ಪ್ರಾತ್ಯಕ್ಷಿಕೆ, ಮಾಹಿತಿ ಗೋಷ್ಠಿ: ಕೃಷಿಮೇಳಕ್ಕೆ ಉತ್ತಮ ಪ್ರತಿಕ್ರಿಯೆ

7

ಪ್ರಾತ್ಯಕ್ಷಿಕೆ, ಮಾಹಿತಿ ಗೋಷ್ಠಿ: ಕೃಷಿಮೇಳಕ್ಕೆ ಉತ್ತಮ ಪ್ರತಿಕ್ರಿಯೆ

Published:
Updated:

ಬ್ರಹ್ಮಾವರ: ನಗರದ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಜನರಿಲ್ಲದೇ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಈ ಬಾರಿ ಕೃಷಿಕರ ತಂಡೋಪತಂಡವೇ ಹರಿದು ಬಂದಿದೆ.ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಂದ ಬಸ್, ಕಾರುಗಳಲ್ಲಿ ರೈತರು ಕೃಷಿ ಮೇಳಕ್ಕೆ ಬಂದಿದ್ದು ಈ ಬಾರಿಯ ವಿಶೇಷ. ಇದಲ್ಲದೇ ಕರಾವಳಿಯಲ್ಲಿ ಹೆಚ್ಚಿನ ಕಡೆ ಇನ್ನೂ ಭತ್ತದ ಕಟಾವು ಕಾರ್ಯ ಆರಂಭವಾಗದಿರುವುದು ರೈತರ ಸಂಖ್ಯೆ ಹೆಚ್ಚಲು ಕಾರಣ.

 

ಕಳೆದ ಬಾರಿಗಿಂತ ಈ ಬಾರಿ ಮಳಿಗೆಗಳ ಸಂಖ್ಯೆಯೂ ಹೆಚ್ಚಿದೆ. ತೋಟಗಾರಿಕಾ, ಮೀನು, ಕೃಷಿ ಹೀಗೆ ವಿವಿಧ ಇಲಾಖೆಗಳ ಮಳಿಗೆಗಳಲ್ಲದೇ ಕೃಷಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಮಳಿಗೆಗಳು ರೈತರನ್ನು ಆಕರ್ಷಿಸಿದೆ.ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, ಸಣ್ಣ ನಾಟಿ ಯಂತ್ರದ ಪ್ರಾತ್ಯಕ್ಷಿಕೆ, ವಿವಿಧ ಭತ್ತದ ತಳಿಗಳು ಮತ್ತು ಬೀಜೋತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ, ಶ್ರೀಪದ್ಧತಿ ಬೇಸಾಯ, ಸಿಓ 4 ಮೇವಿನ ಹುಲ್ಲಿನ ಪ್ರಾತ್ಯಕ್ಷಿಕೆ ಮತ್ತು ಬೀಜ ಮಾರಾಟ, ತೆಂಗಿನಲ್ಲಿ ಬಹುಬೆಳೆ ಯೋಜನೆ, ಪೋಷಕಾಂಶಗಳ ನಿರ್ವಹಣೆ, ಗೇರು ಕಸಿ ಕಟ್ಟುವಿಕೆ ಮತ್ತು ತೋಟದಲ್ಲಿ ನೀರು ಹಾಗೂ ಮಣ್ಣುಸಂರಕ್ಷಣೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ ಮತ್ತು ಅಜೊಲ್ಲಾ ಗೊಬ್ಬರ ತಯಾರಿ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಪ್ರಾತ್ಯಕ್ಷಿಕೆ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ ಹೀಗೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಈ ಬಾರಿಯ ಕೃಷಿ ಮೇಳ ಹೊಂದಿದೆ.ತಾಳೆ ಬೆಳೆಯ ಬಗ್ಗೆ ಪ್ರಾತ್ಯಕ್ಷಿಕೆ, ರಾಘವೇಂದ್ರ ಕೊಡ್ಲಾಡಿ ಅವರ ತರಕಾರಿಗಳಿಂದ ಮಾಡಬಹುದಾದ ವಿವಿಧ ಆಕೃತಿಗಳ ಪ್ರಾತ್ಯಕ್ಷಿಕೆ, ಕಸ ಇನ್ನಿತರ ವಸ್ತುಗಳನ್ನು ಕೊಂಡೊಯ್ಯಲು ಬಳಸಬಹುದಾದ ಯಂತ್ರಚಾಲಿತ ಸಾಧನ, ನಾಟಿ ಯಂತ್ರದ ಪ್ರಾತ್ಯಕ್ಷಿಕೆ ಹೀಗೆ ಅನೇಕ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ರೈತರನ್ನು ಸೆಳೆದಿವೆ.ಉದ್ಘಾಟನಾ ಸಮಾರಂಭದಲ್ಲಿ ತೀರ್ಥಹಳ್ಳಿ ಹುಂಚನಕಟ್ಟೆ ಸಿದ್ಧೇಶ್ವರ ಯುವಕ ಸಂಘದ ಸದಸ್ಯರಿಂದ ಡೊಳ್ಳು ಕುಣಿತ, ಕೊಕ್ಕರ್ಣೆ ಮೊಗವೀರ ಪೇಟೆಯ ಚಂಡೆ ವಾದನ, ಉಡುಪಿ ಕುಕ್ಕಿಕಟ್ಟೆಯ ಜ್ಯೋತಿ ಮತ್ತು ಬಳಗದವರಿಂದ ರೈತ ಗೀತೆ ಮೆಚ್ಚುಗೆಗೆ ಪಾತ್ರವಾಯಿತು. ಒಟ್ಟಾರೆ ಕೆಲವು ವರ್ಷಗಳ ನಂತರ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ವಿಶೇಷ. ಬೆಂಗಳೂರು ಕೃಷಿ ವಿವಿ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರ, ಮಂಗಳೂರು ಮತ್ತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಾಗೂ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಉಡುಪಿ ಜಿಲ್ಲಾ ಕೃಷಿ ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ, ಉಡುಪಿ ಮತ್ತು ಮಂಗಳೂರು ಜಿಲ್ಲಾ ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳ ನಡೆಯುತ್ತಿದೆ.ಕೃಷಿ ಮೇಳದಲ್ಲಿ ಇಂದು

ವಿಚಾರಗೋಷ್ಠಿಗಳು:
ಬೆಳಿಗ್ಗೆ 10 ಕ್ಕೆ ಲಾಭದಾಯಕ ಹೈನುಗಾರಿಕೆ ಮತ್ತು ಇತರೆ ಕೃಷಿ ಉಪ ಕಸುಬುಗಳ ಬಗ್ಗೆ ಬೆಂಗಳೂರು ಕೆ.ವಿ.ಕೆ.ಯ ಡಾ.ನಾಗರಾಜು, ಉಡುಪಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಡಿ.ಪ್ರಭುಲಿಂಗು ಮತು ಬೆಳ್ತಂಗಡಿಯ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಮಾಹಿತಿ ನೀಡುವರು.ಮಧ್ಯಾಹ್ನ 12ಕ್ಕೆ ಭತ್ತದ ಕೃಷಿಯಲ್ಲಿ ಯಾಂತ್ರೀಕರಣ ಮತ್ತು ಕೃಷಿ ಮಾರುಕಟ್ಟೆ ಅವಕಾಶಗಳು ವಿಷಯಗಳ ಬಗ್ಗೆ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ವ್ನಿೇಶ್ವರ ವರ್ಮುಡಿ, ಕುಂದಾಪುರದ ಉದ್ಯಮಶೀಲ ಕೃಷಿಕ ತಿಮ್ಮಣ್ಣ ಹೆಗ್ಡೆ, ಸೊರಬದ ನೂರ್ ಅಹ್ಮದ್, ಉಡುಪಿ ಗಾವಳಿಯ ಪದ್ಮನಾಭ ಕಿಣಿ ಮಾಹಿತಿ ಹಾಗೂ ವಿಚಾರಗೋಷ್ಠಿಯಲ್ಲಿ ಭಾಗವಹಿಸುವರು.ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ರೈತ ವಿಜ್ಞಾನಿಗಳ ಜೊತೆ ಮುಕ್ತ ಚರ್ಚೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry