ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ

7

ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ

Published:
Updated:

ಶಿವಮೊಗ್ಗ: ದೇಶ ಮತ್ತು ರಾಜ್ಯದಲ್ಲಿ ಇನ್ನು ಮುಂದೆ ಪ್ರಾಂತೀಯ ಪಕ್ಷಗಳದ್ದೇ ರಾಜ್ಯಭಾರ. ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು. ಇವು ಒಂದಾಗುವ ಕಾಲ ಮುಂದೆ ಬಂದೇ ಬರುತ್ತದೆ. ಈ ಮಾತು ಸತ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದರು.ಜಿಲ್ಲಾ ಜೆಡಿಎಸ್ ಘಟಕ ನಗರದ ಎನ್‌ಡಿವಿ ಹಾಸ್ಟೆಲ್ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕರ್ತರ ಮಹಾಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇಂತಹ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಜಯಲಲಿತಾ, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಮಲಯಾಂ ಸಿಂಗ್, ಮಾಯಾವತಿ ಎಲ್ಲರೂ ಒಂದಾಗಬೇಕು; ಒಂದಾಗುವ ಕಾಲ ಕೂಡಿ ಬರುತ್ತದೆ ಎಂದರು.

ಡಾ.ಮನಮೋಹನ್ ಸಿಂಗ್ ಸರ್ಕಾರ ಇನ್ನಿಲ್ಲದ ಭ್ರಷ್ಟತೆಯಲ್ಲಿ ಮುಳುಗಿದೆ. ರಾಜ್ಯ ಸರ್ಕಾರ ಅಕ್ರಮ, ಅದ್ಯಕ್ಷತೆಗಳಿಂದ ಕೂಡಿದೆ. ಇವುಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

`ನಾನು ಇಲ್ಲಿ ಅಧಿಕಾರ ಕೇಳಲು ಬಂದಿಲ್ಲ; ಕಾರ್ಯಕರ್ತರನ್ನು ಎಬ್ಬಿಸಲು ಬಂದಿದ್ದೇನೆ. ಎಳಿ, ಎದ್ದೇಳಿ, ಹೋರಾಟ ಮಾಡಿ~ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಪಕ್ಷವನ್ನು ಅಧಿಕಾರಕ್ಕೆ ತಂದರೆ, ಏಕತೆಯಿಂದ, ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುವುದಾಗಿ ವಾಗ್ದಾನ ಮಾಡಿದ ದೇವೇಗೌಡ, ಮುಸ್ಲಿಂ ಮೀಸಲಾತಿ ಬಗ್ಗೆ ಕಾಂಗ್ರೆಸ್ ಮಾಡುವುದಕ್ಕಿಂತ ಮೊದಲು ಗ್ರಾ.ಪಂ.ಯಿಂದ ಹಿಡಿದು ನಗರಪಾಲಿಕೆಯವರೆಗೆ ಎಲ್ಲ ಹಂತಗಳಲ್ಲಿ ರೋಟೇಷನ್ ಮೂಲಕ ಮುಸ್ಲಿಂ ಬಾಂಧವರಿಗೆ ಅಧಿಕಾರ ನೀಡಿದ್ದು ಜೆಡಿಎಸ್ ಎಂದು ಪ್ರತಿಪಾದಿಸಿದರು.

ಭದ್ರಾವತಿ ವಿಎಸ್‌ಐಎಲ್ ಅಭಿವೃದ್ಧಿಗೆ ಪ್ರಧಾನಿ ಮಂತ್ರಿಯಾಗಿದ್ದಾಗ ್ಙ 600 ಕೋಟಿ  ನೀಡಿದ್ದಾಗಿ ಹೇಳಿದ ಅವರು, ಶಿವಮೊಗ್ಗದಲ್ಲಿ ಕೆಲವು ನಾಯಕರಷ್ಟೇ ಅಭಿವೃದ್ಧಿಯಾಗಿದ್ದಾರೆ. ಬಿ.ಎಚ್. ರಸ್ತೆ ಪಕ್ಕದ ಕಟ್ಟಡಗಳ ಮಾಲೀಕರು ಯಾರು ಎಂದು ಅವರು ಪ್ರಶ್ನಿಸಿದರು.

`ಒಳ್ಳೆಯ ರಾಜಕಾರಣ ಇಲ್ಲ~: ಕರ್ನಾಟಕದಲ್ಲಿ ಈಗ ಒಳ್ಳೆಯ ರಾಜಕಾರಣ ಇಲ್ಲ. ಜನತಾ ಪರಿವಾರದಿಂದ ಮಾತ್ರ ಆದರ್ಶದ, ಉತ್ತಮ ರಾಜಕಾರಣ ನೀಡಲು ಸಾಧ್ಯ. ಜೆಡಿಎಸ್ ಬಿಟ್ಟವರೆಲ್ಲ ಮತ್ತೆ ಪಕ್ಷಕ್ಕೆ ಬಂದು, ದುಡಿದು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಹೇಳಿದರು.

ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಮಾತನಾಡಿ, ಮುಂದೆ ಉತ್ತಮ ದಿನಗಳು ಬರಲಿವೆ. ರಾಜ್ಯವನ್ನು ಪಕ್ಷ ಕೈಗೆ ತೆಗೆದುಕೊಳ್ಳುವ ಕಾಲ ಬಹಳ ದೂರ ಇಲ್ಲ ಎಂದರು.

ಭ್ರಷ್ಟರನ್ನ ಮಾಡಿದ್ದು ಯಡಿಯೂರಪ್ಪ: ರಾಜ್ಯದಲ್ಲಿ ಎಲ್ಲರನ್ನೂ ಮತ್ತು ಎಲ್ಲಾ ವ್ಯವಸ್ಥೆಯನ್ನು ಭ್ರಷ್ಟರನ್ನಾಗಿ ಮಾಡಿದ್ದು ಯಡಿಯೂರಪ್ಪ ಎಂದು ರಾಜ್ಯ ಜೆಡಿಎಸ್ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್ ನೇರ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್ ಮುಖಂಡರನ್ನೂ ಕೂಡ ಭ್ರಷ್ಟರನ್ನಾಗಿಸಿದ ಯಡಿಯೂರಪ್ಪ, ಕೆಲವೇ ಕೆಲವು ಲಿಂಗಾಯಿತರ ಸ್ವಾಮೀಜಿಗಳನ್ನು ಖುಷಿಪಡಿಸಿ, ಲಿಂಗಾಯಿತ ಸಮಾಜದ ವಿರುದ್ಧ ಬೇರೆ ಸಮಾಜಗಳನ್ನು ದ್ವೇಷ ಸಾಧಿಸುವುದಕ್ಕೆ ಕಾರಣರಾಗಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್‌ನ್ನು ಅಪ್ಪ-ಮಕ್ಕಳ ಪಕ್ಷ ಎನ್ನುವ ಯಡಿಯೂರಪ್ಪ ಅವರ ಮಗನನ್ನು ಸಂಸದರನ್ನಾಗಿ ಮಾಡುವಾಗ ಅದು ಮರೆತು ಹೋಗಿತ್ತೇ? ಎಂದು ಪ್ರಶ್ನಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಮಕ್ಕಳಾದ ವಿಜಯೇಂದ್ರ, ಉಮಾದೇವಿ, ಅರುಣಾದೇವಿ ಅವರಿಗೂ ಟಿಕೆಟ್ ನೀಡಿದರೂ ಅಚ್ಚರಿ ಇಲ್ಲ ಎಂದರು.

ಯಡಿಯೂರಪ್ಪ ವಾಜಪೇಯಿ ಯಾಗ ಮಾಡಿದಾಗ ಅಕ್ಕಪಕ್ಕದಲ್ಲಿ ಶೋಭಾ ಕರಂದ್ಲಾಜೆ, ಭಾರತಿಶೆಟ್ಟಿ ಕುಳಿತಿದ್ದರು. ಇದರ ಅರ್ಥವೇನು? ಬಿಜೆಪಿ ಈಗ ಬ್ಲೂಜೆಪಿ ಪಕ್ಷವಾಗಿದೆ ಎಂದು ವಿಶ್ಲೇಷಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್.ಸಿ. ನೀರಾವರಿ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮುಖಂಡರಾದ ಡೇವಿಡ್ ಸಿಮೋಯಿನ್, ಪುಟ್ಟಣ್ಣಯ್ಯ, ಸ್ವರ್ಣ ಪ್ರಭಾಕರ್, ಡಾ.ಅನ್ನದಾನಿ, ಶಶೀಲ್, ಅಮರನಾಥ್, ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ರಾಜ್ಯ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಶಿವಣ್ಣ, ಜಿ.ಪಂ. ಮಾಜಿ ಅಧ್ಯಕ್ಷರಾದ ಶಾರದಾ ಪೂರ‌್ಯನಾಯ್ಕ, ಮುಖಂಡರಾದ ಆರ್. ಮದನ್, ರೈತ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷೆ ಪವಿತ್ರಾ ರಾಮಯ್ಯ, ಜಿ.ಪಂ. ಸದಸ್ಯರಾದ ಎಸ್. ಕುಮಾರ್, ಎಸ್.ಟಿ. ಕೃಷ್ಣೇಗೌಡ, ಪಕ್ಷದ ವಿವಿಧ ಘಟಕದ ಅಧ್ಯಕ್ಷರಾದ ಎಸ್.ವಿ. ರಾಜಮ್ಮ, ಎಂ. ಸಮೀಉಲ್ಲಾ, ಜಿ.ಡಿ. ಮಂಜುನಾಥ್  ಉಪಸ್ಥಿತರಿದ್ದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಗಾಜನೂರು ಗಣೇಶ್ ಸ್ವಾಗತಿಸಿದರು. ರಾಷ್ಟ್ರೀಯ ಮಂಡಳಿ ಸದಸ್ಯ ಪ.ರಾ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. `ಮೊಸಳೆ ಕಣ್ಣೀರಿಗೆ ಅವಕಾಶ ಇಲ್ಲ~

`ಅಪ್ಪನ ಫೋಟೋ ಬೀದಿಯಲ್ಲಿ ಎಸೆದವರಿಗೆ ಈಗ ಅವರ ಗುಣಗಾನ ಮಾಡುವ ಯೋಗ್ಯತೆ ಇಲ್ಲ~ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಶಾಸಕ ಎಚ್. ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು (ಬಂಗಾರಪ್ಪ) ಜೀವಂತವಾಗಿದ್ದಾಗ ನಿಯತ್ತು ತೋರಿಸದವರು ಈಗ ವಿಧಾನಸಭೆಯಲ್ಲಿ ಬಂಗಾರಪ್ಪ ಬಗ್ಗೆ ಮೊಳಸೆ ಕಣ್ಣೀರು ಸುರಿಯುವುದಕ್ಕೆ ನಾಚಿಕೆಯಾಗಬೇಕು. ಮುಂದೆ ಅವರು ಈ ರೀತಿ ಮೊಳಸೆ ಕಣ್ಣೀರು ಸುರಿಸಲು ನಮ್ಮ ಕುಟುಂಬದಿಂದ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ಸೋಲಿಗೆ ಬಿಜೆಪಿಯ ಹಣ ಒಂದು ಕಡೆ ಕಾರಣವಾದರೆ ಮತ್ತೊಂದು ಕಡೆ ನನ್ನ ಒಡಹುಟ್ಟಿದವರೊಬ್ಬರು ಕಾರಣ ರಾದರು ಎಂದು ಪರೋಕ್ಷವಾಗಿ ಕುಮಾರ ಬಂಗಾರಪ್ಪ ವಿರುದ್ಧವೂ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.ಬಂಗಾರಪ್ಪ ಅವರ ಕೊನೆಯ ಆಸೆ ಈಡೇರಬೇಕಾದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು. ಹಾಗೆಯೇ, ಜಿಲ್ಲೆಯಲ್ಲಿ ಬಿಜೆಪಿಯ ಶಾಪ ವಿಮೋಚನೆ ಆಗಬೇಕಾದರೆ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry