ಪ್ರೀತಿಯ ಕರೆ ಉಡುಗೊರೆ...

7

ಪ್ರೀತಿಯ ಕರೆ ಉಡುಗೊರೆ...

Published:
Updated:

ದಶಕದ ಹಿಂದೆ ಪ್ರೇಮಿಗಳ ದಿನ ಆಚರಿಸುವ ಬಗ್ಗೆ ವಾದಗಳೆದ್ದಾಗ ಮಾರುಕಟ್ಟೆಯಲ್ಲಿದ್ದದ್ದು ಕೇವಲ ಶುಭಾಶಯದ ಕಾರ್ಡುಗಳು. ಕೆಂಗುಲಾಬಿಗಳು. ಹೃದಯದಷ್ಟೇ ಕೋಮಲವಾದ ಬೊಂಬೆಗಳು. ಯಾರಿಗೂ ತಿಳಿಯದಂತೆ, ಪುಸ್ತಕದ ಪುಟಗಳ ನಡುವೆ ಈ ಕಾರ್ಡುಗಳು ಸುಳಿದಾಡುತ್ತಿದ್ದವು. ಆಗಾಗ ಹುಡುಗಿಯರ ಎದೆಯಪ್ಪಿ ನಡೆಯುತ್ತಿದ್ದವು. ಹಳೆಯ ಪುಸ್ತಕಗಳ ಪುಟಗಳ ನಡುವಿನ ಅರೆಬಿರಿದ ಗುಲಾಬಿಯೊಂದು ಇಂಥವೇ ನೆನಪನ್ನು ಹಸಿರುಗೊಳಿಸಬಹುದು.ಆದರೆ ಈಗ ಪ್ರೇಮಿಗಳಿಗಾಗಿ ಹಲವಾರು ವಿಶೇಷ ಕೊಡುಗೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಪ್ರತಿ ಉತ್ಪನ್ನವನ್ನೂ ಮಾರುಕಟ್ಟೆಯಲ್ಲಿ `ದಿಖಾವು- ಬಿಕಾವು~ಗೊಳಿಸಲು ವರ್ಷವಿಡೀ ಪ್ರೇಮಿಗಳಂತೆಯೇ ಕಾಯಲಾಗುತ್ತದೆ.

ಈ ವರ್ಷ ವ್ಯಾಲೆಂಟೈನ್ ದಿನಕ್ಕೆ `ಮುತ್ತಿನ ಸರ~ ಎಂದು ಆಮ್ರಪಾಲಿ ಆಭರಣ ಮೇಳ ಹೇಳಿದೆ.ಪ್ರೀತಿಯ ಬಾಂಧವ್ಯ ಸದಾ ಉಳಿಯಲಿ ಎಂಬ ಆಶಯದೊಂದಿಗೆ ಅದೇ ಗುಣದ ಪ್ಲಾಟಿನಂ ವಡ್ಯಾಣಗಳನ್ನು `ಆಭರಣ್~ ಸಂಸ್ಥೆ ಹೊರ ತಂದಿದೆ. ಉಂಗುರಗಳು, ಲವ್‌ಬ್ಯಾಂಡ್ಸ್‌ಗಳು, ಬ್ರೇಸ್‌ಲೆಟ್, ಬಳೆ ಹಾಗೂ ಸರ ಸಹ ಈ ಸಂಗ್ರಹದಲ್ಲಿದೆ ಬೆಲೆ 9 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ.ಹುಡುಗಿಯರು ಕೇವಲ ಕೊಡುಗೆ ಪಡೆಯುವುದಕ್ಕೆ ಅಷ್ಟೇ ಅಲ್ಲ, ಕೊಡಲೂ ಹಿಂದೇಟು ಹಾಕುವುದಿಲ್ಲ. ಅವರ ಮನ ಮೆಚ್ಚಿದವನ ಕೇಶ ವಿನ್ಯಾಸಕ್ಕೆ ಶ್ವೆಜೊಕ್ರಾಫ್‌ನಿಂದ ಕೇಶ ಲೇಪನವನ್ನು ಬಿಡುಗಡೆಗೊಳಿಸಿದೆ. ಓಸಿಸ್ ಬಾಡಿ ಮಿ ಎಂಬ ಈ ದ್ರವ್ಯ ಕೂದಲಿಗೆ ಚೈತನ್ಯ ನೀಡುತ್ತದೆ. ಹೊಳಪು ನೀಡುತ್ತದೆ ಎಂದು ಹೇಳಲಾಗಿದೆ. ಬೆಲೆ 950 ರೂಪಾಯಿಗಳು.ಕೋರಮಂಗಲ ಬಡಾವಣೆಯಲ್ಲಿರುವ ಊಂಫ್ ಸಲೂನ್ ಮತ್ತು ಅಕಾಡೆಮಿ, ಆಫ್ಫಿನಿಟಿ ಇಂಟರ್ ನ್ಯಾಷನಲ್, ಮಿಸ್ಟಿಕ್ ಸಲೂನ್ ಹಾಗೂ ಮಗ್ರತ್ ರಸ್ತೆಯಲ್ಲಿರುವ ಟ್ರೆಸ್‌ಪಾಸ್ ಸಲೂನ್‌ನಲ್ಲಿ ಲಭ್ಯ ಇದೆ. ಪ್ರೀತಿಯಿಂದ ಮುಂಗುರುಳು ಸವರಲು, ಹುಸಿಮುನಿಸಿನಿಂದ ಕೂದಲೆಳೆದಾಡಿದರೂ ಪ್ರೇಮದ ಪರಿಯ ಸುಗಂಧ ಬಹುಹೊತ್ತಿನವರೆಗೆ ಉಳಿಯುವುದು.ಪ್ರೀತಿ ಆರಂಭವಾಗುವುದೇ ಕಂಗಳಿಂದ. ಮಾತಿನಿಂದಾಗದ ಪ್ರೀತಿ ಕಣ್ನೋಟದಲ್ಲಿಯೇ ಮಾತಾಡಿರುತ್ತದೆ. ಈ ಕಂಗಳ ರಕ್ಷಣೆಗಾಗಿ ವೋಗ್ ವಿಶೇಷ ಸಂಗ್ರಹವನ್ನೇ ಹೊರತಂದಿದೆ. ತಂಪು ಕನ್ನಡಕಗಳ ಈ ಸಂಗ್ರಹದ ಬೆಲೆ 5 ಸಾವಿರ ರೂಪಾಯಿಗಳಿಗಿಂತ ಮೇಲ್ಪಟ್ಟಿದೆ.ಪ್ರೇಮಿಗಳ ದಿನವನ್ನು ನೀವು ಹೇಗೆ ಕಳೆಯಲಿಚ್ಛಿಸುವಿರಿ? ಒಂಟಿಯಾಗಿ... ಕಳೆದು ಕೊಂಡವರ ನೆನಪಿನಲ್ಲಿ... ಏಕಾಂತದಲ್ಲಿ... ಮನದನ್ನೆಯೊಂದಿಗೆ? ಅಥವಾ ಕುಟುಂಬದ ಸದಸ್ಯರೊಡನೆ? ಹೇಗಿದ್ದರೂ ಸರಿ, ಈ ದಿನವನ್ನು ನಿಮ್ಮ ಮನಃಸ್ಥಿತಿಗೆ ಸ್ಪಂದಿಸುವಂತೆ ವೇಲ್ಸ್ ಸಿದ್ಧಗೊಂಡಿದೆ. ಈ ರೆಸಾರ್ಟ್, ಹೋಟೆಲ್‌ಗಳಲ್ಲಿ ಪ್ರೇಮಿಗಳ ದಿನಕ್ಕಾಗಿಯೇ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಒಬೆರಾಯ್ ಹೋಟೆಲ್ ಮಾತ್ರ ಎಲ್ಲವನ್ನೂ ಮರೆತುಬಿಡಿ, ಹಿಮಾಲಯದ ಮಡಿಲಿನಲ್ಲಿ ಪ್ರೀತಿಯನ್ನು ಮತ್ತೆ ಆರಂಭಿಸಿ ಎನ್ನುತ್ತಿದೆ. ಶಿಮ್ಲಾದಲ್ಲಿರುವ ತನ್ನ ಶಾಖೆಯಲ್ಲಿ ಪ್ರೇಮಿಗಳಿಗಾಗಿಯೇ ವಿಶೇಷ ಪ್ಯಾಕೇಜುಗಳನ್ನು ಪರಿಚಯಿಸಿದೆ. 19 ಸಾವಿರ, 26 ಸಾವಿರ ರೂಪಾಯಿಗಳ ಈ ಪ್ಯಾಕೇಜುಗಳೊಂದಿಗೆ ಸ್ಪಾ ಚಿಕಿತ್ಸೆಗಾಗಿ ವಿಶೇಷ ವಿನಾಯಿತಿಯನ್ನೂ ಘೋಷಿಸಿದೆ.ಇನ್ನು ಪ್ರೇಮವನ್ನು ಸಿಹಿಯಿಲ್ಲದೇ ಸವಿಯಬಹುದೆ? ಮೃದು, ಮಧುರ ಭಾವಗಳ ಸಂಡೇ ಸ್ಪೇಷಲ್ ಅನ್ನು ಮಮ್ಮಾ ಮಿಯಾ ಪ್ರಸ್ತುತ ಪಡಿಸಿದೆ. ಫೆ.13ರಂದು ಮಧ್ಯಾಹ್ನ 12.30ಯಿಂದ ರಾತ್ರಿ 11.30ರವರೆಗೆ ವಿಶೇಷ ಸಂಡೇ ಜೋಡಿಗಳನ್ನು ಪ್ರಸ್ತುತ ಪಡಿಸಿದ್ದಾರೆ.ಸ್ಟ್ರಾಬೆರಿಯ ಕಟು ಮಾಧುರ್ಯದ ಸ್ಟ್ರಾಬೆರಿ ಕಿಸ್, ಬದಾಮಿಯ ಚೂರುಗಳ `ನಟ್ಸ್ ಅಬೌಟ್ ಯು~, ಲವ್ ಬೈಟ್, ನೌಟಿ ಬಟ್ ನೈಸ್ ಮುಂತಾದ ಹೆಸರಿನಲ್ಲಿ ಸಂಡೇಸ್ ಲಭ್ಯ ಇವೆ. 250 ರೂಪಾಯಿಗಳಲ್ಲಿ ಮನಸು ಸಿಹಿಯಿಂದ ಮುದಗೊಳ್ಳಬಹುದು. ಕೋರಮಂಗಲ ಹಾಗೂ ಇಂದಿರಾನಗರದ ಬಡಾವಣೆಗಳಲ್ಲಿರುವ ಮಮ್ಮಾಮಿಯಾ ಮಳಿಗೆಯಲ್ಲಿ ಇವು ಲಭ್ಯ.ಪ್ರೀತಿ ಅನುದಿನವಿರಲಿ. ಪ್ರೀತಿಸುವವರಿಗಾಗಿ ಕೊಡುಗೆ ನೀಡಿರಿ ಎಂಬ ಸಂದೇಶವನ್ನು ಸಾರುತ್ತಲೇ ಬಾಂಧವ್ಯದ ಬೆಸುಗೆಗೆ ಹೊಸ ಹೊಸ ಕೊಂಡಿಗಳನ್ನು ಸೃಷ್ಟಿಸುತ್ತಿದೆ ಮಾರುಕಟ್ಟೆ.ನಿಮ್ಮ ಪ್ರೇಮದ ಪರಿಯ ನಿವೇದಿಸುವ ಬಗೆ ಮಾತ್ರ ನಿಮ್ಮ ಅಭಿರುಚಿ, ಆಸಕ್ತಿ ಹಾಗೂ ಆರ್ಥಿಕ ಶಕ್ತಿಯನ್ನು ಅವಲಂಬಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry