ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್...!

7

ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್...!

Published:
Updated:

ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಯ ಶಿಫಾರಸಿನಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಐದು ಮತ್ತು ಎಂಟನೆಯ ತರಗತಿಗೆ ರಾಷ್ಟ್ರೀಯ ಪಠ್ಯಕ್ರಮ ಅಳವಡಿಸುವ ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಆಹ್ವಾನಿಸಲು ತೀರ್ಮಾನಿಸಿದೆ.ಆದರೆ, ಪಠ್ಯಕ್ರಮದಲ್ಲಿ ಬಿಜೆಪಿ ಸರ್ಕಾರ ಕರ್ನಾಟಕದ ಎಳೆಯ ಕಂದಮ್ಮಗಳ ಮೆದುಳಿಗೆ `ಕೇಸರಿ ಪಾಷಾಣ~ ತುಂಬಲು ಉತ್ಸುಕವಾಗಿದೆ.ಬಿಜೆಪಿ ಸರ್ಕಾರ ಬರುವುದಕ್ಕಿಂತ ಮೊದಲೇ ಪಠ್ಯವಸ್ತುಗಳ ರಚನಾಕಾರ‌್ಯ ಮುಗಿದಿತ್ತು. ಚರಿತ್ರೆಯಲ್ಲಿ ಸ್ಥಳೀಯ ನಂಬುಗೆ, ಜನಪದ, ಸ್ಥಳೀಯ ಸಂಸ್ಕೃತಿ ಮೂಲಕ ಮಕ್ಕಳಿಗೆ ತಿಳುವಳಿಕೆ ನೀಡಬೇಕು ಎನ್ನುವ ವಿಚಾರವನ್ನೂ ಸರ್ಕಾರವು ತಾತ್ವಿಕವಾಗಿ ಅನುಮೋದಿಸಿತ್ತು.ಆದರೆ ಅದನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ತನ್ನ ರಾಜಕೀಯ ಸಿದ್ಧಾಂತವನ್ನು ತುರುಕಲು ಮುಂದಾಯಿತು. ಇದರ ಪರಿಣಾಮ ಐದು ಮತ್ತು ಎಂಟನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ಎಳೆಯ ವಯಸ್ಸಿನಲ್ಲಿಯೇ ಮತೀಯತೆಯನ್ನು ಕಲಿಯಲು ತಯಾರಾಗಬೇಕಾಗಿದೆ.ಇದು ಐದು ಮತ್ತು ಎಂಟನೇ ತರಗತಿಯ ಸಮಾಜವಿಜ್ಞಾನದ ಪಠ್ಯಪುಸ್ತಕಗಳಲ್ಲಿ ಸ್ಪಷ್ಟವಾಗಿದೆ. ಐದನೇ ತರಗತಿಯ ಸಮಾಜವಿಜ್ಞಾನದ ಪುಟ 6 ರಲ್ಲಿ ಚೆನ್ನಮ್ಮ ಮತ್ತು ಹೈದರಾಲಿ ನಡುವಿನ ಯುದ್ಧದ ಬಗ್ಗೆ ಬರೆಯುತ್ತಾ ಹೈದರಾಲಿಯ ಗೆಲುವನ್ನು `ಆದರೂ ಶತ್ರುವಿಗೆ ಗೆಲುವಾಯಿತು~ ಎಂದು ಬರೆಯಲಾಗಿದೆ.

 

ಯುದ್ಧದಲ್ಲಿ ಒಬ್ಬರು ಮತ್ತೊಬ್ಬರು ಶತ್ರು ಎನ್ನುವುದು ಸಹಜ, ಇಲ್ಲಿ ಹೈದರಾಲಿ ತಾನು ಮುಸ್ಲಿಂ ಎಂಬ ಕಾರಣಕ್ಕೆ `ಶತ್ರು~ ಆಗುತ್ತಾನೆ. ಇದೇ ರೀತಿ `ಮಂಗಳೂರಿನ ಇಗರ್ಜಿಯೊಂದು ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ~ ಎಂದು ಅನಗತ್ಯವಾಗಿ ಪ್ರಸ್ತಾಪಿಸಲಾಗಿದೆ.  ಪುಟ 52, 53 ಮತ್ತು 56 ಗಳನ್ನು ಓದಿದರೆ ಈ ಸಮಾಜವಿಜ್ಞಾನದ ಪಠ್ಯವನ್ನೇ ಹಿಂದೂ ಧಾರ್ಮಿಕ ಕ್ಷೇತ್ರಗಳ ಪ್ರಚಾರಕ್ಕೆ ಬಳಸಿರುವುದು ಸ್ಪಷ್ಟವಾಗಿದೆ. ಹಿಂದು ಮುಸ್ಲಿಂ ಏಕತೆಯನ್ನು ಸಾರುವ ಪಠ್ಯಗಳಲ್ಲಿ ಹಿಂದೆ ರಾಮ, ರಹೀಮ ಎಂದು ಬಳಸಲಾಗುತ್ತಿತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧರು, ಸಿಖ್ಖರು ಮುಂತಾಗಿ ಯಾವುದೇ ಮತೀಯರು ಓದಬಹುದಾದ ಈ ಪಠ್ಯಪುಸ್ತಕದಲ್ಲಿ ಪಾಠ 10 `ಕುಟುಂಬ, ಸಮುದಾಯ ಮತ್ತು ಸಮಾಜ~ ದಲ್ಲಿ ಕೇವಲ ಹಿಂದು ಕುಟುಂಬವನ್ನಷ್ಟೇ ವಿವರಿಸಲಾಗಿದೆ.ಇಲ್ಲಿ ಹೆಸರಿಸಲಾದ ವಾಸುದೇವ, ಕೇಶವ, ರಾಘವ, ಸೀತಾರಾಮ, ವಿಶ್ವನಾಥ, ಸುನಂದ, ಶಾರದ, ಶಾಂತ, ಭಾಗೀರಥಿ ಎಂಬ ಹೆಸರುಗಳನ್ನು ನೋಡಿದರೆ ಇದು ಕೇವಲ ಹಿಂದು ಕುಟುಂಬ ಅಷ್ಟೇ ಅಲ್ಲ, ವೈದಿಕ ಕುಟುಂಬ ಎನ್ನುವುದು ವೇದ್ಯವಾಗುತ್ತದೆ.ಪುಟ 67 ರಲ್ಲಿ ಮರುಮತಾಂತರವನ್ನೇ ದೇಶಪ್ರೇಮ, ತ್ಯಾಗವೆಂಬಂತೆ ವೈಭವೀಕರಿಸಲಾಗಿದೆ. ಪಾಠ 5ರಲ್ಲಿ (`ವೇದಕಾಲದ ಭಾರತ~) ವೇದಕಾಲದ ಭಾರತ ಮತ್ತು ಆರ್ಯರನ್ನು ವೈಭವೀಕರಿಸಲಾಗಿದೆ.

 

ಪಾಠದ ಪ್ರವೇಶ ಈ ರೀತಿ ಇದೆ: `ಸಿದ್ಧವ್ವನ ಶಾಲೆಯಲ್ಲಿ ದಿನನಿತ್ಯ ಸರ್ವಧರ್ಮ ಪ್ರಾರ್ಥನೆ ಮಾಡಲಾಗುತ್ತದೆ. ಅವುಗಳಲ್ಲೊಂದು: `ಓಂ ಅಸತೋಮಾ ಸದ್ಗಮಯ...~ ಇತ್ಯಾದಿ.  ಇದರ ಅರ್ಥವಾಗಲಿ, ಅದೆಲ್ಲಿಂದ ಬಂತೆಂದಾಗಲಿ ಸಿದ್ಧವ್ವನಿಗೆ ತಿಳಿಯದು. ಅಮ್ಮನೊಡನೆ ಕೇಳಿದಾಗ ಅವರು, `ಚಿಕ್ಕಂದಿನಲ್ಲಿ ನಾವೂ ಇದನ್ನು ಹೇಳುತ್ತಿದ್ದೆವು. ಪ್ರಾರ್ಥನೆ ವೇದದಲ್ಲಿದೆ ಮಗು~  `ವೇದ~ ಎಂದರೇನಮ್ಮಾ?~ `ವೇದ ಎಂದರೆ `ತಿಳುವಳಿಕೆ~, `ಜ್ಞಾನ~. ವೇದಗಳು ನಾಲ್ಕು: ಋಗ್ವೇದ, ಯಜುರ‌್ವೇದ, ಸಾಮವೇದ ಮತ್ತು ಅಥರ‌್ವವೇದ.

 

ಅವುಗಳಲ್ಲಿ ಋಗ್ವೇದವು ಅತೀ ಪುರಾತನವಾದದ್ದು. ವೇದಗಳು ಜಗತ್ತಿನ ಅತೀ ಪ್ರಾಚೀನ ಧಾರ‌್ಮಿಕ ಸಾಹಿತ್ಯ. ಅವುಗಳನ್ನು ಮಹರ್ಷಿ ವೇದವ್ಯಾಸರು ವಿಂಗಡಿಸಿದರು. ಹಿಂದೂ ಧರ‌್ಮದ ಪವಿತ್ರ ಗ್ರಂಥಗಳಾದ ವೇದಗಳು ಸಂಸ್ಕೃತ ಭಾಷೆಯಲ್ಲಿವೆ..~ಮುಂದುವರೆದು `ವೇದಗಳು ಮೌಖಿಕವಾಗಿ (ಬಾಯ್ದೆರೆಯಾಗಿ) ಮೂರು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಉಳಿದುಬಂದಿವೆ. ಆದರೂ ಅವುಗಳಲ್ಲಿ ಯಾವುದೇ ಮಾರ್ಪಾಟು ಆಗಿಲ್ಲ. ಇಷ್ಟೊಂದು ದೀರ್ಘಕಾಲದಿಂದ ಬದಲಾಗದೆ, ಮೌಖಿಕವಾಗಿ ಬಂದಿರುವ ಸಾಹಿತ್ಯ ಜಗತ್ತಿನಲ್ಲಿ ಬೇರೊಂದಿಲ್ಲ.

 

ವೇದಗಳ ಇತರ ಅಂಗಗಳೆಂದರೆ ಬ್ರಾಹ್ಮಣ, ಸಂಹಿತಾ, ಆರಣ್ಯಕ ಮತ್ತು ಉಪನಿಷತ್ತುಗಳು..~ ಇದರೊಂದಿಗೆ ಆರ್ಯರ ವಿವರಗಳು ಬೇರೆ ಇವೆ. ಐದನೇ ತರಗತಿಯ ಮಕ್ಕಳಿಗೆ ಇಂಥ `ಪ್ರವೇಶ~ ಬೇಕೇ?8ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆಯೇ ಒಂದು ರೀತಿಯ ಆಘಾತ ಎದುರಾಗುತ್ತದೆ. `ಅಖಂಡ ಭಾರತ~ದ ನಕ್ಷೆಯನ್ನು ನೀಡಲಾಗಿದೆ (ಇದೇ ನಕ್ಷೆಯನ್ನು 5ನೇ ತರಗತಿ ಪಠ್ಯದ ಪುಟ 135ರಲ್ಲಿ ಯಥಾವತ್ತಾಗಿ ನೀಡಲಾಗಿದೆ). ಈ ನಕ್ಷೆಯ ಪಕ್ಕ `ಏಕಾತ್ಮತೆಯ ಆಧಾರಗಳು~ ಎಂಬ ಶೀರ್ಷಿಕೆಯಲ್ಲಿ  ದ್ವಾದಶ ಜೋತಿರ್ಲಿಂಗಗಳು, 51 ಶಕ್ತಿಪೀಠಗಳು, ವೈದಿಕ ಮಂತ್ರಗಳು, ಸಪ್ತ ಮೋಕ್ಷದಾಯಕ ನಗರಗಳು, ಸಪ್ತಕುಲಪರ್ವತಗಳು ಮತ್ತು ಸಪ್ತ ಜಾಹ್ನವಿಗಳು, ಚತುರ್ಧಾಮಗಳು, ಚತುರಾಮ್ನಾಯ ಪೀಠಗಳು. ಭಾರತವನ್ನು ವರ್ಣಿಸುವ ಸಾಹಿತ್ಯಗಳು:  ವಿಷ್ಣುಪುರಾಣ, ವಾಯುಪುರಾಣ, ರಾಮಾಯಣ, ಮಹಾಭಾರತ, ಕುಲಾರ್ಣವತಂತ್ರ, ಬಾರ್ಹಸ್ವತ್ವ ಶಾಸ್ತ್ರ, ವೀರಸಾವರಕರ್ ಸಾಹಿತ್ಯ, ರಾಷ್ಟ್ರಗೀತೆ (ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ).

ಇವು ಚತುರ್ಧಾಮಗಳು: ಬದರೀನಾಥ (ಉತ್ತರದಲ್ಲಿ), ಜಗನ್ನಾಥಪುರಿ (ಪೂರ್ವದಲ್ಲಿ), ರಾಮೇಶ್ವರ (ದಕ್ಷಿಣದಲ್ಲಿ), ದ್ವಾರಕಾ (ಪಶ್ಚಿಮದಲ್ಲಿ).  ಕುಂಭಮೇಳಗಳು ನಡೆಯುವ ಸ್ಥಳಗಳು:  ಹರಿದ್ವಾರ (ಬ್ರಹ್ಮಕುಂಡ, ಗಂಗೆಯ ದಡ), ಪ್ರಯಾಗ (ತ್ರಿವೇಣಿ ಸಂಗಮ), ಉಜ್ಜಯಿನಿ (ಕ್ಷಿಪ್ರಾ ನದಿ ದಡ), ನಾಸಿಕ್ (ಕುಸಾದರ್ಶ ಘಾಟ್, ಗೋದಾವರಿ ದಡ),

ಪ್ರಮುಖ ಶಕ್ತಿಪೀಠಗಳು: ಕನ್ಯಾಕುಮಾರಿ (ತಮಿಳುನಾಡು), ಹಿಂಗುಲಾಂಬಿಕೆ (ಒಡಿಶಾ, ಚತ್ತಿಸ್‌ಗಢ್), ಕಾಮಾಕ್ಷಿ (ತಮಿಳುನಾಡು),  ಕಾಮಾಕ್ಯದೇವಿ (ಭಟ್ಕಳ), ಮೀನಾಕ್ಷಿ (ತಮಿಳುನಾಡು), ಕಾಳೀ (ಕೋಲ್ಕತ್ತಾ, ಬನಾರಸ್), ಕ್ಷೀರಭವಾನಿ (ಕಾಶ್ಮೀರ), ನವದುರ್ಗಾ( ಹೈದರಾಬಾದ್, ಆಂಧ್ರ), ವಿಶಾಲಾಕ್ಷಿ (ಕಾಶಿ, ಉತ್ತರಪ್ರದೇಶ), ತುಳಜಾ ಭವಾನಿ (ಮಹಾರಾಷ್ಟ್ರ), ವಿದ್ಯಾವಾಸಿನಿ (ಮಧ್ಯಪ್ರದೇಶ), ಮಹಾಲಕ್ಷ್ಮಿ (ಕೊಲ್ಲಾಪುರ, ಮಹಾರಾಷ್ಟ್ರ).ಈ ನಕ್ಷೆಯಲ್ಲಿ ಭಾರತದ ಭೂಪಟದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನದೊಂದಿಗೆ ಗಾಂಧಾರ ದೇಶ, ಬ್ರಹ್ಮದೇಶ, ಶ್ಯಾಮದೇಶಗಳೂ ಸೇರಿವೆ! ಹಿಂದೂ ಹಾಸಾಗರದೊಂದಿಗೆ ಸಿಂಧುಸಾಗರ, ಗಂಗಾಸಾಗರಗಳೂ ಸೇರಿವೆ! ಇಲ್ಲಿ ಆಘಾತಕಾರಿಯಾದದ್ದು ಎಂದರೆ, ಮಕ್ಕಳ ಮನಸ್ಸಿನಲ್ಲಿ ಆಕ್ರಮಣಶೀಲತೆಯನ್ನು ಬಿತ್ತುವುದರೊಂದಿಗೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಪೂರ್ವಗ್ರಹ ಪೀಡಿತರನ್ನಾಗಿ ರೂಪಿಸುವುದು!ಪಠ್ಯದಲ್ಲಿ ಪ್ರವೇಶದ ನಂತರ ಭಾರತದ ಪ್ರಾಚೀನ ನಾಗರಿಕತೆಗಳಲ್ಲಿಯೂ ಪ್ರಧಾನವಾಗಿ ವೇದಗಳ ಕಾಲವನ್ನು, ಯಜ್ಞಯಾಗಾದಿಗಳನ್ನು ವೈಭವೀಕರಿಸಲಾಗಿದೆ. ಆರ್ಯರ ಮತ್ತು ವೈದಿಕ ಸಂಪ್ರದಾಯಗಳ ಬಗ್ಗೆ ಮತ್ತೆ ಮತ್ತೆ ವ್ಯಾಖ್ಯಾನಿಸುವವರು ಅಪ್ಪಿತಪ್ಪಿಯೂ ದ್ರಾವಿಡರ ಹೆಸರನ್ನೂ ಪ್ರಜ್ಞಾಪೂರ್ವಕವಾಗಿಯೂ ಸ್ಮರಿಸುವುದಿಲ್ಲ.

 

ಪುಟ 14 ರಲ್ಲಿ `ಆರ್ಯರು ಒಕ್ಕೊರಲರಾಗಿ ದಾಸ ಮತ್ತು ದಸ್ಯುಗಳ ವಿರುದ್ಧ ಹೋರಾಟ ಮಾಡುತ್ತಿದ್ದರು. ದಾಸರುಗಳ ಬಳಿ ಯಥೇಚ್ಛವಾಗಿ ದನಗಳಿದ್ದವು. ಇವರು ಕೋಟೆ ಪ್ರದೇಶಗಳಲ್ಲಿ ವಾಸವಾಗಿದ್ದರು. ಅದನ್ನು ಪುರವೆಂದು ಕರೆಯುತ್ತಿದ್ದರು. ಇಂತಹ ನೂರಾರು ಕೋಟೆಗಳನ್ನು ಸಮರ ಸಾಹಸಗಳಿಗೆ ಹೆಸರಾದ ಇಂದ್ರನು ನಾಶಪಡಿಸಿದ್ದನು...~ ಎಂದು ಇಂದ್ರನ ವೀರಾವೇಶವನ್ನು ಕೊಂಡಾಡುತ್ತಾ `ಆರ್ಯರ ವೈರಿಗಳಾಗಿದ್ದ ಮತ್ತೊಂದು ಸಮೂಹವೆಂದರೆ ಪಾಣಿಗಳು; ಇವರು ಶ್ರೀಮಂತರಾಗಿದ್ದರು, ವೈದಿಕ ಪುರೋಹಿತರನ್ನು ಇವರು ತಿರಸ್ಕರಿಸಿದವರು.ಇವರು ಸದಾ ಆರ್ಯರ ದನಗಳನ್ನು ವಶಪಡಿಸಿಕೊಳ್ಳುತ್ತಿದ್ದರು...~ ಇಲ್ಲಿ ಧ್ವನಿಸುವ ಅರ್ಥ ಗಮನಿಸಿ. ದಾಸಾ, ದಸ್ಯು ಮತ್ತು ಪಾಣಿಗಳ ಬಗ್ಗೆ, ಇಂದ್ರ, ಆರ್ಯ, ವೈದಿಕ ಪುರೋಹಿತರ ಬಗ್ಗೆ ಎಳೆಯ ಮನಸ್ಸುಗಳಿಗೆ ಯಾವ ರೀತಿ ಅಭಿಪ್ರಾಯ ಮೂಡುತ್ತದೆ ಎಂಬುದನ್ನು ಗಮನಿಸಿ. ಮುಂದಿನ ಪುಟದಲ್ಲಿ `ವೃತ್ತಿಯಲ್ಲಿ ಗುರುತಿಸಲ್ಪಡುವ ಎರಡು ಪ್ರಧಾನ ಸಮುದಾಯಗಳನ್ನು ನಾವು ಇಲ್ಲಿ ಕಾಣಲು ಸಾಧ್ಯ. ವೈದಿಕ ಆಚರಣೆಗಳಲ್ಲಿ ತೊಡಗಿದ್ದ ಬ್ರಾಹ್ಮಣರು ಹಾಗೂ ಕದನದಲ್ಲಿ ನಾಯಕತ್ವವನ್ನು ವಹಿಸುತ್ತಿದ್ದ ಕ್ಷತ್ರಿಯರು ಈ ಎರಡು ಸಮುದಾಯಗಳಾಗಿವೆ..~ ಎಂದು ಹೇಳಲಾಗಿದೆ.

 

ಇಲ್ಲಿ ವೈದಿಕ ಆಚರಣೆಗಳು ಮತ್ತು ಕದನದಲ್ಲಿ ನಾಯಕತ್ವ ಈ ಎರಡನ್ನು ವೃತ್ತಿಗಳೆಂದು ಹೇಗೆ ಗುರುತಿಸಲಾಗುತ್ತದೆ? ಹಾಗಾದರೆ ಕೃಷಿ, ಪಶುಸಂಗೋಪನೆಗೆ ಸಂಬಂಧಿಸಿದವುಗಳನ್ನು ಏನೆಂದು ಕರೆಯುತ್ತಾರೆ? ಎಂಟನೇ ತರಗತಿಯ ಮಕ್ಕಳಿಗೆ ಇಂತಹ ಪೂರ್ವಗ್ರಹಪೀಡಿತ ಗೊಂದಲಗಳ ಅವಶ್ಯಕತೆ ಇದೆಯೆ?

ರಾಜ್ಯಶಾಸ್ತ್ರದ ಅಧ್ಯಾಯ-1 `ರಾಜ್ಯಶಾಸ್ತ್ರದ ಅರ್ಥ ಮತ್ತು ಮಹತ್ವ~ ಪಾಠದಲ್ಲಿ `ಸಲಹಾ ಯೋಜನಾ ಕಾರ್ಯಗಳು~ ಎಂಬ ಶೀರ್ಷಿಕೆ ಅಡಿಯಲ್ಲಿ `ನೀವೊಬ್ಬ ಪುರಾತನ ಗ್ರೀಸ್ ದೇಶದ ಪ್ರಜೆಯೆಂದು ಭಾವಿಸಿಕೊಂಡು ನಗರ ರಾಜ್ಯದ ಯಾವುದಾದರೊಂದು ನಿರ್ದಿಷ್ಟ ವಿಚಾರವೊಂದರ ಬಗ್ಗೆ ಚರ್ಚಿಸಿ~, ಅದೇ ರೀತಿಯಲ್ಲಿ `ಹಾಕಾವ್ಯಗಳಲ್ಲಿ ಕಾಣಬರುವ ರಾಜಕೀಯ ವಿಚಾರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ~ ಎಂದಿದೆ.

 

ಇಂತಹ ಕಾರ‌್ಯಯೋಜನೆಗಳನ್ನು 8ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ ಎನ್ನುವುದನ್ನು ನೆನಪಿಡಬೇಕು. ಮುಂದಿನ `ಪೌರ ಮತ್ತು ಪೌರತ್ವ~ ಎಂಬ ಅಧ್ಯಾಯದಲ್ಲಿ ಯೋಜನಾ ಕಾರ್ಯಗಳನ್ನು ಸೂಚಿಸುತ್ತಾ `ಪೊಲೀಸ್ ಠಾಣೆಯೊಂದಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ಭಾರತದಲ್ಲಿ ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಹಾಗೂ ಅವರನ್ನು ಶಿಕ್ಷಿಸುವಲ್ಲಿ ಪೊಲೀಸ್ ಇಲಾಖೆಗೆ ಇರುವ ಇತಿಮಿತಿಗಳ ಬಗ್ಗೆ ಚರ್ಚಿಸಿ~ ಎಂದು ಹೇಳಲಾಗಿದೆ.ಇಲ್ಲಿ ಎಳೆಯ ಮನಸ್ಸುಗಳಿಗೆ ಬರುವ ಭಾವನೆಯಾದರೂ ಏನು? ವಿದೇಶಿಯರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿಕ್ಕೆ ಎಂದೇ ಭಾರತಕ್ಕೆ ಬರುತ್ತಾರೆ ಎಂಬ ಭಾವನೆ ಬರುವುದಲ್ಲವೇ. ಇದೇ ಪುಟದಲ್ಲಿ ಮತ್ತೊಂದು ಸಾಲು `ಭಾರತೀಯನೊಬ್ಬ ವಿದೇಶದಲ್ಲಿ ತಾತ್ಕಾಲಿಕವಾಗಿ ನೆಲೆಸುವುದಕ್ಕಾಗಿ ಅನುಸರಿಸಬೇಕಾದ ಪ್ರಕ್ರಿಯೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಯಿಂದ ಮಾಹಿತಿ ಸಂಗ್ರಹಿಸಿ~ ಎಂದಿದೆ.

 

ಈ ವಾಕ್ಯದಿಂದ ಗಮನಿಸಬೇಕಾದ್ದೆಂದರೆ, ಭಾರತೀಯರು ತಾತ್ಕಾಲಿಕವಾಗಿ ಮಾತ್ರ ವಿದೇಶದಲ್ಲಿ ನೆಲೆಸಬೇಕು; ಇಲ್ಲಿ ಇವರು ವಿದೇಶದಲ್ಲಿ ಮಾಡಬಹುದಾದ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಬೇಕಿಲ್ಲ!ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯೂನಿಸ್ಟ್ ಸರ್ಕಾರದ ಬಗ್ಗೆ ಹೇಳುತ್ತಾ, `ಕಮ್ಯೂನಿಸ್ಟ್ ಸರ್ಕಾರದಲ್ಲಿ ಜನರಿಗೆ ನಿರ್ಬಂಧಿತವಾದ ಸ್ವಾತಂತ್ರ್ಯ ಅಥವಾ ಸ್ವಾತಂತ್ರ್ಯವೇ ಇಲ್ಲದ ವ್ಯವಸ್ಥೆ ಕಂಡುಬರುತ್ತದೆ. ಕಮ್ಯೂನಿಸ್ಟ್‌ಗಳನ್ನು  ಹೊರತುಪಡಿಸಿ ಬೇರಾವ ರಾಜಕೀಯ ಪಕ್ಷವೂ ಈ ದೇಶದಲ್ಲಿ ಉಳಿಯುವುದಿಲ್ಲ.ಇಂತಹ ಸರ್ಕಾರಗಳು ಖಾಸಗಿ ಒಡೆತನಕ್ಕೆ ಆಸ್ಪದ ಕೊಡುವುದಿಲ್ಲವಾದ್ದರಿಂದ ಉತ್ಪಾದನೆಗೊಂಡ ಎಲ್ಲವೂ ರಾಷ್ಟ್ರೀಕೃತಗೊಳ್ಳುತ್ತದೆ...~ ಎಂದು ಕಮ್ಯುನಿಸ್ಟರ  ಬಗ್ಗೆ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ.ಪುಟ 108 ರಲ್ಲಿ `ಸರ್ವಾಧಿಕಾರಿ ಮತ್ತು ಸಮತಾವಾದಗಳಿಗಿಂತ ಪ್ರಜಾಪ್ರಭುತ್ವವು ಉತ್ತಮವೆಂದು ಹೇಗೆ ತೀರ್ಮಾನಿಸುವಿರಿ? ಚರ್ಚಿಸಿ~ ಎಂಬ ಚಟುವಟಿಕೆಯಿಂದ ಸರ್ವಾಧಿಕಾರಿ ಮತ್ತು ಸಮತಾವಾದಿಗಳನ್ನು ಒಂದೇ ತಟ್ಟೆಯಲ್ಲಿಟ್ಟು ತೂಗಿರುವುದು, ಅಂತೆಯೇ ಸಮತಾವಾದದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬಂತೆ ಸೂಚಿಸುವುದರ ಮೂಲಕ `ಸಮತಾವಾದ~ ಜನವಿರೋಧಿ ಎಂಬುದನ್ನು ಮಕ್ಕಳ ಮನಸ್ಸಿನಲ್ಲಿ ಹಾಕಲಾಗಿದೆ.

 

ಮುಂದಿನ ಪುಟದಲ್ಲಿ `ನಿಮ್ಮ ಸ್ಥಳೀಯ ಶಾಸಕರನ್ನು ಆಹ್ವಾನಿಸಿ ಅವರೊಂದಿಗೆ ದ್ವಿಪಕ್ಷ ವ್ಯವಸ್ಥೆಯ ಅನುಕೂಲಗಳನ್ನು ಚರ್ಚಿಸಿ~ ಎಂದು ಹೇಳಲಾಗಿದೆ. ಇದರ ಅರ್ಥ ಪ್ರಜಾಪ್ರಭುತ್ವದ ನೆಲೆಯ ಮೇಲೆ ನಿಂತಿರುವ ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಿ ಕೇವಲ ದ್ವಿಪಕ್ಷ ವ್ಯವಸ್ಥೆಯನ್ನು ತರುವ ಹುನ್ನಾರ ಬಹಿರಂಗವಾಗಿದೆ.ಇದೆಲ್ಲಕ್ಕಿಂತ ಸಮಾಜ ಎಂದರೆ, ಐದನೇ ತರಗತಿಯ `ಪ್ರಜಾಪ್ರಭುತ್ವ~ ಎಂಬ ಪಾಠದಲ್ಲಿ `ವಂಶಪಾರಂಪರೆಯ ಆಡಳಿತವನ್ನು ನೀವು ಇಷ್ಟಪಡುತ್ತೀರಾ?~ ಎಂಬ ನೇರವಾದ, ಸ್ಪಷ್ಟವಾದ ಕಾಂಗ್ರೆಸ್ ವಿರುದ್ಧದ ಪ್ರಶ್ನೆ ಇದೆ. ಇದರಿಂದಾಗಿ 5 ಮತ್ತು 8ನೇ ತರಗತಿಯ ಮಕ್ಕಳಿಗೆ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಸಮತಾವಾದದಲ್ಲಿ ನಂಬಿಕೆ ಇಟ್ಟ ಎಲ್ಲಾ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ, ಇಡೀ ಪಠ್ಯದಲ್ಲಿ ವಿಜೃಂಭಿಸಿರುವ ವಿಚಾರಗಳು ಸಂಘ ಪರಿವಾರದ ಕಡೆ ಮಕ್ಕಳನ್ನು ಆಕರ್ಷಿಸುವ ಪ್ರಯತ್ನವಾಗಿರುವುದು ಸ್ಪಷ್ಟವಾಗಿದೆ.5 ಮತ್ತು 8ನೆಯ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳನ್ನು ಓದಿದ ಮಕ್ಕಳಷ್ಟೇ ಅಲ್ಲ, ಇದನ್ನು ಓದಿದ ಹಿರಿಯರು ಕೂಡ ಮತೀಯವಾದಿಯರಾಗುವುದರಲ್ಲಿ ಸಂದೇಹವಿಲ್ಲ. ಇಡೀ ಪಠ್ಯ ಕೇಸರೀಕರಣ, ವೈದಿಕಶಾಹಿ ಮತ್ತು ಸಾಮ್ರಾಜ್ಯಶಾಹಿ ಮೌಲ್ಯಗಳಲ್ಲಿ ಮುಳುಗಿ ಹೋಗಿದೆ. ಪ್ರಗತಿಪರರು, ಪ್ರಜಾಪ್ರಭುತ್ವವಾದಿಗಳು, ಮಾನವತಾವಾದಿಗಳು, ಸಾಮಾಜಿಕ ಹೋರಾಟಗಾರರು ಈ ಹುನ್ನಾರದ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ.

         (ಲೇಖಕರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು) 

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry