ಬುಧವಾರ, ನವೆಂಬರ್ 20, 2019
21 °C
ಪುತ್ತೂರು ವಿಧಾನಸಭಾ ಕ್ಷೇತ್ರ

ಪ್ರಾಮಾಣಿಕರೆಂಬ ಪ್ರಶಂಸೆ ನಡುವೆಯೇ ದೂರು!

Published:
Updated:

ಪುತ್ತೂರು: ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಪ್ರಾಮಾಣಿಕರು. ಭ್ರಷ್ಟಾಚಾರದ ಹತ್ತಿರಕ್ಕೂ ಸುಳಿಯದವರು. ಆದರೆ ಕ್ಷೇತ್ರಕ್ಕೆ ಅವರು ಏನೂ ಮಾಡಿಲ್ಲ ಎನ್ನವುದಕ್ಕಿಂತ ಈ ಹಿಂದೆ ಶಾಸಕರಾಗಿದ್ದ ಘಟಾನುಘಟಿ ರಾಜಕಾರಣಿಗಳು ಯಾವ ಕೊಡುಗೆ ನೀಡಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ -ಇದು ಪುತ್ತೂರಿನ ಜನತೆಯ ರಾಜಕೀಯರಹಿತ ಅಭಿಪ್ರಾಯ.`ಪುತ್ತೂರು ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಲ್ಲಿಕಾ ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಪುತ್ತೂರು ಕ್ಷೇತ್ರದವರೇ ಆಗಿರುವ ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾದರೂ, ತಾಲ್ಲೂಕಿನವರೇ ಆಗಿರುವ ಶೋಭಾ ಕರಂದ್ಲಾಜೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಶಾಲಿಯಾಗಿದ್ದರೂ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಭರವಸೆ ಮಾತ್ರ ಈಡೇರಲ್ಲಿಲ್ಲ. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದನೆ ದೊರಕಿಲ್ಲ. ಕ್ಷೇತ್ರದಲ್ಲಿ  ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆಯಲ್ಲಿಲ್ಲ' ಎನ್ನುತ್ತಾರೆ ಮತದಾರರು.ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದ ಸಂದರ್ಭ ಪುತ್ತೂರಿಗೆ ಮಂಜೂರಾಗಿದ್ದ ಮಿನಿ ವಿಧಾನಸೌಧದ ಕಾಮಗಾರಿಗೆ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಅವಧಿಯಲ್ಲಿ ಚಾಲನೆ ದೊರಕಿತ್ತು. ಮಲ್ಲಿಕಾ ಅವರು ಮಿನಿ ವಿಧಾನಸೌಧ ಕಾಮಗಾರಿಗೆ ರೂ. 8 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡಿದ್ದರೂ ದ್ವಿತೀಯ ಹಂತದ  ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಲ್ಲಿಕಾ ಪ್ರಸಾದ್ ಪ್ರಯತ್ನದ ಫಲವಾಗಿ ಪುತ್ತೂರಿಗೆ ರೂ.8 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಮಂಜೂರುಗೊಂಡಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹಲವು ಅಡೆತಡೆಗಳಿಂದಾಗಿ ವಿಟ್ಲ ರಸ್ತೆ ವಿಸ್ತರಣೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ವಿಟ್ಲವನ್ನು  ಹೊಸ ತಾಲ್ಲೂಕನ್ನಾಗಿ ಘೋಷಿಸಬೇಕೆಂಬ ಜನತೆಯ ಕೂಗಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹದಗೆಟ್ಟಿರುವ ಗಡಿಪ್ರದೇಶದ ರಸ್ತೆಗಳಾದ ಈಶ್ವರಮಂಗಲ- ಸುಳ್ಯಪದವು ರಸ್ತೆ ಮತ್ತು ಮುಡ್ಪಿನಡ್ಕ ಸುಳ್ಯಪದವು ರಸ್ತೆಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಲಾಗಿಲ್ಲ... ಹೀಗೆ ಆರೋಪಗಳ ಪಟ್ಟಿಯನ್ನು ಅವರು ನೀಡುತ್ತಾರೆ.ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಕಾಮಗಾರಿಯನ್ನು  ಕ್ಷೇತ್ರದ ವ್ಯಾಪ್ತಿಯಲ್ಲಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಶಾಸಕಿ ಪ್ರಯತ್ನ ನಡೆಸಿಲ್ಲ. ನಗರದಲ್ಲಿ ಕಾಡುತ್ತಿರುವ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸುವತ್ತ ಗಮನ ಹರಿಸಿಲ್ಲ. ಕೃಷಿಕರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.ಶಾಸಕಿ ಮಲ್ಲಿಕಾ ಪ್ರಸಾದ್ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಪುತ್ತೂರು ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ರೂ. 2.21 ಕೋಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರೂ.5 ಕೋಟಿ, ವಿಟ್ಲ ಐಟಿಐಗೆ ರೂ. 3 ಕೋಟಿ, ಪುತ್ತೂರಿನ ಬನ್ನೂರಿನಲ್ಲಿ ಆರ್‌ಟಿಒ ಕಚೇರಿಗೆ ರೂ 1.50 ಕೋಟಿ, ವಿಟ್ಲ ಬಸ್ ನಿಲ್ದಾಣಕ್ಕೆ ರೂ.1.60 ಕೋಟಿ , ಪುತ್ತೂರು ನ್ಯಾಯಾಲಯ ಕಟ್ಟಡದ ಮೇಲಂತಸ್ತು ಕಾಮಗಾರಿಗೆ ರೂ.1.80 ಕೋಟಿ ದೊರಕಿದೆ. ಧಾರ್ಮಿಕ ಕ್ಷೇತ್ರಗಳಿಗೆ ರೂ.6 ಕೋಟಿ ಅನುದಾನ ಮಂಜೂರಾಗಿದೆ. ಪುತ್ತೂರು ನಗರ ಠಾಣಾ ಕಟ್ಟಡ, ವಿಟ್ಲ ಪೊಲೀಸ್ ಠಾಣಾ ಕಟ್ಟಡ, ಅಗ್ನಿ ಶಾಮಕ ಠಾಣಾ ಕಟ್ಟಡ, ನರಿಮೊಗ್ರು ಐಟಿಐ ಕಟ್ಟಡ, ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಕಟ್ಟಡ, ಪುಣಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪುತ್ತೂರಿನಲ್ಲಿ  ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆರಂಭ, ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಎರಡನೇ ಘಟಕ ಮಂಜೂರು..  ಹೀಗೆ ಅವರ ಸಾಧನೆಗಳ ಹಾದಿ ಇದೆ.ಪುತ್ತೂರು ಪುರಸಭೆಗೆ ಎಡಿಬಿ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ ರೂ. 8.27 ಕೋಟಿ, ಮುಖ್ಯಮಂತ್ರಿ  ವಿಶೇಷ ಅನುದಾನದಲ್ಲಿ ರೂ.5 ಕೋಟಿ , ಎಸ್‌ಎಫ್‌ಸಿ ಅನುದಾನದಲ್ಲಿ ರೂ. 14.29 ಕೋಟಿ , ಕ್ಷೇತ್ರ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟು ಮತ್ತು ತಡೆಗೋಡೆ ನಿರ್ಮಾಣಕ್ಕಾಗಿ ರೂ.12.13 ಕೋಟಿ , 13 ಗ್ರಾಮಗಳಿಗೆ ಸುವರ್ಣ ಗ್ರಾಮ ಯೋಜನೆಯಡಿ ರೂ. 15.82 ಕೋಟಿ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.4.50 ಕೋಟಿ , ಮಳೆಹಾನಿ ಯೋಜನೆಯಡಿ ರೂ.3.28 ಕೋಟಿ, ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರೂ.2.68 ಕೋಟಿ ಕ್ಷೇತ್ರಕ್ಕೆ ಮಂಜೂರಾಗಿದೆ.ರಸ್ತೆಗಳ ಪೈಕಿ ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆ ಅಭಿವೃದ್ಧಿಗೆ ರೂ.14 ಕೋಟಿ, ಕಬಕ ವಿಟ್ಲ ರಸ್ತೆ ಅಭಿವೃದ್ಧಿಗೆ ರೂ 4.40 ಕೋಟಿ, ವಿಟ್ಲ ಉಕ್ಕುಡ- ಸಾರಡ್ಕ ರಸ್ತೆ ಅಭಿವೃದ್ಧಿಗೆ ರೂ. 4.64 ಕೋಟಿ, ಕಾವು- ಈಶ್ವರಮಂಗಲ ರಸ್ತೆ ಅಭಿವೃದ್ಧಿಗೆ ರೂ.2.50 ಕೋಟಿ, ಅರಿಯಡ್ಕ- ನಿಂತಿಕಲ್ ರಸ್ತೆ ಅಭಿವೃದ್ಧಿಗೆ ರೂ. 2.20 ಕೋಟಿ, ಕರ್ನೂರು- ಗಾಳಿಮುಖ ರಸ್ತೆ ಅಭಿವೃದ್ಧಿಗೆ ರೂ.1 ಕೋಟಿ, ಪುತ್ತೂರು- ಉಪ್ಪಿನಂಗಡಿ ರಸ್ತೆ ವಿಸ್ತರಣೆಗೆ ರೂ. 2.80 ಕೋಟಿ, ಬಾಯಾರು- ಚನಿಲ ರಸ್ತೆ ಅಭಿವೃದ್ಧಿ ಮತ್ತು ಸೇತುವೆ ನಿರ್ಮಾಣಕ್ಕೆ ರೂ 1.09 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ವಿವರ ನೀಡುತ್ತಾರೆ.`ಶಾಸಕಿ ಮಲ್ಲಿಕಾ ಪ್ರಸಾದ್ ಒಳ್ಳೆಯವರು, ಎಲ್ಲರೂ ಮಾಡಿದಂತೆ ಅವರೂ ಕೆಲಸ ಮಾಡಿದ್ದಾರೆ. ಅವರು ಏನೂ ಮಾಡಿಲ್ಲ ಎಂದು ಆರೋಪ ಮಾಡುವವರು ಬೇರೆಯವರು ಏನು ವಿಶೇಷ ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಬೇಕಾಗುತ್ತದೆ' ಎಂದು ಸಿಪಿಐಎಂ ಮುಖಂಡರೊಬ್ಬರು ಹೇಳುತ್ತಾರೆ.ಪುತ್ತೂರು ಕ್ಷೇತ್ರದಿಂದ ಆಯ್ಕೆಗೊಂಡಿರುವ ಯಾರೇ ಒಬ್ಬ ಶಾಸಕರು ಅಭಿವೃದ್ಧಿ ಕೆಲಸ ಬಿಟ್ಟು ಕಾನೂನು ತೊಡಕುಗಳ ವಿಚಾರದಲ್ಲಿ ವಿಧಾನಸಭೆಯಲ್ಲಿ ಧ್ವನಿ ಎತ್ತಿಲ್ಲ. ಇದರಿಂದಾಗಿಯೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ಪ್ರತಿಕ್ರಿಯಿಸಿ (+)