ಶುಕ್ರವಾರ, ಡಿಸೆಂಬರ್ 6, 2019
17 °C

ಪ್ರಾಮಾಣಿಕತೆಯೂ ಅನುಮಾನವೂ...

Published:
Updated:
ಪ್ರಾಮಾಣಿಕತೆಯೂ ಅನುಮಾನವೂ...

ಬೆಂಗಳೂರಿಗೆ ಬಂದ ಹೊಸದು. ಒಂದೆರಡು ಪ್ರದೇಶಗಳನ್ನು ಬಿಟ್ಟರೆ ಎಲ್ಲವೂ ಅಪರಿಚಿತ. ಹನುಮಂತ ನಗರದಲ್ಲಿ ಮನೆ ಇದ್ದದ್ದರಿಂದ ಅಲ್ಲಿನ ಸುತ್ತಮುತ್ತಲ ಪ್ರದೇಶಗಳು, ಎಂ.ಜಿ ರಸ್ತೆಯಲ್ಲಿರುವ ಕಚೇರಿ, ಮೆಜೆಸ್ಟಿಕ್-ಇತ್ಯಾದಿ ಸ್ಥಳಗಳು ಓಡಾಡಿ ಗೊತ್ತಿತ್ತು. ಅದೊಂದು ದಿನ ಏನೋ ತುರ್ತು ಕೆಲಸದ ಕಾರಣ ಬೆಳಿಗ್ಗೆ ಬೇಗ ಕಚೇರಿಗೆ ಹೋಗುವ ಧಾವಂತ.ಮನೆಯಿಂದ ಎರಡು ಕ್ರಾಸ್ ದಾಟಿದರೆ ಮುಖ್ಯ ರಸ್ತೆ. ಬಸ್ ಸ್ಟಾಪ್‌ಗೆ ಐದು ನಿಮಿಷದ ಹಾದಿ. ಆದರೆ ಅಲ್ಲಿಗೆ ಹೋಗುವಷ್ಟು ಸಮಯವಿರಲಿಲ್ಲ. ಮೇಲಾಗಿ ಬೆಳಗಿನ ವೇಳೆ ಬಸ್ ಹತ್ತುವುದೇ ಹರಸಾಹಸ. ಬೆಳಿಗ್ಗೆ 8ರಿಂದ ಸುಮಾರು 11-30ರ ವರೆಗೆ ಎಲ್ಲ ಬಸ್‌ಗಳೂ ಜೇನುಗೂಡು! ಹನುಮಂತ ನಗರದಿಂದ ಆಟೊದಲ್ಲಿ ಎಂ.ಜಿ ರಸ್ತೆಗೆ ಅಬ್ಬಬ್ಬಾ ಅಂದರೆ 20 ನಿಮಿಷದ ಪ್ರಯಾಣ. ಟ್ರಾಫಿಕ್ ಇದ್ದರೆ ಇನ್ನೊಂದು ಹತ್ತು ನಿಮಿಷ ಹೆಚ್ಚು.ಬೇಗ ಕಚೇರಿ ತಲುಪಿದರೆ ಸಾಕಪ್ಪಾ ಅಂತಾಗಿತ್ತು. ಮುಖ್ಯ ರಸ್ತೆಯಲ್ಲಿ ಖಾಲಿ ಓಡಾಡುವ ಆಟೊಗಳಿಗೆ ಕೊರತೆ ಇರಲಿಲ್ಲ. ಒಂದಾದ ಮೇಲೆ ಒಂದರಂತೆ ಸುಮಾರು ನಾಲ್ಕು ಆಟೊಗಳಿಗೆ ಕೈ ಅಡ್ಡ ಮಾಡಿದ್ದಾಯಿತು. ಎಂ.ಜಿ ರಸ್ತೆಗೆ ಎಂದ ಕೂಡಲೇ ಆಟೊ ಚಾಲಕರ ಮುಖ ನೋಡಬೇಕಿತ್ತು, ವಿಚಿತ್ರ ಹಾವಭಾವ ಮಾಡುತ್ತ ಒಂದು ರೀತಿಯ ಉಡಾಫೆಯಿಂದ ತಲೆ ಅಲ್ಲಾಡಿಸುತ್ತ ಮುಂದೆ ಸಾಗುತ್ತಿದ್ದರು. ಹೀಗೇ ಸುಮಾರು 10 ನಿಮಿಷ ಕಳೆದುಹೋಯಿತು. ಇದೇನಪ್ಪಾ ಗತಿ, ಎನ್ನುತ್ತಾ ಆಟೊಗಳಿಗೆ ಹಿಡಿಶಾಪ.ಪಕ್ಕದಲ್ಲೇ ಒಂದು ಬೇಕರಿ. ಅದರ ಮುಂದೊಂದು ಖಾಲಿ ಆಟೊ. ಚಾಲಕ ನಾಪತ್ತೆ. ಬೆಳಿಗ್ಗೆ ಬೆಳಿಗ್ಗೆ ಈ ಡ್ರೈವರ್‌ಗಳಿಗೆ ಇಷ್ಟೊಂದು ಸೋಮಾರಿತನವೇ ಎಂಬ ಪ್ರಶ್ನೆ. ಮೆಟ್ರೊ ರೈಲು ಶುರುವಾಗಲಿ ಆಗ ಈ ಆಟೊ ಚಾಲಕರ ಅಟಾಟೋಪ ಇಳಿಯುತ್ತದೆ ಎಂದು ಹಲ್ಲು ಮಸೆದೆ.

 

ಬೇಕರಿ ಮುಂದೆ ವಯಸ್ಸಾದ ವ್ಯಕ್ತಿ ಕಂಡರು. ಎಡಗೈಲಿ ಟೀ ಕಪ್, ಬಲಗೈಲಿ ಅರ್ಧ ಉರಿದ ಸಿಗರೇಟ್. ಅವರು ಪ್ರಶ್ನಾರ್ಥಕವಾಗಿ ನನ್ನತ್ತಲೇ ನೋಡುತ್ತಿದ್ದರು. `ಈ ಆಟೊ ಡ್ರೈವರ್ ಎಲ್ಲಿ~? ಎಂದಿದ್ದಕ್ಕೆ  `ಎಲ್ಲಿಗೆ~ ಎಂಬ ಪ್ರಶ್ನೆ. `ಅದೆಲ್ಲ ಯಾಕೆ, ಕೇಳಿದಕ್ಕೆ ಉತ್ತರ ಕೊಡ್ರಿ~ ಅಂದಾಗ ಅರ್ಧ ಉರಿದ ಸಿಗರೇಟನ್ನು ಹೊಸಕಿ ಆಟೊದ ಬಳಿ ಬಂದರು. ಸಿಟ್ಟು, ಅಸಹನೆ ಅದಾಗಲೇ ಸಂಯಮ ಕಳೆದುಕೊಂಡಿತ್ತು. ಆ ವ್ಯಕ್ತಿಯ ವರ್ತನೆಗೆ ಪಿತ್ಥ ಕೆರಳಿ ಅವರನ್ನೇ ದುರುಗುಟ್ಟಿ ನೋಡಿದೆ.`ಮೇಡಂ ಎಲ್ಲಿಗೆ?... ಬನ್ನಿ ಎನ್ನುತ್ತಾ ಅದೆಲ್ಲಿತ್ತೊ ಕಾಕಿ ಕೋಟನ್ನು ಧರಿಸಿ ಆಟೊ ಸ್ಟಾರ್ಟ್ ಮಾಡಿಯೇ ಬಿಟ್ಟರು. ಆಗಲೇ ಗೊತ್ತಾಗಿದ್ದು, ಅವರೇ ಡ್ರೈವರ್ ಎಂದು. `ಎಂ.ಜಿ ರೋಡ್ ~ ಎಂದು  ಹೇಳ್ದ್ದಿದು ಅವರಿಗೆ ಕೇಳಿತೋ ಬಿಟ್ಟಿತೋ... ಅಷ್ಟರಲ್ಲಾಗಲೇ ಅವರು ಮುಖ್ಯ ರಸ್ತೆಯಿಂದ ತುಸುವೇ ಮುಂದಕ್ಕೆ ಬಲಗಡೆ ಹೊರಳು ಹಾದಿಗೆ ಬಂದಾಗಿತ್ತು. ಮತ್ತೊಮ್ಮೆ ಗಟ್ಟಿಯಾಗಿ ಎಂ.ಜಿ ರಸ್ತೆ ಅಂದೆ. ಆಸಾಮಿ ಮಾತಾಡಲಿಲ್ಲ. `ಅಲ್ಲಾ, ಈ ಆಟೊದವರಿಗೆ ಏನಾಗಿದೆ? ಹತ್ತು ನಿಮಿಷಗಳಿಂದ ಕಂಡ ಕಂಡ ಆಟೊಗಳಿಗೆ ಕೈ ಮಾಡಿದ್ದಾಯ್ತು (ಕೈ ಮುಗಿಯುವುದೊಂದೇ ಬಾಕಿ!)... ಧರ್ಮಕ್ಕೆ ಹೋಗ್ತೀವಾ...ದುಡ್ಡು ಕೊಡ್ತೇವೆ ತಾನೆ? ಏನು ಬೆಂಗಳೂರೋ...ಆಟೊದವರನ್ನೇ ಯಾವ `ಏರಿಯಾ~ ಅಂತ ಕೇಳಬೇಕು~ಎಂದು ಕೆಂಡ ಕಾರಿದ್ದಾಯ್ತು. ಆದರೂ ಅವರು ತಮಗೆ ಏನೂ ಕೇಳಿಸಿಲ್ಲ ಎಂಬಂತೆ ಆರಾಮವಾಗಿ ಆಟೊ ಓಡಿಸುತ್ತ ಇದ್ದರು. ಹಾಳಾಗಿ ಹೋಗ್ಲಿ ಅಂತೂ ಸಿಕ್ಕಿತಲ್ಲ ಆಟೊ ಎಂದು ಸುಮ್ಮನಾದೆ. ಆಶ್ರಮ ಸರ್ಕಲ್, ಸಜ್ಜನ್ ರಾವ್ ಸರ್ಕಲ್ ದಾಟಿ ಆಯ್ತು...ಇನ್ನೇನು ಮಿನರ್ವ ಸಮೀಪಿಸುತ್ತಿದೆ ಎನ್ನುವಾಗ `ಡಬಲ್ ರೋಡ್ ಕಡೆಯಿಂದ ಹೋಗ್ತೀರಾ~ ಅಂದೆ. `ಜೆ.ಸಿ ರಸ್ತೆಯಲ್ಲಿ ಕನ್ನಡ ಭವನದ ಹತ್ತಿರ ಬಲಕ್ಕೆ ತಿರುಗಿ ಪೂರ್ಣಿಮಾ ಟಾಕೀಸ್ ಕಡೆಯಿಂದ ಹೋಗೋಣ~ ಎಂದರು. `ಅಲ್ಲಾ ಎಲ್ರೂ ಸಾಮಾನ್ಯವಾಗಿ ಡಬಲ್ ರೋಡ್ ಮೂಲಕವೇ ಹೋಗ್ತಾರಲ್ಲ?~ ಎಂದೆ. `ಇಲ್ಲ ಮೇಡಂ ಇದು ಶಾರ್ಟ್ ಕಟ್. ಸಮಯ, ದುಡ್ಡು ಎಲ್ಲಾ ಉಳಿಯುತ್ತೆ~ ಎಂದು ಗತ್ತಿನಿಂದಲೇ ಕೇಳಿದರು. ಇಷ್ಟೆಲ್ಲ ಮಾತುಕತೆ ಸಾಗುತ್ತಿದ್ದಾಗಲೇ ರಿಚ್‌ಮಂಡ್ ಸರ್ಕಲ್‌ಗೆ ಬಂದಾಗಿತ್ತು.ಮೇಯೋ ಸ್ಟಾಪ್ ಬಳಿ ಎಡಕ್ಕೆ ತಿರುಗಿ ಮತ್ತೆ ಎಡಕ್ಕೆ ಹೊರಳಿ, ಕಾವೇರಿ ಎಂಪೋರಿಯಂ ದಾಟಿಕೊಂಡು ಕಚೇರಿಗೆ ಬಂದಿದ್ದು ನೆನಪಾಯ್ತು. ಅಲ್ಲಾ ಏನಿವರು ಶಾರ್ಟ್ ಕಟ್, ಸಮಯ, ದುಡ್ಡು ಉಳಿತಾಯ ಅಂತೆಲ್ಲ ಹೇಳ್ತಾರೆ... ಎಂಬ ಅನುಮಾನ ಸುಳಿದು ಹೋಯಿತು.ಕಾರಿಯಪ್ಪ ಭವನದ ಜಂಕ್ಷನ್ ಬಳಿ ಆಟೊ ಎಡಕ್ಕೆ ತಿರುಗಿತು. `ಕುಂಬ್ಳೆ ಸರ್ಕಲ್‌ನಲ್ಲೇ ನಿಲ್ಲಿಸ್ತೀರಾ...ಅಲ್ಲಿಂದ ಬಲಕ್ಕೆ ಆಟೊಗೆ `ನೋ ಎಂಟ್ರಿ~ ಎಂದೆ. ಇಲ್ಲ ಅನ್ನುತ್ತ ಆಟೊ ಬಲಗಡೆ ತಿರುಗಿಸಿ, ತುಸು ಮುಂದೆ ಎಡಕ್ಕೆ ಹೊರಳಿಸಿ ಸೀದಾ ಕೆನರಾ ಬ್ಯಾಂಕ್ ಹಿಂಭಾಗದಲ್ಲಿ ತಂದು ನಿಲ್ಲಿಸಿದರು. `ನೋಡಿ ಇಲ್ಲಿಂದ ಎರಡು ಹೆಜ್ಜೆ ನಡೆದರೆ ನಿಮ್ಮ ಆಫೀಸ್ ಅಲ್ವಾ?~ ಅಂದರು. ಮೀಟರ್ 65 ರೂಪಾಯಿ ತೋರಿಸಿ ಅಣಕಿಸುತ್ತಿತ್ತು. ಹಿಂದೆ ಹಲವು ಬಾರಿ 75-78 ರೂಪಾಯಿ ಕೊಟ್ಟಿದ್ದು ನೆನಪಾಗಿ ಛೇ ಅಂದುಕೊಂಡೆ. `ಮೇಯೋ ಕಡೆಯಿಂದ ಬಂದ್ರೆ ಟ್ರಾಫಿಕ್ ಕಿರಿಕಿರಿ... ಸುಮ್ಮನೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ~ ಎನ್ನುತ್ತ ಚಿಲ್ಲರೆ ವಾಪಸ್ ಕೊಟ್ಟು ಭರ್‌ರ್ ಎಂದು ಮುಂದಕ್ಕೆ ಹೋದರು.ಅಪರಿಚಿತರನ್ನು ಯಾಮಾರಿಸುವ,ಆಟೊದಲ್ಲಿ ಕೂತ ಬಳಿಕ ಮೀಟರ್ ಮೇಲೆ 10 ರೂಪಾಯಿ ಜಾಸ್ತಿ ಎಂದು `ಶಾಕ್~ ಕೊಡುವ ಮಂದಿ ಮಧ್ಯೆ ಇಂಥವರೂ ಇರ‌್ತಾರಾ ಅಂತ ಅಚ್ಚರಿ ಆಯ್ತು. ಛೇ ಒಮ್ಮಮ್ಮೆ ಸಂಬಂಧ, ಸೂತ್ರ ಇಲ್ಲದ ವ್ಯಕ್ತಿಗಳು ತೋರಿಸುವ ಇಂಥ ಪ್ರಾಮಾಣಿಕತೆಯನ್ನು ಎಷ್ಟೊಂದು ಅನುಮಾನಿಸಿ ಬಿಡುತ್ತೀವಲ್ಲ... ಅಂತ ಸಣ್ಣ ಬೇಜಾರೂ ಆಯ್ತು.

ಪ್ರತಿಕ್ರಿಯಿಸಿ (+)