ಶನಿವಾರ, ಡಿಸೆಂಬರ್ 14, 2019
20 °C

ಪ್ರಾಮಾಣಿಕತೆ ಸಾಧನೆಯಲ್ಲಿ ಉಳಿಯಲಿ: ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಹೃದಯವಂತಿಕೆ ಬೇಕು. ವ್ಯವಸ್ಥೆಯನ್ನು ಹದಗೆಡಿಸಿ ಅದರಲ್ಲಿ ಪಾಲು ಪಡೆವ ಶಾಸಕರಿಂದ ಯಾವ ಅಭಿವೃದ್ಧಿಯೂ ಆಗಿಲ್ಲ. ಭೂ ಹಗರಣದಲ್ಲಿ ಭಾಗಿಯಾಗಿ ಹೆಗಲತ್ತಿಯಲ್ಲಿನ ದಟ್ಟ ಅರಣ್ಯ ಪ್ರದೇಶದ 162 ಎಕರೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿರುವುದೇ ಇವರ ಸಾಧನೆಯೇ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.ತಾಲ್ಲೂಕಿನ ಕೋಣಂದೂರಿನಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕೇವಲ ಭಾಷಣದಲ್ಲಿ ಪ್ರಾಮಾಣಿಕತೆ ಉಳಿಯಬಾರದು. ಸಾಧನೆಯಲ್ಲಿ ಉಳಿಯುವಂತಾಗಬೇಕು. ಅಂಥ ಸಾಧನೆನ್ನು ಮಾಡುವಲ್ಲಿ ಶಾಸಕ ಕಿಮ್ಮನೆ ರತ್ನಾಕರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದರು.ಕ್ಷೇತ್ರದಲ್ಲಿ ಅಸಹಾಯಕರ ಪರ ನಿಂತು ಹೋರಾಟ ಮಾಡುತ್ತಾ ಪಕ್ಷವನ್ನು ಹುಟ್ಟುಹಾಕಲಾಗಿದೆ. ತಾವು ಶಾಸಕರಾಗಿದ್ದಾಗ ಇಲ್ಲಿನ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಕೋಣಂದೂರು, ಕಮ್ಮರಡಿಯಲ್ಲಿ ನಿರ್ಮಾಣ ಮಾಡಿದ ವಿದ್ಯುತ್ ಸಬ್ ಸ್ಟೇಷನ್ ಇಂದು ತುಕ್ಕು ಹಿಡಿದು ಹಾಳಾಗಿದೆ. ಸಾರ್ವಜನಿಕರ ಹಣ ಸುಮ್ಮನೇ ಪೋಲಾಗುತ್ತಿದೆ. ತಾಲ್ಲೂಕು ಕಚೇರಿ ಲಂಚ ಪಡೆವ ಕೇಂದ್ರವಾಗಿದೆ. ಶಾಸಕರ ಬೆಂಬಲಿಗ ಬ್ರೋಕರ್‌ಗಳು ಮನಸೋ ಇಚ್ಛೆ ವ್ಯವಹಾರ ಕುದುರಿಸುತ್ತಿದ್ದಾರೆ. ಹಣ ನೀಡದೇ ಇದ್ದರೆ ಆಸ್ಪತ್ರೆಗಳಲ್ಲಿ ಹೆರಿಗೆಯೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲ ಶಾಸಕರ ಗಮನಕ್ಕೆ ಬರುವುದಿಲ್ಲವೇ? ಎಂದರು.ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಕಾಂಗ್ರೆಸ್‌ನಿಂದ ಸಾಮಾನ್ಯ ಜನರ ಬದುಕು ಹಾಳಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳನ್ನು ಹಿಡಿದು ನಿಲ್ಲಿಸಿ ಪ್ರಶ್ನಿಸುವ ಸಂದರ್ಭ ಇನ್ನೂ ಬಂದಿಲ್ಲ ಎಂದರು.ಯಡಿಯೂರಪ್ಪ ಅವರದ್ದು ಸ್ವಯಂಕೃತ ಅಪರಾಧ. ಅವರಿಗೆ ಬಿಜೆಪಿಯಿಂದ ಯಾವ ಅನ್ಯಾಯವೂ ಆಗಿಲ್ಲ. ಕ್ಷೇತ್ರದಲ್ಲಿ ಸೀರೆ, ಬಟ್ಟೆ, ಕುಂಕುಮ ಬಟ್ಟಲು ಹಂಚಿ ಮತ ಪಡೆಯುವ ಸಂಸ್ಕೃತಿ ತಮ್ಮ ಪಕ್ಷದ್ದಲ್ಲ. ಆಮಿಷಗಳಿಗೆ ಬಲಿಯಾಗದೇ ಆರಗ ಜ್ಞಾನೇಂದ್ರ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಪಕ್ಷದ ಮುಖಂಡರಾದ ಡಿ. ಲಕ್ಷ್ಮಣ್, ಸಾಲೇಕೊಪ್ಪ ರಾಮಚಂದ್ರ, ಸಿ.ಬಿ. ಈಶ್ವರ್, ಬಿ.ಎಸ್. ಯಲ್ಲಪ್ಪ, ಹೇಮಲತಾರಾಜು ಮಾತನಾಡಿದರು.  ಹುಂಚದಕಟ್ಟೆ ವೆಂಕಟೇಶ್, ಭಾರತೀ ಸುರೇಶ್, ನಾಗರತ್ನಾ ಚನ್ನವೀರಪ್ಪ, ನಿವಣೆ ಸೀತಾರಾಮ್ ಭಟ್ ಉಪಸ್ಥಿತರಿದ್ದರು.ಕೋಣಂದೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪೋರ್ಣೇಶ್ ವಂದಿಸಿದರು. ಚಂದ್ರಶೇಖರ ಕಂಠಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)