ಭಾನುವಾರ, ನವೆಂಬರ್ 17, 2019
21 °C

ಪ್ರಾರ್ಥನಾ ಮಂದಿರ ನಿರ್ಮಾಣ ಅನುಮತಿಗೆ ಒತ್ತಾಯ

Published:
Updated:

ಉಡುಪಿ: ಗಂಗೊಳ್ಳಿಯ ಮದ್ರಸ ಮಿಸ್ಬಉಲ್ ಉಲೂಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂ ಲಕ್ಕಾಗಿ ಪ್ರಾರ್ಥನಾ ಮಂದಿರ ನಿರ್ಮಿಸಲು ಗಂಗೊಳ್ಳಿ ಗ್ರಾಮ ಪಂಚಾಯಿತಿ ಅನುಮತಿ ನೀಡುತ್ತಿಲ್ಲ. ಈ ಮೂಲಕ ಮುಸ್ಲಿಮರಿಗೆ ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ಕೋಮುವಾದಿಗಳ ಸ್ವಾರ್ಥ ಹಿತಾಸಕ್ತಿಗಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.ಮಿಸ್ಬಉಲ್ ಉಲೂಮ್ ಶಿಕ್ಷಣ ಸಂಸ್ಥೆ 35 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಪಕ್ಕದಲ್ಲೇ ಪ್ರಾರ್ಥನಾ ಮಂದಿರ ಇದ್ದರೆ ಅನುಕೂಲ ಎಂಬ ಉದ್ದೇಶದಿಂದ ಅನುಮತಿಗೆ  ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಸಾಮಾನ್ಯ ಸಭೆಯಲ್ಲಿ ಇದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು ಎಂದು ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಅನುಮತಿ ನೀಡುವುದಕ್ಕೆ ಆಕ್ಷೇಪಣೆ ಇದೆ ಎಂದು ಪಂಚಾಯಿತಿ ತಿಳಿಸಿತ್ತು. ಅಲ್ಲದೆ ಜಿಲ್ಲಾಧಿಕಾರಿ ಅವರ ಅನುಮತಿ ಬೇಕು ಎಂದೂ ತಿಳಿಸಿತ್ತು. ಜಿಲ್ಲಾಧಿಕಾರಿ ಅವರು ಸಂಬಂಧಿಸಿದ ಅಧಿಕಾರಿಗಳ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ.ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿ ಎಂದು ಅವರು ಹೇಳಿದ್ದಾರೆ. ಆದರೂ ಅನುಮತಿ ನೀಡುತ್ತಿಲ್ಲ. ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಇಂತಹ ಸಂವಿಧಾನ ವಿರೋಧಿ ದೋರಣೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)