ಪ್ರಾರಂಭವಾಗದ ಕಾಲುವೆ ದುರಸ್ತಿ ಕಾರ್ಯ

ಮಂಗಳವಾರ, ಜೂಲೈ 23, 2019
25 °C

ಪ್ರಾರಂಭವಾಗದ ಕಾಲುವೆ ದುರಸ್ತಿ ಕಾರ್ಯ

Published:
Updated:

ಆಲಮಟ್ಟಿ: ಮಳೆಗಾಲ ಪ್ರಾರಂಭವಾಗಿ, ಕಾಲುವೆಗೆ ನೀರು ಹರಿಸುವ ಅವಧಿ ಸಮೀಪಿಸುತ್ತಿದ್ದರೂ ಆಲಮಟ್ಟಿ ವ್ಯಾಪ್ತಿಯ ಕಾಲುವೆಗಳ ವಾರ್ಷಿಕ ದುರಸ್ತಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ಆಣೆಕಟ್ಟು ವಲಯದ ವತಿಯಿಂದ ಪ್ರತಿವರ್ಷ ಕ್ಲೋಸರ್ ಅವಧಿಯಲ್ಲಿ ನಿಗಮ ವ್ಯಾಪ್ತಿಗೆ ಒಳಪಡುವ ಕಾಲುವೆಗಳ ದುರಸ್ತಿ, ಹೂಳು ತೆಗೆಯುವ ಕಾರ್ಯ, ಕಾಲುವೆಯ ಪಕ್ಕ ಬೆಳೆದಿರುವ ಜಂಗಲ್ ಕಟಿಂಗ್ ಜೂನ್ ಮೊದಲ ವಾರದಲ್ಲಿಯೇ  ಪ್ರಾರಂಭವಾಗಬೇಕಿತ್ತು. ಆದರೆ ಇನ್ನೂ ಪ್ರಾರಂಭವಾಗಿಲ್ಲ.ಮೂಲಗಳ ಪ್ರಕಾರ ಟೆಂಡರ್ ಕರೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ದುರಸ್ತಿ ಕಾರ್ಯ ಪ್ರಾರಂಭಗೊಳ್ಳಲಿದೆ.ಆಲಮಟ್ಟಿ ಎಡದಂಡೆ, ಬಲದಂಡೆ ಹಾಗೂ ಮುಳವಾಡ ಪೂರ್ವ ಮತ್ತು ಪಶ್ಚಿಮ ಕಾಲುವೆಯಿಂದ ವಿಜಾಪುರ ಜಿಲ್ಲೆಯ ನಾನಾ ಭಾಗಗಳು ನೀರಾವರಿಗೆ ಒಳಪಡಲಿದ್ದು, ಪ್ರತಿ ಜುಲೈ ಎರಡನೇ ವಾರದಿಂದ  ಪ್ರಾರಂಭಗೊಂಡು ಏಪ್ರಿಲ್‌ವರೆಗೆ ನೀರು ಹರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ.ಮೇ, ಜೂನ್‌ನಲ್ಲಿ ಕಾಲುವೆಗಳ ದುರಸ್ತಿ, ವಾರ್ಷಿಕ ನಿರ್ವಹಣೆ, ಹೂಳು ತೆಗೆಯು ವುದು, ಕಾಲುವೆ ಪಕ್ಕ ಅಪಾರ ಪ್ರಮಾಣದಲ್ಲಿ ಬೆಳೆದಿರುವ ಜಂಗಲ್ ಕಟಿಂಗ್ ಮೊದಲಾದ ಕಾರ್ಯಗಳನ್ನು ನಡೆಸಬೇಕಾಗುತ್ತದೆ.ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆ ಯಡಿ ದುರಸ್ತಿ ಕಾರ್ಯ ನಿರ್ವಹಿಸಲಾಗಿತ್ತು.ಈ ಬಾರಿ ಮುಂಗಾರು ಹಂಗಾಮಿಗೆ ಜುಲೈ ಅಂತ್ಯಕ್ಕೆ ನೀರು ಹರಿಸಲು ಕೃಷ್ಣಾ ಭಾಗ್ಯ ಜಲ ನಿಗಮ ಸಿದ್ಧತೆಗಳನ್ನು ನಡೆಸಿದೆ.ಇನ್ನೊಂದು ವಾರದಲ್ಲಿ: ಹಿರಿಯ ಅಧಿಕಾರಿಗಳ ಪ್ರಕಾರ ಇದೇ ಮೊದಲ ಬಾರಿಗೆ ದುರಸ್ತಿ ಕಾರ್ಯ ಹೆಚ್ಚಿನ ಹಣ ಬಿಡುಗಡೆಯಾಗಿದ್ದು, ಆಲಮಟ್ಟಿ ಆಣೆಕಟ್ಟು ವ್ಯಾಪ್ತಿಯ ಎಲ್ಲ ಕಾಲುವೆಗಳ ಕ್ಲೋಸರ್ ಕಾರ್ಯಗಳಿಗೆ ಎಲ್ಲಾ ಕಾಲುವೆ ಸೇರಿ ಎರಡು ಕೋಟಿ ರೂ ಹಾಗೂ ಇದೇ ಮೊದಲ ಬಾರಿಗೆ ವಿಶೇಷ ಅನುದಾನದಡಿ ನಾಲ್ಕು ಕೋಟಿ ರೂ ಪ್ರತ್ಯೇಕವಾಗಿ ಹಣ ಬಿಡುಗಡೆಯಾಗಿದೆ.ಮುಳವಾಡ ಏತ ನೀರಾವರಿ, ಆಲಮಟ್ಟಿ ಬಲದಂಡೆ, ಆಲಮಟ್ಟಿ ಎಡದಂಡೆ ಮೂರು ವಿಭಾಗದಡಿ ಪ್ರತ್ಯೇಕವಾಗಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭಗೊಂಡು ಜುಲೈ 15 ರೊಳಗೆ ದುರಸ್ತಿ ಕಾಮಗಾರಿ ಪೂರ್ಣ ಗೊಳಿಸಲು ಹಾಗೂ  ಗುಣಮಟ್ಟದ ಕಾರ್ಯ ಕೈಗೊಳ್ಳಲೂ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 15 ಕ್ಲೋಸರ್ ಕಾಮಗಾರಿಗೆ 48 ಲಕ್ಷ ರೂ, 16 ವಿಶೇಷ ಕಾಮಗಾರಿಗೆ 60 ಲಕ್ಷ ರೂ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.ಆಲಮಟ್ಟಿ ಎಡದಂಡೆ ಕಾಲುವೆಯ ಜಾಕ್‌ವೆಲ್‌ನ ಮೋಟರ್ ದುರಸ್ತಿಗೆ 1 ಕೋಟಿ 26 ಲಕ್ಷ ರೂ, ಕ್ಲೋಸರ್ ಕಾಮಗಾರಿಗೆ 76 ಲಕ್ಷ ರೂ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಆದರೇ ಎಲ್ಲಿಯೂ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಮುಂಗಾರು ಹಂಗಾಮಿಗೆ ನೀರು ಹರಿಸುವ ಮುನ್ನವೇ ಗುಣಮಟ್ಟದ ದುರಸ್ತಿ ಕಾರ್ಯ ನಿರ್ವಹಿಸಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry