇರುವ ಕಂಬದ ಹತ್ತಿರಕ್ಕೆ ಬರುತ್ತಿದ್ದಂತೆ ಅವಸರದಲ್ಲಿ ಎದ್ದ ಹಸು ಕಂಬಕ್ಕೆ ಒರಗಿತು. ಕಂಬದಲ್ಲಿ ಹರಿದಿದ್ದ ವಿದ್ಯುತ್ ತಗುಲಿದ ಪರಿಣಾಮ ಜೋರಾಗಿ ಆಕ್ರಂದನ ಮಾಡಿ ಒದ್ದಾಡಿ ಪ್ರಾಣ ಬಿಟ್ಟಿತು. ಇದನ್ನು ಕಂಡು ಸನಿಹದಲ್ಲಿ ಇದ್ದ ನಾಲ್ಕೈದು ಮಕ್ಕಳು ಭಯದಿಂದ ಓಡಿ ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು, ಮಕ್ಕಳು ಮೃತ ಹಸುವಿಗೆ ಕೈಮುಗಿದು `ಪ್ರಾಣ ಉಳಿಸಿದ ಪುಣ್ಯಕೋಟಿ' ಎಂದು ಕಣ್ಣೀರಿಟ್ಟರು.ಮಕ್ಕಳಿಗಿಂತ ಮೊದಲು ಆಕಸ್ಮಿಕವಾಗಿ ಹಸು ಮುಟ್ಟಿದೆ. ಕಾಕತಾಳೀಯ ಎಂದರೂ ಅಪಾಯ ಗ್ರಹಿಸುವಲ್ಲಿ ಪ್ರಾಣಿಗಳು ತುಂಬಾ ಚುರುಕು. ಮಕ್ಕಳು ಕಂಬದೊಂದಿಗೆ ಆಡಲು ಅಲ್ಲಿಗೆ ನಿತ್ಯ ಬರುವುದನ್ನು ಅರಿತೇ ಹಸು ಅವತ್ತು ಬೇಗನೆ ಹೊರ ಹೋಗದೇ, ತನ್ನ ಪ್ರಾಣ ತ್ಯಾಗ ಮಾಡಿದೆ ಎಂಬ ನಂಬಿಕೆ ಇಲ್ಲಿಯ ನಿವಾಸಿಗಳದ್ದು.`ಕಂಬ ಬದಲಿಸಿ': ನಗರದ ಕೆಲವು ಕಡೆ ಇನ್ನೂ ಕಬ್ಬಿಣದ ಕಂಬಗಳಿವೆ. ಮಳೆಗಾಲದಲ್ಲಿ ಸಾಕಷ್ಟು ಸಲ ಈ ಕಂಬಗಳಲ್ಲಿ ವಿದ್ಯುತ್ ಹರಿಯುತ್ತಿರುವುದು ಅನೇಕರ ಅನುಭವಕ್ಕೆ ಬಂದಿದೆ. ನಗರದ ಹೆಸ್ಕಾಂ ಅಧಿಕಾರಿಗಳಿಗೆ ಅನೇಕ ಸಲ ತಿಳಿಸಿದರೂ ಕಬ್ಬಿಣದ ಕಂಬಗಳನ್ನು ಬದಲಿಸಿ, ಸಿಮೆಂಟ್‌ನ ಕಂಬಗಳನ್ನು ಅಳವಡಿಸಿಲ್ಲ. ಕೂಡಲೇ ಕಬ್ಬಿಣದ ಕಂಬಗಳನ್ನು ಬದಲಿಸದಿದ್ದರೆ ಮುಂದಾಗುವ ಅನಾಹುತಗಳಿಗೆ ಹೆಸ್ಕಾಂ ಅಧಿಕಾರಿಗಳೇ ಹೊಣೆ ಎಂದು ಕೃಷ್ಣಾ ಸೇವಾ ಬಳಗದ ಅಧ್ಯಕ್ಷ ಗಿರೀಶ ಗದ್ವಾಲ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry