ಪ್ರಾಥಮಿಕ ಶಿಕ್ಷಣದೊಂದಿಗೆ 8ನೇ ತರಗತಿ ವಿಲೀನ

7

ಪ್ರಾಥಮಿಕ ಶಿಕ್ಷಣದೊಂದಿಗೆ 8ನೇ ತರಗತಿ ವಿಲೀನ

Published:
Updated:

ದಾವಣಗೆರೆ: ರಾಜ್ಯದಲ್ಲಿ 1ರಿಂದ 7ನೇ ತರಗತಿಗಳಿರುವ ಎಲ್ಲ ಹಿರಿಯ ಪ್ರಾಥಮಿಕಶಾಲೆಗಳನ್ನು 1ರಿಂದ 8ನೇ ತರಗತಿಗಳ ಶಾಲೆಗಳಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಯೋಜಿಸಿದೆ.ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ರಚನಾತ್ಮಕ ಬದಲಾವಣೆ ಸಂಬಂಧ ನವದೆಹಲಿಯ ನ್ಯೂಫಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್. ಗೋವಿಂದ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಬದಲಾವಣೆಯಿಂದ ಹಲವು ಪ್ರಯೋಜನ ಆಗುತ್ತವೆ ಎಂದು ಹೇಳಿದೆ.ಏಕೆ ಈ ಕ್ರಮ?

ರಾಜ್ಯದಲ್ಲಿ 73,419 ಶಾಲೆಗಳಿವೆ. ಅವುಗಳಲ್ಲಿ 25,951 ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆಗಳು. ಇವು ಉನ್ನತ ಪ್ರಾಥಮಿಕ ಶಾಲೆ, ಸಂಯುಕ್ತ ಪ್ರೌಢಶಾಲೆ, ಉನ್ನತ ಪ್ರೌಢಶಾಲೆಗಳಿಗೆ ಮಕ್ಕಳನ್ನು ಒದಗಿಸುವ ಶಾಲೆಗಳು. 33,604 ಉನ್ನತ ಪ್ರಾಥಮಿಕ  ಶಾಲೆಗಳಿದ್ದು, ಅವುಗಳಲ್ಲಿ 1ರಿಂದ 7ನೇ ತರಗತಿ ಹಾಗೂ 1ರಿಂದ 8ನೇ ತರಗತಿ ಹೊಂದಿರುವ ಶಾಲೆಗಳೂ ಸೇರಿವೆ.1ರಿಂದ 7ನೇ ತರಗತಿವರೆಗೆ ಮಕ್ಕಳುಳ್ಳ ಶಾಲೆಗಳಿಗೆ 8ನೇ ತರಗತಿ ಸೇರಿಸಿ ಉನ್ನತೀಕರಣಗೊಳಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಲೇ ಇವೆ. ಹಿಂದಿನ ಕೆಲ ವರ್ಷಗಳಲ್ಲಿ 5,545 ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲು ಮಾನವ ಸಂಪನ್ಮೂಲ ಸಚಿವಾಲಯ ಅನುಮತಿಸಿದೆ. ಈ ಉನ್ನತೀಕರಣವೂ ಸಹ ಸಾರ್ಥಕ ಎನಿಸಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.ಏಕೆಂದರೆ, ಇಂತಹ ಶಾಲೆಗಳಿಗೆ ಕೇವಲ ಒಬ್ಬ ಪದವೀಧರ ಪ್ರಶಿಕ್ಷಿತ ವಿಜ್ಞಾನ ಶಿಕ್ಷಕರನ್ನು ಒದಗಿಸಲಾಗಿದೆ.ವಿಜ್ಞಾನ ಬೋಧನೆ ಸಮಪರ್ಕ ಎನಿಸಿದರೂ ಉಳಿದ ವಿಷಯಗಳ ಬೋಧನೆ ಪದವೀಧರರಲ್ಲದ ಶಿಕ್ಷಕರ ಕೈಯಲ್ಲಿಯೇ ಉಳಿದಿದೆ. ಅವರು 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಮಾತ್ರ ಶಕ್ತರು. 2004-05ರಿಂದ 2008-09ರವರೆಗಿನ ಅವಧಿಯಲ್ಲಿ ಮಂಜೂರಾದ 5,545 ಹುದ್ದೆಗಳಲ್ಲಿ 4,705 ಹುದ್ದೆಗಳಿಗೆ ಮಾತ್ರ ವಿಜ್ಞಾನ ಶಿಕ್ಷಕರ ನೇಮಕವಾಗಿದೆ. ನಿವೃತ್ತಿ ಮತ್ತು ರಾಜೀನಾಮೆಯಿಂದ 577 ಹುದ್ದೆ ಖಾಲಿ ಇವೆ. ಹಾಲಿ ಇರುವ ಒಟ್ಟು 30,876 ಶಾಲೆಗಳ ಪೈಕಿ ಕೇವಲ 4,128 ಶಾಲೆಗಳಲ್ಲಿ 8ನೇ ತರಗತಿಗೆ ಬೋಧಿಸಲು ಅನುಕೂಲಗಳಿವೆ. ಉಳಿದ 26,748 ಶಾಲೆಗಳಲ್ಲಿ 1ರಿಂದ 7ನೇ ತರಗತಿಗೆ ಬೋಧಿಸಲು ಸಾಧ್ಯ ಅಷ್ಟೆ ಎಂದು ಉಲ್ಲೇಖಿಸಲಾಗಿದೆ.ವ್ಯಾಸಂಗ ಮೊಟಕು ತಪ್ಪಿಸಲು...
8ನೇ ತರಗತಿಗೆ ಇತರ ಊರಿನ ಶಾಲೆಗಳಿಗೆ ಹೋಗಬೇಕಾದ ಸ್ಥಿತಿ ಇರುವುದರಿಂದ, ಕೆಲ ಭಾಗಗಳಲ್ಲಿ ಮಕ್ಕಳು 7ನೇ ತರಗತಿಗೇ ಓದು ಮೊಟಕು ಗೊಳಿಸುವುದು ಕಂಡುಬರುತ್ತಿದೆ. ಇದನ್ನು ತಡೆಯಲು ಪ್ರಾಥಮಿಕ ಶಿಕ್ಷಣದ ಜತೆಗೆ 8ನೇ ತರಗತಿ ಸೇರಿಸಬೇಕಿದೆ. ಬೀದರ್, ರಾಯಚೂರು, ಯಾದಗಿರಿ ಮತ್ತು ಬಿಜಾಪುರದ ಜಿಲ್ಲೆಗಳಲ್ಲಿನ ಮಕ್ಕಳು 7ರಿಂದ 8ನೇ ತರಗತಿಗೆ ಹೋಗುವಾಗ ಆಗುವ ಸ್ಥಿತ್ಯಂತರದಿಂದ ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ (ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ಬಾಲಕಿಯರು ಹೆಚ್ಚು). ಉರ್ದು, ತಮಿಳು, ತೆಲುಗು ಮಾಧ್ಯಮಗಳ ಮಕ್ಕಳು ಹೆಚ್ಚಿನ ನಷ್ಟ ಅನುಭವಿಸಿದ್ದಾರೆ ಎಂಬುದನ್ನು ಅಂಕಿ-ಅಂಶಗಳು ತಿಳಿಸುತ್ತವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.ಬಾಲಕಿಯರು, ಸಮಾಜದ ಕೆಳಸ್ತರಗಳಿಗೆ ಸೇರಿದ ಮಕ್ಕಳು, ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮಗಳಲ್ಲಿ ಶಿಕ್ಷಣ ಪಡೆಯುವವರು, ಹಿಂದುಳಿದ ಜಿಲ್ಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶಿಕ್ಷಣ ದೊರಕಿಸಲು, 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬ ರಾಜ್ಯಾಂಗದ ಆಶಯ ಪೂರ್ಣಗೊಳಿಸಲು ಪ್ರಾಥಮಿಕ ಶಿಕ್ಷಣದ ಜತೆಯಲ್ಲಿಯೇ 8ನೇ ತರಗತಿ ಸೇರಿಸುವುದು ಅನುಕೂಲ.

 

ರಾಷ್ಟ್ರೀಯ ಪಠ್ಯ ಚೌಕಟ್ಟು-2005ರ ಪ್ರಕಾರ, ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಹೊಸ ಪಠ್ಯಕ್ರಮ ಜಾರಿಗೊಳಿಸಲಾಗಿದೆ. ಹಂತ  ಹಂತವಾಗಿ ಇತರ ತರಗತಿಗೂ ಹೊಸ ಪಠ್ಯ ಜಾರಿಗೆ ತರಬೇಕು. ಪ್ರಾಥಮಿಕ ಶಿಕ್ಷಣ ಪೂರ್ತಿಯಾಗಬೇಕಾದರೆ, 8ನೇ ತರಗತಿ ಸೇರಿಸಬೇಕು. ಇದಕ್ಕಾಗಿ ಸರ್ಕಾರಿ ಶಾಲೆಗಳಿಗೆ 22,718 ತರಗತಿ ಕೊಠಡಿಗಳು ಹಾಗೂ 14,958 ಹೆಚ್ಚುವರಿ ಶಿಕ್ಷಕರು ಬೇಕಾಗುತ್ತಾರೆ ಎಂದು ವರದಿ ತಿಳಿಸಿದೆ.ಈ ವರದಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಸಾರ್ವಜನಿಕರು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry