ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಯೋಗ

7

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಯೋಗ

Published:
Updated:
ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಯೋಗ

ಬಾಗಲಕೋಟೆ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಯೋಗ ಮತ್ತು ಆರೋಗ್ಯ ಶಿಕ್ಷಣವನ್ನು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕಡ್ಡಾಯವಾಗಿ ನೀಡುವ ಸಲುವಾಗಿ ರಾಜ್ಯದ ಬೀಳಗಿ, ಮುಂಡರಗಿ ಮತ್ತು ಕೊರಟಗೆರೆ ತಾಲ್ಲೂಕುಗಳನ್ನು ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.ಮೂರೂ ತಾಲ್ಲೂಕಿನಲ್ಲಿ ತಲಾ 200 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಒಂದೊಂದು ವಾರ ಯೋಗ ಮತ್ತು ಆರೋಗ್ಯ ಶಿಕ್ಷಣದ ಕುರಿತು ತರಬೇತಿಯನ್ನು ನೀಡತೊಡಗಿದೆ.ಈಗಾಗಲೇ ತುಮಕೂರು ಜಿಲ್ಲೆಯ ಕೊರಟಗೆರೆ, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಇದೀಗ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ 200 ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಲಾಗುತ್ತಿದೆ.ತರಬೇತಿ ಪಡೆದ ಬಳಿಕ ಶಿಕ್ಷಕರು ಆಯಾ ಶಾಲೆಯಲ್ಲಿ ಮಕ್ಕಳಿಗೆ ನಿರಂತರ 5 ತಿಂಗಳು ಯೋಗ ಶಿಕ್ಷಣವನ್ನು ನೀಡಲಿದ್ದಾರೆ. ಪ್ರತಿ ದಿನ ಶಾಲೆ ಪ್ರಾರಂಭದಲ್ಲಿ 10 ನಿಮಿಷ ಭ್ರಮರಿ ಪ್ರಾಣಾಯಾಮವನ್ನು 5 ಬಾರಿ, ಉದ್ಗೀತ ಪ್ರಾಣಾಯಾಮವನ್ನು 5ಬಾರಿ ಮಾಡಿಸಿ ಬಳಿಕ ಧ್ಯಾನ ಮಾಡಿಸಿ ತದನಂತರ ಪ್ರಾರ್ಥನೆ ಮಾಡಿಸಲಿದ್ದಾರೆ. ಅಲ್ಲದೇ ಪ್ರತಿ ತರಗತಿ ಆರಂಭದಲ್ಲಿ 5 ನಿಮಿಷ ಯೋಗಾಸನ ಮಾಡಿಸಲಾಗುತ್ತದೆ.ಯೋಗ ಶಿಕ್ಷಣ ಪಡೆದ ಮಕ್ಕಳನ್ನು ಯೋಗ ಶಿಕ್ಷಣ ಪೂರ್ವ, ಯೋಗ ಶಿಕ್ಷಣ ಮಧ್ಯ, ಯೋಗ ಶಿಕ್ಷಣ ನಂತರ ಮಕ್ಕಳ ಮಾನಸಿಕ, ಬೌದ್ಧಿಕ, ದೈಹಿಕ ಬದಲಾವಣೆ ದಾಖಲಿಸಲಿದ್ದಾರೆ.ಯೋಗ ಶಿಕ್ಷಣ ಆರೋಗ್ಯ ಕಾರ್ಯಕ್ರಮದಿಂದ ಆಗುವ ನೈಜ ಪರಿಣಾಮಗಳನ್ನು ತಜ್ಞರ ತಂಡ ಮೌಲ್ಯಮಾಪನ ಮಾಡಿದ ಬಳಿಕ ಉತ್ತಮ ಎಂದು ಕಂಡುಬಂದರೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಡ್ಡಾಯಗೊಳಿಸಲಾಗುತ್ತದೆ.ರಾಜ್ಯ ಆಯುಷ್ ಇಲಾಖೆಯು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಯೋಗ ಆರೋಗ್ಯ ಶಿಕ್ಷಣ ಅನುಷ್ಠಾನದ ಹೊಣೆ ಹೊತ್ತಿದೆ.ಯೋಗ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ನಿರ್ವಹಿಸಲು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಸರ್ವಶಿಕ್ಷಣ ಅಭಿಯಾನದ ಕಾರ್ಯಕ್ರಮ ಅಧಿಕಾರಿ ಎ.ಆರ್. ರಾಮಸ್ವಾಮಿ, ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆರ್.ಡಿ. ರವೀಂದ್ರ, ಹುಸೇನ ಷರೀಫ್, ಯೋಗ ಸಲಹೆಗಾರರನ್ನಾಗಿ ಜಯರೇವಣ್ಣ ಅವರನ್ನು ನಿಯೋಜಿಸಲಾಗಿದೆ.ಕಾರ್ಯಕ್ರಮದ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸರ್ವಶಿಕ್ಷಣ ಅಭಿಯಾನದ ಕಾರ್ಯಕ್ರಮ ಅಧಿಕಾರಿ ಎ.ಆರ್. ರಾಮಸ್ವಾಮಿ,  ಯೋಗ ಮತ್ತು ಆರೋಗ್ಯ ಶಿಕ್ಷಣದ ತರಬೇತಿ ಪಡೆದ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಶಾಲೆಯಲ್ಲಿ ಒಟ್ಟು 42 ಬಗೆಯ ಯೋಗಾಸನವನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದರಿಂದ ಶಿಕ್ಷಣದಲ್ಲಿ ಸುಧಾರಣೆ ಕಾಣಬಹುದಾಗಿದೆ, ಪ್ರಾಯೋಗಿಕ ಯೋಗ ಶಿಕ್ಷಣ ಯಶಸ್ವಿಯಾದರೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಸರ್ಕಾರಕ್ಕಿದೆ ಎಂದು  ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry