ಬುಧವಾರ, ಮೇ 18, 2022
27 °C

ಪ್ರಾಥಮಿಕ, ಉನ್ನತ ಶಿಕ್ಷಣ: ಯಾರು ಯಾರಿಗೆ ಮಾದರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ಒಂದನೆ ತರಗತಿ ಕೊಠಡಿ. ಅಲ್ಲಿ ಎಲ್ಲ ಮಕ್ಕಳೂ ಅಳುತ್ತಿದ್ದರು. ಅವರನ್ನು ಸಂಭಾಳಿಸಲು ಆಯಾಳಿಂದ  ಸಾಧ್ಯವಾಗಲಿಲ್ಲ. ಮಕ್ಕಳು ಯಾಕೆ ಅಳುತ್ತಿವೆ ಎನ್ನುವುದೂ ಅವಳಿಗೆ ಗೊತ್ತಾಗಲಿಲ್ಲ. ಮಕ್ಕಳನ್ನು ಸುಮ್ಮನಿರಿಸಲು ಸಾಕಷ್ಟು ಶ್ರಮವಹಿಸಿದರೂ ಸಾಧ್ಯವಾಗಲಿಲ್ಲ. ಆಕೆ ಆ ತರಗತಿಯ ಶಿಕ್ಷಕಿ ಸರಸ್ವತಿ ಮೇಡಂ ಬಳಿಗೆ ಹೋಗಿ ‘ಮೇಡಂ, ಒಂದನೆ ತರಗತಿ ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದಾರೆ. ಎಲ್ಲರೂ ಅಳುತ್ತಿದ್ದಾರೆ, ಅವರನ್ನು ಸುಮ್ಮನಿರಿಸಲು ಸಾಧ್ಯವಾಗುತ್ತಿಲ್ಲ. ನೀವೇ ಬನ್ನಿ’ ಎಂದು ಕರೆದಳು.ಸರಸ್ವತಿ ಮೇಡಂ ಆ ಕೊಠಡಿಗೆ ಹೋದರು. ಎಲ್ಲ ಮಕ್ಕಳೂ ಒಂದೇ ಸಮನೆ ಅಳುತ್ತಿದ್ದರು.ಅಳುವಿಗೆ ಕಾರಣ ಏನು ಎಂದು ಕೇಳಿದರೆ ಬಹುತೇಕ ಮಕ್ಕಳಿಗೆ ಗೊತ್ತಿರಲಿಲ್ಲ. ಒಂದು ಮಗು ಅಳುತ್ತಿದೆ ಎಂದು ಇನ್ನೊಂದು ಮಗು ಅಳುತ್ತಿತ್ತು.ಹೀಗೆ ಅಳುವಿನ ಸಾಂಕ್ರಾಮಿಕ ರೋಗ ಇಡೀ ತರಗತಿಯನ್ನು ಆವರಿಸಿಕೊಂಡಿತ್ತು. ವಿಚಾರಣೆ  ನಡೆಸಿದ ನಂತರ ಅಳುವಿಗೆ ಇಬ್ಬರು ಮಕ್ಕಳು ಕಾರಣ ಎನ್ನುವುದು ತಿಳಿದುಬಂತು. ಮೇಡಂ ಆ ಮಕ್ಕಳ ಬಳಿಗೆ  ಹೋಗಿ ‘ಯಾಕೆ ಅಳುತ್ತಿದ್ದೀರಿ, ಏನಾಯ್ತು’ ಎಂದು ಕೇಳಿದರು.ಅದಕ್ಕೆ ಒಂದು ಮಗು ಬಿಕ್ಕುತ್ತಲೇ ಮತ್ತೊಂದು ಮಗುವಿನತ್ತ ಕೈತೋರಿಸಿ ‘ನಾನು ಮುಂದಿನ ಜನ್ಮದಲ್ಲಿ ಸರಸ್ವತಿ ಮೇಡಂ ಹೊಟ್ಟೆಯಲ್ಲಿಯೇ ಹುಟ್ಟಬೇಕು ಎಂದುಕೊಂಡಿದ್ದೆ. ಆದರೆ ವಿಶ್ವ ಕೂಡ ಸರಸ್ವತಿ ಮೇಡಂ ಹೊಟ್ಟೆಯಲ್ಲಿಯೇ ಹುಟ್ಟಬೇಕು ಎಂದುಕೊಂಡಿದ್ದಾನಂತೆ. ಅದು ಹೇಗೆ ಸಾಧ್ಯ? ನಾನು ನಿಮ್ಮ ಹೊಟ್ಟೆಯಲ್ಲಿಯೇ ಹುಟ್ಟಬೇಕು’ ಎಂದು ಹೇಳಿ ದೊಡ್ಡ ರಾಗ ತೆಗೆದಳು.ಅದಕ್ಕೆ ಪ್ರತಿಯಾಗಿ ವಿಶ್ವ ಎಂಬ ಹುಡುಗ ‘ಅದು ಸಾಧ್ಯವಿಲ್ಲ ಮಿಸ್. ಆಕೆಗಿಂತ ಮೊದಲೇ ನಾನು ನಿಮ್ಮ  ಹೊಟ್ಟೆಯಲ್ಲಿ ಹುಟ್ಟಬೇಕು ಎಂದುಕೊಂಡಿದ್ದೆ. ಅದಕ್ಕೆ ನಾನೇ ಹುಟ್ಟಬೇಕು. ನಾನು ಮೊದಲೇ ದೇವರಲ್ಲಿ ಕೇಳಿಕೊಂಡಿದ್ದರಿಂದ ನಾನೇ ಹುಟ್ಟಬೇಕು ಅಲ್ಲವಾ’ ಎಂದು ಇನ್ನಷ್ಟು ದೊಡ್ಡದಾಗಿ ಅಳತೊಡಗಿದ.ಸರಸ್ವತಿ ಮೇಡಂ ಆಗ ಇಕ್ಕಟ್ಟಿಗೆ ಸಿಲುಕಿದರು. ಆದರೂ ಒಂದು ಉಪಾಯ ಮಾಡಿ ‘ಮಕ್ಕಳಾ ನೀವು ಅಳಬೇಡಿ. ನಿಮಗಿಂತ ಮೊದಲೇ ನಾನು ದೇವರಲ್ಲಿ ಕೇಳಿಕೊಂಡಿದ್ದೇನೆ. ಮುಂದಿನ ಜನ್ಮದಲ್ಲಿ ನೀವೇ ನನ್ನ ಮಕ್ಕಳಾಗಿ ಹುಟ್ಟಬೇಕು ಎಂದು ಬೇಡಿಕೊಂಡಿದ್ದೇನೆ.ಅದಕ್ಕೆ ದೇವರು ಈಗಾಗಲೇ ನನಗೆ ಭರವಸೆ ನೀಡಿದ್ದಾರೆ. ಹಾಗಾಗಿ ನೀವಿಬ್ಬರೂ  ಮುಂದಿನ ಜನ್ಮದಲ್ಲಿ ನನ್ನ ಮಕ್ಕಳಾಗಿಯೇ ಹುಟ್ಟುತ್ತೀರಿ.ಈಗ ಸುಮ್ಮನಿರಿ’ ಎಂದು ಇಬ್ಬರು ಮಕ್ಕಳನ್ನು ಬಾಚಿ  ತಬ್ಬಿಕೊಂಡು ಸಮಾಧಾನ ಮಾಡಿದರು.ಇಬ್ಬರೂ ಅಳುವುದನ್ನು ನಿಲ್ಲಿಸಿದರು. ಅವರು ಅಳು ನಿಲ್ಲಿಸಿದ ಮೇಲೆ ತರಗತಿಯ ಎಲ್ಲ ಮಕ್ಕಳೂ ಅಳುವುದನ್ನು ನಿಲ್ಲಿಸಿದವು.ಆದರೆ ಪ್ರಕರಣ ಅಲ್ಲಿಗೇ ಮುಗಿಯಲಿಲ್ಲ. ಅಳುವುದನ್ನು ನಿಲ್ಲಿಸಿದ ಆ ಹುಡುಗಿ ತಕ್ಷಣವೇ ‘ಅಲ್ಲ ಮೇಡಂ, ಈಗ ನಿಮಗೆ ಇಬ್ಬರು ಮಕ್ಕಳಿದ್ದಾರೆ. ಮುಂದಿನ ಜನ್ಮದಲ್ಲಿ ಅವರು ಯಾರ ಹೊಟ್ಟೆಯಲ್ಲಿ ಹುಟ್ಟುತ್ತಾರೆ’  ಎಂದು ಪ್ರಶ್ನೆ ಮಾಡಿದಳು.ಅರೆ ಹೌದಲ್ಲ. ಆ ಮಕ್ಕಳನ್ನು ಏನು ಮಾಡುವುದು ಎಂದು ಸರಸ್ವತಿ ಮೇಡಂಗೆ ಪೀಕಲಾಟಕ್ಕೆ ಇಟ್ಟುಕೊಂಡಿತು. ಆದರೆ ತಕ್ಷಣವೇ ವಿಶ್ವ ಎಂಬ ಹುಡುಗ ‘ಅಷ್ಟೂ ಗೊತ್ತಾಗಲ್ವ. ಒಬ್ಬ ಅಕ್ಕ ನಿನ್ನ ಅಮ್ಮನ ಹೊಟ್ಟೆಯಲ್ಲಿ, ಇನ್ನೊಂದು ಅಕ್ಕ ನನ್ನ ಅಮ್ಮನ ಹೊಟ್ಟೆಯಲ್ಲಿ ಹುಟ್ಟುತ್ತಾಳೆ’ ಎಂದು ಸಮಸ್ಯೆಯನ್ನು ಬಗೆಹರಿಸಿದ.ಮೈಸೂರಿನ ಜೆ.ಪಿ.ನಗರದ ಎಸ್.ಕೆ.ಕೆ.ಬಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದು 15 ವರ್ಷಗಳೇ ಕಳೆದಿವೆ. ಈಗ ಆ ಮಕ್ಕಳು ದೊಡ್ಡದಾಗಿವೆ. ಆದರೂ ಆಗಾಗ ಸರಸ್ವತಿ ಮೇಡಂ ಬಳಿಗೆ ಬರುತ್ತಾರೆ. ಆಶೀರ್ವಾದ ಪಡೆಯುತ್ತಾರೆ. ಸರಸ್ವತಿ ಮೇಡಂ ಅವರಿಗೆ ಈ ಘಟನೆಯನ್ನು ನೆನೆದುಕೊಂಡರೆ ಈಗಲೂ ರೋಮಾಂಚನವಾಗುತ್ತದೆ.ಇತ್ತೀಚೆಗೆ  ಶಾಲೆ ವಾರ್ಷಿಕೋತ್ಸವದಲ್ಲಿ ಮತ್ತೆ ಈ ಘಟನೆಯನ್ನು ನೆನೆಸಿಕೊಂಡು ಅವರು ಭಾವುಕರಾದರು. ‘ಪುಟ್ಟ ಪುಟ್ಟ ಮಕ್ಕಳು ನಮಗೆ ತಾಯಿಯ ಸ್ಥಾನವನ್ನು ನೀಡುತ್ತವೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ಅವರಿಗೆ ಏನು ಕೊಡುತ್ತೇವೆ’ ಎಂದು ಕಣ್ಣೀರಿಟ್ಟರು. ಆ ಮಕ್ಕಳು ಆ ಸ್ಥಾನವನ್ನು ನೀಡಿದ್ದರಿಂದಲೇ ಇನ್ನೂ ಕೂಡ ತಾವು ಶಿಕ್ಷಕಿಯಾಗಿಮುಂದುವರಿಯಲು ಸಾಧ್ಯವಾಗುತ್ತಿದೆ ಎಂದರು. ಆ ಕ್ಷಣ ಅಲ್ಲಿದ್ದ ಎಲ್ಲರ ಕಣ್ಣುಗಳಲ್ಲಿಯೂ ನೀರಾಡಿತ್ತು. ಇದು  ಒಂದು ಘಟನೆ.ಇನ್ನೊಂದು ಘಟನೆ ನಡೆದಿದ್ದೂ ಕೂಡ ಮೈಸೂರಿನಲ್ಲಿಯೆ. ಒಬ್ಬ ದಲಿತ ಹುಡುಗ ಕಂಪ್ಯೂಟರ್ ವಿಜ್ಞಾನದಲ್ಲಿ  ಎಂಎಸ್‌ಸಿ ಮಾಡಿದ. ಆತನಿಗೆ ತಾನು ಪಿಎಚ್‌ಡಿ ಮಾಡಬೇಕು ಎಂಬ ಹೆಬ್ಬಯಕೆ. ಅದಕ್ಕೆ ಆತ ಮಾರ್ಗದರ್ಶಿಗಳಿಗಾಗಿ  ಹುಡುಕಾಟ ನಡೆಸಿದ. ಸುಮಾರು 4 ವರ್ಷ ಹುಡುಕಾಟ ನಡೆಸಿದರೂ ಆತನಿಗೆ ಮಾರ್ಗದರ್ಶಕರೊಬ್ಬರು ಸಿಗಲೇ  ಇಲ್ಲ. ಎಲ್ಲರೂ ಏನೇನೋ ಒಂದು ಕಾರಣವನ್ನು ಹೇಳಿ ತಪ್ಪಿಸಿಕೊಂಡರು.ಅಂತೂ ಇಂತೂ ಒಬ್ಬ ಪ್ರಾಧ್ಯಾಪಕರು ಮಾರ್ಗದರ್ಶಕರಾಗಲು ಒಪ್ಪಿಕೊಂಡರು. ಆದರೆ ಅದಕ್ಕಾಗಿ ಕೇವಲ 4  ಲಕ್ಷ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದರು ಬಡತನದ ಬೇಗೆಯಲ್ಲಿಯೇ ಬೆಂದು ಹಾಗೂ ಹೀಗೂ ಎಂಎಸ್‌ಸಿ ಮುಗಿಸಿದ ಈ ಹುಡುಗನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.ಪಿಎಚ್‌ಡಿ ಮಾಡುವುದು ತನ್ನಿಂದ ಸಾಧ್ಯವೇ ಇಲ್ಲ ಎಂಬ ಭಾವನೆ ಬಂತು. ಆದರೂ ಪರಿಪರಿಯಾಗಿ ಅವರನ್ನು ಬೇಡಿಕೊಂಡ. ಅಂತೂ ಇವನ ವಿನಂತಿಗೆ  ಕರಗಿದ ಮಾರ್ಗದರ್ಶಕರು 4 ಲಕ್ಷ ರೂಪಾಯಿಗಳನ್ನು ಒಮ್ಮಲೇ ಕೊಡುವುದು ಬೇಡ. ಕಂತಿನಲ್ಲಿ ಕೊಟ್ಟರೂ ಪರವಾಗಿಲ್ಲ ಎಂದರು. ಅಷ್ಟರ ಮಟ್ಟಿಗೆ ಅವರು ದಯೆ ತೋರಿದರು. ಆದರೆ ಅದೂ ಸಾಧ್ಯವಿಲ್ಲ ಎಂದು ಆ ಹುಡುಗ ಈಗ ಉದ್ಯೋಗದ ಬೇಟೆಯಲ್ಲಿ ತೊಡಗಿದ್ದಾನೆ.ನಿಜ ಈ ಎರಡೂ ಘಟನೆಯನ್ನು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲ ಶಿಕ್ಷಕಿಯರೂ ಸರಸ್ವತಿ ಮೇಡಂ ಅವರಂತೆ ಇಲ್ಲ. ಅದೇ ಉನ್ನತ ಶಿಕ್ಷಣದಲ್ಲಿಯೂ ಎಲ್ಲ ಮಾರ್ಗದರ್ಶಕರೂ ಹಣ ಕೇಳುವುದಿಲ್ಲ. ಆದರೆ ಶಿಕ್ಷಕಿಯೊಬ್ಬಳನ್ನು ತಾಯಿಯಂತೆ ಕಂಡು ತಾವು ಮುಂದಿನ ಜನ್ಮದಲ್ಲಿ ಅವರ ಮಕ್ಕಳಾಗಿ ಹುಟ್ಟಬೇಕು ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುವಂತಹ ಶಿಕ್ಷಣ ನೀಡಿದ ಪರಿ ಹೇಗಿದೆ? ತನ್ನ ಬಳಿ ಮಾರ್ಗದರ್ಶನಕ್ಕಾಗಿ ಬಂದ ಹುಡುಗನಿಗೆ 4 ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಮಾರ್ಗದರ್ಶನ ಮಾಡುತ್ತೇನೆ ಎಂದು ಹೇಳಿ ಆ ಹುಡುಗನ ಪಿಎಚ್‌ಡಿ ಆಸೆಗೇ ತಣ್ಣೀರು ಎರಚಿದ ಪರಿ ಹೇಗಿದೆ? ವಿಶ್ವವಿದ್ಯಾಲಯದಲ್ಲಿ ಕುಳಿತ ಪ್ರಾಧ್ಯಾಪಕರಿಗೆ ಸರಸ್ವತಿ ಮೇಡಂ ಅವರಂತಹವರು ಮಾದರಿಯಾಗಬೇಕಲ್ಲವೇ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.